ಕ್ರಿ.ಶ. 150ರ ಸುಮಾರಿಗೆ ಕರ್ನಾಟಕದ ಕಡಲ ತೀರಕ್ಕೆ ಬಂದಿದ್ದ ಟಾಲೆಮಿಯು ‘ಆರ್ಯಕ’ ಎಂಬ ದೇಶದೊಳಗಿನ 25 ಊರುಗಳ ಹೆಸರುಗಳನ್ನು ಬರೆದಿಟ್ಟಿದ್ದಾನೆ. ಅವುಗಳಲ್ಲಿ ಕೆಲವು: ಬದಯಾಮೇಯಿ (ಬಾದಾಮಿ), ಇಂಡಿ, ಕಲ್ಲಿಗೇರಿ, ಮೋದೂಗಲ್ (ಮುದುಗಲ್), ಪೆತರ್ಗಲ (ಪಟ್ಟದಕಲ್ಲು), ಬನವಾಸಿ, ಹೊನ್ನಾವರ. ಎರಡನೇ ಶತಮಾನಕ್ಕೆ ಸೇರಿದ ‘ಅಹನಾನೂರ’ ತಮಿಳುಗ್ರಂಥದಲ್ಲಿ ‘ಎರುಮೈ ನಾಡಿ’ನ ಎಂದರೆ ಮಹಿಷ ಮಂಡಲ ಅಥವಾ ಮೈಸೂರಿನ ಹೆಸರಿದೆ. ಕನ್ನಡದ ಮೊದಲ ಶಾಸನವಾದ (ಕ್ರಿ.ಶ. 450) ಹಲ್ಮಿಡಿ ಶಾಸನದಲ್ಲಿ, ಪಲ್ಮಿಡಿ (ಹಲ್ಮಿಡಿ) ಮತ್ತು ಮೂಳಿವಳ್ಳಿ ಎಂಬ ಸ್ಥಳಗಳ ಹೆಸರುಗಳಿವೆ. ಶ್ರವಣಬೆಳಗೊಳದ ಶಾಸನಗಳಲ್ಲಿ ಅಲ್ಲಿರುವ ‘ಬೆಳ್ಗೊಳ’ ಅಥವಾ ‘ಬೆಳಗೊಳ’ದ ಉಲ್ಲೇಖವಿದೆ. ಕ್ರಿ.ಶ. 850ರಲ್ಲಿ ರಚಿತವಾದ ‘ಕವಿರಾಜ ಮಾರ್ಗ’ದಲ್ಲಿ ‘ಕಿಸುವೊಳಲ್’ (ಇಂದಿನ ಪಟ್ಟದಕಲ್ಲು), ‘ಮಹಾಕೋಪಣ ನಗರ’ (ಕೊಪ್ಪಳ), ಪುಲಿಗೆರೆ (ಲಕ್ಷ್ಮೇಶ್ವರ), ಒಂಕುಂದ (ಒಕ್ಕುಂದ) ಹೆಸರುಗಳಿವೆ. ಕ್ರಿ.ಶ. 920ರಲ್ಲಿ ರಚಿತವಾದ ಕನ್ನಡದ ಮೊದಲ ಗದ್ಯ ಕೃತಿ ‘ವಡ್ಡಾರಾಧನೆ’ಯಲ್ಲಿ ಜೈನಮುನಿಗಳಿಗೆ ಸಂಬಂಧಿಸಿದಂತೆ ‘ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತುಂ’ ಎಂಬ ಸಾಲು ಬರುತ್ತದೆ. ಈ ಹೆಸರುಗಳು ಬಹುಮಟ್ಟಿಗೆ ಆ ಕಾಲದ ಆಡಳಿತ ವಿಭಾಗಗಳು. ಪಂಪನ ಬನವಾಸಿ, ಬಸವಣ್ಣನ ಕೂಡಲಸಂಗಮ, ಹರಿಹರನ ಹಂಪಿ, ಕುಮಾರವ್ಯಾಸನ ಗದಗ, ಕುಮಾರ ವಾಲ್ಮೀಕಿಯ ತೊರವಿ ಯಾರಿಗೆ ಗೊತ್ತಿಲ್ಲ? ಕವಿಗಳು ತಮ್ಮ ಊರುಗಳ ಹೆಸರಿಗೆ ಘನತೆ ತಂದುಕೊಟ್ಟಿದ್ದಾರೆ.
ಸ್ಥಳನಾಮಗಳ ವಿಷಯದಲ್ಲಿ ನಮ್ಮ ಹಿಂದಿನ ಅರಸರು ಹೆಚ್ಚು ವಿವೇಚನೆಯಿಂದ ನಡೆದುಕೊಂಡಿದ್ದಾರೆ. ಅವರು ಊರುಗಳ ಹೆಸರನ್ನು ಬದಲಾಯಿಸಲಿಲ್ಲ. ಕದಂಬರ ಬನವಾಸಿ, ಗಂಗರ ತಲಕಾಡು, ರಾಷ್ಟ್ರಕೂಟರ ಮಳಖೇಡ, ಚಾಲುಕ್ಯರ ಬಾದಾಮಿ, ಹೊಯ್ಸಳರ ದ್ವಾರಸಮುದ್ರ, ವಿಜಯನಗರದ ಅರಸರ ಹಂಪಿ, ಬಹಮನಿಗಳ ಗುಲ್ಬರ್ಗಾ, ನಾಯಕರ ಕೆಳದಿಯ ಹೆಸರುಗಳೆಲ್ಲ ಈಗಲೂ ಹಾಗೆಯೇ ಇದ್ದು, ವರ್ಣರಂಜಿತ ಇತಿಹಾಸವನ್ನು ಇವತ್ತಿನವರೆಗೆ ಹೊತ್ತು ತಂದಿವೆ. ವಸಾಹತು ಕಾಲದಲ್ಲಿ ಇಂಗ್ಲಿಷರಿಗೆ ಊರ ಹೆಸರುಗಳನ್ನು ಸರಿಯಾಗಿ ಉಚ್ಚರಿಸಲು ಆಗುತ್ತಿರಲಿಲ್ಲ. ಹೀಗಾಗಿ ಹಲವು ಊರಿನ ಹೆಸರುಗಳು ತಪ್ಪುತಪ್ಪಾಗಿ ದಾಖಲಾದುವು. ಜಪಾನೀ ಗೆಳೆಯರೊಬ್ಬರು ಹೊಸಪೇಟೆ ಸಮೀಪದ ಹುಲಿಗಿ ಹೆಸರನ್ನು ‘ಫುರಿಗಿ’ ಎಂದೇ ಬರೆದುಕೊಳ್ಳುತ್ತಿದ್ದರು.
ಪ್ರಸ್ತುತ ಹೆಚ್ಚು ವಿವೇಚನೆಯಿಲ್ಲದೆ ಊರಿನ ಹೆಸರುಗಳನ್ನು ಬದಲಾಯಿಸಲಾಗುತ್ತಿದೆ. ಸ್ಥಳನಾಮಗಳ ವ್ಯುತ್ಪತ್ತಿ, ಇತಿಹಾಸ ತಿಳಿಯದೆ ಹೆಸರುಗಳನ್ನು ಬದಲಾಯಿಸುವುದು ತಪ್ಪು. ರಾಜ್ಯ- ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಣಸಿಗುವ ಊರುಗಳ ಹೆಸರುಗಳಲ್ಲೂ ತಪ್ಪುಗಳು ಕಾಣಸಿಗುತ್ತಿವೆ. ಗೂಗಲ್ ನಕ್ಷೆಯಲ್ಲೂ ಇದೇ ಪರಿಸ್ಥಿತಿ. ಸ್ಥಳನಾಮಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದ ವಿಶ್ವಸಂಸ್ಥೆಯು 2002ರಲ್ಲಿ, ಭೌಗೋಳಿಕ ಹೆಸರುಗಳನ್ನು ಬದಲಾಯಿಸಿ, ಆ ಜಾಗದಲ್ಲಿ ಜೀವಂತ ವ್ಯಕ್ತಿಗಳ ಹೆಸರನ್ನು ಇಡಬಾರದೆಂದು ಶಿಫಾರಸು ಮಾಡಿತ್ತು. ಇವತ್ತು ವಿಮಾನ– ರೈಲ್ವೇ ನಿಲ್ದಾಣಗಳು ಮತ್ತು ವಿಶ್ವವಿದ್ಯಾಲಯಗಳಿಗೆ ವ್ಯಕ್ತಿಗಳ ಹೆಸರನ್ನೇ ಇಡಲಾಗುತ್ತಿದೆ.
ಕರ್ನಾಟಕದಲ್ಲಿ ಸ್ಥಳನಾಮಗಳ ಕುರಿತಾಗಿ ನಮ್ಮ ಗಮನವನ್ನು ಮೊದಲು ಸೆಳೆದವರು ಶಂ.ಬಾ. ಜೋಶಿ. ಅವರು ‘ಕಂನಾಡು’ ಎನ್ನುವುದು ‘ಕರ್ನಾಟಕ’ದ ಮೂಲ ರೂಪ ಎಂದು ಹೇಳಿದ್ದಲ್ಲದೆ, ಈ ಹೆಸರು ‘ಕನ್ನ’ ಎಂಬ ಹೆಸರಿನ ಸಮುದಾಯದಿಂದ ನಿಷ್ಪನ್ನವಾಗಿದೆ ಎಂದು ವಾದಿಸಿದರು. ಅದಕ್ಕೆ ಉದಾಹರಣೆಯಾಗಿ, ಕನ್ನರ ವಾಸಸ್ಥಾನಗಳನ್ನು ತೋರಿಸುವ ಕನಕೂರು, ಕನ್ನಟ್ಟಿ, ಕನ್ನರಪಾಡಿ ಮೊದಲಾದ ಊರುಗಳನ್ನು ತೋರಿಸಿದರು. ಕಮಿಲ, ಮಸ್ಕಿ, ಬ್ಯಾಡಗಿ, ಮುದಕವಿ, ಲಾಲಗುಳಿ, ಗುಬ್ಬಿ, ಕಣಕುಂಬಿ, ಮುದ್ದೇಬಿಹಾಳ, ಜಮಖಂಡಿ, ಸೊಂಡೂರು, ಕುಷ್ಟಗಿ, ಮಾನ್ವಿ, ರೌಡಕುಂದ, ಪಿಕಲಿಹಾಳ ಮೊದಲಾದ ಹೆಸರುಗಳು ಬಹಳ ಪ್ರಾಚೀನವಾದುವು. ಹರಪ್ಪಾ ಮತ್ತು ಮೊಹೆಂಜಾದಾರೋ ಹೆಸರುಗಳು ವಿಶ್ವಖ್ಯಾತಿಯನ್ನು ಪಡೆದಿವೆ. ಅಚ್ಚರಿಯೆಂದರೆ, ನಮ್ಮಲ್ಲಿ ಹರಪ್ಪನಹಳ್ಳಿ, ಮತ್ತು ಪರಪ್ಪನ ಅಗ್ರಹಾರ ಇನ್ನೂ ಇವೆ. ವಿದ್ವಾಂಸರ ಪ್ರಕಾರ ಈ ಹೆಸರುಗಳು ಕಂಚಿನ ಯುಗಕ್ಕೆ ಸೇರಿದ್ದು, ಕ್ರಿ.ಪೂ. ಮೂರುಸಾವಿರ ವರ್ಷಗಳಷ್ಟು ಹಳತು. ಇವನ್ನೆಲ್ಲ ಅರ್ಥಮಾಡಿಕೊಳ್ಳಲು ನಮಗೆ ಮಾನವಶಾಸ್ತ್ರ, ಕುಲಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಇತಿಹಾಸ, ಭಾಷಾವಿಜ್ಞಾನ, ಸಾಹಿತ್ಯ, ಜಾನಪದ, ಪುರಾತತ್ವ, ಶಾಸನ ಶಾಸ್ತ್ರ, ಮೊದಲಾದ ಶಿಸ್ತುಗಳ ಅರಿವು ಬೇಕು.
ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಣ್ಣ–ದೊಡ್ಡ ಊರುಗಳಿವೆ. ನಮ್ಮಲ್ಲಿ ಗ್ರಾಮಸೂಚಿ ಇದೆ, ಆದರೆ ಊರುಗಳ ಹೆಸರಿನ ಸಮಗ್ರಪಟ್ಟಿ ಇಲ್ಲ. 16 ಮತ್ತು 17ನೇ ಶತಮಾನದಲ್ಲಿ ಹೇರಳವಾಗಿ ಹುಟ್ಟಿಕೊಂಡ ಸ್ಥಳ ಪುರಾಣಗಳಲ್ಲಿ ಊರುಗಳ ಹೆಸರನ್ನು ನಮ್ಮ ನಡುವೆ ಜನಪ್ರಿಯವಾಗಿದ್ದ ಶಿಷ್ಟ ಪುರಾಣಗಳೊಡನೆ ಜೋಡಿಸಲಾಯಿತು. ಆಗ ಊರ ಹೆಸರಿನ ಐತಿಹ್ಯಗಳು ಕೈಲಾಸದಿಂದ ಅಥವಾ ವೈಕುಂಠದಿಂದ ಶುರುವಾಗತೊಡಗಿದವು.
ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಸ್ಥಳನಾಮಗಳು ನಮ್ಮ ನಾಡಿನ ಬಗ್ಗೆ ಅನೇಕ ಒಳನೋಟಗಳನ್ನು ನೀಡುತ್ತವೆ. ಅನೇಕ ಸ್ಥಳನಾಮಗಳು ಆಯಾ ಸ್ಥಳದ ಪ್ರಾಕೃತಿಕ ವೈಶಿಷ್ಟ್ಯಗಳನ್ನೋ, ಜನವಸತಿಯ ರೀತಿಗಳನ್ನೋ ವಿವರಿಸುತ್ತವೆ. ಉದಾಹರಣೆಗೆ, ಎಡೆ, ತಾಣ, ಪುರ, ಹಳ್ಳಿ, ವಾಡಿ, ಕೊಪ್ಪಲು, ಬಾಡ, ಗುತ್ತು, ಗೂಡು, ಕುಂಟೆ, ಕೊತ್ತ, ಕೋಡು, ತಟ, ಬೂಡು, ಕೊಪ್ಪಲು, ಮೊದಲಾದ ಪದಗಳುಳ್ಳ ಹೆಸರುಗಳು ಮಾನವ ವಸತಿಯ ವಿವಿಧ ಹಂತಗಳನ್ನು ಸಂಕೇತಿಸುತ್ತವೆ. ಭೌಗೋಳಿಕವಾಗಿ ಎತ್ತರವಿರುವ ಜಾಗಗಳು, ಪೆರ್, ಕಾರ್, ಮೊದಲಾದ ಪ್ರತ್ಯಯಗಳನ್ನು ಹೊಂದಿರುತ್ತವೆ. ಸಮತಟ್ಟಾದ ವಿಶಾಲ ಸ್ಥಳವಿದ್ದರೆ ಅಲ್ಲಿ ‘ಅಡ್ಕ’ ಬರುತ್ತದೆ.
ಯಾವುದೋ ಕಾರಣದಿಂದ ಪಾಳು ಬಿದ್ದ ಊರುಗಳಿಗೆ ‘ಹಾಳ’ ಸೇರಿಕೊಳ್ಳುತ್ತದೆ. ಉದಾ: ಪಿಕ್ಲಿಹಾಳ, ಬೂದಿಹಾಳ, ಇತ್ಯಾದಿ. ಮಾನವ ಸಂಸ್ಕೃತಿಯ ವಿಕಾಸದಲ್ಲಿ ಕಲ್ಲು ಬಂಡೆಗಳು ನಿರ್ಣಾಯಕ ಪಾತ್ರ ವಹಿಸಿವೆಯಾದ್ದರಿಂದ, ಸ್ಥಳನಾಮಗಳಲ್ಲಿ ಕಲ್ಲುಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಬೆಣಕಲ್, ಹಾನಗಲ್, ಕಾರ್ಕಳ, ಕರೇಕಲ್, ಕಲ್ಲಹಳ್ಳಿ, ಇತ್ಯಾದಿ ಹೆಸರುಗಳಿಗೆ ಚಾರಿತ್ರಿಕ ಮಹತ್ವವಿದೆ. ಮರಹಳ್ಳಿ, ಎಡತೊರೆ, ಗುಡ್ಡೆಮನೆ, ಹುಣಿಸೇಹಳ್ಳಿ ಮೊದಲಾದ ಹೆಸರುಗಳು ಆ ಊರಿನ ವಿಶೇಷಗಳನ್ನು ತಿಳಿಸುತ್ತವೆ. ಹಲವು ಸ್ಥಳನಾಮಗಳು ಜನ ಸಮುದಾಯಗಳ ದಾಖಲೆಗಳಾಗಿರುತ್ತವೆ. ಉದಾ: ಸವಣರು ಅಂದರೆ ಜೈನಮುನಿಗಳು ವಾಸಿಸುತ್ತಿದ್ದ ಊರು ಸವಣೂರು.
ವಸತಿಗೆ ನೀರು ಬೇಕೇ ಬೇಕು. ಹೀಗಾಗಿ ಸ್ಥಳನಾಮಗಳಲ್ಲಿ ನೀರಿಗೆ ವಿಶೇಷ ಮಹತ್ವ. ಎರಡು ನದಿಗಳು ಸೇರುವ ಸ್ಥಳವಾಗಿದ್ದರೆ ಅದು ‘ಕೂಡಿಗೆ’. ನೀರಿನಿಂದ ಸುತ್ತುವರಿದ ಸ್ಥಳವಾಗಿದ್ದರೆ, ಅದು ‘ಕುರುವ’ ಅಥವಾ ‘ಕುದುರು’. ಅಲ್, ಆರ್, ಆಲ್, ಇರ್, ನೀರ್, ಬೆಳ್, ಕೆರೆ, ಅಜೆ, ಕಜೆ, ಕುದ್ರು, ಮೊದಲಾದುವು ನೀರಿನ ಇರುವನ್ನು ಸೂಚಿಸುವ ಪ್ರತ್ಯಯಗಳು. ತಮಿಳಿನಲ್ಲಿ ‘ಅಲಂಗಟ್ಟಿ’ ಎಂದರೆ ನೀರಿನ ಗಟ್ಟಿ, ಅದುವೇ ಕನ್ನಡದಲ್ಲಿ ‘ಆಲಿಕಲ್ಲು’. ಮಂಗಳೂರನ್ನು ತುಳುವಿನಲ್ಲಿ ‘ಕುಡ್ಲ’ ಎನ್ನುತ್ತಾರೆ. ಅದು ನೀರು ಕೂಡುವ ಸ್ಥಳ, ನೇತ್ರಾವತಿ ನದಿ ಕಡಲಿಗೆ ಸೇರುವ ಜಾಗ. ಕೂಡಲಸಂಗಮದಲ್ಲೂ ಈ ಪದ ಇದೆ. ಗೊಲ್ಲರಹಳ್ಳಿ, ಬೇಡರಳ್ಳಿ, ಮಲ್ಲ, ಮಲಪ್ರಭೆ, ಕಣ್ಣ, ಹಲ, ಮುರ, ಸಿರ, ನಾಗ, ಕಂದ, ಮೊದಲಾದ ಪದಗಳು ಪ್ರಾಚೀನ ಸಮುದಾಯಗಳ ವಸತಿಯನ್ನು ಹೇಳುತ್ತವೆ. ಕರ್ನಾಟಕದಲ್ಲಿ ಸುಮಾರು 30 ಸಮುದಾಯಗಳನ್ನು ಸೂಚಿಸುವ 2500ಕ್ಕೂ ಹೆಚ್ಚು ಸ್ಥಳನಾಮಗಳಿವೆ.
ಕನ್ನಡದಲ್ಲಿ ಪ್ರಾಣಿ ಮತ್ತು ಸಸ್ಯಸೂಚಕ ಸ್ಥಳನಾಮಗಳು ಹೇರಳವಾಗಿವೆ. ಇತ್ತೀಚೆಗೆ ಭಾಗ್ಯನಗರವೆಂದು ಬದಲಾಯಿಸಿದ ಊರಿನ ಹೆಸರಲ್ಲಿ ಬಾಗೇ ಮರ ಇತ್ತು. ಆನೆಕಲ್ಲು, ಎಲಿಮಲೆ, ಹುಲಿಕಲ್, ಗಿಣಿಗೇರಾ, ನವಿಲೂರು, ನೊಣವಿನ ಕೆರೆ, ಮಂಗನಹಳ್ಳಿ, ಮೊದಲಾದ ಹೆಸರುಗಳು ಈ ನಿಟ್ಟಿನಿಂದ ಮುಖ್ಯವಾಗಿವೆ. ಸಿಂಹ(ಸಿಂಗ)ದಿಂದ ಆರಂಭವಾಗುವ ಸುಮಾರು 90 ಊರುಗಳು ಕರ್ನಾಟಕದಲ್ಲಿವೆ. ಮರವೂರು, ಮಾವಿನ ಕಟ್ಟೆ, ಪೆಲತ್ತಡ್ಕ, ಹುಲ್ಲೂರು, ಕಳಲೆ, ಮಾವಿನ ಕುರ್ವೆ, ಬಾಳೆಹೊನ್ನೂರು, ಹುಣಿಸೆಕೊಪ್ಪ, ಅರಳೀಕಟ್ಟೆ, ತಾವರೆಗೆರೆ, ಜಾಲಿಹಾಳ, ಕಡಲೆಕೊಪ್ಪ, ಜೋಳದರಾಶಿ ಮೊದಲಾದ ಹೆಸರುಗಳು ಸಸ್ಯಸೂಚಕಗಳು.
ಇತ್ತೀಚಿಗೆ ಮಲೆನಾಡಿನ ಒಂದು ಪುಟ್ಟ ಹಳ್ಳಿಗೆ ಹೋಗಿದ್ದೆ. ಆ ಹಳ್ಳಿಯ ತಿರುವಿನಲ್ಲಿ ಒಂದು ನಾಮಫಲಕ ಕಾಣಿಸಿತು. ಹೋಗಿ ನೋಡಿದರೆ, ‘ಶಿವಾಜಿ ನಗರ’ ಎಂದು ಬರೆದಿತ್ತು. ಊರಿಗೂ ಹೆಸರಿಗೂ ಇರಬಹುದಾದ ಸಂಬಂಧದ ಬಗ್ಗೆ ಅಲ್ಲಿನ ಯಾರಿಗೂ ಏನೂ ಗೊತ್ತಿರಲಿಲ್ಲ. ಆ ಊರಿನ ಮುಖ್ಯಸ್ಥರನ್ನು ಕಂಡು, ‘ದಯವಿಟ್ಟು ಊರಿನ ಹೆಸರು ಬದಲಾಯಿಸಬೇಡಿ, ನಿಮ್ಮ ಊರಿನ ಹೆಸರು, ಊರಿನ ನಡುವೆ ಹರಿಯುವ ಆ ಪುಟ್ಟ ಹೊಳೆಯಿಂದ ಬಂದಿದೆ’ ಎಂದು ವಿವರಿಸಿದೆ. ಅವರು ಒಪ್ಪಿಕೊಂಡರು. ಸ್ಥಳೀಯತೆಯನ್ನು ನಾಶಮಾಡಿ ನಾವು ಯಾವ ದೇಶವನ್ನೂ ಕಟ್ಟಲಾರೆವು.
ಈಗ ನಾವೆಲ್ಲರೂ ಒಟ್ಟುಗೂಡಿ ನಮ್ಮ ನಮ್ಮ ಊರಿನ ಹೆಸರುಗಳನ್ನು ಉಳಿಸಿಕೊಳ್ಳಬೇಕಾಗಿದೆ. ಊರ ಹೆಸರು, ನಮ್ಮ ಉಸಿರು! ಹೊಸ ಊರುಗಳನ್ನು ಕಟ್ಟುವವರು ಅವರಿಗೆ ಬೇಕಾದ ಹೆಸರುಗಳನ್ನು ಇಟ್ಟುಕೊಳ್ಳಲಿ. ಆದರೆ ಅವರಿಗೆ ಹಳೆಯ ಹೆಸರುಗಳನ್ನು ಬದಲಾಯಿಸುವ ಅಧಿಕಾರ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.