ವಿಶ್ವ ಸುದ್ದಿ ದಿನ
ಸಾಂದರ್ಭಿಕ ಚಿತ್ರ
ಕ್ಷೋಭೆಯ ಕಾಲದಲ್ಲಿ ಪತ್ರಿಕೋದ್ಯಮದ ಮಹತ್ವ ವಿವರಿಸುವ ಜಾಗತಿಕ ಮಾಧ್ಯಮ ಲೋಕದ ಅನುಭವಿಗಳ ಅಭಿಪ್ರಾಯಗಳು
ಪತ್ರಿಕೋದ್ಯಮದ ಮೂಲ ಕರ್ತವ್ಯಗಳಾದ ವಾಸ್ತವಾಂಶಗಳನ್ನು ಸಂಗ್ರಹಿಸುವುದು ಮತ್ತು ಮಾಹಿತಿಯನ್ನು ಪರಿಶೀಲಿಸುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಹಾಗೆಯೇ ಹೆಚ್ಚು ಅಪಾಯಕಾರಿಯೂ ಆಗುತ್ತಿದೆ.
2025ರ ಮೊದಲ ಭಾಗದಲ್ಲಿ ವ್ಯವಸ್ಥಿತವಾದ ಹಿಂಸಾಚಾರ, ಬೆದರಿಕೆ ಮತ್ತು ಸೆನ್ಸಾರ್‌ಶಿಪ್‌ನಿಂದಾಗಿ ಹವಾಮಾನ ಮತ್ತು ಪರಿಸರ ಕುರಿತು ವರದಿ ಮಾಡುತ್ತಿದ್ದ ಪತ್ರಕರ್ತರ ಕೆಲಸ ದಶಕಗಳಲ್ಲಿ ಕಾಣದಷ್ಟು ಅಪಾಯಕಾರಿ ಮಟ್ಟ ಮುಟ್ಟಿತು.
ಸಾಮುದಾಯಿಕ ಬದುಕಿನ ಬುನಾದಿಯಾಗಿರುವ ಸತ್ಯಾಂಶಗಳನ್ನು ತಿರುಚುವ ಸಂಘಟಿತವಾದ ಮತ್ತು ಪ್ರಜ್ಞಾಪೂರ್ವಕವಾದ ಕ್ರಿಯೆಗಳಿಂದ ಸಮಾಜದ ಸಂರಚನೆಯೇ ಛಿದ್ರಗೊಳ್ಳುತ್ತಿದೆ. ಸುದ್ದಿಗಳನ್ನು ಸುಳ್ಳು ಎಂದು ನೀವು ಸಾಬೀತುಪಡಿಸುವ ಅಗತ್ಯವೇ ಇಲ್ಲ; ನಿರಂತರವಾಗಿ ಆರೋಪ ಹೊರಿಸುವುದು, ಅನುಮಾನಗಳನ್ನು ಬಿತ್ತುವುದು ಮತ್ತು ಪಿತೂರಿಗಳನ್ನು ಹರಡುವ ಕೆಲಸ ಮಾಡಿದರೆ ಸಾಕು; ಉಳಿದ ಕೆಲಸವನ್ನು ಸಾಮಾಜಿಕ ಜಾಲತಾಣಗಳು ಮಾಡಿ ಮುಗಿಸುತ್ತವೆ.
ಜಗತ್ತಿನಾದ್ಯಂತ ವರದಿಗಾರರನ್ನು ಹೊಂದಿರುವ, ಅಂತರರಾಷ್ಟ್ರೀಯ ಸುದ್ದಿಸಂಸ್ಥೆಯಾದ ಏಜೆನ್ಸಿ ಫ್ರಾನ್ಸ್ ಪ್ರೆಸ್‌ನ (ಎಎಫ್‌ಪಿ) ಅಂಕಿಅಂಶಗಳು ಸ್ಪಷ್ಟ ಚಿತ್ರಣ ನೀಡುತ್ತಿವೆ; ನಮ್ಮ ಸಂಸ್ಥೆಯ 25 ಪತ್ರಕರ್ತರು ಈ ವರ್ಷದ ಆರು ತಿಂಗಳಲ್ಲಿ ತೀವ್ರವಾದ ಹಿಂಸೆಗೆ ಗುರಿಯಾಗಿದ್ದಾರೆ. 2024ರಲ್ಲಿ ಇಡೀ ವರ್ಷದಲ್ಲಿ ಸಂಭವಿಸಿದ ಘಟನೆಗಳಿಗಿಂತಲೂ ಇದು ಹೆಚ್ಚಾಗಿದೆ.
ಹಿಂಸೆ ಮತ್ತು ಬೆದರಿಕೆಗಳ ವ್ಯಾಪ್ತಿಯು ಜಾಗತಿಕವಾಗಿ ಹಿಗ್ಗುತ್ತಲೇ ಇದೆ. ನಿರಂಕುಶಾಧಿಕಾರದ ಪದ್ಧತಿಗಳಿಂದ ಮತ್ತು ಪತ್ರಿಕೋದ್ಯಮವನ್ನು ಸದಾ ಬಹಿರಂಗವಾಗಿ ಟೀಕಿಸುವ ಮನಃಸ್ಥಿತಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಅಂಥವರಿಗೆ ರಾಜಕೀಯ ಕಾರಣಗಳಿಂದ ಕಾನೂನಿನ ಅಭಯವೂ ಸಿಕ್ಕಿರುವುದರಿಂದ ಪತ್ರಕರ್ತರ ಮೇಲಿನ ದಾಳಿಗಳು ಸಾಮಾನ್ಯವಾಗಿಬಿಟ್ಟಿವೆ. ಇದು ಅಸ್ಥಿರ ರಾಜಕೀಯ ಪರಿಸ್ಥಿತಿ ಇರುವ ದೇಶಗಳಿಗೆ ಸೀಮಿತವಾಗಿಲ್ಲ; ಪತ್ರಿಕಾ ಸ್ವಾತಂತ್ರ್ಯದ ಸುದೀರ್ಘ ಇತಿಹಾಸವಿರುವ ದೇಶಗಳು, ಅತ್ಯುನ್ನತ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿಯೂ ಈ ವಿದ್ಯಮಾನಗಳು ಸಾಮಾನ್ಯ ಎನ್ನುವಂತಾಗಿರುವುದು ಜಾಗತಿಕ ಮೌಲ್ಯ ವ್ಯವಸ್ಥೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗಿರುವುದನ್ನು ಸೂಚಿಸುತ್ತಿದೆ.
ಜಗತ್ತಿನ ಬಹಳ ಮುಖ್ಯವಾದ ಪ್ರದೇಶಗಳಿಂದ ಪತ್ರಿಕೋದ್ಯಮವು ಕ್ರಮೇಣ ಕಣ್ಮರೆಯಾಗುತ್ತಿದೆ. ಬೆದರಿಕೆಗಳು ಅಸಹನೀಯವಾಗುತ್ತಿವೆ. ಪಶ್ಚಿಮ ಆಫ್ರಿಕಾದ ಸಾಹೆಲ್ ಪ್ರದೇಶದಿಂದ ಮತ್ತು ಮಧ್ಯಅಮೆರಿಕದ ನಿಕರಾಗುವ ಮತ್ತು ಎಲ್ ಸಾಲ್ವಡಾರ್‌ನಿಂದ ನಮ್ಮ ಸಂಸ್ಥೆಯ ಪತ್ರಕರ್ತರನ್ನು ಬಲವಂತವಾಗಿ ಹೊರನಡೆಯುವಂತೆ ಮಾಡಿದ್ದನ್ನು ನಾವು ಕಂಡಿದ್ದೇವೆ. ಪೂರ್ವ ಮತ್ತು ಮಧ್ಯ ಯುರೋಪ್‌ನ ನಮ್ಮ ಫ್ಯಾಕ್ಟ್ ಚೆಕ್ ಮಾಡುವ ಪತ್ರಕರ್ತರು ನಿರಂತರವಾಗಿ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದು, ಮೌನವಹಿಸುವಂತೆ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.
ಇವಕ್ಕೆಲ್ಲ ಮೇಲಿನಿಂದಲೇ ಸಂದೇಶಗಳು ಬರುತ್ತಿವೆ. ಕಳೆದ ವರ್ಷ ಅರ್ಜೆಂಟೀನಾದ ಅಧ್ಯಕ್ಷರು ಸಾಮಾಜಿಕ ಜಾಲತಾಣದಲ್ಲಿ ಹೀಗೆ ಪೋಸ್ಟ್ ಮಾಡಿದ್ದರು: ‘ಪತ್ರಕರ್ತರನ್ನು ನಾವು ಎಷ್ಟು ದ್ವೇಷಿಸಬೇಕೋ ಅಷ್ಟು ದ್ವೇಷಿಸುತ್ತಿಲ್ಲ’. 2024ರಲ್ಲಿ ಒಟ್ಟು 179 ಮಾಧ್ಯಮ ಪ್ರತಿನಿಧಿಗಳ ಮೇಲೆ ದೌರ್ಜನ್ಯಗಳು ನಡೆದಿವೆ ಎಂದು ಅರ್ಜೆಂಟೀನಾದ ಪತ್ರಿಕೋದ್ಯಮ ವೇದಿಕೆಯು ಹೇಳಿದೆ.
ಗಾಜಾ ಪರಿಸ್ಥಿತಿಯನ್ನೇ ಗಮನಿಸಿ. ಎರಡು ವರ್ಷಗಳಲ್ಲಿ ಗಾಜಾದಲ್ಲಿ ಸುಮಾರು 200 ಪತ್ರಕರ್ತರು ಹತ್ಯೆಗೊಳಗಾಗಿದ್ದಾರೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಕನಿಷ್ಠ 20 ಪ್ರಕರಣಗಳಲ್ಲಿ ಪತ್ರಕರ್ತರನ್ನು ಉದ್ದೇಶಪೂರ್ವಕವಾಗಿಯೇ ಗುರಿ ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ. ಸಂಘರ್ಷದ ಪ್ರದೇಶದಲ್ಲಿ ಸಂಚರಿಸುವಾಗ ರಕ್ಷಣೆಗಾಗಿ ತೊಡುವ ವಿಶೇಷ ಜಾಕೆಟ್ ಅನ್ನು ತೊಡಲು ನಮ್ಮ ಎಎಫ್‌ಪಿಯ ಹಲವು ಪತ್ರಕರ್ತರು ನಿರಾಕರಿಸಿದರು. ಅದರಿಂದ ತಾವು ಮಾಧ್ಯಮದವರು ಎಂದು ಸುಲಭವಾಗಿ ಪತ್ತೆಯಾಗಿ, ತಮ್ಮನ್ನು ಗುರಿ ಮಾಡಲಾಗುತ್ತದೆ ಎನ್ನುವುದು ಅವರ ಆತಂಕ. ತಮಗೂ ಅಪಾಯ ಬಂದೊದಗಬಹುದು ಎನ್ನುವ ಕಾರಣಕ್ಕೆ ಪತ್ರಕರ್ತರ ಸನಿಹದಲ್ಲಿ ನಿಲ್ಲಲೂ ಜನರು ಹೆದರುತ್ತಿದ್ದರು ಎಂದು ನಮ್ಮ ಪ್ರತಿನಿಧಿಗಳು ಹೇಳುತ್ತಿದ್ದರು.
ಅನೇಕ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಪಾಲು ಮಹತ್ತರವಾದುದು. ಅಂಥ ಅನೇಕ ರಾಷ್ಟ್ರಗಳ ಪೈಕಿ ಕೆಲವು ಮಾತ್ರವೇ ಸತ್ಯ, ವಾಸ್ತವಾಂಶ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಧ್ವನಿಯೆತ್ತುತ್ತಿವೆ. ಇದರಿಂದಾಗಿ ನಮ್ಮ ಅನೇಕ ಕೆಚ್ಚೆದೆಯ ಮತ್ತು ಬದ್ಧತೆಯ ಪತ್ರಕರ್ತರಲ್ಲಿ ತಾವು ಏಕಾಂಗಿಗಳು, ಅಸಹಾಯಕರು ಎನ್ನುವ ಭಾವನೆ ಮೂಡಿದೆ.
ಜನರ ಜೀವನದಲ್ಲಿ ಡಿಜಿಟಲ್ ತಂತ್ರಜ್ಞಾನದ ಸ್ಥಾನವನ್ನು ಜನರೇಟಿವ್ ಎಐ (ಕೃತಕ ಬುದ್ಧಿಮತ್ತೆ) ಸಾಧನಗಳು ಆಕ್ರಮಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ಮೇಲೆ ದಾಳಿ ಮಾಡುವ, ಸತ್ಯವನ್ನು ತಿರುಚುವ ಅಥವಾ ದುರ್ಬಲಗೊಳಿಸುವ ಪ್ರಕ್ರಿಯೆಯೂ ವ್ಯಾಪಕವಾಗಿ ನಡೆಯುತ್ತಿದೆ. ಜ್ಞಾನವನ್ನು ಪಡೆಯುವಲ್ಲಿ ಮತ್ತು ಮಾನವನ ಅಭಿವೃದ್ಧಿಯಲ್ಲಿ ಈ ಸಾಧನಗಳಿಗಿರುವ ಬೆರಗುಗೊಳಿಸುವ ಶಕ್ತಿಯನ್ನು ನಾವು ಕಾಣಬಹುದಾಗಿದೆ. ಹಾಗೆಯೇ, ಸುಳ್ಳು ಮತ್ತು ತಿರುಚಿದ ಸುದ್ದಿಗಳಿಂದ ನಮ್ಮ ಮಾಹಿತಿ ವ್ಯವಸ್ಥೆಯನ್ನು ಅವು ಹೇಗೆ ಮಲಿನ ಮಾಡಬಹುದು ಎನ್ನುವುದನ್ನು ನಾವು ಈಗಾಗಲೇ ಕಾಣುತ್ತಿದ್ದೇವೆ.
ಇದೊಂದು ಪರಿವರ್ತನೆಯ ಘಟ್ಟ ಎಂಬಂತೆ ಭಾಸವಾಗುತ್ತಿದೆ. ಸತ್ಯ ಮತ್ತು ಸುಳ್ಳಿನ ನಡುವಣ ಗೆರೆ ಅಳಿಸಿಹೋಗಿರುವ ಜಗತ್ತಿನಲ್ಲಿ ಬದುಕುವ ಬಗ್ಗೆ ಜನ ಒಮ್ಮೊಮ್ಮೆ ಚರ್ಚಿಸುತ್ತಾರೆ. ಪತ್ರಿಕೋದ್ಯಮ ಪರಿಪೂರ್ಣ ಏನಲ್ಲ ಮತ್ತು ಸದಾ ನಿಖರವಾದುದನ್ನೇ ಒದಗಿಸಲೂ ಸಾಧ್ಯವಿಲ್ಲ. ಆದರೆ, ಸರಿಯಾದ ಮಾಹಿತಿಯನ್ನು ಸಂಗ್ರಹಿಸುವ ಪ್ರಾಮಾಣಿಕ ಪ್ರಯುತ್ನ ಮತ್ತು ಸತ್ಯದ ಹುಡುಕಾಟ ನಮ್ಮ ಸಮಾಜಗಳ ಆರೋಗ್ಯಕ್ಕೆ ಮೂಲಾಧಾರವಾಗಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ನಾವು ಸತ್ಯದ ಪರ ನಿಲ್ಲಬೇಕಿದೆ. ಅದರ ವಿನಾ ಬೇರೊಂದು ಮಾರ್ಗವೇ ಇಲ್ಲ.
ಗುರುತು ಹೇಳಿಕೊಳ್ಳುವುದೂ ಅಪಾಯಕಾರಿ
ಪ್ರತಿಭಟನೆಗಳು, ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುವ ವೇಳೆ ಪತ್ರಕರ್ತರು ತಮ್ಮ ಗುರುತನ್ನು ಬಹಿರಂಗಪಡಿಸುವುದು ಒಂದು ಸಂಪ್ರದಾಯವಾಗಿದೆ. ಹೀಗೆ ಮಾಡುವುದರಿಂದ ತಮಗೆ ಒಂದಷ್ಟು ರಕ್ಷಣೆ ಮತ್ತು ಅಧಿಕಾರ ಸಿಗುತ್ತದೆ ಎನ್ನುವುದು ಪತ್ರಕರ್ತರ ನಂಬಿಕೆ. ಆದರೆ, ಹೀಗೆ ಗುರುತಿಸಿಕೊಳ್ಳುವವರನ್ನೇ ಹೆಚ್ಚಿನ ಪ್ರಮಾಣದಲ್ಲಿ ದಾಳಿಗೆ ಗುರಿಮಾಡಲಾಗುತ್ತಿದೆ. ಅಮೆರಿಕ, ಟರ್ಕಿ, ಅರ್ಜೆಂಟೀನಾ ಮುಂತಾದ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ್ದ ನಮ್ಮ ಸಂಸ್ಥೆಯ ಪತ್ರಕರ್ತರನ್ನು ಕಳೆದ ಕೆಲವು ವರ್ಷಗಳಿಂದ ವಿವಿಧ ರೀತಿಯ ಹಿಂಸಾತ್ಮಕ ಕೃತ್ಯಗಳಿಗೆ ಈಡು ಮಾಡಲಾಗಿದೆ. ಅವರೆಲ್ಲರೂ ಪತ್ರಕರ್ತರೆಂದೇ ಆ ಸ್ಥಳಗಳಲ್ಲಿ ಗುರತಿಸಿಕೊಂಡಿದ್ದವರು. ತಾವು ಪತ್ರಕರ್ತರಾಗಿದ್ದರಿಂದಲೇ ತಮ್ಮನ್ನು ಗುರಿ ಮಾಡಲಾಗಿದೆ ಎನ್ನುವುದು ಅವರೆಲ್ಲರ ಅನುಭವದ ಮಾತು.
ಪತ್ರಕರ್ತರ ಮೇಲಿನ ಹಲ್ಲೆ, ಬಂಧನ, ಗಡಿಪಾರು ಮುಂತಾದ ಈ ಪ್ರಕರಣಗಳು ಅಥವಾ ಪತ್ರಕರ್ತರು ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು, ಜನರ ಮಾಹಿತಿ ತಿಳಿಯುವ ಹಕ್ಕಿನ ಮೇಲೆ ಜಾಗತಿಕ ಮಟ್ಟದಲ್ಲಿ ಪೂರ್ಣಪ್ರಮಾಣದಲ್ಲಿ ನಡೆಯುತ್ತಿರುವ ದಾಳಿಯತ್ತ ಬೊಟ್ಟು ಮಾಡುತ್ತಿವೆ.
ಹಿಂಸೆ ಮತ್ತು ಬೆದರಿಕೆಗಳ ವ್ಯಾಪ್ತಿಯು ಜಾಗತಿಕವಾಗಿ ಹಿಗ್ಗುತ್ತಲೇ ಇದೆ. ನಿರಂಕುಶಾಧಿಕಾರದ ಪದ್ಧತಿಗಳಿಂದ ಮತ್ತು ಪತ್ರಿಕೋದ್ಯಮವನ್ನು ಸದಾ ಬಹಿರಂಗವಾಗಿ ಟೀಕಿಸುವ ಮನಃಸ್ಥಿತಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಇದು ಅಸ್ಥಿರ ರಾಜಕೀಯ ಪರಿಸ್ಥಿತಿ ಇರುವ ದೇಶಗಳಿಗೆ ಸೀಮಿತವಾಗಿಲ್ಲ; ಪತ್ರಿಕಾ ಸ್ವಾತಂತ್ರ್ಯದ ಸುದೀರ್ಘ ಇತಿಹಾಸವಿರುವ ದೇಶಗಳು, ಅತ್ಯುನ್ನತ ಪ್ರಜಾಪ್ರಭುತ್ವವಾದಿ ರಾಷ್ಟ್ರಗಳಲ್ಲಿಯೂ ಈ ವಿದ್ಯಮಾನಗಳು ಸಾಮಾನ್ಯ ಎನ್ನುವಂತಾಗಿರುವುದು ಜಾಗತಿಕ ಮೌಲ್ಯ ವ್ಯವಸ್ಥೆಯಲ್ಲಿ ಅಪಾಯಕಾರಿ ಬದಲಾವಣೆಗಳಾಗಿರುವುದನ್ನು ಸೂಚಿಸುತ್ತಿದೆ
ಫಿಲ್ ಚೆಟ್‌ವಿಂಡ್
ಲೇಖಕ: ಎಎಫ್‌ಪಿ ಜಾಗತಿಕ ಸುದ್ದಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.