‘ಪ್ರಜಾವಾಣಿ’ಯು ಸೆಪ್ಟೆಂಬರ್ 28ರ ‘ವಿಶ್ವ ಸುದ್ದಿ ದಿನ’ದ ಅಂಗವಾಗಿ ನಡೆಯುತ್ತಿರುವ ಜಾಗತಿಕ ಅಭಿಯಾನದ ಪಾಲುದಾರ ಆಗಿದೆ. ಇದರ ಭಾಗವಾಗಿ ‘ಪ್ರಜಾವಾಣಿ’ಯಲ್ಲಿ ಮಾಲಿಕೆಯಾಗಿ ಪ್ರಕಟಗೊಳ್ಳುತ್ತಿರುವ ಲೇಖನಗಳಲ್ಲಿ ಇದು ಮೊದಲನೆಯದು.
ಅರ್ಧ ಶತಮಾನದ ಪತ್ರಕರ್ತ ಜೀವನದಲ್ಲಿ ಪ್ರತಿವರ್ಷವೂ ನಾನು ಅಮೆರಿಕದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕೋದ್ಯಮವನ್ನು ಮಾತ್ರವೇ ಕಂಡಿದ್ದೇನೆ. ನಾನು ವೃತ್ತಿ ಆರಂಭಿಸಿದ್ದು 1970ರಲ್ಲಿ; ಮಾಧ್ಯಮವು ಪ್ರಜಾಪ್ರಭುತ್ವಕ್ಕೆ ಹೇಗೆ ಪೂರಕವಾಗಿತ್ತು ಎನ್ನುವುದನ್ನು ಅಮೆರಿಕದ ಜನರು ಆಗ ಸ್ಪಷ್ಟವಾಗಿ ಕಾಣಬಹುದಿತ್ತು: ಮೊದಲು, ದೇಶದ ಅನೇಕರ ಸಾವುಗಳಿಗೆ ಕಾರಣವಾದ ವಿಯೆಟ್ನಾಂ
ನಲ್ಲಿನ ಸುದೀರ್ಘ ಯುದ್ಧದ ವಿಚಾರದಲ್ಲಿ ಅಮೆರಿಕ ಸರ್ಕಾರವು ಮುಚ್ಚಿಹಾಕಿದ್ದ ವೈಫಲ್ಯ
ಗಳು ‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಪ್ರಕಟವಾಗಿದ್ದ ಪೆಂಟಗನ್ ದಾಖಲೆಗಳಿಂದ (ಪೆಂಟಗನ್ ಪೇಪರ್ಸ್) ಜನರಿಗೆ ಗೊತ್ತಾಗಿದ್ದವು.
ತದನಂತರ, ಅಮೆರಿಕದ ಅಧ್ಯಕ್ಷರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು, ಸಂವಿಧಾನವನ್ನು ಧಿಕ್ಕರಿಸಿ, ರಾಜಕೀಯ ಎದುರಾಳಿಗಳ ವಿರುದ್ಧ ಸರ್ಕಾರವನ್ನೇ ಹೇಗೆ ದಾಳವಾಗಿ ಬಳಸಿದರು ಎನ್ನುವುದು ‘ದಿ ವಾಷಿಂಗ್ಟನ್ ಪೋಸ್ಟ್’ನಲ್ಲಿ ಪ್ರಕಟವಾದ ‘ವಾಟರ್‌ಗೇಟ್’ ಹಗರಣದ ಬಗೆಗಿನ ತನಿಖಾ ವರದಿಯಿಂದ ಜನರ ಅರಿವಿಗೆ ಬಂತು.
ನನ್ನ ದೇಶವು ಸದಾ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ ಮತ್ತು ನಮ್ಮ ಸಂವಿಧಾನದ ಮೊದಲ ತಿದ್ದುಪಡಿಯು ಅದನ್ನು ಖಾತರಿಪಡಿಸುತ್ತದೆ ಎಂದು ದಶಕಗಳವರೆಗೆ ನಾನು ಭಾವಿಸಿದ್ದೆ. ಇನ್ನು ಮುಂದೆ ನಾನು, ದೇಶದಲ್ಲಿ ಸಂವಿಧಾನದ ನಿಯಮಗಳು, ಕಾನೂನು ಚಾಲ್ತಿಯಲ್ಲಿರುತ್ತದೆ ಎಂದಾಗಲಿ, ಮುಕ್ತ ಅಭಿವ್ಯಕ್ತಿಯು–ಕೇವಲ ಮಾಧ್ಯಮಗಳಿಗಷ್ಟೇ ಅಲ್ಲ, ಅಮೆರಿಕದ ಎಲ್ಲರಿಗೂ– ಉಳಿಯುತ್ತದೆ ಎಂದಾಗಲಿ ಭಾವಿಸಲಾರೆ.
ತಮ್ಮ ಅಧಿಕಾರದ ಬಗೆಗಿನ ಸಾಂಪ್ರದಾಯಿಕ ನಿರ್ಬಂಧಗಳ ಬಗ್ಗೆ ತಿರಸ್ಕಾರವುಳ್ಳ ಅಧ್ಯಕ್ಷರನ್ನು ನಾವು ಹೊಂದಿದ್ದೇವೆ. ನಮ್ಮ ಸಂಸತ್ತಿನಲ್ಲಿರುವ ಬಹುತೇಕರು ಗುಲಾಮ ಮನಃಸ್ಥಿತಿಯುಳ್ಳವರಾಗಿದ್ದಾರೆ. ಅಧ್ಯಕ್ಷರು ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ನಿರ್ಧರಿಸಿದ್ದು, ಅವುಗಳ ಪೈಕಿ ಸ್ವತಂತ್ರ ಪತ್ರಿಕೋದ್ಯಮವು ಮುಖ್ಯ ಗುರಿಯಾಗಿದೆ; ಆ ಸಂಸ್ಥೆಗಳು ನಮ್ಮ ಊಹೆಗಿಂತಲೂ ದುರ್ಬಲವಾಗಿವೆ, ಅಳ್ಳೆದೆಯಿಂದ ಕೂಡಿವೆ.
ಕಳವಳ ಹುಟ್ಟಿಸುವ ವಿಚಾರವೆಂದರೆ, ಜನರಿಗೆ ಸತ್ಯ ಮತ್ತು ಮಿಥ್ಯೆಗಳ ನಡುವಿನ ವ್ಯತ್ಯಾಸ ಗುರ್ತಿಸುವ ಆಸಕ್ತಿಯಾಗಲಿ, ಸಾಮರ್ಥ್ಯವಾಗಲಿ ಇಲ್ಲದ ಕಾಲಮಾನದಲ್ಲಿ ನಾವು ಬದುಕುತ್ತಿದ್ದೇವೆ. ಯಾವ ನೀತಿಗಳು ಉತ್ತಮ ಎನ್ನುವುದರ ಬಗ್ಗೆ ಭಿನ್ನ ಅಭಿಪ್ರಾಯಗಳಿರುವುದು ಸ್ವಾಭಾವಿಕವೂ, ಪ್ರಜಾಪ್ರಭುತ್ವದಲ್ಲಿ ನಿರೀಕ್ಷಿತವೂ ಆಗಿದೆ. ಸತ್ಯವನ್ನು ಹೇಗೆ ಕಂಡುಕೊಳ್ಳಬೇಕು ಎನ್ನುವುದರ ಬಗ್ಗೆಯೇ ಇಂದು ನಮ್ಮಲ್ಲಿ ಸಹಮತ ಇಲ್ಲ. ಚಾರಿತ್ರಿಕವಾಗಿ ಯಾವ ಅಂಶಗಳ ಆಧಾರದಲ್ಲಿ ವಾಸ್ತವಾಂಶಗಳನ್ನು ನಿರ್ಧರಿಸಲಾಗುತ್ತಿತ್ತೋ– ಶಿಕ್ಷಣ, ಪರಿಣತಿ, ಅನುಭವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪುರಾವೆ– ಅವುಗಳನ್ನು ಅಪ್ರಸ್ತುತಗೊಳಿಸಲಾಗಿದೆ, ಕೈಬಿಡಲಾಗಿದೆ ಮತ್ತು ನಿರಾಕರಿಸಲಾಗಿದೆ.
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದರೆ, ಸ್ವತಂತ್ರ ಪತ್ರಿಕೋದ್ಯಮ ಅದಕ್ಕೆ ಹೊರತಲ್ಲ. ಪ್ರಜಾ
ಪ್ರಭುತ್ವ ಇಲ್ಲದೇ ಸ್ವತಂತ್ರ ಪತ್ರಿಕೋದ್ಯಮ ಉಳಿಯಲು ಸಾಧ್ಯವಿಲ್ಲ. ಸ್ವತಂತ್ರ ಪತ್ರಿಕೋದ್ಯಮವಿಲ್ಲದೇ ಪ್ರಜಾಪ್ರಭುತ್ವವೂ ಉಳಿಯಲಾರದು.
ನಿರಂಕುಶಾಧಿಕಾರ ಬಯಸುವವರ ಆದ್ಯತೆಗಳಲ್ಲಿ ಪ್ರಮುಖವಾದದ್ದು, ರಾಜಕೀಯ ನಾಯಕರು ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಬೆಳಕು ಚೆಲ್ಲುವ ಮತ್ತು ಅವರನ್ನು ಹೊಣೆಗಾರರನ್ನಾಗಿ ಮಾಡುವ ಮಾಧ್ಯಮಗಳನ್ನು ಬಗ್ಗುಬಡಿಯುವುದು. ಅವರು ಮುಕ್ತ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಪ್ರಯತ್ನಿಸುತ್ತಾರೆ: ಸಂಗೀತಗಾರರು, ಬರಹಗಾರರು, ಕಲಾವಿದರು, ನಾಟಕಕಾರರು, ಚಿತ್ರಕಥೆಗಾರರು ತಾವು ಬಯಸಿದಂತೆ ಅಭಿವ್ಯಕ್ತಿಸುವ ಹಕ್ಕು. ಸಾರ್ವಜನಿಕರು ತಾವು ಬಯಸಿದ್ದನ್ನು ಕೇಳುವ, ನೋಡುವ ಮತ್ತು ಓದುವ ಹಕ್ಕು. ವ್ಯಾಪಾರಿ ಸಂಸ್ಥೆಗಳ ಕಾರ್ಯನಿರ್ವಾಹಕರು, ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕೀಯ ನಾಯಕರು ತಾವು ನಂಬುವ ನೀತಿಗಳನ್ನು ಪ್ರತಿಪಾದಿಸುವ ಹಕ್ಕು. ಕಣ್ಗಾವಲು ಮತ್ತು ಪ್ರತೀಕಾರದ ಭಯವಿಲ್ಲದೆ ಕುಟುಂಬ, ಸ್ನೇಹಿತರು, ನೆರೆಹೊರೆಯವರು ಮತ್ತು ಸಹೋದ್ಯೋಗಿಗಳೊಂದಿಗೆ ಮುಕ್ತವಾಗಿ ಮಾತನಾಡುವ ನಮ್ಮೆಲ್ಲರ ಹಕ್ಕು.
ಪತ್ರಿಕೋದ್ಯಮವು ರಕ್ಷಿಸಲು ಯತ್ನಿಸುತ್ತಿರುವ ಹಕ್ಕುಗಳು, ಹೆಚ್ಚಿನ ಜನರು ತಮಗಾಗಿ ಬಯಸುವ ಹಕ್ಕುಗಳೇ ಆಗಿವೆ. ಅವುಗಳೆಂದರೆ, ಸತ್ಯಾಂಶಗಳನ್ನು ತನಿಖೆ ಮಾಡುವ ಸ್ವಾತಂತ್ರ್ಯ, ತಿಳಿದದ್ದನ್ನು ಹಂಚಿಕೊಳ್ಳುವ ಮತ್ತು ತಾವು ನಂಬಿದ್ದನ್ನು ಸಂವಹನ ಮಾಡುವ ಸ್ವಾತಂತ್ರ್ಯ.
ನಿರಂಕುಶಾಧಿಕಾರಿಗಳ ನಿಜವಾದ ಗುರಿ ಸತ್ಯವೇ ಆಗಿದೆ. ಎಲ್ಲ ರೀತಿಯ ಸತ್ಯ ಪ್ರತಿಪಾದಕರನ್ನು– ಅವರು ನ್ಯಾಯಾಧೀಶರು, ವಿದ್ವಾಂಸರು, ವಿಜ್ಞಾನಿಗಳು, ಸಂಖ್ಯಾಶಾಸ್ತ್ರಜ್ಞರು ಅಥವಾ ಪತ್ರಕರ್ತರಾಗಿರಲಿ– ಅಂತ್ಯಗೊಳಿಸುವ ಗುರಿಯನ್ನು ಅವರು ಹೊಂದಿರುತ್ತಾರೆ. ಸರ್ವಾಧಿಕಾರದ ಕಡೆಗೆ ವಾಲುತ್ತಿರುವ ರಾಷ್ಟ್ರಗಳಲ್ಲಿ, ರಾಷ್ಟ್ರದ ಮುಖ್ಯಸ್ಥರು ಸತ್ಯದ ಏಕೈಕ ವಾರಸುದಾರರಾಗಿರುತ್ತಾರೆ. ಅವರು ತಮ್ಮ ಸುಳ್ಳುಗಳನ್ನು ಮುಂದುವರಿಸಲು ದತ್ತಾಂಶವನ್ನು ಅಳಿಸುತ್ತಾರೆ, ತಿರುಚುತ್ತಾರೆ ಮತ್ತು ನಿಗ್ರಹಿಸುತ್ತಾರೆ.
ಈಗ ಅಮೆರಿಕದಲ್ಲಿ ನಡೆಯುತ್ತಿರುವುದು ಇದೇ. ಸರ್ಕಾರವು ತನ್ನ ಕಟ್ಟುಕಥೆಗಳು ಪ್ರಶ್ನಾತೀತವಾಗಿ ಪುನರಾವರ್ತನೆಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದು, ಸತ್ಯಗಳು ದಾಳಿಗೊಳಗಾಗಿವೆ. ಸಾಂವಿಧಾನಿಕ ರಕ್ಷಣೆಯ ಮುಸುಕಿನಲ್ಲಿ ದಶಕಗಳಿಂದ ಅಮೆರಿಕ ಎಲ್ಲ ರೀತಿಯ ಮುಕ್ತ ಅಭಿವ್ಯಕ್ತಿಯ ಭದ್ರಕೋಟೆಯಾಗಿತ್ತು.
ಇದೇ ರೀತಿಯ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದ ಇತರ ರಾಷ್ಟ್ರಗಳ ನಾಗರಿಕರಿಗೆ ನಾವು ಮಾದರಿ
ಆಗಿದ್ದೆವು. ಅದು ಈಗ ಮುಗಿದ ಕಥೆ.
ಅಮೆರಿಕದ ಅಧ್ಯಕ್ಷರಾಗಿದ್ದ ಫ್ರಾಂಕ್ಲಿನ್ ಡಿ. ರೂಸ್‌ವೆಲ್ಟ್ ಅವರು, 1941ರಲ್ಲಿ ಮನುಷ್ಯನಿಗೆ ಅಗತ್ಯ
ವಾದ ನಾಲ್ಕು ಸ್ವಾತಂತ್ರ್ಯಗಳ ಬಗ್ಗೆ ಮಾತನಾಡಿದ್ದರು. ಅವುಗಳಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ
ಪ್ರಥಮ ಸ್ಥಾನ ನೀಡಿದ್ದ ಅವರು, ‘ಜಗತ್ತಿನ ಎಲ್ಲೆಡೆಯೂ’ ಎನ್ನುವ ಪದ ಸೇರಿಸಿದ್ದರು. ಇಂದು,
ನಿರಂಕುಶಾಧಿಕಾರದ ಬಯಕೆ ಇರುವ ವ್ಯಕ್ತಿ ಅಧ್ಯಕ್ಷರಾಗುವುದರೊಂದಿಗೆ ಅಮೆರಿಕವು ರೂಸ್‌ವೆಲ್ಟ್ ಉತ್ತಮ ಜಗತ್ತಿಗೆ ಅನಿವಾರ್ಯವೆಂದು ಪ್ರತಿಪಾದಿಸಿದ್ದ ಸ್ವಾತಂತ್ರ್ಯಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಪ್ರಜಾಪ್ರಭುತ್ವದ ಬಗ್ಗೆ ಕುಂದಿದ ವಿಶ್ವಾಸ ಮತ್ತು ಹೊಸ ಪೀಳಿಗೆಯ ಸರ್ವಾಧಿಕಾರಿಗಳ ಉದಯದಿಂದ ಸ್ವತಂತ್ರ ಮಾಧ್ಯಮವು ಈಗಾಗಲೇ ಜಾಗತಿಕವಾಗಿ ಅಪಾಯದಲ್ಲಿದೆ. ನಮ್ಮ ಅಧ್ಯಕ್ಷರು ವಿಶ್ವದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು- ಜತೆಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು– ಇನ್ನೂ ಹೆಚ್ಚಿನ ಗಂಡಾಂತರಕ್ಕೆ ಸಿಲುಕಿಸಿದ್ದಾರೆ.
ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯ ಬಗ್ಗೆ ಅಮೆರಿಕದ ಅಧ್ಯಕ್ಷರು ಮತ್ತು ಅವರ ಮಿತ್ರರು ತಿರಸ್ಕಾರಯುಕ್ತ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆ ತಿದ್ದುಪಡಿಯಲ್ಲಿ ಮುಕ್ತ ಮಾಧ್ಯಮ ಮತ್ತು ಮುಕ್ತ ಅಭಿವ್ಯಕ್ತಿ ಬಗ್ಗೆ ವಿವರಿಸಲಾಗಿದೆ. ‘ಸಾರ್ವಜನಿಕ ವ್ಯಕ್ತಿ ಮತ್ತು ಕ್ರಿಯೆಗಳನ್ನು ಮುಕ್ತವಾಗಿ ಪರಿಶೀಲಿಸುವ ಹಕ್ಕು’ ಅದರಲ್ಲಿ ಉಲ್ಲೇಖಗೊಂಡಿದೆ. ಪತ್ರಕರ್ತರಿಗೂ ಇದು ಅನ್ವಯವಾಗುತ್ತದೆ. ನಾವು ಸ್ಟೆನೋಗ್ರಾಫರ್‌ಗಳಲ್ಲ;
ಹಾಗೆ ಇರಲೂ ಬಾರದು. ನೇಪಥ್ಯದಲ್ಲಿ ಏನು ನಡೆಯುತ್ತಿದೆ, ಕಣ್ಣಿಗೆ ಕಾಣುವುದರ ಆಳದಲ್ಲಿ ಏನು ಅಡಗಿದೆ ಎನ್ನುವುದನ್ನು ಪತ್ತೆ ಹಚ್ಚುವ ಮೂಲಕ ಯಾರು ಏನು ಮಾಡಿದರು, ಏಕೆ ಮಾಡಿದರು; ಅದರಿಂದ ಯಾರ ಮೇಲೆ, ಯಾವ ರೀತಿಯ ಪರಿಣಾಮ ಉಂಟಾಗುತ್ತದೆ; ಯಾರು, ಯಾವ ಉದ್ದೇಶದಿಂದ ಈ ನಿರ್ಧಾರಗಳನ್ನು ಕೈಗೊಂಡರು ಎನ್ನುವುದನ್ನು ತಿಳಿಯಬೇಕಾಗುತ್ತದೆ.
ಪತ್ರಿಕೋದ್ಯಮದ ಉದ್ದೇಶ, ಸಾರ್ವಜನಿಕರಿಗೆ ಅಗತ್ಯವಿರುವ ಮತ್ತು ತಿಳಿಯಲು ಅರ್ಹವಾದ ಮಾಹಿತಿಯನ್ನು ಒದಗಿಸುವುದು. ಇದರಿಂದ ಜನರು ತಮ್ಮನ್ನು ತಾವು ರೂಪಿಸಿಕೊಳ್ಳಬಹುದು. ಆ ಧ್ಯೇಯದೊಳಗೆ ಒಂದು ನಿರ್ದಿಷ್ಟವಾದ, ಉನ್ನತ ಉದ್ದೇಶವೂ ಅಡಗಿದೆ: ಪ್ರಬಲ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡುವುದು.
ಅಧಿಕಾರಸ್ಥರು ಅಗಾಧ ಪ್ರಮಾಣದಲ್ಲಿ ಒಳಿತು ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರು ಒಳಿತು ಮಾಡಿದರೆ, ಸಾಮಾನ್ಯ ಜನ ಒಳಿತು ಮಾಡಿದರೆ, ಪತ್ರಕರ್ತರು ಅದನ್ನು ಪ್ರಚಾರ ಮಾಡ
ಬೇಕು. ಸಮಾಜವನ್ನು ಸುಧಾರಿಸುವ ಶ್ಲಾಘನೀಯ ಪ್ರಯತ್ನಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.
ಅದೇ ಸಮಯದಲ್ಲಿ, ಅಧಿಕಾರಸ್ಥರು ತಪ್ಪುಗಳನ್ನೂ ಅಸಾಧಾರಣ ಪ್ರಮಾಣದಲ್ಲಿ ಮಾಡಬಹುದು. ತಮ್ಮ ದುಷ್ಕೃತ್ಯಗಳನ್ನು ಮುಚ್ಚಿಕೊಳ್ಳುವಷ್ಟು, ಯಥೋಚಿತವಲ್ಲದ ಅಧಿಕಾರವನ್ನು ಅವರು ಹೊಂದಿರುವುದೇ ತಪ್ಪಾಗುತ್ತದೆ. ಅನೈತಿಕ ಅಥವಾ ಕಾನೂನುಬಾಹಿರ ನಡತೆಯು ವರ್ಷ ಅಥವಾ ದಶಕಗಳವರೆಗೆ ಪತ್ತೆಯಾಗದಿರಬಹುದು. ಅದರಿಂದ ಸಾಮಾನ್ಯ ಜನರಿಗೆ ತೀವ್ರ ಹಾನಿ ಉಂಟಾಗಬಹುದು.
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವತಂತ್ರ ಪತ್ರಿಕೋದ್ಯಮಕ್ಕಾಗಿ ಜನರು ಜಿದ್ದಾಜಿದ್ದಿನಿಂದ ಹೋರಾಡಬೇಕಿದೆ. ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸುವ ಹಕ್ಕನ್ನು ಹೊಂದಿರಬೇಕು. ಮಾಧ್ಯಮಗಳು ಅವುಗ
ಳನ್ನು ಕೇಳಲು, ತನಿಖೆ ಮಾಡಲು ಸಿದ್ಧವಾಗಿರಬೇಕು.
ಭ್ರಷ್ಟಾಚಾರದ ಬಗ್ಗೆ ವರದಿ ಮಾಡಲು ಪತ್ರಕರ್ತರು ಇಲ್ಲದಿದ್ದಾಗ, ಅದು ಮತ್ತಷ್ಟು ಹೆಚ್ಚಾಗಿ, ಸಾಮಾನ್ಯ ಜನ ಅದಕ್ಕೆ ಬೆಲೆ ತೆರುತ್ತಾರೆ. ಸ್ವತಂತ್ರ ಮಾಧ್ಯಮಗಳು ಅಸ್ತಿತ್ವದಲ್ಲಿ ಇಲ್ಲದಿದ್ದಾಗ ಅಪಾರ ಶಕ್ತಿಯನ್ನು ಹೊಂದಿರುವವರು ಇನ್ನೂ ಹೆಚ್ಚು ಅಧಿಕಾರ ದಕ್ಕಿಸಿಕೊಳ್ಳಲು ಆ ಅವಕಾಶ ಬಳಸಿಕೊಳ್ಳುತ್ತಾರೆ.
ತಮ್ಮ ಸ್ವಾತಂತ್ರ್ಯದ ಬಗ್ಗೆಯೂ ಕಾಳಜಿ ತೋರದ ಅಮೆರಿಕದ ಜನರಿಗೆ ಈಗ ಇತರೆ ದೇಶಗಳ ಜನರು ಮಾದರಿಯಾಗುತ್ತಾರೆ ಎಂಬುದು ನನ್ನ ಭರವಸೆಯಾಗಿದೆ. ದಮನಕಾರಿ ಸರ್ಕಾರದ ವಿರುದ್ಧ ಹೇಗೆ ಉತ್ತಮ ಹೋರಾಟ ರೂಪಿಸಬೇಕು ಎನ್ನುವುದನ್ನು ಅವರು ನಮಗೆ ತೋರಿಸಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವತಂತ್ರ ಪತ್ರಿಕೋದ್ಯಮದ ಪ್ರಜಾತಾಂತ್ರಿಕ ತತ್ವಗಳನ್ನು ಎತ್ತಿಹಿಡಿಯುವ ಕಠಿಣ ಹೋರಾಟಕ್ಕೆ ಅವರು ಸ್ಫೂರ್ತಿಯಾಗಬಹುದು.
(ಲೇಖಕ: ‘ದಿ ವಾಷಿಂಗ್ಟನ್ ಪೋಸ್ಟ್’ನ ಕಾರ್ಯನಿರ್ವಾಹಕ ಸಂಪಾದಕರಾಗಿದ್ದರು. ‘ಬೋಸ್ಟನ್ ಗ್ಲೋಬ್’ ಮತ್ತು ‘ಮಿಯಾಮಿ ಹೆರಾಲ್ಡ್’ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.