
ಭಾರತದ ನೆರೆ ರಾಷ್ಟ್ರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ, ದಂಗೆ, ಕ್ಷಿಪ್ರಕ್ರಾಂತಿಯಂತಹ ವಿಪ್ಲವಗಳು ನಡೆದಿವೆ, ನಡೆಯುತ್ತಿವೆ. ಅಮೆರಿಕದಲ್ಲಿ ಟ್ರಂಪ್ ಅವರು ಮತ್ತೆ ಅಧ್ಯಕ್ಷರಾಗಿ ದೇಶೀಯ ಮತ್ತು ವಿದೇಶಿ ನೀತಿಯಲ್ಲಿ ಕ್ಷಿಪ್ರ ಪಲ್ಲಟಗಳನ್ನು ತಂದು ಪರಿವರ್ತನೆಗೆ ಕಾರಣರಾಗುತ್ತಿದ್ದಾರೆ. ಇಡೀ ಜಗತ್ತಿನಲ್ಲಿ ತೀವ್ರವಾದಿ ಬದಲಾವಣೆಗಳು ನಡೆಯುತ್ತಿವೆ. ಹೀಗಿದ್ದರೂ ಭಾರತದಲ್ಲಿ ಸಾಂವಿಧಾನಿಕ ಪ್ರಜಾಪ್ರಭುತ್ವ ಸ್ಥಿರವಾಗಿ ಮುಂದುವರಿದಿದೆ. ಈ ಕುರಿತು ಒಂದು ವಿಶ್ಲೇಷಣೆ.
ನೇಪಾಳದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಜೆನ್ ಝೀ (1997ರಿಂದ 2012ರ ನಡುವೆ ಜನಿಸಿದ ತಲೆಮಾರು) ನಡೆಸಿದ ಪ್ರತಿಭಟನೆಗಳು ದಿಢೀರ್ ಮತ್ತು ತ್ವರಿತವಾಗಿ ತೀವ್ರ ಹಿಂಸೆ, ವಿನಾಶಕ್ಕೆ ತಿರುಗಿ ಆಡಳಿತವನ್ನು ಬುಡಮೇಲುಗೊಳಿಸಿದ್ದು ಪ್ರತಿಯೊಬ್ಬರನ್ನೂ ಅಚ್ಚರಿಗೆ ತಳ್ಳಿದೆ. ಇತ್ತೀಚೆಗೆ ಇಂತಹುದೇ ವಿಪ್ಲವಗಳು ನಮ್ಮ ನೆರೆಯಲ್ಲಿ ನಡೆದಿವೆ. ಅವುಗಳೆಂದರೆ, 2024ರಲ್ಲಿ ಬಾಂಗ್ಲಾದೇಶದ ಶೇಖ್ ಹಸೀನಾ ಸರ್ಕಾರದ ಪದಚ್ಯುತಿ ಮತ್ತು 2022ರಲ್ಲಿ ಶ್ರೀಲಂಕಾ ಸರ್ಕಾರದ ಕುಸಿತ. ಮ್ಯಾನ್ಮಾರ್‌ನಲ್ಲಿ 2021ರಲ್ಲಿ ನಡೆದ ಕ್ಷಿಪ್ರಕ್ರಾಂತಿಯು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಉರುಳಿಸಿ ಸೇನಾ ಸರ್ಕಾರವನ್ನು ಸ್ಥಾಪಿಸಿತು. ಬಳಿಕ, ದಂಗೆ ಮತ್ತು ಆಂತರಿಕ ಯುದ್ಧ ನಡೆದವು. ಎರಡು ದಶಕಗಳ ಹಿಂದೆ ನೇಪಾಳದಲ್ಲಿ ಮಾವೋವಾದಿ ನಾಯಕತ್ವದಲ್ಲಿ ನಡೆದ ದಂಗೆ ಮತ್ತು ಅಂತರ್ಯುದ್ಧವು ರಾಜಪ್ರಭುತ್ವವನ್ನು ಕಿತ್ತೆಸೆದು ಸಾಂವಿಧಾನಿಕ ಪ್ರಜಾಪ್ರಭುತ್ವ ಗಣರಾಜ್ಯ ವ್ಯವಸ್ಥೆಯನ್ನು ಸ್ಥಾಪಿಸಿತ್ತು. 1971ರಲ್ಲಿ ನಡೆದ ಅಂತರ್ಯುದ್ಧವು ಪಾಕಿಸ್ತಾನದಿಂದ ಬಾಂಗ್ಲಾದೇಶವನ್ನು ಪ್ರತ್ಯೇಕಿಸಿತ್ತು.
ಭೂಮಂಡಲದ ಇನ್ನೊಂದೆಡೆ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ತಮ್ಮ ಅಧ್ಯಕ್ಷತೆಯ ಎರಡನೇ ಅವಧಿಯ ಮೊದಲ ದಿನದಿಂದಲೇ ದೇಶೀಯ ಮತ್ತು ವಿದೇಶ ನೀತಿ ಕ್ಷೇತ್ರಗಳ ವಿವಿಧ ವಿಚಾರಗಳಲ್ಲಿ ತೀವ್ರಗಾಮಿ ಎಂದೇ ಹೇಳಬಹುದಾದ ಕ್ಷಿಪ್ರ ಪಲ್ಲಟಗಳ ಮೂಲಕ ಹಲವು ಬದಲಾವಣೆಗಳನ್ನು ಜಾರಿಗೆ ತಂದರು.
2020ರ ಜನವರಿಯಲ್ಲಿ ತಾವು ಸೋತ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬುಡಮೇಲುಗೊಳಿಸಲು ಯತ್ನಿಸಿದ ದೋಷಾರೋಪದ ನಂತರ ಟ್ರಂಪ್ ಅವರು ಅಧಿಕಾರಕ್ಕೆ ಬಂದಿದ್ದಾರೆ ಎಂಬುದು ಗಮನಾರ್ಹ. ಶತಮಾನಗಳಷ್ಟು ಹಳೆಯದಾದ ಸ್ಥಿರ ಪ್ರಜಾಪ್ರಭುತ್ವದಲ್ಲಿ ಇಂತಹುದೊಂದು ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿ 150ಕ್ಕೂ ಹೆಚ್ಚು ವರ್ಷಗಳಾಗಿದ್ದವು; ಆದರೆ ಅಚ್ಚರಿಗೆ ಕಾರಣವಾದ ಅಂಶ ಅದೊಂದೇ ಅಲ್ಲ. ಎರಡನೇ ಮಹಾಯುದ್ಧೋತ್ತರ ಕಾಲದಲ್ಲಿ, ದಕ್ಷಿಣ ಜಗತ್ತು ಮತ್ತು ಹೆಚ್ಚು ಅಭಿವೃದ್ಧಿ ಹೊಂದಿಲ್ಲದ ಪೂರ್ವ ಯುರೋಪ್‌ನ ಲಕ್ಷಣಗಳಾದ ಅಸ್ಥಿರತೆ ಮತ್ತು ತೀವ್ರವಾದಿ ಪಲ್ಲಟಗಳಿಂದ ಹೆಚ್ಚು ಆಧುನಿಕವಾದ ಪಶ್ಚಿಮದ ದೇಶಗಳು ಅತೀತ ಎಂಬ ಭಾವನೆ ಸಾಮಾನ್ಯವಾಗಿ ಇದ್ದುದು ಕೂಡ ಈ ಅಚ್ಚರಿಗೆ ಕಾರಣ.
ಒಳ್ಳೆಯದು ಮತ್ತು ಕೆಟ್ಟದ್ದಕ್ಕಾಗಿ ಇತ್ತೀಚಿನ ದಶಕಗಳಲ್ಲಿ ಇತರ ದೇಶಗಳಲ್ಲಿ ನಡೆದಿರುವ ತೀವ್ರವಾದಿ ಬದಲಾವಣೆಗಳಲ್ಲಿ ಇವುಗಳು ಒಳಗೊಂಡಿವೆ: 2010ರ ಆರಂಭಿಕ ದಿನಗಳಲ್ಲಿ ‘ಅರಬ್ ವಸಂತ’ದ ಭಾಗವಾಗಿ ನಡೆದ ಬಂಡಾಯಗಳು ಕೆಲವು ನಿರಂಕುಶ ಆಡಳಿತಗಳನ್ನು ಉರುಳಿಸಿದವು; ನಂತರದಲ್ಲಿ ಸ್ಥಿರವಾದ ಪ್ರಜಾಸತ್ತಾತ್ಮಕ ಸರ್ಕಾರ ರಚನೆಯ ಪ್ರಯತ್ನಗಳಲ್ಲಿ ಹೆಚ್ಚಿನವು ನಿಷ್ಫಲ ಎನಿಸಿಕೊಂಡರೂ ನಡೆದವು. ಅಟಾಟರ್ಕ್‌ನ ಜಾತ್ಯತೀತ, ಆಧುನಿಕವಾದಿ ಟರ್ಕಿಯನ್ನು ನಿರಂಕುಶ ಇಸ್ಲಾಂವಾದಿ ದೇಶವಾಗಿ ಪರಿವರ್ತಿಸುವ ಕೆಲಸ ನಿಧಾನವಾಗಿ ನಡೆದಿದೆ ಮತ್ತು ಜಾತ್ಯತೀತ ಟರ್ಕಿಯ ಸಂರಕ್ಷಕರ ಬೆನ್ನು ಮುರಿಯುವ ಕೆಲಸವನ್ನು ಅಧ್ಯಕ್ಷ ಎರ್ಡೋಗನ್ ಅವರ ಸೇನೆಯು ಮಾಡಿದೆ. ಇನ್ನೂ ಕೆಲವು ದಶಕ ಹಿಂದಕ್ಕೆ ಹೋದರೆ, ಪೂರ್ವ ಯುರೋಪ್‌ನ ಕಮ್ಯುನಿಸ್ಟ್ ಸರ್ಕಾರಗಳು ಮತ್ತು ಹಿಂದೆ ಇದ್ದ ಸೋವಿಯತ್ ಒಕ್ಕೂಟ ಪತನಗೊಂಡವು. ಇರಾನ್‌ನಲ್ಲಿ ಅಯಾತುಲ್ಲಾ ಖೊಮೇನಿ ನೇತೃತ್ವದಲ್ಲಿ ನಡೆದ ಸಾಮೂಹಿಕ ಹಿಂಸಾತ್ಮಕ ಬಂಡಾಯವು ಶಾ ನೇತೃತ್ವದ ಜಾತ್ಯತೀತ ನಿರಂಕುಶಾಧಿಪತ್ಯವನ್ನು ಕಿತ್ತೆಸೆದು ದೇವಪ್ರಭುತ್ವವನ್ನು ಸ್ಥಾಪಿಸಿತು. ಇದಲ್ಲದೆ, ಎರಡನೇ ಜಾಗತಿಕ ಮಹಾಯುದ್ಧದ ಬಳಿಕ, ಪಶ್ಚಿಮದ ಸಾಮ್ರಾಜ್ಯಶಾಹಿ ಪ್ರಾಬಲ್ಯದ ಪತನದ ನಂತರದಲ್ಲಿ ಲ್ಯಾಟಿನ್ ಅಮೆರಿಕದ ದೇಶಗಳು ಮತ್ತು ಆಫ್ರಿಕಾ ಹಾಗೂ ಏಷ್ಯಾದ ಹೊಸದಾಗಿ ಸ್ವಾತಂತ್ರ್ಯ ಪಡೆದುಕೊಂಡ ದೇಶಗಳು ಸ್ವತಂತ್ರ ರಾಷ್ಟ್ರೀಯವಾದಿ ಸರ್ಕಾರ ರಚಿಸಿಕೊಂಡವು; ನಂತರ ಅಲ್ಲಿ ಹಲವು ರಾಜಕೀಯ ಅಸ್ಥಿರತೆಗಳು ಮತ್ತು ಸೇನಾ ನಿರುಂಕುಶಾಧಿಪತ್ಯಗಳು ಉಂಟಾದವು.
ಇತ್ತೀಚೆಗೆ ನಮ್ಮ ನೆರೆಯಲ್ಲಿ ನಡೆದ ಬೆಳವಣಿಗೆಗಳ ಸಂದರ್ಭದಲ್ಲಿ, ಭಾರತದಲ್ಲಿ ಸಾಂವಿಧಾನಿಕ ಪ್ರಜಾಪ್ರಭುತ್ವದ ಮುಂದುವರಿಕೆ ಮತ್ತು ಅದರ ಅಸಾಧಾರಣ ಸ್ಥಿರತೆಯು ವಿಶ್ಲೇಷಕರ ಗಮನವನ್ನು ಮತ್ತೊಮ್ಮೆ ಸೆಳೆದಿವೆ. ಸ್ವಾತಂತ್ರ್ಯಾನಂತರದಲ್ಲಿ ಭಾರತದ ರಾಜಕಾರಣ ಮತ್ತು ಸಾರ್ವಜನಿಕ ಜೀವನವು ತೀವ್ರವಾಗಿ ವಿವಾದಾತ್ಮಕ, ಹತೋಟಿಗೆ ಬಾರದ ಮತ್ತು ಕೆಲವೊಮ್ಮೆ ಹಿಂಸಾತ್ಮಕ ಎನಿಸಿದರೂ 21 ತಿಂಗಳ ತುರ್ತುಪರಿಸ್ಥಿತಿ ಹೊರತುಪಡಿಸಿದರೆ ಪ್ರಜಾಸತ್ತಾತ್ಮಕ ಸಾಂವಿಧಾನಿಕ ಚೌಕಟ್ಟಿನ ವ್ಯಾಪ್ತಿಯೊಳಗೇ ಇತ್ತು. ಟ್ರಂಪ್ ನಡೆಸಿದ ಪ್ರಯತ್ನಕ್ಕೆ ವ್ಯತಿರಿಕ್ತ ಎಂಬಂತೆ ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಸೋತವರು ಸೋಲನ್ನು ಸ್ವೀಕರಿಸಿದ್ದಾರೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಸೋತ ಶ್ರೀಮತಿ ಇಂದಿರಾ ಗಾಂಧಿ ಅವರೂ ಅಧಿಕಾರದಿಂದ ಕೆಳಕ್ಕೆ ಇಳಿದರು. ಈ ವಿದ್ಯಮಾನವನ್ನು ಹೇಗೆ ವಿವರಿಸಬಹುದು ಮತ್ತು ಅದಕ್ಕೆ ಪೂರಕವಾಗಿ ಕಾರ್ಯಾಚರಿಸುವ ಅಂಶಗಳು ಯಾವುವು ಎಂಬುದನ್ನು ಶೋಧಿಸುವ ಗುರಿಯನ್ನು ಈ ಲೇಖನದಲ್ಲಿ ನಾನು ಹೊಂದಿದ್ದೇನೆ.
ನಾನು ಕಟ್ಟಿಕೊಟ್ಟ ಚಿತ್ರಣ, ಅದರಲ್ಲೂ ವಿಶೇಷವಾಗಿ ಭಾರತದ ರಾಜಕಾರಣ ಮತ್ತು ಸಮಾಜದ ಮೇಲೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಪ್ರಾಬಲ್ಯ ಏರಿಕೆಯ ವಿಚಾರವನ್ನು ಕೆಲವು ವಿಶ್ಲೇಷಕರು ಪ್ರಶ್ನಿಸುತ್ತಾರೆ ಎಂಬುದರಲ್ಲಿ ಸಂದೇಹವೇನೂ ಇಲ್ಲ. ಅವರು ಹಲವು ಬೆಳವಣಿಗೆಗಳು ಮತ್ತು ಲಕ್ಷಣಗಳನ್ನು ಉಲ್ಲೇಖಿಸಬಹುದು; ಮೋದಿ ನೇತೃತ್ವದ ಸರ್ಕಾರವು ಭಾರತವನ್ನು ಬಹುಸಂಖ್ಯಾತವಾದಿಯಾಗಿಸಿದೆ ಅಥವಾ ಸಂಕುಚಿತ ಪ್ರಜಾಪ್ರಭುತ್ವ ಅಥವಾ ಚುನಾಯಿತ ನಿರಂಕುಶಾಧಿಪತ್ಯವಾಗಿ ಪರಿವರ್ತಿಸಿದೆ; ಬಿಜೆಪಿ–ಆರ್‌ಎಸ್‌ಎಸ್ ಭಾರತದ ಪ್ರಭುತ್ವವನ್ನು ವಶಕ್ಕೆ ಪಡೆದಿದೆ, ಪ್ರಜಾಪ್ರಭುತ್ವ ಹಿಂದಕ್ಕೆ ಸರಿಯುತ್ತಿದೆ ಅಥವಾ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ಅವರು ಹೇಳಬಹುದು. ಅಯೋಧ್ಯೆಯಲ್ಲಿ ಒಂದು ಕಾಲದಲ್ಲಿ ಬಾಬರಿ ಮಸೀದಿ ಇದ್ದು ನಂತರ ಧ್ವಂಸ ಮಾಡಲಾದ ಸ್ಥಳದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಪಡೆದುಕೊಂಡು ರಾಮ ಮಂದಿರ ಕಟ್ಟಲಾಗಿದೆ. ಮುಸ್ಲಿಮರ ಮೇಲೆ ಗೋಹತ್ಯೆಯ ಸಂದೇಹದಲ್ಲಿ ಸಂಘ ಪರಿವಾರ ಮತ್ತು ಅದರ ಪೋಷಣೆಯಲ್ಲಿರುವ ಸಂಘಟನೆಗಳಿಂದ ಗುಂಪು ಹಲ್ಲೆಗಳಾಗುತ್ತಿವೆ. ಮುಸ್ಲಿಮರಿಗೆ ಸೇರಿದ ಕಟ್ಟಡಗಳನ್ನು ಕೆಡವಲಾಗುತ್ತಿದೆ, ಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಮತ್ತು ಗಡಿಪಾರು ಮಾಡಲಾಗುತ್ತಿದೆ. ಮುಸ್ಲಿಮರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಮತ್ತು ಕ್ರೈಸ್ತರು ಕೂಡ ಸ್ವಲ್ಪ ಪ್ರಮಾಣದ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ವಾದಿಸಬಹುದು.
ಮುಸ್ಲಿಮರು ಮತ್ತು ಇತರ ಕೆಲವು ಅಲ್ಪಸಂಖ್ಯಾತರನ್ನು ತಾರತಮ್ಯದಿಂದ ಕಾಣುವ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕರಿಸಲಾಗಿದೆ. ಆರೋಪಿತ ಧಾರ್ಮಿಕ ಮತಾಂತರದ ವಿರುದ್ಧ ‘ಲವ್ ಜಿಹಾದ್’, ‘ರೈಸ್ ಬ್ಯಾಗ್’ ಇತ್ಯಾದಿ ಹೆಸರಲ್ಲಿ ಮತ್ತು ಮುಸ್ಲಿಮರು, ಕ್ರೈಸ್ತರು ಮತ್ತು ಎಡಪಂಥೀಯ ಚಿಂತಕರು, ಹೋರಾಟಗಾರರು ಹಾಗೂ ಪ್ರತಿಭಟನಕಾರರ ವಿರುದ್ಧ ಅಭಿಯಾನ ಮತ್ತು ಕಾನೂನು ಮಾಡಲಾಗಿದೆ. ಮುಸ್ಲಿಂ ಮತ್ತು ಎಡಪಂಥೀಯ ಹೋರಾಟಗಾರರು ಹಾಗೂ ಪ್ರತಿಭಟನಕಾರರನ್ನು ಬಂಧಿಸಿ ಸುದೀರ್ಘ ಕಾಲ ಸೆರೆಮನೆಯಲ್ಲಿ ಇರಿಸಲಾಗಿದೆ ಮತ್ತು ಗಣನೀಯ ವಿಳಂಬದ ನಂತರ ಅವರಿಗೆ ಜಾಮೀನು ನೀಡಲಾಗಿದೆ. ಭಯೋತ್ಪಾದನೆಯ ಆರೋಪ ಹೊತ್ತಿದ್ದ ಹಿಂದುತ್ವವಾದಿ ಕಾರ್ಯಕರ್ತರನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿವೆ. ಸಾಮಾಜಿಕ ನಡತೆ ಅದರಲ್ಲೂ ವಿಶೇಷವಾಗಿ ಮಹಿಳೆಯರ ಮೇಲೆ ಕಣ್ಗಾವಲು ಮತ್ತು ಅಂತರ್‌ಧರ್ಮೀಯ ಸಂಬಂಧ ಅದರಲ್ಲೂ ವಿಶೇಷವಾಗಿ ಹಿಂದೂ–ಮುಸ್ಲಿಂ ಪುರುಷ–ಮಹಿಳೆ ನಡುವಣ ಸಂಬಂಧದ ಮೇಲೆ ವಿವಿಧ ರೀತಿಯ ದಾಳಿಗಳು ನಡೆದಿವೆ. ಶಾಸಕಾಂಗ ಮತ್ತು ಸಚಿವಾಲಯದಂತಹ ಅಧಿಕಾರ ಮತ್ತು ಪ್ರಭಾವದ ಸ್ಥಾನಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿತವಾಗಿದೆ. ಅಕ್ರಮ ವಲಸೆಯ ಶಂಕಿತರನ್ನು ಬಲವಂತವಾಗಿ ಬಾಂಗ್ಲಾದೇಶಕ್ಕೆ ದಬ್ಬಲಾಗುತ್ತಿದೆ. ವಿಶೇಷವಾಗಿ ಪ್ರಾಚೀನ ಕಾಲದಲ್ಲಿ ಹಿಂದೂಗಳ ‘ವೈಭವ’ ಕುರಿತ ಆರ್‌ಎಸ್‌ಎಸ್–ಬಿಜೆಪಿ ವ್ಯಾಖ್ಯಾನದ ಆಧಾರದಲ್ಲಿ ಇತಿಹಾಸವನ್ನು ಪುನರ್‌ರಚಿಸುವ ಪ್ರಯತ್ನ ಮತ್ತು ಚಾರಿತ್ರಿಕವಾಗಿ ಮುಸ್ಲಿಮರನ್ನು ಹೊರಗಿರಿಸುವುದು ಮತ್ತು/ಅಥವಾ ಅವರ ಪಾತ್ರವನ್ನು ಹೀನಾಯವಾಗಿ ಚಿತ್ರಿಸುವುದು ನಡೆದಿದೆ. ವೈದ್ಯಕೀಯ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಸೇರಿದಂತೆ ಆಧುನಿಕ ವಿಜ್ಞಾನವನ್ನು ಹಿಂದುತ್ವವಾದಿ ದೃಷ್ಟಿಕೋನದಿಂದ ಮರುವ್ಯಾಖ್ಯಾನಿಸಲಾಗುತ್ತಿದೆ, ವೈದ್ಯಕೀಯ, ಶಿಕ್ಷಣ ಮತ್ತು ಇತರ ವ್ಯವಸ್ಥೆಗಳಲ್ಲಿ ಬದಲಾವಣೆ ತರುವ ಪ್ರಯತ್ನ ನಡೆದಿದೆ. ಮುಸ್ಲಿಂ ಹೆಸರುಗಳನ್ನು ಬದಲಾಯಿಸಿ ಹಿಂದೂ ಹೆಸರುಗಳನ್ನು ಇರಿಸಲಾಗಿದೆ. ಸಾರ್ವಜನಿಕ ಜೀವನದ ಎಲ್ಲ ಆಯಾಮಗಳಿಗೂ ಹಿಂದೂ ಧಾರ್ಮಿಕ ಛಾಯೆ ನೀಡಲಾಗಿದೆ.
ಜಮ್ಮು ಕಾಶ್ಮೀರಕ್ಕೆ 370ನೇ ವಿಧಿಯ ಅಡಿಯಲ್ಲಿ ನೀಡಲಾದ ವಿಶೇಷ ಸ್ಥಾನಮಾನ ರದ್ದತಿ, ಅಲ್ಲಿನ ವ್ಯವಹಾರಗಳಲ್ಲಿ ಹಸ್ತಕ್ಷೇಪದ ಮೂಲಕ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ನಿರ್ಲಕ್ಷಿಸಲಾಗಿದೆ. ಶಂಕಿತ ಅಪರಾಧಿಗಳಿಗೆ ನ್ಯಾಯಾಲಯದ ಪ್ರಕ್ರಿಯೆಯನ್ನು ಬಿಟ್ಟು ಗುಂಡಿಟ್ಟು ಕೊಲ್ಲಲಾಗಿದೆ. ಮೋದಿಯವರನ್ನು ಟೀಕಿಸುವುದು ಮತ್ತು ಅವರ ವಿರುದ್ಧದ ಪ್ರತಿಭಟನೆಯನ್ನು ದಮನಿಸಲಾಗಿದೆ. ಪ್ರಮುಖ ವಿಚಾರಗಳ ಕುರಿತು ಚರ್ಚೆಗೆ ಅವಕಾಶ ನಿರಾಕರಿಸುವುದು ಸೇರಿದಂತೆ ವಿರೋಧ ಪಕ್ಷಗಳನ್ನು ಸಂಸತ್ತಿನ ಒಳಗೆ ಮತ್ತು ಹೊರಗೆ ದಮನಿಸಲು ವಿವಿಧ ವಿಧಾನಗಳನ್ನು ಬಳಸಿಕೊಳ್ಳಲಾಗಿದೆ. ವಿಶೇಷವಾಗಿ ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ನಾಯಕರನ್ನು ಅಪಮಾನಿಸಲು, ನಿಗ್ರಹಿಸಲು, ಅವರ ರಾಜಕೀಯ ನಿಧಿಗಳ ಮೂಲಗಳನ್ನು ಕಡಿತಗೊಳಿಸಲು ಮತ್ತು ಅವರನ್ನು ಬಿಜೆಪಿ ಅಥವಾ ಎನ್‌ಡಿಎ ಸೇರುವಂತೆ ಮಾಡಲು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿದೆ. ಭಾರತದ ಮೇಲೆ ಪರೋಕ್ಷ ಭಯೋತ್ಪಾದನಾ ದಾಳಿ ನಡೆಸುತ್ತಿರುವುದಕ್ಕಾಗಿ ಪಾಕಿಸ್ತಾನದ ವಿರುದ್ಧ ನಿರಂತರ ವಾಗ್ದಾಳಿ ನಡೆಸಲಾಗಿದೆ.
ಇದಲ್ಲದೆ, ಎನ್‌ಡಿಎ ಸರ್ಕಾರ ಮತ್ತು ಅದರ ನಾಯಕರ ನಿರ್ದಿಷ್ಟ ಹೇಳಿಕೆಗಳು ಮತ್ತು ನಡೆಗಳು ಅವರ ಉದ್ದೇಶಗಳು ಮತ್ತು ಯೋಜನೆಗಳ ಕುರಿತು ಶಂಕೆ ಮೂಡುವಂತೆ ಮಾಡಿವೆ. ‘ಗಡಿ ಪ್ರದೇಶದಲ್ಲಿ ಒಳನುಸುಳುವಿಕೆ ಮತ್ತು ಅಕ್ರಮ ವಲಸೆಯಿಂದಾಗಿ ಪ್ರಜಾಸತ್ತಾತ್ಮಕ ಅಸಮತೋಲನ’ ಸೃಷ್ಟಿಯಾಗಿ ಅದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಬಹುದು ಎಂದು ಕಳೆದ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಪ್ರಧಾನಿ ಎಚ್ಚರಿಕೆ ನೀಡಿದ್ದರು. ಈ ಸಮಸ್ಯೆಯನ್ನು ಎದುರಿಸಲು ಉನ್ನತಾಧಿಕಾರದ ಜನಸಂಖ್ಯಾ ಸ್ವರೂಪ ಮಿಷನ್ ಆರಂಭಿಸಲಾಗಿದೆ. ಈ ಬೆಳವಣಿಗೆಯ ಬಳಿಕ, ಈ ಅಸಮತೋಲನಕ್ಕೆ ‘ಮತಾಂತರ ಮತ್ತು ಕೆಲವು ಸಮುದಾಯಗಳಲ್ಲಿ ಜನಸಂಖ್ಯಾ ಏರಿಕೆ ದರ ಹೆಚ್ಚು’ ಇರುವುದು ಕಾರಣ ಎಂದು ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಅವರು ಸರ್ಕಾರದ ಯಾವುದೇ ಸ್ಥಾನದಲ್ಲಿ ಇಲ್ಲ. ಬಹುಶಃ ಈ ಕಾರಣದಿಂದಾಗಿಯೇ ಅವರಿಗೆ ಹೆಚ್ಚು ನಿರ್ಬಂಧವೂ ಇಲ್ಲ; ಇದರಿಂದಾಗಿ ಅವರು ಇಂತಹ ಹೇಳಿಕೆ ನೀಡುವುದು ಸಾಧ್ಯವಾಗಿದೆ. 2019ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಅಂಗೀಕಾರ, ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಅಸ್ಸಾಂನಿಂದ ಇತರ ರಾಜ್ಯಗಳಿಗೂ ವಿಸ್ತರಿಸುವುದಕ್ಕೆ ಸಂಬಂಧಿಸಿದ ಹೇಳಿಕೆಗಳು, ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಪರಿಷ್ಕೃತ ನಿಯಮಗಳ ರಚನೆ, ಇತರ ರಾಜ್ಯಗಳಿಗೂ ಎಸ್‌ಐಆರ್ ವಿಸ್ತರಣೆ, ಯಾವುದೇ ಕಾರಣ ನೀಡದೆಯೇ ರಾಷ್ಟ್ರೀಯ ಜನಗಣತಿಯನ್ನು ಹಿಂದೆಂದೂ ಇಲ್ಲದ ರೀತಿಯಲ್ಲಿ ಸುದೀರ್ಘವಾಗಿ ವಿಳಂಬಿಸಿರುವುದು ಎಲ್ಲವನ್ನೂ ಒಟ್ಟಾಗಿ ನೋಡಿದಾಗ ಕಳವಳ ಹೆಚ್ಚುತ್ತದೆ. ಈ ಎಲ್ಲ ಪ್ರಯತ್ನಗಳು ಮುಸ್ಲಿಮರ (ಕ್ರೈಸ್ತರು ಕೂಡ ಇಲ್ಲಿ ಸೇರುವ ಸಾಧ್ಯತೆ ಇದೆ) ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಅಲ್ಲದೇ ಇದ್ದರೂ ಅವರನ್ನು ಎರಡನೇ ದರ್ಜೆಯ ಪೌರರಾಗಿಸುವ ಸುಳಿವುಗಳಾಗಿರಬಹುದೇ?
ಎನ್‌ಡಿಎ ಸರ್ಕಾರವು ಅಕ್ರಮ ವಲಸಿಗರನ್ನು ಮಾತ್ರ ಗುರುತಿಸಿ ಅವರನ್ನು ಹಿಂದಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತದೆಯೇ ಹೊರತು ಭಾರತೀಯ ಪ್ರಜೆಗಳಾದ ಮುಸ್ಲಿಮರನ್ನು ಅಲ್ಲ ಎಂದು ಬಿಜೆಪಿ–ಆರ್‌ಎಸ್‌ಎಸ್ ಬಹುಶಃ ವಾದಿಸಬಹುದು; ನ್ಯಾಯಯುತವಲ್ಲದ ‘ಓಲೈಕೆ’ಯನ್ನು ಹಿಮ್ಮುಖವಾಗಿಸಿ ಎಲ್ಲರನ್ನೂ ಸಮಾನವಾಗಿ ನೋಡುವ ಯತ್ನ; ಆಮಿಷ, ವಂಚನೆ ಮತ್ತು ಬಲವಂತದ ಮತಾಂತರವನ್ನು ತಡೆಯಲಾಗುತ್ತದೆಯೇ ಹೊರತು ಪ್ರಾಮಾಣಿಕವಾದ ಮತಾಂತರವನ್ನು ಅಲ್ಲ; ಮುಂತಾದ ವಾದಗಳನ್ನು ಅವರು ಮುಂದಿಡಬಹುದು.
ಕೆಲವೊಮ್ಮೆ ಉತ್ಪ್ರೇಕ್ಷಿತ ಮತ್ತು ಏಕಮುಖ ಎನಿಸಿದರೂ ಮೇಲಿನ ಆರೋಪಗಳಲ್ಲಿ ಬಹುಪಾಲು ಸತ್ಯವೇ ಇವೆ ಎಂಬುದು ನಿಜ. ಪ್ರಜಾಸತ್ತಾತ್ಮಕ ನಿಯಮಗಳು, ಪ್ರಕ್ರಿಯೆಗಳು ಮತ್ತು ಸಂಸ್ಥೆಗಳ ಗಂಭೀರವಾದ ಇತರ ಉಲ್ಲಂಘನೆಗಳೂ ಇವೆ. ಸಾಂವಿಧಾನಿಕ ಸ್ಥಾನಗಳಲ್ಲಿರುವವರು ಮತ್ತು ಸಂಸ್ಥೆಗಳು ಕೆಲವು ಸಂದರ್ಭಗಳಲ್ಲಿ ಸಂಪೂರ್ಣ ಪಕ್ಷಪಾತಿಯಾಗಿ ಅಲ್ಲದಿದ್ದರೂ ನಿಷ್ಪಕ್ಷಪಾತಿಯಾಗಿ ಇಲ್ಲದೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಪರವಾದ ಆದೇಶಗಳನ್ನು ನೀಡಿದ್ದಿದೆ. ಬಿಹಾರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವುದರ ಕೆಲವೇ ದಿನಗಳ ಮೊದಲು ಘೋಷಿಸಲಾದ ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನಾ’ ಅಡಿಯಲ್ಲಿ ಮಹಿಳೆಯರಿಗೆ ನೇರ ನಗದು ವರ್ಗಾವಣೆಯನ್ನು ತಡೆಯಲು ಚುನಾವಣಾ ಆಯೋಗ ವಿಫಲವಾಗಿದೆ ಎಂಬುದು ಇತ್ತೀಚಿನ ಉದಾಹರಣೆಯಾಗಿದೆ. ಮೊದಲು ಪ್ರಕಟಿಸಿದಂತೆ ಯೋಜನೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಬೇಕಿತ್ತು, ಬದಲಿಗೆ ಪ್ರಧಾನಿಯವರು ಘೋಷಿಸಿದರು. ಎರಡು ಹಂತಗಳ ಮತದಾನಕ್ಕಿಂತ ಕೆಲವೇ ದಿನಗಳ ಮುಂಚಿನವರೆಗೆ ಹಣ ವರ್ಗಾವಣೆ ನಡೆದದ್ದಷ್ಟೇ ಅಲ್ಲ, ಆರು ತಿಂಗಳ ಬಳಿಕ ಇನ್ನಷ್ಟು ಹಣ ದೊರೆಯಲಿದೆ ಎಂಬ ಭರವಸೆಯನ್ನೂ ಕೊಡಲಾಯಿತು. ತಮಿಳುನಾಡು ವಿಧಾನಸಭೆಗೆ 2004 ಮತ್ತು 2011ರಲ್ಲಿ ಚುನಾವಣೆಗಳು ನಡೆದಾಗ ದೀರ್ಘಾವಧಿಯಿಂದ ಜಾರಿಯಲ್ಲಿದ್ದ ಸಮಾಜ ಕಲ್ಯಾಣ ಯೋಜನೆಗಳನ್ನು ಅಮಾನತಿನಲ್ಲಿ ಇರಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ. ಯೋಜನೆಯಡಿ ಸೌಲಭ್ಯಗಳನ್ನು ನೀಡಿದರೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಆಗ ಕಾರಣ ಕೊಡಲಾಗಿತ್ತು. https://www. thehindu.com/news/national/now-silent-on-bihar-ec-had-halted-two-welfare-schemes-in- tamil-nadu-during-polls/ article70259423.ece. ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪಾಟ್ನಾ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೂ ಯೋಜನೆಯನ್ನು ತಡೆಯಲು ಸಾಧ್ಯವಾಗಲಿಲ್ಲ. https:// sabrangindia.in/pil-filed-in-the-patna-high-court-claims- the-mmr-yojana-was-used-to- influence-voters-by-making- payments-after-the-mcc-was-in- effect/amp/. ಇದೇ ವಿಚಾರವನ್ನು ಇರಿಸಿಕೊಂಡು ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆಯಿಂದಲೂ ಯಾವುದೇ ಪ್ರಯೋಜನ ಆಗಲಿಲ್ಲ.
ಇಂತಹ ಉದಾಹರಣೆಗಳು ಅಪವಾದಗಳೇನೂ ಅಲ್ಲ ಎಂದು ಇಲ್ಲಿ ಸೇರಿಸುವ ಅಗತ್ಯ ಇಲ್ಲ. ಇವುಗಳಲ್ಲಿ ಹೆಚ್ಚಿನವು ಸಂವಿಧಾನದಲ್ಲಿರುವ ದೌರ್ಬಲ್ಯಗಳಿಂದಲೇ ಸಾಧ್ಯವಾಗುತ್ತವೆ. ಅಥವಾ ಈ ಹಿಂದಿನ ಸರ್ಕಾರಗಳು ಮಾಡಿಕೊಂಡ ರೂಢಿಯಿಂದಲೂ ಆಗಿರಬಹುದು. ನಂತರದ ಸರ್ಕಾರಗಳು ಇಂತಹ ರೂಢಿಗಳನ್ನು ಭಿನ್ನವಾದ ಉದ್ದೇಶ ಮತ್ತು ಪರಿಣಾಮಗಳಿಗಾಗಿ ಬಳಸಿಕೊಳ್ಳುತ್ತವೆ. ಈಶಾನ್ಯ ಮತ್ತು ಉತ್ತರ ಭಾರತದಲ್ಲಿನ ವಿಶೇಷವಾಗಿ ಎಡಪಂಥೀಯ ತೀವ್ರವಾದಿಗಳು (ನಕ್ಸಲರು) ಮತ್ತು ನುಸುಳುಕೋರರ ಎನ್‌ಕೌಂಟರ್ ಹತ್ಯೆಗಳನ್ನು ಉದಾಹಣೆಯಾಗಿ ಗಮನಿಸಬಹುದು. ನೆಹರೂ ಕಾಲದಿಂದಲೂ ಇದ್ದ 370ನೇ ವಿಧಿಯ ಅಡಿಯಲ್ಲಿನ ವಿಶೇಷ ಸ್ಥಾನಮಾನ ರದ್ದತಿ, ವಿರೋಧ ಪಕ್ಷಗಳ ನಾಯಕರ ವಿರುದ್ಧ ಕೇಂದ್ರ ತನಿಖಾ ತಂಡಗಳು ಮತ್ತು ಗುಪ್ತಚರ ಸಂಸ್ಥೆಯ ಬಳಕೆಯು ಇಂದಿರಾ ಗಾಂಧಿ ಕಾಲದಲ್ಲಿ ಆರಂಭಗೊಂಡು ನಂತರ ನಿರಂತರವಾಗಿ ನಡೆದಿದೆ. ಕೆಲವು ವಿಚಾರಗಳಲ್ಲಿ, ಈ ಹಿಂದೆ ಇದ್ದ ಕಾಂಗ್ರೆಸ್‌ನ ಪ್ರಧಾನಿಗಳಿಗಿಂತ ತಾವು ಹೆಚ್ಚು ಪ್ರಜಾಸತ್ತಾತ್ಮಕ ಎಂದು ಮೋದಿಯವರು ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಉದಾಹರಣೆಗೆ, ವಿರೋಧ ಪಕ್ಷಗಳ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರಗಳನ್ನು ಉರುಳಿಸಲು 356ನೇ ವಿಧಿಯನ್ನು 90 ಬಾರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ನ್ಯಾಯಾಂಗವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ 1970ರ ದಶಕದಲ್ಲಿ ಇಂದಿರಾ ಗಾಂಧಿ ಮಾಡಿದಂತೆ ತಾವು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳನ್ನು ಕಡೆಗಣನೆ ಮಾಡಿಲ್ಲ ಎಂದು ಹೇಳಿರುವುದು ಸಮರ್ಥನೀಯವೇ. ಬಳಿಕ, ತುರ್ತು ಪರಿಸ್ಥಿತಿ ಹೇರಿಕೆಯ ಸಂದರ್ಭದಲ್ಲಿ ನ್ಯಾಯಾಂಗವನ್ನು ಅಧೀನದಲ್ಲಿ ಇರಿಸಿಕೊಳ್ಳಲಾಯಿತು.
ಇದಕ್ಕೆ ವ್ಯತಿರಿಕ್ತವಾಗಿ, ಸಂಸ್ಥಾಪಕರು ಮತ್ತು ಅವರ ಉತ್ತರಾಧಿಕಾರಿಗಳು ಅಳವಡಿಸಿಕೊಂಡ ಮತ್ತು ಸ್ಥಾಪಿಸಿದ ಪ್ರಜಾಸತ್ತಾತ್ಮಕ ನಿಯಮಗಳು, ಪದ್ಧತಿಗಳು ಮತ್ತು ಸಂಸ್ಥೆಗಳು ಎಷ್ಟು ಬಲವಾಗಿ ಬೇರೂರಿವೆಯೆಂದರೆ ಅವುಗಳನ್ನು ಉಲ್ಲಂಘಿಸುವುದು ಕಡುಕಷ್ಟ. ಸಾರ್ವತ್ರಿಕ ಚುನಾವಣೆಗಳಲ್ಲಿ ಮೋದಿ ಅವರ ಸತತ ಮೂರು ಗೆಲುವು, ಹಲವು ರಾಜ್ಯಗಳಲ್ಲಿ ಗೆಲುವು ಸಿಕ್ಕಿದ್ದರೂ ಚುನಾವಣೆ ಮತ್ತು ಪಕ್ಷ ರಾಜಕಾರಣದ ವಿಚಾರಗಳಲ್ಲಿಯಾದರೂ ಸಾಂವಿಧಾನಿಕ ಪ್ರಜಾಸತ್ತೆ ಮುಂದುವರಿದಿದೆಯಷ್ಟೇ ಅಲ್ಲ, ಇನ್ನಷ್ಟು ಬಲಗೊಂಡಿದೆ. ವಿಧಾನಸಭೆಗಳಿಗೆ ಮತ್ತು ಸಂಸತ್ತಿಗೆ ಸಕಾಲಕ್ಕೆ ಚುನಾವಣೆಗಳು ನಡೆಯುತ್ತಿವೆ, ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಅಬ್ಬರಿಸುತ್ತವೆ ಮತ್ತು ತಲೆ ಬಾಗುವುದಿಲ್ಲ, ಫಲಿತಾಂಶಗಳನ್ನು ಗೌರವಿಸಲಾಗುತ್ತದೆ, ಗೆದ್ದವರಿಗೆ ಅಧಿಕಾರ ಹಸ್ತಾಂತರ ಸುಲಲಿತ ಮತ್ತು ಅವಿರೋಧವಾಗಿ ನಡೆಯುತ್ತದೆ. ಮೋದಿ ಅವರು ಪ್ರಧಾನಿ ಹುದ್ದೆಗೇರಿದ ಆರಂಭದ ದಿನಗಳಲ್ಲಿ, ಇನ್ನೊಂದು ತುರ್ತುಸ್ಥಿತಿ ಬರುವುದೇ ಇಲ್ಲ ಎಂದು ತಾವು ಭಾವಿಸುವುದಿಲ್ಲ, ಏಕೆಂದರೆ, ಅಧಿಕಾರದಲ್ಲಿ ಇರುವವರಿಗೆ (ಅಂದರೆ, ಮೋದಿ) ಪ್ರಜಾಪ್ರಭುತ್ವದ ಮೇಲೆ ಬದ್ಧತೆಯ ಕೊರತೆ ಇದೆ ಎಂದು ಬಿಜೆಪಿಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಎಲ್.ಕೆ. ಅಡ್ವಾಣಿ ಹೇಳಿದ್ದರು. ಇದು ಈಗ ಎಂತಹ ಅದ್ಭುತ ಬದಲಾವಣೆ. ಆದರೆ, ಪ್ರಶ್ನೆ ಇರುವುದು ಇದಕ್ಕೆ ಕಾರಣಗಳು ಏನು?
(ಮುಂದುವರಿಯುವುದು)
ಕೆ.ಎನ್.ಹರಿಕುಮಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.