ADVERTISEMENT

ಅನುತ್ತರ ಅಂಕಣ | ಉದ್ಯೋಗಪರ್ವದ ಸುಳಿಯಲ್ಲಿ ಶಾಂತಿಪರ್ವ

ನಮ್ಮ ಕೆಲಸದ ಗೊತ್ತು–ಗುರಿ ಬಗ್ಗೆ ಇನ್ನಾದರೂ ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 6 ಫೆಬ್ರುವರಿ 2025, 23:14 IST
Last Updated 6 ಫೆಬ್ರುವರಿ 2025, 23:14 IST
   

‘ನಾವು ಎಷ್ಟು ಗಂಟೆ ಕೆಲಸ ಮಾಡಬೇಕು’ ಎಂಬ ವಿಷಯವಾಗಿ ಉದ್ಯಮಿಗಳೊಂದಿಬ್ಬರು ಇತ್ತೀಚೆಗೆ ನೀಡಿರುವ ಹೇಳಿಕೆಗಳು ಚರ್ಚೆಗೆ ಒಳಗಾಗಿವೆ. ಆದರೆ ಈ ಚರ್ಚೆಗಳು ‌ಮಾರ್ಕ್ಸ್‌ವಾದವೋ ಬಂಡವಾಳಶಾಹಿಯೋ ಹೀಗೆ ಯಾವುದಾದರೊಂದು ಸಿದ್ಧಾಂತದ ಮುಖವಾಡದಲ್ಲೇ ನಡೆಯುತ್ತಿರುತ್ತವೆ.

ಕೆಲಸವನ್ನು ಎಷ್ಟು ಗಂಟೆಗಳು ಮಾಡಬೇಕು ಎನ್ನುವುದಕ್ಕಿಂತಲೂ ಕೆಲಸ ಎಂದರೇನು, ಮನುಷ್ಯನಿಗೆ ಕೆಲಸದ ಅನಿವಾರ್ಯ ಎಷ್ಟು ಎಂಬಂಥ ಮೂಲಭೂತ ಸಂಗತಿಗಳು ನಮ್ಮ ಚರ್ಚೆಗಳ ಕೇಂದ್ರವಸ್ತು
ಆಗಬೇಕಿತ್ತಲ್ಲವೆ? ನಾವು ಮಾಡುತ್ತಿರುವ ಕೆಲಸಕ್ಕೂ ನಮ್ಮ ಜೀವನಕ್ಕೂ ಸಂತೋಷಕ್ಕೂ ನೆಮ್ಮದಿಗೂ ಸಮಾಜಕ್ಕೂ ಇರಬೇಕಾದ ನಂಟಿನ ಬಗ್ಗೆ ಇಂದು ನಾವು ಮನನ ಮಾಡುತ್ತಿದ್ದೇವೆಯೆ? ಈ ಸಂಬಂಧಸೂತ್ರದ ಬಗ್ಗೆ ಯೋಚಿಸಿದಾಗಲೆಲ್ಲ ಸಣ್ಣಕತೆಯೊಂದು ನೆನಪಾಗುತ್ತದೆ. 

ಊರ ಹೊರಗೊಂದು ದೊಡ್ಡ ಮರ. ಆ ವಿಶಾಲವೃಕ್ಷದ ನೆರಳಲ್ಲಿ ವ್ಯಕ್ತಿಯೊಬ್ಬ ಮಲಗಿ, ನಿದ್ರೆ ಮಾಡುತ್ತಿದ್ದಾನೆ. ಅದೇ ದಾರಿಯಲ್ಲಿ ಇನ್ನೊಬ್ಬ ವ್ಯಕ್ತಿ ಪ್ರಯಾಣ ಮಾಡುತ್ತಿದ್ದಾನೆ. ನಡೆಯುತ್ತಿದ್ದ ಈ ವ್ಯಕ್ತಿ ಮಲಗಿದ್ದ ಆ ವ್ಯಕ್ತಿಯನ್ನು ನೋಡಿ, ಅವನತ್ತ ಧಾವಿಸಿದ. ನಿದ್ರಿಸುತ್ತಿದ್ದವನನ್ನು ಎಬ್ಬಿಸಿಯೇಬಿಟ್ಟ! ‘ಏಳೋ ಸೋಮಾರಿ’. ‘ಅಯ್ಯೋ ಮಾರಾಯ! ಎದ್ದು ಏನು ಮಾಡಲಿ?’ ‘ಎದ್ದು ಈ ಮರದ ಒಂದೆರಡು ರೆಂಬೆ–ಕೊಂಬೆ
ಗಳನ್ನು ಕತ್ತರಿಸು’. ‘ಕತ್ತರಿಸಿ?!’ ’ಸೌದೆಯನ್ನು ಮಾರಾಟ ಮಾಡು, ದುಡ್ಡನ್ನು ಸಂಪಾದಿಸು!’ ‘ದುಡ್ಡು ಸಂಪಾದಿಸಿ ಏನು ಮಾಡುವುದು?’ ‘ಲೋ ದಡ್ಡ! ನಿನಗೆ ಏನು ಬೇಕೋ ಅದನ್ನು ಆ ದುಡ್ಡಿನಿಂದ ಕೊಂಡುಕೊ. ಅದರಿಂದ ಸಂತೋಷಪಡು’. ‘ಅಯ್ಯಾ! ಈಗ ನಾನು ಸಂತೋಷವಾಗಿ ಇರುವುದರಿಂದಲೇ ಮಲಗಿದ್ದುದು, ನೀನು ದಯಮಾಡಿಸಬಹುದು’ ಎಂದು ಹೇಳಿ ಅವನು ಮತ್ತೆ ಮಲಗಿ, ನಿದ್ರೆಗೆ ಜಾರಿದ.

ADVERTISEMENT

ಮಾನವನ ಇತಿಹಾಸವನ್ನು ನಾವು ಅವಲೋಕಿಸಿದಾಗ, ಕೆಲಸಕ್ಕೂ ಅವನ ಇರುವಿಕೆಗೂ ನಂಟಿರುವುದು ಗೊತ್ತಾಗುತ್ತದೆ (ಇಲ್ಲಿ ‘ಕೆಲಸ’ ಎಂಬುದನ್ನು ದುಡಿಮೆ, ಉದ್ಯೋಗ, ವೃತ್ತಿಗಳ– ಇವು ವಾಸ್ತವವಾಗಿ ಒಂದರಿಂದ ಇನ್ನೊಂದು ‌ಭಿನ್ನವಾಗಿದ್ದರೂ– ಸಮಾನಾರ್ಥ ದಲ್ಲಿ ಬಳಸಲಾಗಿದೆ). ಆದರೆ ನಾವಿಂದು ಜೀವನಕ್ಕಾಗಿ ಕೆಲಸ ಎಂಬ ಸಹಜ ಹಂತದಿಂದ, ಕೆಲಸಕ್ಕಾಗಿಯೇ ಜೀವನ ಎಂಬಂಥ ಕೃತಕ ಸ್ತರಕ್ಕೆ ಜಾರಿದ್ದೇವೆ. ಆರ್ಥಿಕ ತಜ್ಞ ಮೇನರ್ಡ್‌ ಕೇಯ್ನ್ಸ್ ಸುಮಾರು ನೂರು ವರ್ಷಗಳ ಹಿಂದೆ ಒಂದು ಭವಿಷ್ಯವನ್ನು ನುಡಿದಿದ್ದರು: ‘ಮುಂದಿನ ದಿನಗಳಲ್ಲಿ ನನ್ನ ಮೊಮ್ಮಕ್ಕಳು ದಿನಕ್ಕೆ ಮೂರು ಗಂಟೆಗಳಷ್ಟೇ ಕೆಲಸ ಮಾಡಿದರೆ ಸಾಕು’. ಆದರೆ ಕೇಯ್ನ್ಸ್‌ ಭವಿಷ್ಯ ಸುಳ್ಳಾಗಿದೆ. ಅವರ ಕಾಲಕ್ಕಿಂತಲೂ ನಮ್ಮ ಕಾಲ ಹೆಚ್ಚಿನ ‘ಅಭಿವೃದ್ಧಿ’ಯನ್ನು ಸಾಧಿಸಿದ್ದರೂ ನಾವು ಹೆಚ್ಚಿನ ಕೆಲಸ ಮಾಡಬೇಕಾದ ಒತ್ತಡವನ್ನೂ ಸೃಷ್ಟಿಸಿದೆ. ನಮ್ಮ ದಿನದ 24 ಗಂಟೆಗಳಲ್ಲಿ 12 ಗಂಟೆಗಳಷ್ಟು ದುಡಿದರೂ ನೆಮ್ಮದಿಯ ಜೀವನ ನಮ್ಮದಾಗುತ್ತಿಲ್ಲ ಎಂಬಂಥ
ವಾತಾವರಣದಲ್ಲಿ ಇಂದು ನಾವು ಬದುಕುತ್ತಿದ್ದೇವೆ. ನಮ್ಮ ಈ ಭಾಗ್ಯಹೀನ ಬದುಕಿಗೆ ಕಾರಣಕರ್ತರು ಯಾರು?

ನಮ್ಮ ಜೀವನ ನಿರ್ವಹಣೆಗಾಗಿ ಅನಿವಾರ್ಯ ವಾಗಿರುವ ಶ್ರಮವನ್ನು ಯಂತ್ರಗಳು ತಗ್ಗಿಸುತ್ತವೆ. ಆಗ ಮಾನವರು ಹೆಚ್ಚು ದುಡಿಯಬೇಕಾಗಿರುವುದಿಲ್ಲ. ದಿನದ ಸ್ವಲ್ಪಕಾಲವಷ್ಟೇ ದುಡಿದು, ಉಳಿದ ಸಮಯದಲ್ಲಿ ಸಂತೋಷವಾಗಿ ಇರಬಹುದು ಎಂಬುದು ಕೇಯ್ನ್ಸ್‌ ಅವರ ಎಣಿಕೆಯಾಗಿತ್ತು. ಆದರೆ ನಾವು ಯಂತ್ರಗಳ ನೆರವಿನಿಂದ ಸಂತೋಷದ ಜೀವನವನ್ನು ಸಾರ್ಥಕಗೊಳಿಸಿ ಕೊಳ್ಳುವ ಕೌಶಲವನ್ನೇನೂ ದಕ್ಕಿಸಿಕೊಳ್ಳಲಿಲ್ಲ. ಅದಕ್ಕೆ ವಿರುದ್ಧವಾಗಿ ನಾವೇ ಯಂತ್ರಗಳಾಗಿ ರೂಪಾಂತರವಾಗಿ ಬಿಟ್ಟೆವು! ಯಂತ್ರಗಳಿಗೆ ಸಂತೋಷದ ಆವಶ್ಯಕತೆಯೂ ಇರದು, ಉದ್ದೇಶದ ಅನಿವಾರ್ಯವೂ ಇರದು, ಅಲ್ಲವೆ? ಹೀಗಾಗಿಯೇ ನಮ್ಮ ದುಡಿಮೆಗೂ ಜೀವನಕ್ಕೂ ಸಂತೋಷಕ್ಕೂ ಏನು ಸಂಬಂಧ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಲು ಅವಕಾಶವೇ ನಮಗೆ ಈಗ ಇಲ್ಲವಾಗಿದೆ.

ಮನುಷ್ಯನಿಗೆ ಒದಗಿದ ಈ ರೂಪಾಂತರಕ್ಕೆ ಕಾರಣ, ಅವನು ತನ್ನ ಜೀವನಯಾನದಲ್ಲಿ ಅಗತ್ಯಗಳ (Needs) ಹಾದಿಯನ್ನು ಆರಿಸಿಕೊಳ್ಳದೆ, ಬಯಕೆಗಳ (Wants) ಕುದುರೆಯನ್ನು ಏರಿದ್ದು. ನಮಗೆ ಅಗತ್ಯವಾದಂಥವು ಕೆಲವು, ಆದರೆ ಬಯಕೆಗಳು ಹಲವು, ಎಣಿಕೆಗೇ ಸಿಗದಂಥವು. ಅಗತ್ಯವಾದಂಥವು ಸಹಜ, ಸುಂದರ. ಅವು ಸಿಕ್ಕಾಗ ತೃಪ್ತಿ, ಸಂತೋಷ. ಬಯಕೆಗಳಾದರೋ ಕೃತಕ, ಕುರೂಪ. ಅವು ದಕ್ಕಿದಾಗಲೂ ದಕ್ಕಬೇಕಾದದ್ದು ದಕ್ಕಿತೋ ಇಲ್ಲವೋ ಎಂಬ ಅತೃಪ್ತಿ, ಗೊಂದಲ. ಮಾತ್ರವಲ್ಲ, ಮಾರುಕಟ್ಟೆಯಿಂದ ಪ್ರಚೋದಿತ ಇಂದಿನ ಆರ್ಥಿಕ ವ್ಯವಸ್ಥೆಗೆ ನಮ್ಮ ಸಹಜತೆಯಿಂದ ಏನೂ ಪ್ರಯೋಜನವಿಲ್ಲ. ಅದು ಸಂತೋಷವಾಗಿರುವ ನಮ್ಮನ್ನು ಆಮಿಷಗಳ ಬಲದಿಂದ ಎಬ್ಬಿಸಿ, ನಮ್ಮಲ್ಲಿ ಅತೃಪ್ತಿಯೆಂಬ ಸಂಕಟವನ್ನು ತುಂಬಿ, ಕೃತಕ ಸಂತಸದ ಮೇವನ್ನು ನಮ್ಮ ಕಣ್ಣಿನ ಮುಂದೆ ನೇತುಹಾಕಿ, ದಾಹವನ್ನು ತಣಿಸುವ ಜೀವರಸವಾಗಿ, ದುಡ್ಡು ಎಂಬ ಮರೀಚಿಕೆಯನ್ನು ಸೃಷ್ಟಿಸಿ, ಆ ಕಡೆಗೆ ನಮ್ಮನ್ನು ಉದ್ಯೋಗ ಎಂಬ ಚಾಟಿಯನ್ನು ಬೀಸಿ ಬೀಸಿ ಓಡಿಸುತ್ತಲೇ ಇರುತ್ತದೆ.

ಕೈಗಾರಿಕಾ ಕ್ರಾಂತಿ ಎಂಬ ಮಾಯಾದಂಡ ತನಗೆ ಬೇಕಾದಂಥ ಯಂತ್ರಮಾನವರನ್ನು ಸೃಷ್ಟಿಸಿಕೊಂಡಿದೆ. ಮನುಷ್ಯನ ಇಹಕ್ಕೂ ಪರಕ್ಕೂ ಇದೇ ರಾಜಮಾರ್ಗ ಎಂಬಂಥ ಆದರ್ಶವನ್ನೂ ಅದು ಸ್ಥಾಪಿಸಿದೆ. ಇದರ ವಿರುದ್ಧ ಮಾತನಾಡುವುದೇ ಪ್ರಗತಿವಿರುದ್ಧ ಎಂದು ಹೀಗಳೆಯುವಂಥ ಮನೋಧರ್ಮವನ್ನೂ ಸಮಾಜದಲ್ಲಿ ಯಶಸ್ವಿಯಾಗಿ ಬಿತ್ತಿದೆ. ‘ಇಂಡಸ್ಟ್ರಿ ವಿದೌಟ್‌ ಆರ್ಟ್‌ ಈಸ್‌ ಬ್ರೂಟ್ಯಾಲಿಟಿ’ (ಕಲೆಗೆ ನೆಲೆಯಾಗದ ಕೈಗಾರಿಕೆ ಎಂದರೆ ಅದು ಕ್ರೌರ್ಯ) ಎಂದ ಜಾನ್‌ ರಸ್ಕಿನ್ ಕಾಣ್ಕೆಯ ಅನುಭವ ಈಗ ನಮಗಾಗುತ್ತಿದೆ. ಇಂದಿನ ಅರ್ಥವ್ಯವಸ್ಥೆಯು ಜೀವನಕಲೆಯಿಂದ ನಮ್ಮನ್ನು ದೂರ ಮಾಡಿದೆ.

ಹಣವೇ ಜೀವನಸಂತೋಷದ ಮೂಲ ಎಂಬ ಭ್ರಾಂತಿ ಇಂದಿನ ಸಮಾಜದಲ್ಲಿದೆ. ಸಂತೋಷ ಎಂಬುದು ಪಾಪವಲ್ಲ. ಆದರೆ ಆ ಸಂತೋಷದ ನೆಲೆ–ಬೆಲೆ ಏನಾಗಿರತಕ್ಕದ್ದು ಎಂದೂ ನಿರ್ಧಾರವಾಗಬೇಕಾಗುತ್ತದೆ. ಜೀವನದ ಸಮಗ್ರತೆಯಲ್ಲಿಯೇ ಸಂತೋಷವಿರುವುದು. ಇದನ್ನೇ ನಮ್ಮ ಪ್ರಾಚೀನರು ಪುರುಷಾರ್ಥಗಳ ಕಲ್ಪನೆಯಲ್ಲಿ ಶೋಧಿಸಿದ್ದು. ಜೀವನದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ– ಎಲ್ಲವೂ ಬೇಕು. ಆದರೆ ‘ಅರ್ಥ’ ಮಾತ್ರವೇ ಇಂದಿನ ಜೀವನಾರ್ಥವಾಗಿದೆ. ಜೀವನದ ಸಮಗ್ರತೆ ಎಂದರೆ ಏನು ಎಂಬುದನ್ನು ನಮ್ಮ ಕಾಲದ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾದ ಲೂಯಿಸ್‌ ಮಮ್‌ಫರ್ಡ್ ಸೊಗಸಾಗಿ ಹೇಳಿದ್ದಾರೆ:

‘ಧಾರ್ಮಿಕ ಕಲಾಪಗಳು, ಕಲೆ, ಪದ್ಯ, ನಾಟಕ, ಸಂಗೀತ, ನೃತ್ಯ, ತತ್ತ್ವಶಾಸ್ತ್ರ, ವಿಜ್ಞಾನ, ಪುರಾಣ, ಧರ್ಮಶ್ರದ್ಧೆ– ಇವೆಲ್ಲವೂ ಮನುಷ್ಯನಿಗೆ ಅವನ ನಿತ್ಯದ ಅನ್ನಗಳಾಗಿಯೇ ಬೇಕು. ಮನುಷ್ಯನ ದಿಟವಾದ ಜೀವನ ಎಂದರೆ, ಅವನಿಗೆ ಅನ್ನ ಕೊಡುವ ಉದ್ಯೋಗದಲ್ಲಿ ತೊಡಗುವುದಷ್ಟೇ ಅಲ್ಲ, ಅವನ ಉದ್ಯೋಗದ ದಾರಿ ಮತ್ತು ಅದು ಸೃಷ್ಟಿಸುವ ಉತ್ಪನ್ನಗಳ ಕೊನೆಯ ಹಂತ ಹಾಗೂ ಅವುಗಳ ಬಳಕೆ, ಎಂದರೆ ಮಾರ್ಗ ಮತ್ತು ಗುರಿಗಳ ಮಹತ್ವವನ್ನು ಎತ್ತಿಹಿಡಿಯುವ ಸಾಂಕೇತಿಕ ಕಲಾಪಗಳಲ್ಲಿ ತೊಡಗಿಕೊಳ್ಳುವಿಕೆಯಲ್ಲಿಯೇ ಅವನ ಜೀವನದ ಸಾರ್ಥಕತೆಯಿದೆ. ಅಜ್ಞಾನದಿಂದಲೋ ಜಡತೆಯಿಂದಲೋ ಭಾಷೆಯ ಸಮಸ್ಯೆಯಿಂದಲೋ ವ್ಯಕ್ತಿಯೊಬ್ಬ ತನ್ನ ಸಂಸ್ಕೃತಿಯ ಸಂಕೇತಗಳಿಂದ ದೂರವಾಗುವುದಕ್ಕಿಂತಲೂ ದೊಡ್ಡ ಬಡತನ ಮತ್ತೊಂದಿಲ್ಲ.’

ಇಂಥ ಲೌಕಿಕ–ಅಲೌಕಿಕ ವಿವರಗಳ ಪೂರ್ಣದೃಷ್ಟಿಯನ್ನೇ ಅಧ್ಯಾತ್ಮ ಎಂದು ಕರೆಯುವುದು. ‘ಕಾಯಕವೇ ಕೈಲಾಸ’ ಎಂಬ ಅಂತಃಸೂತ್ರದಿಂದ ಪುಷ್ಟಿಗೊಂಡಿದ್ದ ಶರಣ ಪರಂಪರೆಯ ಹಲವರು ಶಿವಶರಣರ ಹೆಸರುಗಳೊಂದಿಗೆ ಅವರ ವೃತ್ತಿಸೂಚಕವೂ ಸೇರಿರುವುದು ಆಧ್ಯಾತ್ಮಿಕತೆಯ ಇಹ–ಪರಗಳ ತಾದಾತ್ಮ್ಯಕ್ಕೆ ಸಮರ್ಥ ಉದಾಹರಣೆಯಾಗಿದೆ. ‘ಕ್ರಿಯಾಶೀಲತೆಯ ಆವಶ್ಯಕತೆ ಧ್ಯಾನದಲ್ಲಿದೆ. ಉದ್ಯೋಗವೇ ಪ್ರಾರ್ಥನೆ. ಕಾಯಕದ ಉದ್ದೇಶವೇ ಆತ್ಮಶುದ್ಧಿ. ಪಾವಿತ್ರ್ಯ ಎಂದರೆ ಪೂರ್ಣತೆಯೇ ಹೌದು’ ಎಂದ ಕಲಾವಿದ, ಚಿಂತಕ
ಎರಿಕ್‌ ಗಿಲ್‌ ಕಾಣ್ಕೆ ಮನನೀಯ. 

ಇನ್ನಾದರೂ ನಾವು ನಮ್ಮ ಕೆಲಸದ ಗೊತ್ತುಗುರಿಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ. ಕೆಲಸದ ಪ್ರಮಾಣಕ್ಕಿಂತಲೂ ಅದರ ಪರಿಣಾಮವೇ ಮುಖ್ಯ ಎಂಬ ಚಿತ್ತವೃತ್ತಿಯೇ ನಮ್ಮ ಜೀವನದರ್ಶನದ ಭಾಗವಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.