ವಿಶ್ಲೇಷಣೆ: ಉನ್ಮಾದ ಸ್ಥಿತಿಯ ‘ಎಸ್‌ಐಆರ್’
‘ವಿಶೇಷ ಸಮಗ್ರ ಪರಿಷ್ಕರಣೆ’ ಹೆಸರಿನಲ್ಲಿ ಸಮಗ್ರವಾಗಿ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ಬಿಹಾರದಲ್ಲಿ ನಡೆಯುತ್ತಿದೆ. ದೇಶದಲ್ಲಿ ಉನ್ಮಾದ ಸ್ಥಿತಿಯೊಂದನ್ನು ಪ್ರತಿಪಾದಿಸುತ್ತಿರುವಂತೆ ಭಾಸವಾಗುತ್ತಿರುವ ‘ಎಸ್‌ಐಆರ್’, ಸ್ಟಿರಾಯಿಡ್‌ಗಳು ಹಾಗೂ ಆತಂಕಕಾರಿ ಅಂಶಗಳನ್ನು ಬೆರೆಸಿದಂತಹ ಔಷಧ.
––––
ಆಗಸ್ಟ್ 17ರಂದು ನಡೆದ ‘ಖ್ಯಾತಿ’ವೆತ್ತ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ), ಮತದಾರರ ಪಟ್ಟಿಯ ಮೇಲೆ ಪರಿಣಾಮ ಬೀರುತ್ತಿರುವ ಲೋಪಗಳನ್ನೆಲ್ಲ ನೀಗಲು ಇರುವ ಪರಿಹಾರವೇ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ಎಂಬ ಸವಕಲು ಸಂಗತಿಯನ್ನೇ ಮತ್ತೆ ಮಂಡಿಸಿದರು. ಮಹದೇವಪುರದಲ್ಲಿ ಮತ ಕಳವು ನಡೆದಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ ನಂತರವಷ್ಟೇ, ತರ್ಕವೊಂದನ್ನು ಮಂಡಿಸುವ ಭರದಲ್ಲಿ ‘ಸಿಇಸಿ’ ಅದೇ ಹಳೆಯ ತುತ್ತೂರಿ ಊದಿದರು. ರಾಹುಲ್‌ಗಾಂಧಿ ಈ ವಿಷಯದಲ್ಲಿ ಸಿಲುಕಿಹಾಕಿಕೊಂಡರು ಎಂದೇ ಬಿಜೆಪಿ ಟ್ರೋಲರ್‌ಗಳು ನಂಬಿದರು. ವಾಸ್ತವದಲ್ಲಿ, ಮತದಾರರ ಪಟ್ಟಿಯಲ್ಲಿನ ಲೋಪ ಸರಿಪಡಿಸುವ ಉದ್ದೇಶದಿಂದ ‘ಎಸ್‌ಐಆರ್’ ನಡೆದಿದ್ದರೆ ಅದನ್ನು ರಾಹುಲ್ ಯಾಕೆ ವಿರೋಧಿಸುತ್ತಿದ್ದರು?
ಬಹುಶಃ, ಸಿಇಸಿ ‘ಯೆಸ್ ಮಿನಿಸ್ಟರ್’ ನೋಡಿರಲಿಕ್ಕಿಲ್ಲ. ಬಿಬಿಸಿಯಲ್ಲಿನ ಈ ಸರಣಿಯಲ್ಲಿ, ನಕಲಿ ತರ್ಕದ ಮಂಡನೆಯನ್ನು ‘ರಾಜಕಾರಣಿಯ ತರ್ಕ’ ಎಂದೇ ಬಣ್ಣಿಸಲಾಗಿದೆ. ಆ ತರ್ಕ ಹೇಗಿರುತ್ತದೆಂದರೆ: ಮೊದಲಿಗೆ, ನಾವು ಏನೋ ಒಂದನ್ನು ಮಾಡಬೇಕು. ಎರಡು, ಅದು ಏನೋ ಒಂದು ಆಗುತ್ತದೆ. ಮೂರು, ಈ ಕಾರಣಕ್ಕಾಗಿ ನಾವು ಏನೋ ಒಂದನ್ನು ಮಾಡಲೇಬೇಕು. ಇಲ್ಲಿನ ಚೋದ್ಯ ಏನೆಂದರೆ, ‘ಮಂಡಿಸಲಾಗುತ್ತಿರುವ ಏನೋ ಒಂದು, ನಿಜಕ್ಕೂ ನಾವು ಈಗ ಮಾಡಬೇಕಾದುದೇ’ ಎನ್ನುವ ಮೂಲ ಪ್ರಶ್ನೆಯನ್ನೇ ಕೇಳುವುದಿಲ್ಲ. ಮತದಾರರ ಪಟ್ಟಿಯ ಕುರಿತು ರಾಹುಲ್ ಗಾಂಧಿ ಎತ್ತಿರುವ ಪ್ರಶ್ನೆಗಳ ಕುರಿತು ಟ್ರೋಲ್ ಮಾಡುತ್ತಿರುವವರು ಈ ಪ್ರಶ್ನೆ ಕೇಳುವ ಗೊಡವೆಗೇ ಹೋಗುತ್ತಿಲ್ಲ. ಎಸ್‌ಐಆರ್ ಎನ್ನುವ ‘ಏನೋ ಒಂದನ್ನು ಮಾಡುವ ಕೆಲಸ’ವು ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪಗಳನ್ನೆಲ್ಲ ಸರಿಪಡಿಸಲು ‘ಏನೋ ಒಂದನ್ನು ಮಾಡಬೇಕಲ್ಲ... ಆ ಕೆಲಸ ಹೌದೇ’ ಎನ್ನುವುದು ನೈಜ ಪ್ರಶ್ನೆ. ಇದಕ್ಕೆ ಉತ್ತರವನ್ನು ಕಲ್ಪಿಸಿಕೊಳ್ಳಲಾಗದು. ಮತದಾರರ ಪಟ್ಟಿಯಲ್ಲಿನ ವ್ಯಾಧಿಗೆ ಎಸ್‌ಐಆರ್ ಅಗತ್ಯವೂ, ಸಮರ್ಪಕವೂ ಆದ ದಿವ್ಯೌಷಧ ಎನ್ನುವುದನ್ನು ಆಯೋಗ ರುಜುವಾತುಪಡಿಸಬೇಕು.
ಮತದಾರರ ಪಟ್ಟಿಯಲ್ಲಿ ಲೋಪಗಳಿರುವುದು ಹೊಸ ಸಮಸ್ಯೆಯೇನೂ ಅಲ್ಲ. ಲಾಗಾಯ್ತಿನಿಂದ ಇರುವಂಥದ್ದೇ; ಅದರಲ್ಲೂ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ. ವಾಮಮಾರ್ಗದಲ್ಲಿ ಮತದಾರರ ಪಟ್ಟಿಗೆ ಏಕಕಾಲದಲ್ಲಿ ಅನೇಕರ ಸೇರ್ಪಡೆ ಹಾಗೂ ನಿರ್ದಿಷ್ಟ ಸಮುದಾಯದವರನ್ನು ಮತಪಟ್ಟಿಯಿಂದ ಅಳಿಸಿಹಾಕುವುದು, ಇಂಥ ಆರೋಪಗಳು ಈಗಿನಂತೆ ಹಿಂದೆಂದೂ ಮುಂಚೂಣಿಗೆ ಬಂದಿರಲಿಲ್ಲ. ಮಹಾರಾಷ್ಟ್ರ ಹಾಗೂ ಮಹದೇವಪುರದ ವಿದ್ಯಮಾನ ಬಯಲಿಗೆ ಬಂದ ನಂತರ ಸಮಸ್ಯೆಯೊಂದರ ಆಳವು ದೇಶದ ಗಮನಸೆಳೆದಿದೆ.
ಕಳೆದ ಕೆಲವು ವರ್ಷಗಳಿಂದ ಚುನಾವಣಾ ಆಯೋಗ (ಇ.ಸಿ) ಅನುಸರಿಸಿರುವ ಕ್ರಮಗಳಿಂದ ಮತದಾರರ ಪಟ್ಟಿಯಲ್ಲಿನ ಸಮಸ್ಯೆಗಳ ನಿವಾರಣೆ ಸಾಧ್ಯವಾಗಿಲ್ಲ. ಹೆಸರು ಸೇರಿಸಲು, ತೆಗೆದುಹಾಕಲು, ತಿದ್ದುಪಡಿ ಮಾಡಲು ಬಯಸುವ ನಾಗರಿಕರ ಉತ್ಸಾಹವನ್ನು ಪರಿಷ್ಕರಣೆಯ ಯಶಸ್ಸು ಅವಲಂಬಿಸಿರುತ್ತದೆ. ಅದೇ ಇದರ ಮಿತಿಯೂ ಆಗಿದೆ. ಅದರ ಬದಲು ವಾರ್ಷಿಕ ಪರಿಷ್ಕರಣೆಯೇ ಸಮರ್ಪಕವಾದುದು– ಒಟ್ಟಾರೆಯಾಗಿ ಮತದಾರರ ಹೆಸರುಗಳನ್ನು ಸೇರಿಸುವುದು, ತೆಗೆದುಹಾಕುವುದು ಹಾಗೂ ಅದಕ್ಕೆ ತಕರಾರುಗಳಿದ್ದರೆ ಸ್ವೀಕರಿಸುವುದು. ಇದೂ ಸಮಾಧಾನಕರವಾದ ಪರಿಹಾರ ಎನ್ನುವುದು ರುಜುವಾತಾಗಿಲ್ಲ. ಏಕೆಂದರೆ, ಈಗಿನ ವ್ಯವಸ್ಥೆಯಲ್ಲಿ, ಮತದಾರರ ಪಟ್ಟಿಗೆ ಹೆಸರು ಸೇರಿಸುವುದು, ಅಳಿಸುವುದರಲ್ಲಿನ ಲೋಪಗಳು ಸದಾ ಉಳಿದೇ ಇರುತ್ತವೆ. ವರ್ಷಗಳಿಂದ ಜಮೆಯಾಗುತ್ತಲೇ ಬಂದಿರುವ ಲೋಪಗಳು ಇವು.
ಈ ವಾದವನ್ನು ಒಪ್ಪೋಣ. ಹೀಗಾಗಿಯೇ ‘ಏನೋ ಒಂದನ್ನು’ ಈಗ ಮಾಡಬೇಕಾಗಿದೆ. ‘ಏನೋ ಒಂದನ್ನು’ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಹಾಗೂ ಅದೇ ಹೊತ್ತಿಗೆ ಪಾರದರ್ಶಕ–ನ್ಯಾಯಬದ್ಧವಾಗಿ ಮಾಡಬೇಕಾಗಿದೆ. ಕಾಲಕಾಲಕ್ಕೆ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡುವುದರ ಜೊತೆಗೆ, ಐದು ವರ್ಷಕ್ಕೊಮ್ಮೆಯಾದರೂ ಇನ್ನೂ ತೀವ್ರವಾದ ಪರಿಷ್ಕರಣೆ ಮಾಡಬೇಕಾಗಿದೆ. ಅದನ್ನು ಮನೆ ಮನೆ ಸಮೀಕ್ಷೆಯಿಂದ ನಡೆಸಬೇಕು. ಆಗಷ್ಟೇ ಅಧಿಕೃತವಾಗಿ, ಪ್ರಾಮಾಣಿಕ ರೀತಿಯಲ್ಲಿ ಹೆಸರುಗಳ ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ತಿದ್ದುಪಡಿ ಸಾಧ್ಯ. ಈಗ ಎಸ್‌ಐಆರ್ ದೇಶದಲ್ಲಿ ಉನ್ಮಾದ ಸ್ಥಿತಿಯೊಂದನ್ನು ಪ್ರತಿಪಾದಿಸುತ್ತಿರುವಂತೆ ಭಾಸವಾಗುತ್ತಿದೆ. ‘ಎಸ್‌ಐಆರ್ ಇರುವುದೇ ಹೀಗೆ. ಅದನ್ನೀಗ ಬೆಂಬಲಿಸಬೇಕಷ್ಟೆ’ ಎನ್ನುವ ಧಾರ್ಷ್ಟ್ಯದ ಧೋರಣೆ ಆಯೋಗಕ್ಕೆ ಇರುವಂತಿದೆ.
ವಾಸ್ತವ ಏನೆಂದರೆ, ಎಸ್‌ಐಆರ್, ನಮಗೆ ಅಗತ್ಯವಾಗಿರುವ ಪರಿಷ್ಕರಣೆ ಅಲ್ಲ; ಚುನಾವಣಾ ಕಾನೂನು ರೂಪಿಸಿದವರೂ ಇಂಥ ಪರಿಷ್ಕರಣೆಯನ್ನು ಒಪ್ಪಲಾರರು. ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಎಸ್‌ಐಆರ್ ಇನ್ನಷ್ಟು ಜಟಿಲಗೊಳಿಸಬಹುದು, ಜಟಿಲಗೊಳಿಸುತ್ತಿರುವುದೂ ನಿಜ. ಎಸ್‌ಐಆರ್ ಪ್ರಕಾರ, ಬಿಎಲ್‌ಒಗಳು ಮನೆ ಮನೆ ಸಮೀಕ್ಷೆ ನಡೆಸಬೇಕು. ಅವರ ಈ ಸಮೀಕ್ಷೆ ಪ್ರಕ್ರಿಯೆಯ ಎರಡು ಅಂಶಗಳಿಗೂ ಮತದಾರರ ಸಮಗ್ರ ಪರಿಷ್ಕರಣೆಯ ಮೂಲತತ್ತ್ವಕ್ಕೂ ಸಂಬಂಧವೇ ಇಲ್ಲ. ಮೊದಲಿಗೆ, ಎಲ್ಲ ಸಂಭಾವ್ಯ ಮತದಾರರೂ ಅರ್ಹತೆಗಾಗಿ ಅರ್ಜಿಯೊಂದನ್ನು ತುಂಬಬೇಕು. ಅದನ್ನು ಮಾಡಲು ವಿಫಲರಾದಲ್ಲಿ, ತಂತಾನೇ ಅನರ್ಹರೆನಿಸಿಕೊಳ್ಳುತ್ತಾರೆ. ಇದಕ್ಕೆ ಯಾವುದೇ ಕಾನೂನಿನ ಬುನಾದಿಯಿಲ್ಲ. ಭಾರತದ ಚುನಾವಣಾ ಇತಿಹಾಸದಲ್ಲಿಯೇ ಎಂದೂ ಹೀಗೆ ಆಗಿಲ್ಲ. ಆಡಳಿತಾತ್ಮಕವಾದ ಈ ಸಣ್ಣ ಅನಿವಾರ್ಯವೇ ಚುನಾವಣಾ ವ್ಯವಸ್ಥೆಯ ಸ್ಥಿತ್ಯಂತರವೊಂದಕ್ಕೆ ಕಾರಣ
ವಾಗಬಲ್ಲ ಮೂಲ ಸಂಗತಿಯಾದೀತು. ಸರ್ಕಾರದಿಂದ ಮತದಾರರ ಪಟ್ಟಿಗೆ ಸೇರ್ಪಡೆ ಎನ್ನುವುದು ಹೋಗಿ, ಸ್ವಯಂ ಮತದಾರರ ಪಟ್ಟಿಗೆ ಸೇರ್ಪಡೆ ಎನ್ನುವ ಮಾದರಿಗೆ ಬದಲಾಗುವ ಪರಿ ಇದು. ಈ ರೀತಿ ತಯಾರಾಗುವ ಮತದಾರರ ಪಟ್ಟಿಯಿಂದ ಬಡವರು, ಅನಕ್ಷರಸ್ಥರು, ವಲಸಿಗರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಹೊರಗುಳಿಯುತ್ತಾರೆ ಎನ್ನುವುದು ಜಾಗತಿಕ ಉದಾಹರಣೆಗಳಿಂದ ಸ್ಪಷ್ಟವಾಗಿದೆ.
ಮಹಿಳೆಯೊಬ್ಬಳು ದಾಖಲೆಗಳನ್ನು ಪೂರೈಸುವ ಮೂಲಕ ತನ್ನ ಅರ್ಹತೆ ಸಾಬೀತುಪಡಿಸಬೇಕು ಎಂದು ಎಸ್‌ಐಆರ್ ಬಯಸುತ್ತದೆ. ಆ ದಾಖಲೆಗಳನ್ನು ಸಲೀಸಾಗಿ ಲಭ್ಯವಾಗುವಂತೆ ಮಾಡುವ ಪ್ರಕ್ರಿಯೆ ಮಾತ್ರ ಗೈರು. ಇದುವರೆಗೆ ಚುನಾವಣಾ ವ್ಯವಸ್ಥೆ ನೀಡಿರುವ ಪೌರತ್ವವನ್ನೇ ಇದು ಅಲುಗಾಡಿಸುತ್ತದೆ. ಸ್ವಯಂ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಮಹಿಳೆಯರು ದಾಖಲೆಗಳನ್ನು ಪೂರೈಸಬೇಕೆನ್ನುವ ನಿಯಮಗಳ ಪರಿಣಾಮದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ಮತದಾರರ ಪಟ್ಟಿಯಿಂದ ಹೊರಗುಳಿಯಬೇಕಾಗುತ್ತದೆ.
ಮತದಾರರ ಪಟ್ಟಿಯನ್ನು ನಿಖರವಾಗಿ ರೂಪಿಸಲು ಎಸ್‌ಐಆರ್ ಏನನ್ನು ಮಾಡಬಹುದು? ಮೊದಲಿಗೆ, ಮನೆ ಮನೆ ಸಮೀಕ್ಷೆಯು ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದಕ್ಕೆ ನೀಡಿದಷ್ಟೇ ಒತ್ತನ್ನು ಹೊಸ ಮತದಾರರ ಸೇರ್ಪಡೆಗೂ ನೀಡಬೇಕಿತ್ತು. ಬಿಹಾರದಲ್ಲಿ ಜೂನ್ 25ರಿಂದ ಜುಲೈ 25ರ ಅವಧಿಯಲ್ಲಿ 65 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಇಸಿ ತಿಳಿಸಿದೆ. ಇದು ಸಮಗ್ರ ಪರಿಷ್ಕರಣೆ ಅಲ್ಲ; ಸಮಗ್ರವಾಗಿ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ.
ಎರಡನೆಯದಾಗಿ, ಇಸಿ ಈಗಾಗಲೇ ರೂಪಿಸಿಕೊಂಡಿರುವ ಶಿಷ್ಟಾಚಾರವನ್ನಾದರೂ ಎಸ್‌ಐಆರ್ ಅನುಸರಿಸಬೇಕಿತ್ತು. ಮತದಾರರು ಮೃತಪಟ್ಟಿದ್ದಾರೆಯೇ, ಶಾಶ್ವತವಾಗಿ ಎಲ್ಲಿಗಾದರೂ ತೆರಳಿದ್ದಾರೆಯೇ ಅಥವಾ ಅವರನ್ನು ಪತ್ತೆ ಮಾಡಲು ಆಗುತ್ತಿಲ್ಲವೇ ಇತ್ಯಾದಿಯನ್ನು ಗೊತ್ತುಪಡಿಸಿಕೊಳ್ಳಬೇಕಿತ್ತು. ಏಕಾಏಕಿ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದೆ ಎನ್ನುವುದರ ಬದಲು ಪ್ರಮಾಣಿತ ಕಾನೂನಿನ ಪ್ರಕಾರ (ನೋಟಿಸ್ ನೀಡಿ, ವಿಚಾರಣೆ ನಡೆಸಿ, ಅಪೀಲುಗಳಿಗೆ ಕಿವಿಗೊಟ್ಟು) ನಡೆದುಕೊಂಡಿದ್ದಿದ್ದರೆ, ‘ಮೃತಪಟ್ಟಿದ್ದಾರೆ’ ಎಂದು ಉಲ್ಲೇಖಿಸಲಾದವರೆಲ್ಲ ಹೀಗೆ ಎದುರಲ್ಲಿ ಬಂದು ನಿಲ್ಲುವ ಪ್ರಸಂಗ ಬರುತ್ತಿರಲಿಲ್ಲ.
ಮೂರನೆಯದಾಗಿ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸ್ವತಂತ್ರ ಆಂತರಿಕ ಪರಿಶೀಲನೆಗಾದರೂ ಇಸಿ ಒಳಪಡಿಸಬೇಕಿತ್ತು. ‘ಪರಿಪೂರ್ಣತೆ’ ಎನ್ನಲಾಗುವ ಮತದಾರರ ಪಟ್ಟಿಯೇನೊ ಸಿಕ್ಕಿದೆ; ಆದರೆ ‘ಖಚಿತತೆ’ ಬಗ್ಗೆ ಯಾರನ್ನು ಕೇಳುವುದು? ಭಾರತದಂತಹ ದೇಶದಲ್ಲಿ ಇದೊಂದು ಹಗರಣವೆಂದೇ ಹೇಳಬೇಕು. ಬಹಳ ಅಚ್ಚುಕಟ್ಟಾಗಿ ರೂಪಿತವಾದ, ಅತ್ಯುತ್ತಮ ಗುಣಮಟ್ಟದ ಸಾಂಖ್ಯಿಕ ವ್ಯವಸ್ಥೆ ಇರುವ ನಮ್ಮ ದೇಶದಲ್ಲೇ ಇಂಥ ಹಗರಣವಾಗಿದೆ! ಜನನ ಹಾಗೂ ಮರಣ ನೋಂದಣಿಯ ‘ಮಾದರಿ ಪರಿಶೀಲನೆ’ ನಡೆಸುವಂತೆಯೇ ಇದನ್ನೂ ಮಾಡಬೇಕಲ್ಲವೆ? ‘ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ’ಯು (ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗನೈಸೇಷನ್) ಮತದಾರರ ಪಟ್ಟಿಯ ಶೇ 0.1 ಮಾದರಿ ಪರೀಕ್ಷೆಯನ್ನಾದರೂ ಮಾಡಬಹುದಲ್ಲವೆ?
ನಾಲ್ಕನೆಯದಾಗಿ, ಮತದಾರರ ಪಟ್ಟಿಯಲ್ಲಿನ ಯಾವುದೇ ಗಂಭೀರ ವಂಚನೆ ಆರೋಪದ ಕುರಿತು ನಡೆಯುವ ಎಸ್‌ಐಆರ್‌ನಂತಹ ಪ್ರಕ್ರಿಯೆಯು ನ್ಯಾಯಯುತವೂ ವಿಶ್ವಾಸಾರ್ಹವೂ ಆಗಿರಬೇಕು. ಹಿತಾಸಕ್ತಿ ಸಂಘರ್ಷದ ತತ್ವದ ಕಾರಣದಿಂದಾಗಿ ಯಾರು ಪಟ್ಟಿ ಪರಿಷ್ಕರಣೆಯಲ್ಲಿ ತೊಡಗಿರುತ್ತಾರೋ ಅವರ ವಿರುದ್ಧ ತನಿಖೆ ನಡೆಸಲು ಸಾಧ್ಯವಿಲ್ಲ. ಇ.ಸಿ ಸುದ್ದಿಗೋಷ್ಠಿಯ ಶೈಲಿ ಹಾಗೂ ಧ್ವನಿಯನ್ನು ನೋಡಿದರೆ ಇನ್ನಂತೂ ಅದು ಸಾಧ್ಯವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.