ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದು ಸಂಚಾರ ದಟ್ಟಣೆಗೆ ಕಾರಣವಾಗಿದೆ. ಇದು, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ಹೆಚ್ಚಿಸಿರುವುದರ ಜೊತೆಗೆ ಜನ ಹೆಚ್ಚು ಸಮಯ ರಸ್ತೆಯಲ್ಲೇ ಕಳೆಯಬೇಕಾದ ಸ್ಥಿತಿಗೆ ದೂಡಿದೆ. ಅಪಘಾತಗಳ ಸಂಖ್ಯೆಯಲ್ಲೂ ಏರಿಕೆ ಉಂಟಾಗಿದೆ.
ಖರೀದಿ ಸಾಮರ್ಥ್ಯ ಹೆಚ್ಚಳ ಮತ್ತು ವಾಹನಗಳ ಸುಲಭ ಲಭ್ಯತೆಯು ವಾಹನಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ. ಆದರೆ, ಅದಕ್ಕೆ ಅನುಗುಣವಾಗಿ ರಸ್ತೆ ಸಂಪರ್ಕ ಹಾಗೂ ರಸ್ತೆ ಮೂಲಸೌಕರ್ಯದಲ್ಲಿ ಬೆಳವಣಿಗೆ ಆಗಿಲ್ಲ. ಅದರ ಪರಿಣಾಮವಾಗಿ, ನಗರದ ಬಹುತೇಕ ರಸ್ತೆಗಳಲ್ಲಿ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳು ಸಂಚರಿಸುತ್ತಿವೆ. ವಾಹನಗಳ ಸಂಖ್ಯೆ ಕ್ಷಿಪ್ರಗತಿಯಲ್ಲಿ ವಿಪರೀತ ಏರಿಕೆ ಆಗಿರುವುದಕ್ಕೆ ಕಾರಣವಾಗಿರುವ ಮತ್ತೊಂದು ಅಂಶವೆಂದರೆ, ನಮ್ಮ ಸಮಾಜದ ಮನೋಭಾವ. ವಾಹನ ಖರೀದಿಯನ್ನು ಜನ ತಮ್ಮ ಅಗತ್ಯಕ್ಕಿಂತ ಹೆಚ್ಚಾಗಿ, ಒಂದು ಆಕಾಂಕ್ಷೆ ಮತ್ತು ಪ್ರತಿಷ್ಠೆಯ ವಿಷಯವೆಂಬಂತೆ ನೋಡುತ್ತಾರೆ.
ನಗರದಲ್ಲಿ ಪ್ರತಿವರ್ಷವೂ ರಸ್ತೆಗಿಳಿಯುವ ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಂಕಿ–ಅಂಶಗಳ ಪ್ರಕಾರ, 1976ರಲ್ಲಿ ಬೆಂಗಳೂರಿನಲ್ಲಿದ್ದ ವಾಹನಗಳ ಸಂಖ್ಯೆ 1.08 ಲಕ್ಷ. ಆದರೆ ಈ ವರ್ಷದ ಜೂನ್ ವೇಳೆಗೆ ಇಲ್ಲಿರುವ ವಾಹನಗಳ ಸಂಖ್ಯೆ 1.19 ಕೋಟಿ. 2030ರ ಅಂತ್ಯಕ್ಕೆ ಇದು 1.50 ಕೋಟಿಗೆ ಏರುವ ಸಾಧ್ಯತೆ ಇದೆ.
ಬೆಂಗಳೂರಿನ ಸಂಚಾರ ದಟ್ಟಣೆಗೆ ಕಾರಣವಾದ ಕೆಲವು ಪ್ರಮುಖ ಅಂಶಗಳು: ಜನಸಂಖ್ಯೆ ಮತ್ತು ವಿವಿಧ ಬಗೆಯ ಚಟುವಟಿಕೆಗಳ ಹೆಚ್ಚಳದಿಂದ ದಿನನಿತ್ಯ ಪ್ರಯಾಣಿಸುವವರ ಸಂಖ್ಯೆಯಲ್ಲಿ ಆಗಿರುವ ಏರಿಕೆ, ಕೆಲವು ಪ್ರದೇಶಗಳನ್ನು ಕೇಂದ್ರೀಕರಿಸಿ ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಮತ್ತು ಕಚೇರಿಗಳು ತಲೆ ಎತ್ತಿರುವುದು, ನಗರದ ರಸ್ತೆಗಳಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶಇರುವುದು, ವಿಶಾಲ ರಸ್ತೆಗಳು ಇಲ್ಲದಿರುವುದು, ಕಿರಿದಾದ ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಅತಿಕ್ರಮಿಸಿರುವುದು, ವಾಹನ ನಿಲುಗಡೆಯ ಬೇಡಿಕೆಗೆ ತಕ್ಕಂತೆ ಸೌಲಭ್ಯ ಇಲ್ಲದಿರುವುದು, ರಸ್ತೆ ನಿಯಮ ಪಾಲಿಸದ ಅಶಿಸ್ತಿನ ಚಾಲಕರು, ಸಂಚಾರ ನಿಯಂತ್ರಣ ವ್ಯವಸ್ಥೆ ಪರಿಣಾಮಕಾರಿಯಾಗಿ ಇಲ್ಲದಿರುವುದು, ಸಂಚಾರ ನಿರ್ವಹಣೆಗೆ ಹಲವು ಏಜೆನ್ಸಿಗಳು ಇರುವುದು...
ಸಮರ್ಪಕ ರಸ್ತೆ ಮೂಲಸೌಕರ್ಯ ಮತ್ತು ಸಾರಿಗೆ ಜಾಲದ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಹೂಡಿಕೆಯ ಅಗತ್ಯವಿದೆ. ಮಾತ್ರವಲ್ಲ, ಅವುಗಳ ಜಾರಿಗೆ ಹೆಚ್ಚಿನ ಸಮಯವೂ ಬೇಕಾಗುತ್ತದೆ. ಆದ್ದರಿಂದ, ಸಂಚಾರ ದಟ್ಟಣೆಯ ನಿರ್ವಹಣೆ ಹಾಗೂ ಪ್ರಯಾಣದ ಸಮಯ ಕಡಿಮೆ ಮಾಡುವ ದಿಸೆಯಲ್ಲಿ, ಈಗ ಲಭ್ಯವಿರುವ ಮೂಲ ಸೌಕರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.
ಸಂಚಾರ ದಟ್ಟಣೆ ನಿರ್ವಹಣೆಗೆ ಕೆಲವು ಪರಿಹಾರ ಸೂತ್ರಗಳು ಇಲ್ಲಿವೆ: ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಸಾಮಾನ್ಯವಾಗಿ ರಸ್ತೆಯಲ್ಲಿ ಹೆಚ್ಚಿನ ಜಾಗವನ್ನು ಬಳಸದೇ ಅಧಿಕ ಮಂದಿಯ ಸಂಚಾರಕ್ಕೆ ನೆರವಾಗುತ್ತದೆ. ಪ್ರಯಾಣಿಕರ ರೈಲು, ಮೆಟ್ರೊ, ಮಾನೊ ರೈಲು ಮತ್ತು ಬಸ್ಸುಗಳು ಉತ್ತಮವಾದ ಹಾಗೂ ಜನರ ಕೈಗೆಟಕುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾಗಿವೆ. ಇವು ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಂಚಾರ ದಟ್ಟಣೆ ಮತ್ತು ಮಾಲಿನ್ಯದ ಮಟ್ಟವನ್ನು ತಗ್ಗಿಸುತ್ತವೆ. ಹೀಗಾಗಿ, ಇಂತಹ ಸಾರಿಗೆ ವ್ಯವಸ್ಥೆಗೆ ಹೆಚ್ಚು ಹೂಡಿಕೆ ಮಾಡುವತ್ತ ಗಮನ ಹರಿಸಬೇಕು. ಬಸ್ ಹಾಗೂ ಮೆಟ್ರೊ ಟಿಕೆಟ್‌ಗೆ ಕಡಿಮೆ ಪ್ರಯಾಣ ದರ ನಿಗದಿಪಡಿಸಬೇಕು.
ಮೋಟರುರಹಿತ ಸಾರಿಗೆ ಬಳಕೆಗೆ ಪ್ರೋತ್ಸಾಹ– ನಗರವು ವಿಸ್ತರಣೆಯಾಗುತ್ತಿದ್ದಂತೆ ಮತ್ತು ಜನರ ಆದಾಯದ ಮಟ್ಟ ಏರಿಕೆಯಾಗುತ್ತಿದ್ದಂತೆ ಮೋಟರುರಹಿತ ಸಾರಿಗೆ ತನ್ನ ಪ್ರಾಮುಖ್ಯವನ್ನು ಕಳೆದುಕೊಂಡಿದೆ. ‘ಪರಿಸರಸ್ನೇಹಿ’ಯಾದ ಈ ಸಾರಿಗೆಯನ್ನು ಉತ್ತೇಜಿಸಿ, ನಗರದ ಸಾರಿಗೆ ವ್ಯವಸ್ಥೆಯಲ್ಲಿ ಅದಕ್ಕೆ ಅವಕಾಶ ಕಲ್ಪಿಸಬೇಕು.
ಪಾದಚಾರಿಗಳಿಗೆ ಸೌಲಭ್ಯ ಕಲ್ಪಿಸುವುದು– ರಸ್ತೆಯಲ್ಲಿ ಸಂಚರಿಸುವವರಲ್ಲಿ ದೊಡ್ಡ ಪ್ರಮಾಣದಲ್ಲಿ ಪಾದಚಾರಿಗಳು (ಸುಮಾರು ಶೇ 25ರಿಂದ ಶೇ 30ರಷ್ಟು) ಇರುತ್ತಾರೆ. ಆದರೆ ಅವರಿಗೆ ಒದಗಿಸಲಾದ ಸೌಲಭ್ಯ ಗಳನ್ನು ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುತ್ತಾರೆ ಅಥವಾ ರಸ್ತೆ ವಿಸ್ತರಣೆಗಾಗಿ ಪಾದಚಾರಿ ಮಾರ್ಗಗಳನ್ನು ಬಳಸಿಕೊಳ್ಳಲಾಗಿರುತ್ತದೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದಾಡುವಂತಾಗಿದೆ. ಇದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಪಾದಚಾರಿ ಮಾರ್ಗ ಉತ್ತಮವಾಗಿದ್ದರೆ, ಜನ ತಮ್ಮ ವಾಹನಗಳನ್ನು ಮನೆಯಲ್ಲೇ ಬಿಟ್ಟು, ಹೆಚ್ಚು ದೂರವನ್ನು ಸಹ ಕಾಲ್ನಡಿಗೆಯಲ್ಲೇ ಕ್ರಮಿಸಲು ಮುಂದಾಗುತ್ತಾರೆ.
ಶಾಲೆ, ಕಚೇರಿಗಳ ಸಮಯದಲ್ಲಿ ಬದಲಾವಣೆ–ಕಚೇರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಕೆಲಸದ ಸಮಯದಲ್ಲಿ ಬದಲಾವಣೆ ತರುವುದರಿಂದ ‘ಪೀಕ್ ಅವರ್’ನಲ್ಲಿ ದಟ್ಟಣೆಯನ್ನು ತಪ್ಪಿಸಬಹುದು. ಪ್ರಸ್ತುತ, ‘ಪೀಕ್ ಅವರ್’ ಬೆಳಿಗ್ಗೆ ಸುಮಾರು 9ಕ್ಕೆ ಪ್ರಾರಂಭವಾಗಿ, 11ಕ್ಕೆ ಕೊನೆಗೊಳ್ಳುತ್ತದೆ. ಸಂಜೆ 5ಕ್ಕೆ ಪ್ರಾರಂಭವಾಗಿ, 7.30ರವರೆಗೆ ಇರುತ್ತದೆ. ಬೆಂಗಳೂರು ಸಂಚಾರ ಪೊಲೀಸರು ಆರಂಭಿಸಿರುವ ‘ಶಾಲೆಗೆ ಸುರಕ್ಷಿತ ಮಾರ್ಗ’ (ಸೇಫ್ ರೂಟ್ ಟು ಸ್ಕೂಲ್) ಯೋಜನೆಯಿಂದ, ಶಾಲೆಗಳು 9ಕ್ಕೆ ಮುನ್ನವೇ ಶುರುವಾಗುತ್ತಿದ್ದು, ಇದು ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ನೆರವಾಗಿದೆ. ಇದೇ ರೀತಿ ಅನೇಕ ಐ.ಟಿ ಕಂಪನಿಗಳು ಕೂಡ ಸಿಬ್ಬಂದಿಯ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ತಮ್ಮ ಕೆಲಸದ ವೇಳಾಪಟ್ಟಿಯನ್ನು ಬದಲಿಸಿವೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳಿಗೆ ಸಂಬಂಧಿಸಿದಂತೆ ಕೂಡ ಇದೇ ರೀತಿ ಬದಲಾವಣೆ ತಂದರೆ, ಬೆಳಿಗ್ಗೆ ಮತ್ತು ಸಂಜೆಯ ‘ಪೀಕ್ ಅವರ್’ನಲ್ಲಿ ಉಂಟಾಗುವ ಸಂಚಾರ ದಟ್ಟಣೆಕಡಿಮೆಯಾಗಬಹುದು.
ವಾಹನ ನಿಲುಗಡೆ ಮೂಲ ಸೌಲಭ್ಯ ಅಭಿವೃದ್ಧಿ– ಸಾರ್ವಜನಿಕ ಸಾರಿಗೆಗೆ ಬಳಸುವ ವಾಹನಗಳು ಮತ್ತು ಮೋಟರುರಹಿತ ಸಾರಿಗೆ ಬಳಕೆದಾರರಿಗೆ ಆದ್ಯತೆ ನೀಡಬೇಕು. ಇಂತಹ ವಾಹನ ನಿಲುಗಡೆ ತಾಣದಿಂದ ಜನ ತಮ್ಮ ಕೆಲಸದ ಸ್ಥಳಕ್ಕೆ ಸುಲಭವಾಗಿ ತಲುಪುವ ಮತ್ತು ಅಲ್ಲಿಂದ ವಾಪಸಾಗುವ ಸೌಲಭ್ಯ ಒದಗಿಸಿಕೊಡಬೇಕು. ಎಲ್ಲ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಬಹುಹಂತದ ಕಾರು ನಿಲುಗಡೆ ಸೌಲಭ್ಯವನ್ನು ಅಭಿವೃದ್ಧಿಪಡಿಸಬೇಕು.
ಕಾರ್ ಪೂಲಿಂಗ್ ವ್ಯವಸ್ಥೆ ಅಳವಡಿಕೆ– ಪಾಶ್ಚಿಮಾತ್ಯ ದೇಶಗಳಲ್ಲಿ ಕೆಲಸದ ಸ್ಥಳಕ್ಕೆ ಹೋಗಲು ಕಾರ್‌ಪೂಲಿಂಗ್ (ಒಂದು ಸ್ಥಳದಿಂದ ಇನ್ನೊಂದೆಡೆಗೆ ಸ್ವಂತ ಕಾರಿನಲ್ಲಿ ಹೋಗುವವರು ಅದೇ ಮಾರ್ಗದಲ್ಲಿ ಹೋಗುವವ್ಯಕ್ತಿಗಳನ್ನು ತಮ್ಮ ವಾಹನದಲ್ಲಿ ಕರೆದೊಯ್ಯುವುದು) ಸಾಮಾನ್ಯವಾಗಿದೆ. ಹೆಚ್ಚಿನ ಕಚೇರಿಗಳು ಒಂದೇ ಕಡೆ ಇರುವ, ಅದರಲ್ಲೂ ಮುಖ್ಯವಾಗಿ ಐ.ಟಿ ಕಂಪನಿಗಳು ಇರುವ ಕಡೆಗಳಲ್ಲಿ ಕಾರ್‌ಪೂಲಿಂಗ್ ವ್ಯವಸ್ಥೆ ಅಳವಡಿಸುವುದು ಅತ್ಯಂತ ಅವಶ್ಯ.
ಸಂಚಾರ ನಿಯಂತ್ರಣಕ್ಕೆ ತಂತ್ರಜ್ಞಾನದ ಬಳಕೆ– ಬೆಂಗಳೂರಿನ ಸಂಚಾರ ಪೊಲೀಸರು ಹೊಸ ತಂತ್ರಜ್ಞಾನ ಗಳನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಮುಂದಿದ್ದಾರೆ. ಆದರೂ ಸಂಚಾರ ಪೊಲೀಸರ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಕೃತಕ ಬುದ್ಧಿಮತ್ತೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಬೇಕು. ನಗರದಲ್ಲಿ ಸಂಚಾರ ನಿರ್ವಹಣೆಯಲ್ಲಿ ಮಾನವ ಶ್ರಮವನ್ನು ಕಡಿಮೆಗೊಳಿಸಿ ಪಾರದರ್ಶಕತೆ ಖಾತರಿಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನದ ಚತುರ ಸಂಚಾರ ಸಿಗ್ನಲ್‌ಗಳು, ಸ್ವಯಂಚಾಲಿತ ಸಂಚಾರ ನಿರ್ದೇಶನ ವ್ಯವಸ್ಥೆ, ಡ್ರೋನ್ ಮತ್ತು ವೈಮಾನಿಕ ನಿಗಾ, ತುರ್ತು ವಾಹನ ನಿಯಂತ್ರಣ ವ್ಯವಸ್ಥೆ, ಸಂಚಾರ ಅವಘಡ ಪತ್ತೆ ವ್ಯವಸ್ಥೆಯಂತಹವನ್ನು ಅಳವಡಿಸಬಹುದು.
ಅರಿವು ಮೂಡಿಸಲು ಒತ್ತು– ವಾಹನ ಚಾಲಕರು, ಪ್ರಯಾಣಿಕರು, ಪಾದಚಾರಿಗಳು ಒಳಗೊಂಡಂತೆ ರಸ್ತೆ ಬಳಕೆದಾರರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ಒತ್ತು ನೀಡಬೇಕು. ಇದಕ್ಕಾಗಿ ಪತ್ರಿಕೆಗಳು, ಭಿತ್ತಿಪತ್ರ, ಕರಪತ್ರ, ಚಿತ್ರಮಂದಿರಗಳಲ್ಲಿನ ಸ್ಲೈಡ್‌ಗಳಂತಹ ವಿವಿಧ ಮಾಧ್ಯಮಗಳನ್ನು ಬಳಸಿಕೊಳ್ಳಬಹುದು. ಜಾಗೃತಿ ಶಿಬಿರಗಳನ್ನು ಏರ್ಪಡಿಸಬಹುದು.
ಈ ಮೇಲಿನ ಕೆಲವು ಶಿಫಾರಸುಗಳನ್ನು ಅಲ್ಪಾವಧಿಯಲ್ಲಿ ಜಾರಿಗೊಳಿಸಲು ಸಾಧ್ಯವಿದ್ದರೆ, ಇನ್ನು ಕೆಲವು ಶಿಫಾರಸುಗಳ ಜಾರಿಗೆ ದೀರ್ಘಾವಧಿ ಬೇಕಾಗುತ್ತದೆ. ಸಂಬಂಧಪಟ್ಟವರು ಈ ಕಾರ್ಯತಂತ್ರಗಳನ್ನು ವ್ಯವಸ್ಥಿತವಾಗಿ ಕಾರ್ಯಗತಗೊಳಿಸಿದ್ದೇ ಆದರೆ, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯ.
ಲೇಖಕ: ಪೊಲೀಸ್ ಮಹಾನಿರ್ದೇಶಕ, ಸಿಐಡಿ ಮತ್ತು ಆರ್ಥಿಕ ಅಪರಾಧಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.