ADVERTISEMENT

ವಿಶ್ಲೇಷಣೆ: ಟೆಸ್ಟ್ ಆಡಬೇಕೆಂಬ ಕರ್ನಾಟಕದ ಮನೀಷ್ ಪಾಂಡೆ ಆಸೆ ಭಗ್ನವಾಯಿತೇ?

ಆಯ್ಕೆ ‘ಆಟ’ದಲ್ಲಿ ಕಮರುವ ಕನಸು

ಗಿರೀಶದೊಡ್ಡಮನಿ
Published 13 ಡಿಸೆಂಬರ್ 2021, 19:45 IST
Last Updated 13 ಡಿಸೆಂಬರ್ 2021, 19:45 IST
   

ಭಾರತ ಕ್ರಿಕೆಟ್ ತಂಡಗಳ ನಾಯಕತ್ವವನ್ನು ವಿಭಜಿಸಿದ ನಂತರ ರಾಷ್ಟ್ರೀಯ ಆಯ್ಕೆ ಸಮಿತಿಯತ್ತ ಈಗ ಎಲ್ಲರ ದೃಷ್ಟಿ ಹೊರಳಿದೆ.

ಟಿ20 ನಾಯಕತ್ವವನ್ನು ಸ್ವಇಚ್ಛೆಯಿಂದ ಬಿಟ್ಟುಕೊಟ್ಟ ವಿರಾಟ್‌ ಕೊಹ್ಲಿ ಅವರಿಂದ ಏಕದಿನ ತಂಡದ ನಾಯಕ ಪಟ್ಟವನ್ನು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಕಿತ್ತುಕೊಂಡು ರೋಹಿತ್ ಶರ್ಮಾ ಅವರಿಗೆ ಹಸ್ತಾಂತ ರಿಸಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಯಾವ ರೀತಿ ಇರಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಜೋರಾಗಿಯೇ ನಡೆದಿವೆ. ನಾಯಕನಾಗಿ ಆಡಿದ ಏಕದಿನ ಪಂದ್ಯಗಳ ಪೈಕಿ ಶೇಕಡ 70ಕ್ಕಿಂತ ಹೆಚ್ಚಿನದರಲ್ಲಿ ಗೆಲುವಿನ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಟ್ರೋಫಿ ಜಯಿಸದಿರುವುದನ್ನೇ ನೆಪವಾಗಿಟ್ಟುಕೊಂಡು ಆಯ್ಕೆ ಸಮಿತಿ ಈ ರೀತಿಯ ನಿರ್ಧಾರಕ್ಕೆ ಬಂದಿದೆ ಎಂಬ ವಾದ ಒಂದೆಡೆಯಾದರೆ, ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ತಮ್ಮ ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿರುವ ರೋಹಿತ್ ಶರ್ಮಾ ಇಲ್ಲಿಯೂ ಗೆಲುವು ದೊರಕಿಸಿಕೊಡಬಲ್ಲರು ಎಂಬ ನಿರೀಕ್ಷೆ ಇನ್ನೊಂದೆಡೆ ಇದೆ.

ಗಿರೀಶ ದೊಡ್ಡಮನಿ

ಇವೆಲ್ಲದರ ನಡುವೆ ಆಯ್ಕೆ ಸಮಿತಿಯ ಕೆಲವು ‘ಆಟ’ಗಳು ಬೆಳಕಿಗೆ ಬರಲೇ ಇಲ್ಲ. ಅದರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಬೇಕೆನ್ನುವ ಕರ್ನಾಟಕದ ಪ್ರತಿಭಾವಂತ ಬ್ಯಾಟರ್ ಮನೀಷ್ ಪಾಂಡೆ ಕನಸು ಬಹುತೇಕ ಕೊಚ್ಚಿಹೋದಂತಾಗಿದೆ.

ADVERTISEMENT

ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ ಕಾನ್ಪುರ ಟೆಸ್ಟ್‌ ತಂಡಕ್ಕೆ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಆಯ್ಕೆಯಾದಾಗಲೇ ಪಾಂಡೆಗೆ ಟೆಸ್ಟ್ ಬಾಗಿಲು ಮುಚ್ಚಿದಂತಾಯಿತು. ಇದೀಗ ದಕ್ಷಿಣ ಆಫ್ರಿಕಾಕ್ಕೆ ತೆರಳು ತ್ತಿರುವ ತಂಡದ ಯಾವ ವಿಭಾಗದಲ್ಲಿಯೂ ಅವರ ಹೆಸ ರಿಲ್ಲ. ಹಾಗೆ ನೋಡಿದರೆ, ನಾಲ್ಕು ವರ್ಷಗಳ ಹಿಂದೆಯೇ ಮನೀಷ್, ಭಾರತ ಟೆಸ್ಟ್ ತಂಡಕ್ಕೆ ಆಡಬೇಕಿತ್ತು.

ಅವರಿಗೆ 2015ರಲ್ಲಿ ಜಿಂಬಾಬ್ವೆ ಎದುರಿನ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಲಭಿಸಿತು. 2008ರಲ್ಲಿಯೇ ಕರ್ನಾಟಕ ತಂಡದಲ್ಲಿ ಪದಾರ್ಪಣೆ ಮಾಡಿದ್ದ ಮನೀಷ್ ಬಹುಬೇಗ ಗಮನ ಸೆಳೆದ ಬ್ಯಾಟರ್. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶತಕ ಚಚ್ಚಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಕರ್ನಾಟಕ ತಂಡವು ಎರಡು ಬಾರಿ ರಣಜಿ ಟ್ರೋಫಿ, ಇರಾನಿ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಷ್ಟೆಲ್ಲ ಇದ್ದರೂ ಅವರಿಗೆ ಭಾರತ ತಂಡದ ಪೋಷಾಕು ಧರಿಸುವ ಅವಕಾಶ ಸಿಕ್ಕಿದ್ದು 2015ರಲ್ಲಿ.

ಜಿಂಬಾಬ್ವೆ ಎದುರು ಪದಾರ್ಪಣೆ ಪಂದ್ಯದಲ್ಲಿ ಹೊಡೆದ 71 ರನ್‌ಗಳು ಮತ್ತು ಕೇದಾರ್ ಜಾಧವ್ ಅವರೊಂದಿಗಿನ ಜೊತೆಯಾಟವನ್ನು ಕ್ರಿಕೆಟ್‌ ಪ್ರಿಯರು ಮರೆಯುವುದಿಲ್ಲ. ಅಗ್ರಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದ ಆ ಪಂದ್ಯದಲ್ಲಿ ಮನೀಷ್ ಮಿಂಚಿದ್ದರು. ಆದರೆ 2016ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಅವರು ಹೊಡೆದಿದ್ದ ಶತಕದ ಬಲದಿಂದ ಭಾರತ ತಂಡವು 330 ರನ್‌ಗಳ ಗುರಿಯನ್ನು ಮೀರುವಲ್ಲಿ ಯಶಸ್ವಿಯಾಗಿತ್ತು. 84 ಎಸೆತಗಳಲ್ಲಿ ಹೊಡೆದಿದ್ದ ಆ ಬಿರುಸಿನ ಶತಕಕ್ಕೆ ಆಸ್ಟ್ರೇಲಿಯಾದ ಬೌಲರ್‌ಗಳು ಬೆಚ್ಚಿಬಿದ್ದಿದ್ದರು. ಮನೀಷ್ ಪಂದ್ಯಶ್ರೇಷ್ಠರಾಗಿದ್ದರು. ಆದರೂ ಅವರ ಸ್ಥಾನ ತಂಡದಲ್ಲಿ ಭದ್ರವಾಗಲಿಲ್ಲ.

ಅವರು ಇಲ್ಲಿಯವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 91 ಪಂದ್ಯಗಳು, 6,389 ರನ್‌ಗಳು, 19 ಶತಕ ಮತ್ತು 29 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದೀಗ ಅವರಿಗೆ ವಯಸ್ಸಾಗುತ್ತಿದೆ ಎಂಬ ಸಬೂಬು ಕೇಳಿಬರುತ್ತಿದೆ. ಆದರೆ ಹೋದ ತಿಂಗಳು ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಅವರ ಚುರುಕಿನ ಫೀಲ್ಡಿಂಗ್ ಮತ್ತು ಅಬ್ಬರದ ಬ್ಯಾಟಿಂಗ್‌ನಿಂದ ಕರ್ನಾಟಕ ಫೈನಲ್ ತಲುಪಿತ್ತು.

ಇಷ್ಟಾದರೂ ಆಯ್ಕೆ ಸಮಿತಿ ಕಣ್ಣಿಗೆ ಮನೀಷ್ ಬೀಳಲೇ ಇಲ್ಲ. ಸೋಜಿಗವೆಂದರೆ, 26 ವರ್ಷದ ಶ್ರೇಯಸ್ ಮತ್ತು 31 ವರ್ಷದ ಸೂರ್ಯಕುಮಾರ್ ಯಾದವ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಕಾನ್ಪುರದಲ್ಲಿ ಸುನೀಲ್ ಗಾವಸ್ಕರ್ ಕೊಟ್ಟ ಕ್ಯಾಪ್ ಧರಿಸಿ ಕಣಕ್ಕಿಳಿದ ಶ್ರೇಯಸ್ ಶತಕ ಹೊಡೆದು ತಾನು ಸೀಮಿತ ಓವರ್‌ ಕ್ರಿಕೆಟಿಗಷ್ಟೇ ಸೀಮಿತವಲ್ಲ ಎಂದು ಸಾರಿದರು. ತಂಡಕ್ಕೂ ಲಾಭವಾಯಿತು. ಆದರೆ ಮೂರು ಏಕದಿನ ಮತ್ತು 11 ಟಿ20 ಪಂದ್ಯಗಳನ್ನಷ್ಟೇ ಆಡಿರುವ, ಪ್ರಥಮ ದರ್ಜೆಯಲ್ಲೂ ಮನೀಷ್‌ಗಿಂತ ಕಡಿಮೆ ರನ್ ಗಳಿಸಿರುವ ಯಾದವ್ ಆಯ್ಕೆ ಮಾತ್ರ ಪ್ರಶ್ನೆಯಾಗಿಯೇ ಉಳಿಯಿತು. ಯಾದವ್‌ಗೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಆಡುವ ಅವಕಾಶ ಲಭಿಸಿದ್ದು ಕೂಡ ಇದೇ ವರ್ಷದ ಆರಂಭದಲ್ಲಿ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಕೆಲವರಿಗೆ ಅದು ಹೇಗೆ ಇಷ್ಟೊಂದು ಅವಕಾಶಗಳು ತ್ವರಿತವಾಗಿ ಸಿಗುತ್ತವೆ ಎನ್ನುವುದೇ ಅಚ್ಚರಿ. ಆದರೆ ಮನೀಷ್ ಮತ್ತು ಅವರಂತಹ ಇನ್ನೂ ಕೆಲವು ಆಟಗಾರರಿಗೆ ಕೌಶಲ, ಪ್ರತಿಭೆ ಇದ್ದರೂ ಸ್ಥಾನ ಸಿಗುವುದಿಲ್ಲ.

‘ಆಯ್ಕೆದಾರರು ಇರುವುದೇ ಆಟಗಾರರನ್ನು ಕೈಬಿಡುವುದಕ್ಕಾಗಿ. ಆದ್ದರಿಂದ ಅವರ ಗಮನ ಸೆಳೆದು ಆಯ್ಕೆಯಾಗಲು ನಿರಂತರವಾಗಿ ಸಾಧನೆ ತೋರುವು ದೊಂದೇ ದಾರಿ’ ಎಂದು ಈ ಹಿಂದೆ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದ್ದರು. ಆದರೆ, ಇಲ್ಲಿ ತಮಗೆ ಸಿಕ್ಕ ಅವಕಾಶಗಳಲ್ಲಿ ಚೆನ್ನಾಗಿ ಆಡುತ್ತಿರುವ ಕೆಲವು ಆಟಗಾರರತ್ತ ಆಯ್ಕೆ ಸಮಿತಿ ಕಣ್ಣುಗಳ ಹೊರಳದಿರುವುದು ಏಕೆ?

ಮನೀಷ್ ಒಬ್ಬರೇ ಅಲ್ಲ, ಬಂಗಾಳದ ಅಭಿಮನ್ಯು ಈಶ್ವರನ್ ಅವರಂತಹ ಆಟಗಾರರನ್ನು ಪರಿಗಣಿಸದಿರು ವುದು ಸೋಜಿಗ.100 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿ ರನ್‌ಗಳ ಹೊಳೆ ಹರಿಸುತ್ತಿರುವ ಗುಜರಾತ್‌ನ ಪ್ರಿಯಾಂಕ್ ಪಾಂಚಾಲ್ ಅವರಿಗೆ ರೋಹಿತ್ ಶರ್ಮಾ ಬದಲಿಗೆ ಅವಕಾಶ ನೀಡಲಾಗಿದೆಯಾದರೂ ಆಡುವ ಅಂತಿಮ 11ರಲ್ಲಿ ಅವಕಾಶ ಸಿಗುವುದೋ ಎಂದು ಕಾದು ನೋಡಬೇಕಿದೆ. ಈಚೆಗೆ ದಕ್ಷಿಣ ಆಫ್ರಿಕಾದಲ್ಲಿ ಭಾರತ ಎ ತಂಡದ ನಾಯಕರಾಗಿದ್ದ ಪಾಂಚಾಲ್ ಚೆನ್ನಾಗಿ ಬ್ಯಾಟಿಂಗ್‌ ಮಾಡಿದ್ದರು.

ಕ್ರಿಕೆಟ್ ಎಷ್ಟೇ ಆಧುನಿಕವಾಗಿ ಬೆಳೆದರೂ ಟೆಸ್ಟ್ ಪಂದ್ಯದಲ್ಲಿ ಆಡುವ ಗೌರವ ಮತ್ತು ಸಂತೃಪ್ತಿಯ ಮುಂದೆ ಬೇರೆ ಯಾವುದೂ ಸರಿಸಾಟಿಯಲ್ಲ. ಆದ್ದರಿಂದ ಆಟಗಾರರನ್ನು ಕೇವಲ ಒಂದು ಮಾದರಿಗೆ ಸೀಮಿತಗೊಳಿಸುವ ಬದಲು ಸಾಮರ್ಥ್ಯ ಇದ್ದಾಗಲೇ ಕರೆದು ಅವಕಾಶ ಕೊಡುವತ್ತ ಆಯ್ಕೆಗಾರರ ದೃಷ್ಟಿ ಇರಬೇಕು. ಇಲ್ಲದಿದ್ದರೆ 2019ರ ಏಕದಿನ ವಿಶ್ವಕಪ್ ಸೋಲಿನಲ್ಲಿ ತಂಡದ ಆಯ್ಕೆಯಲ್ಲಿ ನಡೆದಿದ್ದ ಲೋಪದ ಕುರಿತು ಮಾಜಿ ಕೋಚ್ ರವಿಶಾಸ್ತ್ರಿ ತಕರಾರು ಎತ್ತಿರುವಂತೆಯೇ ಮುಂದಿನ ದಿನಗಳಲ್ಲಿ ಬೇರೆಯವರೂ ಮಾತನಾಡುವುದು ತಪ್ಪುವುದಿಲ್ಲ.

ಮಾದರಿಗಳ ಆಧಾರದಲ್ಲಿ ತಂಡ ರಚನೆ ಮತ್ತು ನಾಯಕರ ನೇಮಕ ನಡೆಯುತ್ತಿರುವ ಈ ಹೊತ್ತಿನಲ್ಲಿ ಯಾವುದೇ ಆಟಗಾರನ ಸಾಮರ್ಥ್ಯವನ್ನು ಸಮರ್ಥವಾಗಿ ಅಳೆಯುವ ಮಾನದಂಡವೂ ಇರಬೇಕು. ಟೆಸ್ಟ್ ಕ್ರಿಕೆಟ್ ಉಳಿದು ಬೆಳೆಯಬೇಕಾದರೆ ದೇಶಿ ಕ್ರಿಕೆಟ್‌ನ ಬೇರುಗಳೂ ಗಟ್ಟಿಯಾಗಿರಬೇಕು. ಕೇವಲ ಐಪಿಎಲ್‌ನಲ್ಲಿ ಫ್ರ್ಯಾಂಚೈಸಿಗಳ ಗಮನ ಸೆಳೆಯಲು ಆಡಿಸುವ ಸೀಮಿತ ಓವರ್‌ಗಳ ದೇಶಿ ಕ್ರಿಕೆಟ್ ಟೂರ್ನಿಗಳಿಗಿಂತ ರಣಜಿ ಟ್ರೋಫಿ ಟೂರ್ನಿಗೆ ಆದ್ಯತೆ ಸಿಗಬೇಕು. ಭಾರತ ಕ್ರಿಕೆಟ್‌ನ ಮೂಲಬೇರು ಇರುವುದೇ ಈ ಟೂರ್ನಿಯಲ್ಲಿ. ಇದರಲ್ಲಿ ಮಿಂಚಿದರೆ ಟೆಸ್ಟ್ ತಂಡದಲ್ಲಿ ಜಾಗ ಸಿಗುವ ಭರವಸೆ ಆಟಗಾರರಲ್ಲಿ ಮೂಡಬೇಕು. ಮನೀಷ್ ಪಾಂಡೆಯಂತಹ ಉದಾಹರಣೆಗಳು ಪದೇ ಪದೇ ಸೃಷ್ಟಿಯಾದರೆ, ಭವಿಷ್ಯದ ಆಟಗಾರರು ಕೇವಲ ಬಿಳಿಚೆಂಡಿನ ಹಿಂದೆ ಮಾತ್ರಓಡುವಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.