ADVERTISEMENT

ಲೇಖನ: ಭಾರತದ ವೈಮಾನಿಕ ಸ್ವಾವಲಂಬನೆಗೆ ಶಕ್ತಿ ತುಂಬಿದ ಹಂಸ-3 ತರಬೇತಿ ವಿಮಾನ

ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನಗಳ ಸಚಿವಾಲಯದ ರಾಜ್ಯ ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರ ಲೇಖನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2025, 10:36 IST
Last Updated 7 ಏಪ್ರಿಲ್ 2025, 10:36 IST
<div class="paragraphs"><p>ಹಂಸ-3 ತರಬೇತಿ ವಿಮಾನ</p></div>

ಹಂಸ-3 ತರಬೇತಿ ವಿಮಾನ

   

ಭಾರತವು ಸದ್ಯ ಜಾಗತಿಕವಾಗಿ ಮೂರನೇ ಅತಿದೊಡ್ಡ ದೇಶೀಯ ವೈಮಾನಿಕ ಮಾರುಕಟ್ಟೆಯಾಗಿದೆ. ಈ ದಶಕದ ಅಂತ್ಯದ ವೇಳೆಗೆ, ಇದು ಅಚ್ಚರಿ ಮೂಡಿಸುವ ರೀತಿಯಲ್ಲಿ ಸುಮಾರು ಮುನ್ನೂರು ಮಿಲಿಯನ್ ದೇಶೀಯ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಆ ಮೂಲಕ ಜಾಗತಿಕ ವೈಮಾನಿಕ ವಲಯದಲ್ಲಿ ಶಕ್ತಿ ಕೇಂದ್ರವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ.

ಪ್ರಯಾಣಿಕರ ಸಂಖ್ಯೆಯಲ್ಲಿನ ಈ ಗಮನಾರ್ಹ ಬೆಳವಣಿಗೆಯು ವಿಸ್ತರಣೆಯಾಗುತ್ತಿರುವ ವೈಮಾನಿಕ ಉದ್ಯಮಕ್ಕಿಂತ ಹೆಚ್ಚಿನದನ್ನು ಪ್ರತಿಬಿಂಬಿಸುತ್ತದೆ. ಇದು ಲಕ್ಷಾಂತರ ಭಾರತೀಯರ ಹೆಚ್ಚುತ್ತಿರುವ ಆಕಾಂಕ್ಷೆಗಳನ್ನೇ ಸೂಚಿಸುತ್ತದೆ.

ADVERTISEMENT

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ರಾಜಕೀಯ ವ್ಯವಸ್ಥೆಯು ಭಾರತವನ್ನು ಮುಂಚೂಣಿಯ ರಾಷ್ಟ್ರಗಳ ಸ್ಥಾನದಲ್ಲಿರಿಸಲು ಮತ್ತು ಜಾಗತಿಕ ಮಾನದಂಡಗಳವರೆಗೆ ಕೊಂಡೊಯ್ಯಲು ನಿರ್ಧರಿಸಿದೆ. ಮತ್ತು ವೇಗವಾಗಿ ವಿಸ್ತರಿಸುತ್ತಿರುವ ವೈಮಾನಿಕ ಅಗತ್ಯತೆಗಳನ್ನು ನಿರ್ವಹಿಸಲು ದೇಶವು ಸಜ್ಜಾಗುತ್ತಿರುವಾಗ ಅತ್ಯಂತ ತುರ್ತು ಅಗತ್ಯವೆಂದರೆ ಪೈಲಟ್‌ಗಳ ಬೇಡಿಕೆ, ಇದು ಯಶೋಗಾಥೆಯ ಪಥವನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಅಂಶವಾಗಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಇತ್ತೀಚಿನ ವರದಿಗಳ ಪ್ರಕಾರ, ಭಾರತದಲ್ಲಿ ಪೈಲಟ್‌ಗಳ ಬೇಡಿಕೆ ಮುಂದಿನ ಎರಡು ದಶಕಗಳಲ್ಲಿ ಕನಿಷ್ಠ ಐದು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಇದು ಸದ್ಯದ ಎಣಿಕೆಗಿಂತ ಗಮನಾರ್ಹ ಹೆಚ್ಚಳವಾಗಿದೆ. ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಪರಿಚಯಿಸಿದ ದೂರದೃಷ್ಟಿಯ ಉಪಕ್ರಮಗಳಿಂದ ಉತ್ತೇಜಿಸಲ್ಪಟ್ಟ ಭಾರತದ ನಾಗರಿಕ ವಿಮಾನಯಾನ ವಲಯವು ಪ್ರಯಾಣಿಕರ ದಟ್ಟಣೆ ಮತ್ತು ಫ್ಲೀಟ್ ವಿಸ್ತರಣೆಯಲ್ಲಿ ತ್ವರಿತ ಬೆಳವಣಿಗೆಯನ್ನು ಕಾಣುತ್ತಿರುವುದೇ ಈ ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ.

ಸದ್ಯ ಭಾರತವು 38 ವೈಮಾನಿಕ ತರಬೇತಿ ಸಂಸ್ಥೆಗಳನ್ನು (ಎಫ್‌ಟಿಎಒಎಸ್) ಹೊಂದಿದೆ. ಕೌಶಲ್ಯಪೂರ್ಣ ಪೈಲಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ದೇಶದಲ್ಲಿ ದೊಡ್ಡ ಮತ್ತು ವಿಶ್ವ ದರ್ಜೆಯ ಹಾರಾಟದ ತರಬೇತಿಗೆ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯವಾಗಿದೆ.

ಜೊತೆಗೆ ತರಬೇತುದಾರ ವಿಮಾನಗಳ ಸಂಖ್ಯೆಯಲ್ಲಿ ಪ್ರಮಾಣಾನುಗುಣ ಹೆಚ್ಚಳವೂ ಇದೆ. ಸದ್ಯ ಭಾರತದಲ್ಲಿನ ಸಣ್ಣ ನಾಗರಿಕ ವಿಮಾನ ಮಾರುಕಟ್ಟೆಯು ಹೆಚ್ಚಾಗಿ ವಿದೇಶಿ ಕಂಪನಿಗಳಿಂದ ನಿಯಂತ್ರಿಸಲ್ಪಡುತ್ತಿವೆ ಮತ್ತು ದೇಶೀಯ ಸಂಸ್ಥೆಗಳಿಗೆ ಯಾವುದೇ ಗಮನಾರ್ಹ ನೆಲೆಯಿಲ್ಲ.

ದೇಶ ಸಂಪೂರ್ಣವಾಗಿ ಸ್ವಾವಲಂಬಿಯಾಗಲು ನಮಗೆ ಸ್ಥಳೀಯ ನಾಗರಿಕ ವಿಮಾನ ಅಭಿವೃದ್ಧಿ ಸಂಸ್ಥೆಗಳ ಅಗತ್ಯವಿದೆ. ಇದು ರಾಷ್ಟ್ರದ ಪರಿಣತಿ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ ಹಾಗೂ ಭಾರತವನ್ನು ಏರೋಸ್ಪೇಸ್ ಘಟಕ ಉತ್ಪಾದನೆಗೆ ಆದ್ಯತೆಯ ತಾಣವಾಗಿ ಮಾಡುತ್ತದೆ. ಆರಂಭಿಕ ವಿನ್ಯಾಸದಿಂದ ಅಂತಿಮ ಉತ್ಪಾದನೆಯವರೆಗೆ ಪ್ರತಿ ಹಂತದಲ್ಲೂ ಶ್ರೇಷ್ಠತೆಯನ್ನು ಸಾಧಿಸುವ ಮೂಲಕ ಅಂತಹ ಪ್ರಯತ್ನಗಳು ದೇಶದ ವೈಮಾನಿಕ ಉದ್ಯಮವನ್ನು ಗಮನಾರ್ಹವಾಗಿ ಬಲವರ್ಧನೆಗೊಳಿಸುತ್ತವೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ-ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳು (CSIR-NAL) ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ವಾಣಿಜ್ಯ ಹೆಸರಿನ ಹಂಸ-3 ವಿಮಾನವು ಪೈಲಟ್‌ ಸಮುದಾಯದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ.

ಅತ್ಯಾಧುನಿಕ ಗಾಜಿನ ಕಾಕ್‌ಪಿಟ್, ಇಂಧನ-ಸಮರ್ಥ ರೋಟಾಕ್ಸ್ 912 iSc3 ಸ್ಪೋರ್ಟ್ ಎಂಜಿನ್ ಮತ್ತು 620 ನಾಟಿಕಲ್ ಮೈಲುಗಳ ವ್ಯಾಪ್ತಿ ಮತ್ತು ಏಳು ಗಂಟೆಗಳ ಸಹಿಷ್ಣುತೆಯಂತಹ ವರ್ಧಿತ ಕಾರ್ಯಕ್ಷಮತೆಯ ಅಂಶಗಳನ್ನು ಒಳಗೊಂಡಿರುವ ಈ ಹಂಸ ವಿಮಾನವು ಆಧುನಿಕ ತರಬೇತುದಾರರ ವೈಮಾನಿಕ ಮಾನದಂಡಗಳನ್ನು ಮರು ವ್ಯಾಖ್ಯಾನಿಸುತ್ತದೆ.

ಪ್ರಮುಖ ಸರ್ಟಿಫಿಕೆಟ್‌ಗಳನ್ನು ಪಡೆದ ನಂತರ, ಹಂಸ-3(ಎನ್ ಜಿ) ಈಗ ಹಗಲು ಮತ್ತು ರಾತ್ರಿ ಕಾರ್ಯಾಚರಣೆಗಳಿಗೆ ಸರ್ಟಿಫೈಡ್ ಆಗಿದೆ. ಐಎಫ್‌ಆರ್ ಕಾರ್ಯಾಚರಣೆಗಳಿಗೆ ಅದರ ಸಾಮರ್ಥ್ಯಗಳನ್ನು ವಿಸ್ತರಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸಿಎಸ್‌ಐಆರ್-ಎನ್ ಎಎಲ್ ನ (CSIR-NAL) ನ ಹಂಸ-3(ಎನ್ ಜಿ) ಭಾರತದ ವೈಮಾನಿಕ ಮಹತ್ವಾಕಾಂಕ್ಷೆಗಳನ್ನು ಮುನ್ನಡೆಸುವಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ. ಈ ದಶಕದ ಅಂತ್ಯದ ವೇಳೆಗೆ ಭಾರತವನ್ನು ಜಾಗತಿಕ ವೈಮಾನಿಕ ತಾಣವನ್ನಾಗಿ ರೂಪಿಸುವ ಮತ್ತು 2047 ರ ವೇಳೆಗೆ ವಿಕಸಿತ ಭಾರತದ ವಿಶಾಲ ಗುರಿಯನ್ನು ಸಾಧಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಗೆ ಇದು ಸೂಕ್ತ ರೀತಿಯಲ್ಲಿ ಹೊಂದಿಕೆಯಾಗುತ್ತದೆ.

ಸಿಎಸ್ಐಆರ್-ಎನ್ಎಎಲ್ ಇತ್ತೀಚೆಗೆ ಕೈಗಾರಿಕಾ ಪಾಲುದಾರರೊಂದಿಗೆ ಹಂಸ-3 ವಿಮಾನಗಳ ಉತ್ಪಾದನೆಯಲ್ಲಿ ಸಹಭಾಗಿತ್ವ ಮಾಡಿಕೊಳ್ಳುವ ಮೂಲಕ ದೇಶೀಯ ಮತ್ತು ಅಂತಾರಾಷ್ಟ್ರೀಯ ಬೇಡಿಕೆಯನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ.

ಬೆಂಗಳೂರಿನಲ್ಲಿ ಸ್ಥಾಪಿಸಲಿರುವ ಉತ್ಪಾದನಾ ಸೌಲಭ್ಯವು ವಾರ್ಷಿಕವಾಗಿ 36 ವಿಮಾನಗಳನ್ನು ಉತ್ಪಾದಿಸಲು ಆರಂಭಿಸುತ್ತದೆ. ಬೆಳೆಯುತ್ತಿರುವ ಅಗತ್ಯತೆಗಳನ್ನು ಪೂರೈಸಲು 72 ವಿಮಾನಗಳ ಉತ್ಪಾದನೆಗೆ ವಿಸ್ತರಿಸಲಾಗುವುದು. ಭಾರತದ ಮೊದಲ ಸಂಪೂರ್ಣ ಸಂಯೋಜಿತ ಏರ್‌ಫ್ರೇಮ್ ವಿಮಾನವಾಗಿ, ಹಂಸ-3 ಒಂದು ಗೇಮ್-ಚೇಂಜರ್ ಆಗಿದ್ದು, ಫ್ಲೈಯಿಂಗ್ ಕ್ಲಬ್‌ಗಳು ಮುಂದಿನ ಪೀಳಿಗೆಯ ಪೈಲಟ್‌ಗಳಿಗೆ ತರಬೇತಿ ನೀಡಲು ಅನುವು ಮಾಡಿಕೊಡುತ್ತದೆ ಮತ್ತು ಹವ್ಯಾಸಿಯಾಗಿ ಹಾರಾಟ ಮಾಡುವ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ.

ತರಬೇತಿಯ ಹೊರತಾಗಿಯೂ ಹಂಸ-3 ಕಣ್ಗಾವಲು, ವೈಮಾನಿಕ ಛಾಯಾಗ್ರಹಣ, ಪರಿಸರ ಮೇಲ್ವಿಚಾರಣೆ ಮತ್ತು ಇನ್ನೂ ಹೆಚ್ಚಿನ ಕಾರ್ಯಗಳಿಗೆ ಬಳಸಿಕೊಳ್ಳುವ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಇದರ ನಿಯೋಜನೆಯು ಸಣ್ಣ ವಿಮಾನ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ, ಸ್ಥಳೀಯ ಮೂಲಸೌಕರ್ಯವನ್ನು ಉತ್ತೇಜಿಸುತ್ತದೆ ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ವೈಮಾನಿಕ ಪೂರೈಕೆ ಸರಪಳಿಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ.

ಹಂಸ-3 ಪ್ರಧಾನ ಮಂತ್ರಿ ಅವರ ಆತ್ಮನಿರ್ಭರ ಭಾರತ ದೂರದೃಷ್ಟಿಯನ್ನು ಸಾಕಾರಗೊಳಿಸುವತ್ತ ಭಾರತದ ಪ್ರಗತಿಯನ್ನು ಸಂಕೇತಿಸುತ್ತದೆ. ವೈಮಾನಿಕ ವಲಯವು ದೇಶದ ಸ್ವಾವಲಂಬನೆ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಂಸ ವಿಮಾನವು ಕಡಿಮೆ ವೆಚ್ಚದ ಮತ್ತು ಬಹುಮುಖ ತರಬೇತಿ ವಿಮಾನವಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳುತ್ತಿದ್ದಂತೆಯೆ, ಇದು ಏರೋಸ್ಪೇಸ್ ಉತ್ಪಾದನೆಯಲ್ಲಿ ಜಾಗತಿಕವಾಗಿ ಸ್ಪರ್ಧಿಸಲು ಭಾರತದ ಸಿದ್ಧತೆಯನ್ನು ಸಹ ಸೂಚಿಸುತ್ತದೆ.

CSIR-NAL ಮತ್ತು ಕೈಗಾರಿಕಾ ಪಾಲುದಾರರ ನಡುವಿನ ಸಹಯೋಗವು ಸದ್ಯದ ಅಗತ್ಯಗಳನ್ನು ಪೂರೈಸುವ ಬಗ್ಗೆ ಮಾತ್ರವಲ್ಲ, ಭಾರತವು ವೈಮಾನಿಕ, ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ನಾಯಕನಾಗಿ ಹೊರಹೊಮ್ಮುವ ಭವಿಷ್ಯವನ್ನು ರೂಪಿಸುವ ಬಗ್ಗೆಯೂ ಒತ್ತು ನೀಡುತ್ತದೆ.

ಭಾರತದ ವೈಮಾನಿಕ ಉದ್ಯಮವು ಅಸಾಮಾನ್ಯ ಬೆಳವಣಿಗೆಯ ಹಾದಿಯಲ್ಲಿದೆ. ಸದೃಢ ಉಪಕ್ರಮಗಳು, ಹಂಸ -3 ನಂತಹ ನವೀನ ತಂತ್ರಜ್ಞಾನಗಳು ಮತ್ತು ಪಾಲುದಾರರ ಸಾಮೂಹಿಕ ಪ್ರಯತ್ನದಿಂದ ದೇಶವು ತನ್ನನ್ನು ತಾನು ಜಾಗತಿಕ ವೈಮಾನಿಕ ತಾಣವಾಗಿ ಉನ್ನತೀಕರಿಸಲು ಸಜ್ಜಾಗಿದ್ದು, ದೃಢವಾದ ಮತ್ತು ಸ್ವಾವಲಂಬಿ ಏರೋಸ್ಪೇಸ್ ಪೂರಕ ವ್ಯವಸ್ಥೆಯ ಆಕಾಂಕ್ಷೆಗಳನ್ನು ಪೂರೈಸುತ್ತದೆ.

***

ಡಾ.ಜಿತೇಂದ್ರ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.