ಹುಲಿ ( ಸಂಗ್ರಹ ಚಿತ್ರ)
ಪುಣ್ಯಕೋಟಿಯ ಕಥೆಯನ್ನು ಈಗ ಬದಲಿಸಬೇಕಾಗಿದೆ. ಹಬ್ಬಿದಾ ಮಲೆ ಮಧ್ಯದೊಳಗಿನ ವ್ಯಾಘ್ರಗಳಿಗೆ ಹಸಿವಿದೆಯೇ ಹೊರತು, ಸ್ವಾರ್ಥವಿಲ್ಲ. ಇತ್ತೀಚೆಗೆ ವಿಷಪ್ರಾಶನಕ್ಕೆ ತುತ್ತಾದ ಐದು ಹುಲಿಗಳು– ಮನುಷ್ಯರ ಸ್ವಾರ್ಥ, ಸಣ್ಣತನ ಹಾಗೂ ಕ್ರೌರ್ಯದ ಕಥೆ ಹೇಳುವಂತಿವೆ ಹಾಗೂ ಮನುಷ್ಯರ ಎದುರು ಹುಲಿಗಳೇ ಪುಣ್ಯಕೋಟಿಗಳಂತೆ ಕಾಣಿಸುತ್ತಿವೆ.
ಆ ದೃಶ್ಯ, ಬಾಲಿವುಡ್‌ನ ‘ಶೋಲೆ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಠಾಕೂರ್ ತನ್ನ ಮನೆಗೆ ರಜೆಯ ಮೇಲೆ ಬಂದಾಗ ಕಂಡ ಭೀಭತ್ಸ ದೃಶ್ಯದ ಹಾಗಿತ್ತು. ನೀರವ ಮೌನ. ಖಾಲಿಯಾಗಿ ತೂಗುತ್ತಿರುವ ಉಯ್ಯಾಲೆ ಮತ್ತು ಗಬ್ಬರ್ ಸಿಂಗ್‌ನಿಂದ ಹತ್ಯೆಯಾದ ಮಕ್ಕಳು. ‘ಶೋಲೆ’ ಸಿನಿಮಾದ ಸನ್ನಿವೇಶ ಮರುಕಳಿಸಿತೇ ಅನ್ನಿಸಿತು ನನಗೆ. ಇದ್ದುದು ಒಂದೇ ವ್ಯತ್ಯಾಸ: ಸಿನಿಮಾದಲ್ಲಿ ಬಲಿಯಾಗಿದ್ದುದು ಮಕ್ಕಳು; ಇಲ್ಲಿ ಹತ್ಯೆ ನಡೆದಿದ್ದುದು ತಾಯಿ ಹುಲಿ ಹಾಗೂ ಅದರ ಮರಿಗಳದು.
ಚಾಮರಾಜನಗರ ಜಿಲ್ಲೆಯ ರಾಮಾಪುರದಿಂದ ಕೊಪ್ಪಕ್ಕೆ ಹೋಗುವ ರಸ್ತೆಯ ಕೇವಲ ಮೂವತ್ತು ಮೀಟರ್ ಒಳಗೆ, ಒಂದು ವರ್ಷಕ್ಕೂ ಕಡಿಮೆ ವಯಸ್ಸಿನ ಎರಡು ಹುಲಿ ಮರಿಗಳ ಕಳೇಬರವಿದ್ದವು. ಅವುಗಳ ಉತ್ತರಕ್ಕೆ ಇನ್ನೊಂದು ಮರಿ, ಪೂರ್ವಕ್ಕೆ ಮತ್ತೊಂದು ಮರಿ. ಈಶಾನ್ಯದಲ್ಲಿ ಈ ನಾಲ್ಕೂ ಮರಿಗಳನ್ನು ಪೋಷಿಸುತ್ತಿದ್ದ ತಾಯಿಯ ಕಳೇಬರ. ಆ ತಾಯಿಯ ಕಳೇಬರ ಒಂದು ದೊಡ್ಡ ಸಮತಟ್ಟಾದ ಬಂಡೆಯ ಮೇಲಿತ್ತು. ಅಲ್ಲಿಂದ ಕೇವಲ ಹತ್ತು ಮೀಟರ್ ದೂರದಲ್ಲಿ ನೀರಿನ ಮೂರು ಪುಟ್ಟಮಡುಗಳು. ವಿಷಯುಕ್ತ ದನದ ಮಾಂಸವನ್ನು ತಿಂದ ತಾಯಿ ನಿರ್ಜಲೀಕರಣಗೊಂಡು, ಮಡುವಿನಲ್ಲಿ ನೀರು ಕುಡಿಯಲು ಬಂದು ಉಸಿರುಗಟ್ಟಿ ಅಲ್ಲಿಯೇ ಸತ್ತಿರಬಹುದು. ತನ್ನಷ್ಟೇ ಅಥವಾ ತನಗಿಂತ ಹೆಚ್ಚು ಕಷ್ಟಪಡುತ್ತಿದ್ದ ಮರಿಗಳಿಗೆ ಸಾಂತ್ವನ ಹೇಳುವಷ್ಟು ಅಥವಾ ಧೈರ್ಯ ತುಂಬುವಷ್ಟು ಸಮಯವನ್ನೂ ವಿಷ ಆ ತಾಯಿಗೆ ನೀಡಿದಂತಿರಲಿಲ್ಲ.
ನನ್ನ ದುರದೃಷ್ಟವೆಂದರೆ, ಕಣ್ಣೆದುರು ಜೀವ ಕಳೆದುಕೊಂಡು ಬಿದ್ದಿದ್ದ ತಾಯಿಯನ್ನು ಅದು ಪುಟ್ಟ ಮರಿಯಾಗಿದ್ದಾಗಿನಿಂದ ಗಮನಿಸಿದ್ದುದು. ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಸೆರೆಯಾಗಿ, ತನ್ನ ಜೀವನದ ಬಹುಮುಖ್ಯವಾದ ಭಾಗವನ್ನು ಅದು ನಮ್ಮ ಮುಂದೆ ಸಾಕಷ್ಟು ವರ್ಷಗಳ ಕಾಲ ತೆರೆದಿಟ್ಟಿತ್ತು; ಹುಲಿಗಳ ಸಂತತಿಗೆ ತಾನು ನೀಡಿದ ಮಹತ್ವದ ಕೊಡುಗೆಯನ್ನು ನಮಗೆ ಮನವರಿಕೆ ಮಾಡಿತ್ತು. ಈ ಗಮನಿಸುವಿಕೆ ಯಿಂದಾಗಿಯೇ, ನನಗೆ ಈ ಹುಲಿಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆದುಬಿಟ್ಟಿತ್ತು.
ನತದೃಷ್ಟ ಹುಲಿ, 2014ರ ನವೆಂಬರ್‌ನಲ್ಲಿ ಆರೆಂಟು ತಿಂಗಳ ಮರಿಯಾಗಿತ್ತು. ಮಲೆ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ. ಪಾಳ್ಯ ವಲಯದಲ್ಲಿ ಮೊದಲ ಬಾರಿಗೆ ಇದರ ಇರುವಿಕೆ, ಅದರ ಇಬ್ಬರು ಒಡಹುಟ್ಟಿದವರು ಮತ್ತು ತಾಯಿಯೊಡನೆ ನಮ್ಮ ಗಮನಕ್ಕೆ ಬಂದಿತ್ತು. ನಂತರ 2016, 2018, 2019 ಮತ್ತು 2022ರಲ್ಲಿ ನಿರಂತರವಾಗಿ ನಮ್ಮ ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಕಾಣಿಸಿಕೊಂಡಿತ್ತು. ತಾಯಿಯಿಂದ ಬೇರೆಯಾದ ಮೇಲೆ, ತಾನು ಹುಟ್ಟಿದ ಪ್ರದೇಶದ ಸುತ್ತಮುತ್ತಲೇ ತನ್ನ ವಸಾಹತು ಸ್ಥಾಪಿಸಿಕೊಂಡಿತ್ತು. ಇದರ ತಾಯಿ ತನ್ನ ಸರಹದ್ದಿನಲ್ಲೂ ಮಗಳಿಗೆ ಅವಕಾಶ ಮಾಡಿಕೊಟ್ಟಿತ್ತು. 2022ರಲ್ಲಂತೂ ತನ್ನ ಸುಮಾರು 2 ತಿಂಗಳು ವಯಸ್ಸಿನ ನಾಲ್ಕು ಮುದ್ದಾದ ಮರಿಗಳೊಡನೆ ದರ್ಶನ ನೀಡಿ, ತಾನು ತನ್ನ ಪ್ರಭೇದದ ಸಂರಕ್ಷಣೆಗೆ ನೀಡುತ್ತಿರುವ ಕೊಡುಗೆಯನ್ನು ಪ್ರಪಂಚಕ್ಕೆ ತೋರಿಸಿಕೊಟ್ಟಿತ್ತು. ಈ ತಾಯಿ ಹುಲಿ, ಜೂನ್ ಕೊನೆಯ ವಾರದಲ್ಲಿ ಕಳೇಬರವಾಗಿ ಸಿಕ್ಕಾಗ ಮತ್ತೆ 4 ಮರಿಗಳನ್ನು ಹೊಂದಿತ್ತು. 2014ರಲ್ಲಿ ಸುಮಾರು 6–8 ತಿಂಗಳ ಮರಿಯಾಗಿದ್ದುದು, ಕಳೇಬರವಾಗಿ ಸಿಕ್ಕಾಗ ಇದರ ಅಂದಾಜು ವಯಸ್ಸು 11ರಿಂದ 12 ವರ್ಷ.
ಹುಲಿಗಳು ಸುಮಾರು ಮೂರೂವರೆ ವರ್ಷಕ್ಕೆ ಸಂತಾನೋತ್ಪತ್ತಿಯ ವಯಸ್ಸಿಗೆ ಬರುತ್ತವೆ ಮತ್ತು ಮೂರರಿಂದ ಮೂರೂವರೆ ವರ್ಷಕ್ಕೊಮ್ಮೆ ಮರಿ ಹಾಕುತ್ತವೆ. ಒಂದು ಸೂಲಿಗೆ ಸರಾಸರಿ ಎರಡು ಅಥವಾ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತವೆ. ಅಂದರೆ, ಈ ಹೆಣ್ಣು ಹುಲಿ ಕನಿಷ್ಠ ಮೂರು ಬಾರಿ ಮರಿಗಳನ್ನು ಹಾಕಿರಬೇಕು. ನಮಗೆ ತಿಳಿದಿರುವ ಹಾಗೆಯೇ ಇದಕ್ಕೆ ಎರಡು ಬಾರಿ ನಾಲ್ಕು ಮರಿಗಳಿದ್ದವು (2022ರಲ್ಲಿ ಮತ್ತು 2025ರಲ್ಲಿ). 2017 ಮತ್ತು 2019ರಲ್ಲಿ ನಮ್ಮ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಯಾದಾಗ ಸ್ತನ್ಯಗ್ರಂಥಿಗಳು ಉಬ್ಬಿದ್ದುದು ಆಗಲೂ ಇದಕ್ಕೆ ಮರಿಗಳಿದ್ದವು ಎಂಬುದನ್ನು ಸೂಚಿಸುತ್ತಿತ್ತು. ಈ ಮಾಹಿತಿಗಳ ಆಧಾರದ ಮೇಲೆ ನೋಡುವುದಾದರೆ, ತನ್ನ ಜೀವಿತಾವಧಿಯಲ್ಲಿ ಕನಿಷ್ಠವೆಂದರೂ 15 ಮರಿಗಳ ನ್ನಾದರೂ ಈ ತಾಯಿ ಹುಲಿ ಪ್ರಪಂಚಕ್ಕೆ ಕೊಡುಗೆ ನೀಡಿದೆ.
ತಾಯಿಯಾಗಿ ಈ ಹುಲಿ ಬಹಳ ಸಾಮರ್ಥ್ಯವುಳ್ಳ ಜೀವಿಯಾಗಿತ್ತು. ನೈಸರ್ಗಿಕ ಬಲಿಪ್ರಾಣಿಗಳ ಸಾಂದ್ರತೆ ಕಡಿಮೆಯಿರುವ ಪ್ರದೇಶದಲ್ಲಿ ಮರಿಗಳನ್ನು ಬಹು ಕಷ್ಟಪಟ್ಟು ಬೆಳೆಸಲು ಪ್ರಯತ್ನಿಸಿದೆ. ದುರದೃಷ್ಟವಶಾತ್, ಮುಂದಿನ ಮೂರ್ನಾಲ್ಕು ವರ್ಷಗಳಾದರೂ ಬದುಕಿ, ಇನ್ನೂ ಒಂದಾದರೂ ಸೂಲನ್ನು ಪ್ರಪಂಚಕ್ಕೆ ಕೊಡಬಹುದಾಗಿದ್ದ ಈ ಪ್ರೌಢ– ಅನುಭವಿ ತಾಯಿಯನ್ನು ಮಾನವಕುಲ ಬಲಿ ತೆಗೆದುಕೊಂಡು ಬಿಟ್ಟಿತು.
ತಾಯಿಯ ಕಥೆ ಹೀಗಾದರೆ, ಮರಿಗಳ ಸಾವು ಈ ಭೂಪ್ರದೇಶದ ಹುಲಿಗಳ ಸಂತತಿಯ ಭವಿಷ್ಯವನ್ನು ಚಿವುಟಿದೆ. 10–11 ತಿಂಗಳ ವಯಸ್ಸಿನ ನಾಲ್ಕು ಮರಿಗಳಲ್ಲಿ ಮೂರು ಹೆಣ್ಣು ಮರಿಗಳಿದ್ದವು. ಇವು, ಮುಂದಿನ ಎರಡು ವರ್ಷಗಳಲ್ಲಿ ಹೊಸ ಕುಟುಂಬಗಳನ್ನು ಪ್ರಾರಂಭಿಸುತ್ತಿದ್ದವು ಹಾಗೂ ತಮ್ಮದೇ ಮರಿಗಳನ್ನು ಹುಲಿಗಳ ಪ್ರಪಂಚಕ್ಕೆ ಪರಿಚಯಿಸುತ್ತಿದ್ದವು. ಹುಲಿಗಳ ಸೂಲಿನ ಸರಾಸರಿ ಗಾತ್ರವನ್ನೇ ಆಧಾರ ಆಗಿರಿಸಿಕೊಂಡರೆ, ಈ ಒಂದೊಂದು ಮರಿಯೂ ಮಹದೇಶ್ವರಬೆಟ್ಟ ಮತ್ತು ಅದರ ಸುತ್ತಮುತ್ತಲಿನ ಕಾಡುಗಳಿಗೆ ತಮ್ಮ ಜೀವಿತಾವಧಿಯಲ್ಲಿ 12ರಿಂದ 15 ಮರಿಗಳನ್ನು ಕೊಡುಗೆ ನೀಡುತ್ತಿದ್ದವು. ಮೂರು ಮರಿಗಳಿಂದ ಸುಮಾರು 36–45 ಸದೃಢ ಹುಲಿಗಳು ಈ ಸುಂದರ ಭೂಪ್ರದೇಶವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳು ತ್ತಿದ್ದವು.
2013ರ ಮೇ ತಿಂಗಳಲ್ಲಿ, ಈ ಪ್ರದೇಶವನ್ನು ಮಲೆ ಮಹದೇಶ್ವರ ವನ್ಯಜೀವಿಧಾಮವೆಂದು ಘೋಷಿಸಿ, ಅಧಿಸೂಚನೆ ಹೊರಡಿಸಲಾಯಿತು. ವನ್ಯಜೀವಿಧಾಮ ಎಂದು ಘೋಷಣೆಯಾಗಿ ಹನ್ನೆರಡು ವರ್ಷಗಳ ನಂತರ ನಡೆದಿರುವ ಈ ದಾರುಣ ಘಟನೆ, ಸಮಾಜದ ಇಷ್ಟು ವರ್ಷಗಳ ಶ್ರಮವನ್ನು ಕನಿಷ್ಠ 10 ವರ್ಷ ಹಿಂದಕ್ಕೆ ದೂಕಿದೆ. ಇದಕ್ಕೆ ಯಾರನ್ನು ದೂರುವುದು:
ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡದೆ, ಅಗತ್ಯ ಅನುದಾನವನ್ನು ಸಮಯಕ್ಕೆ ಸರಿಯಾಗಿ ಕೊಡದ ಸರ್ಕಾರವನ್ನೇ? ಈ ವನ್ಯಜೀವಿಧಾಮದ ಕೇಂದ್ರಸ್ಥಾನ ಕೊಳ್ಳೇಗಾಲಕ್ಕೆ ಬರಲು ಹೆಚ್ಚು ಆಸಕ್ತಿ ತೋರದ ವಿಭಾಗ ಅಧಿಕಾರಿಗಳನ್ನೇ? ಕರ್ತವ್ಯದ ಸ್ಥಳಕ್ಕೆ ಬಂದರೂ, ವನ್ಯಜೀವಿ ಸಂರಕ್ಷಣೆ ಬಗ್ಗೆ ಹೆಚ್ಚು ಆಸಕ್ತಿ– ಬದ್ಧತೆಯಿಲ್ಲದೆ, ಕಾಡೇ ತಿರುಗದೆ, ಕೇವಲ ಗಣಕಯಂತ್ರದಲ್ಲೇ ತಮ್ಮ ವನ್ಯಜೀವಿ ಜ್ಞಾನವನ್ನು ಹಿರಿಯ ಅಧಿಕಾರಿಗಳು, ಮಾಧ್ಯಮದವರು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶಿಸುವ ಕೆಲವು ಅಧಿಕಾರಿಗಳನ್ನೇ? ಮುಂಚೂಣಿ ಸಿಬ್ಬಂದಿಯ ಸಂಬಳವನ್ನು ಬಿಡುಗಡೆ ಮಾಡದ ಅಧಿಕಾರಿಗಳನ್ನೇ? ಸಂರಕ್ಷಣೆಗೆ ಒತ್ತು ನೀಡದೆ, ರಸ್ತೆ, ಚೆಕ್ ಡ್ಯಾಂ, ಕಟ್ಟಡ ಕಟ್ಟುವ ಬಗ್ಗೆಯೇ ಹೆಚ್ಚು ಆಸಕ್ತಿ ತೋರುವ ಕೆಲವು ಅಧಿಕಾರಿಗಳನ್ನೇ? ಹೃದಯ ವಿದ್ರಾವಕ ಘಟನೆಯ ನಂತರವೂ, ‘ಆಗಿದ್ದು ಆಗಿಹೋಯ್ತು, ನಮ್ಮವರನ್ನು ರಕ್ಷಿಸಬೇಕು’ ಎಂಬ ಧೋರಣೆ ಹೊಂದಿರುವ ಅಧಿಕಾರಿ ವರ್ಗವನ್ನೇ? ಮಾನವ– ವನ್ಯಜೀವಿ ಸಂಘರ್ಷಕ್ಕೆ ಜಾನುವಾರು, ಬೆಳೆಗಳನ್ನು ಕಳೆದುಕೊಂಡು, ಸರ್ಕಾರದಿಂದ ಮಾರುಕಟ್ಟೆ ಆಧಾರಿತ ಪರಿಹಾರ ಸಕಾಲಕ್ಕೆ ಬಿಡುಗಡೆಯಾಗದೆ ಹತಾಶೆಯಿಂದ ಇಂಥ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಜನರನ್ನೇ?
ದೂರಬಹುದಾದವರ ಪಟ್ಟಿ ಮತ್ತೂ ಬೆಳೆಯುತ್ತದೆ: ಕಾಡು ಹಾಗೂ ವನ್ಯಜೀವಿಗಳನ್ನು ಜನರೇ ಉಳಿಸುತ್ತಾರೆ ಹಾಗೂ ಅರಣ್ಯಾಧಿಕಾರಿ ಗಳು ಮತ್ತು ಸರ್ಕಾರದ್ದು ಪ್ರಯೋಜನವಿಲ್ಲದ ಸರ್ವಾಧಿಕಾರದ ವ್ಯವಸ್ಥೆ ಎಂದು ಕೆಲವು ಸ್ವಯಂಸೇವಾ ಸಂಸ್ಥೆಗಳು ದೂರುತ್ತವೆ. ಪ್ರಶಸ್ತಿಗಳು ಹಾಗೂ ಧನಸಹಾಯವನ್ನು ಪಡೆಯುವ ಇವರು, ಸಂದಿಗ್ಧ ಪರಿಸ್ಥಿತಿಗಳಲ್ಲಿ ನಾಪತ್ತೆ ಆಗಿಬಿಡುತ್ತಾರೆ. ಪ್ರತಿವರ್ಷವೂ ಒಂದೊಂದು ಪ್ರದೇಶ, ಒಂದೊಂದು ಹೊಸ ಜೀವಿಯ ಬಗ್ಗೆ ತಾವು ಸಂಶೋಧನೆ ನಡೆಸಬೇಕು ಎಂದು ಉತ್ಸಾಹ ತೋರಿಸುತ್ತ, ತಮಗೂ ವನ್ಯಜೀವಿಗಳ ಸಂರಕ್ಷಣೆಗೂ ಸಂಬಂಧವೇ ಇಲ್ಲ ಎಂದು ಹಾಸಿಗೆಯ ಕೆಳಗೆ ಬಚ್ಚಿಟ್ಟುಕೊಳ್ಳುವ ವನ್ಯಜೀವಿ ವಿಜ್ಞಾನಿಗಳೂ ಇದ್ದಾರೆ. ವೇದಿಕೆಗಳಲ್ಲಿ ಕಾಳಜಿ ವ್ಯಕ್ತಪಡಿಸಿ, ಸದನದಲ್ಲಿ ವನ್ಯಜೀವಿ ಸಂರಕ್ಷಣೆಯನ್ನು ತೀವ್ರವಾಗಿ ವಿರೋಧಿಸುವ ರಾಜಕಾರಣಿಗಳೂ ಇದ್ದಾರೆ. ಇವರಲ್ಲಿ ಯಾರನ್ನು ದೂರುವುದು?
ವಸ್ತುಸ್ಥಿತಿ ಆಧರಿಸಿ ಹೇಳುವುದಾದರೆ, ಹದಗೆಟ್ಟ ವ್ಯವಸ್ಥೆಯನ್ನು ಮಾತ್ರ ದೂರಿ ಪ್ರಯೋಜನವಿಲ್ಲ. ಈ ವ್ಯವಸ್ಥೆಯಲ್ಲೇ ಕೆಲಸ ಮಾಡಿ, ಅದರೊಳಗೆ ಆದಷ್ಟೂ ಸಕಾರಾತ್ಮಕ ಬದಲಾವಣೆಗಳನ್ನು ತರಲು ಪ್ರಯತ್ನಿಸು ವುದೊಂದೇ ಈಗ ನಮಗುಳಿದಿರುವ ಆಯ್ಕೆ. ಸರ್ಕಾರದ ಕಡೆಯಿಂದ ಅನುದಾನ ತರಿಸಿಕೊಂಡು, ಮುಂಚೂಣಿ ಸಿಬ್ಬಂದಿಯನ್ನು ಇರುವ ಮಿತಿಗಳಲ್ಲೇ ಹುರಿದುಂಬಿಸುತ್ತ, ವನ್ಯಜೀವಿ ಸಂರಕ್ಷಣೆ ಮಾಡುವ ಅಧಿಕಾರಿಗಳು ನಮಗೆ ಬೇಕು. ವನ್ಯಜೀವಿಗಳು ಮತ್ತು ಸಾರ್ವಜನಿಕರ ಬಗ್ಗೆ ಕಳಕಳಿಯಿರುವ ವಿಭಾಗ ಮಟ್ಟದ ಅಧಿಕಾರಿ ಇದ್ದರೆ, ಎಲ್ಲ ಅಡೆತಡೆಗಳ ನಡುವೆಯೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಾಗುತ್ತದೆ. ದಿಟ್ಟ ಮತ್ತು ದಕ್ಷ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ನೇಮಿಸಿ, ‘ನೀವು ನಿಮ್ಮ ಕರ್ತವ್ಯ ನಿರ್ವಹಿಸಿ, ನಾವು ಬೆಂಬಲಿಸುತ್ತೇವೆ’ ಎಂದು ಹೇಳುವ ಹಿರಿಯ ಅಧಿಕಾರಿಗಳ ಉತ್ತೇಜನ ಮತ್ತು ಅಧಿಕಾರಿಗಳ ಬೆನ್ನಿಗೆ ನಿಂತು ತಮ್ಮ ಕೈಲಾದಷ್ಟು ಒತ್ತಾಸೆ ನೀಡುವ ವನ್ಯಜೀವಿ ಸಂಸ್ಥೆಗಳು ಸದ್ಯದ ಅಗತ್ಯ.
ಈಗಿನ ಅರಣ್ಯ ಸಚಿವರಿಗೆ ಎಲ್ಲವನ್ನೂ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳುವ ಚಾಕಚಕ್ಯತೆ ಯಿದೆ, ನಿಸರ್ಗವನ್ನು ಉಳಿಸಬೇಕು ಎನ್ನುವ ಕಾಳಜಿಯಿದೆ. ಬಹುಮುಖ್ಯವಾಗಿ, ತಮ್ಮ ಇಲಾಖೆಗೆ ಮತ್ತು ಮಾಡಬಹುದಾದ ಉತ್ತಮ ಕಾರ್ಯಕ್ಕೆ ಬೇಕಾದ ರಾಜಕೀಯ ಬೆಂಬಲ ತರುವ ಹಿರಿತನವಿದೆ. ಸಚಿವರ ಪ್ರಯತ್ನಗಳಿಗೆ ಅವರ ರಾಜಕೀಯ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ಬೆಂಬಲ ನೀಡಿದರೆ, ಐದು ಹುಲಿಗಳ ದುರ್ಮರಣದಂತಹ ಘಟನೆಗಳು ಪುನರಾವರ್ತನೆ ಆಗುವುದನ್ನು ತಡೆಯಬಹುದು.
ಹುಲಿ ಮಹದೇಶ್ವರಸ್ವಾಮಿಯ ವಾಹನ. ತಾಯಿ ಹುಲಿ ಮತ್ತು ಅದರ ಮರಿಗಳು ವಿಷಪ್ರಾಶನದಿಂದ ಸತ್ತ ಸ್ಥಳವೂ ಮಲೆ ಮಹದೇಶ್ವರ ಬೆಟ್ಟದ ಒಂದು ಭಾಗ. ಹುಲಿಗಳ ಮರಣೋತ್ತರ ಪರೀಕ್ಷೆ ಸಮಯದಲ್ಲಿ ಮುಗ್ಧರಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಇಬ್ಬರು ಆರೋಪಿಗಳು, ‘ಹಸು ಯಾರದೆನ್ನುವುದು ಹಾಗೂ ಹುಲಿಗಳು ಹೇಗೆ ಸತ್ತವೆನ್ನುವುದು ಆ ಮಾದೇಶನಿಗೆ ಗೊತ್ತು’ ಎಂದು ಅಮಾಯಕರಂತೆ ಹೇಳಿಬಿಟ್ಟಿದ್ದರು. ನಮ್ಮ ಜಟಿಲ ಸಮಸ್ಯೆಗಳನ್ನು ಹೇಗಾದರೂ ಸರಿಪಡಿಸಿಕೊಂಡು, ಕಲುಷಿತ ವ್ಯವಸ್ಥೆ ಬದಲಾಗುತ್ತದೆ ಎಂದುಕೊಳ್ಳೋಣ. ಆದರೆ, ದೇವರ ಹೆಸರಿನಲ್ಲಿ ಆಣೆ ಮಾಡಿ, ಆ ದೇವರ ವಾಹನವನ್ನೇ ಕೊಲ್ಲುವವರು ಇರುವಾಗ, ನಿಸರ್ಗದ ಬಗ್ಗೆ ನಾವು ಹೊಂದಿದ್ದ ದೈವೀ ಧೋರಣೆ ಎಲ್ಲಿಗೆ ತಲುಪಿದೆಯೆಂದು ಊಹಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.