ADVERTISEMENT

ಷೇರು ಮಾತು: ಹೂಡಿಕೆಗೆ ವಾರನ್ ಬಫೆಟ್ ಸೂತ್ರಗಳು

ಶರತ್ ಎಂ.ಎಸ್.
Published 21 ಫೆಬ್ರುವರಿ 2022, 19:30 IST
Last Updated 21 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಷೇರು ಮಾರುಕಟ್ಟೆ ಪ್ರವೇಶಿಸುವ ಪ್ರತಿಯೊಬ್ಬರೂ ಕೇಳುವ ಮೊದಲ ಹೆಸರು ವಾರನ್ ಬಫೆಟ್. ಜಗತ್ತಿನ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿರುವ ಬಫೆಟ್, ಷೇರು ಹೂಡಿಕೆದಾರರ ಪಾಲಿನ ಗುರು ಇದ್ದಂತೆ. ಬಫೆಟ್ ಹೂಡಿಕೆ ಸೂತ್ರಗಳು ಎಲ್ಲ ವಯೋವರ್ಗಗಳ ಹೂಡಿಕೆದಾರರಿಗೆ ಅಚ್ಚುಮೆಚ್ಚು. ಬಫೆಟ್ ಅವರ ಷೇರು ಹೂಡಿಕೆ ತಂತ್ರಗಾರಿಕೆ ಬಗ್ಗೆ ಹೆಚ್ಚು ಕಲಿಯೋಣ ಬನ್ನಿ.

ನೀವೇನು ಮಾಡುತ್ತಿದ್ದೀರಿ ಎಂಬುದು ನಿಮಗೆ ಗೊತ್ತಿಲ್ಲದಿದ್ದರೆ ಮಾತ್ರ ರಿಸ್ಕ್ ಎದುರಾಗುತ್ತದೆ: 2021ರ ನಂತರದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಆದರೆ ಬಹಳಷ್ಟು ಮಂದಿ ಷೇರು ಹೂಡಿಕೆ, ಟ್ರೇಡಿಂಗ್ ಪರಿಚಯವೇ ಇಲ್ಲದೆ ಹೂಡಿಕೆ ಮಾಡುತ್ತಿದ್ದಾರೆ. ಯಾರೋ ಹೇಳಿದ್ದು, ಅರೆಬರೆ ತಿಳಿದದ್ದು ಆಧರಿಸಿ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ವಾರನ್ ಬಫೆಟ್ ಬಹಳ ಹಿಂದೆಯೇ ಈ ರೀತಿಯ ಅಲ್ಪಜ್ಞಾನದ ಹೂಡಿಕೆ ನಿರ್ಧಾರಗಳ ಬಗ್ಗೆ ಎಚ್ಚರಿಸಿದ್ದಾರೆ.

ದೀರ್ಘಾವಧಿಯಲ್ಲಿ ಮಾಹಿತಿ ತಂತ್ರಜ್ಞಾನ (ಐ.ಟಿ.) ಕಂಪನಿಗಳ ಮೌಲ್ಯಮಾಪನ ಮಾಡುವುದು ಹೇಗೆ ಎನ್ನುವ ಅಂದಾಜು ಬಫೆಟ್ ಅವರಿಗೆ ಬಹಳ ಕಾಲ ತಿಳಿದಿರಲಿಲ್ಲ. ಅದನ್ನು ಅರ್ಥೈಸಿಕೊಳ್ಳುವ ತನಕ ಬಫೆಟ್ ಅವರ ಸಂಸ್ಥೆ ಐ.ಟಿ. ಕಂಪನಿಗಳಲ್ಲಿ ಹೂಡಿಕೆ ಮಾಡಿರಲಿಲ್ಲ. ಐ.ಟಿ. ಕಂಪನಿಗಳ ಬಗ್ಗೆ ಸ್ಪಷ್ಟತೆ ಸಿಕ್ಕ ಬಳಿಕವಷ್ಟೇ 2016ರಲ್ಲಿ ಬಫೆಟ್, ಆ್ಯಪಲ್ ಕಂಪನಿಯಲ್ಲಿ ಹಣ ತೊಡಗಿಸಿದರು.

ADVERTISEMENT

ಮಾಲೀಕನಂತೆ ನಿರ್ಧಾರ ತೆಗೆದುಕೊಳ್ಳಿ: ಬಫೆಟ್ ಪ್ರಕಾರ ಒಂದು ಕಂಪನಿಯ ಷೇರು ಖರೀದಿಸುವಾಗ, ‘ಆ ಕಂಪನಿಯನ್ನೇ ಖರೀದಿಸುವೆ’ ಎನ್ನುವ ಮನಃಸ್ಥಿತಿ ಇರಬೇಕು. ಹೇಗೆ ಒಂದು ಕಂಪನಿಯನ್ನು ಖರೀದಿಸುವಾಗ ಅಳೆದು–ತೂಗಿ ನಿರ್ಧಾರ ಮಾಡುತ್ತೇವೆಯೋ ಹಾಗೆಯೇ ಒಂದು ಷೇರು ಖರೀದಿಸುವ ಮುನ್ನವೂ ಪೂರ್ವಾಪರ ಅರಿತು ಮುನ್ನಡೆಯಬೇಕು.

ಉದಾಹರಣೆಗೆ, ನನ್ನ ಬಳಿ ಒಂದು ಕಂಪನಿ ಇದ್ದು ಅದರ ಮೌಲ್ಯ ₹ 100 ಕೋಟಿ ಎಂದು ಹೇಳುತ್ತೇನೆ ಎಂದಿಟ್ಟುಕೊಳ್ಳಿ. ನೀವು ಸುಮ್ಮನೇ ನನ್ನ ಮಾತು ಒಪ್ಪುವಿರಾ? ಇಲ್ಲವಲ್ಲ? ಕಂಪನಿ ಹೇಗೆ ಪ್ರಗತಿ ಸಾಧಿಸಿದೆ, ಎಷ್ಟು ಲಾಭ ಮಾಡಿದೆ, ಎಷ್ಟು ಸಾಲ ಬಾಕಿ ಇದೆ, ಭವಿಷ್ಯದ ನೋಟ ಹೇಗಿದೆ ಎಂಬ ಅಂದಾಜು ಕೇಳುತ್ತೀರಿ ಅಲ್ಲವೇ?

ಬೇರೆಯವರಿಗೆ ಆಸೆ ಹೆಚ್ಚಾದಾಗ ಭಯದಿಂದಿರಿ, ಬೇರೆಯವರು ಭಯಪಡುವಾಗ ಅಸೆಬುರುಕರಾಗಿರಿ: ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟವಿರುವಾಗ ಹೂಡಿಕೆದಾರರು ನಿರ್ದಿಷ್ಟ ಷೇರಿಗೆ ಅದರ ಮೌಲ್ಯಕ್ಕಿಂತ ಹೆಚ್ಚು ಬೆಲೆ ಕೊಟ್ಟು ಖರೀದಿಸಲು ತಯಾರಿರುತ್ತಾರೆ. ಷೇರುಪೇಟೆಯಲ್ಲಿ ಕುಸಿತ ಹೆಚ್ಚಾದಾಗ ದೊಡ್ಡ ಮೌಲ್ಯದ ಕಂಪನಿಗಳ ಷೇರುಗಳು ಕಡಿಮೆ ದರದಲ್ಲಿ ಸಿಗುತ್ತವೆ. ಆದರೆ ಹೂಡಿಕೆದಾರರು ಸೂಚ್ಯಂಕಗಳ ಕುಸಿತಕ್ಕೆ ಹೆದರಿ ಉತ್ತಮ ಕಂಪನಿಗಳ ಷೇರುಗಳು ಕಡಿಮೆ ಬೆಲೆಗೆ ಸಿಕ್ಕರೂ ಖರೀದಿಗೆ ಮುಂದಾಗುವುದಿಲ್ಲ.

ಶರತ್ ಎಂ.ಎಸ್.

ವಾರನ್ ಬಫೆಟ್ 2008ರ ಆರ್ಥಿಕ ಕುಸಿತದ ಸಂದರ್ಭದಲ್ಲಿ ಬ್ಯಾಂಕ್ ಆಫ್ ಅಮೆರಿಕ, ಗೋಲ್ಡ್ ಮ್ಯಾನ್ ಸ್ಟಾಚ್ಸ್, ಜಿಇ, ಡೋ ಕಂಪನಿಗಳಲ್ಲಿ ಹೂಡಿಕೆ ಮಾಡಿ ನಂತರದಲ್ಲಿ ಉತ್ತಮ ಲಾಭ ಮಾಡಿಕೊಂಡರು. ಷೇರು ಮಾರುಕಟ್ಟೆಯಲ್ಲಿ ಅವಕಾಶಗಳ ಸದ್ಬಳಕೆಗೆ ನಾವು ಯಾವಾಗಲೂ ಸಿದ್ಧರಿರಬೇಕು ಎನ್ನುವುದು ಮೇಲಿನ ಮಾತಿನ ತಾತ್ಪರ್ಯ.

ಸಾಲ ಮಾಡಿ ಷೇರು ಹೂಡಿಕೆ ಮಾಡಬೇಡಿ: ಸಾಲ ಮಾಡಿ ಷೇರು ಹೂಡಿಕೆ ಮಾಡುವುದು ಅತ್ಯಂತ ಅಪಾಯಕಾರಿ ಎನ್ನುವುದು ಬಫೆಟ್ ನಿಲುವು. ಷೇರು ಮಾರುಕಟ್ಟೆ ಸೂಚ್ಯಂಕಗಳು ಎಷ್ಟು ವೇಗವಾಗಿ ಏರಿಳಿತ ಕಾಣುತ್ತವೆ ಎನ್ನುವುದನ್ನು ಅಂದಾಜು ಮಾಡುವುದು ಅಸಾಧ್ಯ. ಉದಾಹರಣೆಗೆ ನೀವು ₹ 50 ಸಾವಿರ ಸಾಲ ಮಾಡಿ ಪ್ರತಿ ಷೇರಿಗೆ ₹ 500 ಕೊಟ್ಟು ಕಂಪನಿಯೊಂದರ 100 ಷೇರುಗಳನ್ನು ಖರೀದಿಸಿದಿರಿ ಎಂದಿಟ್ಟುಕೊಳ್ಳಿ. ಆ ಷೇರಿನ ಬೆಲೆ ದಿಢೀರನೆ ₹ 350ಕ್ಕೆ ಕುಸಿದರೆ ನೀವು ಮಾಡಿದ್ದ ಹೂಡಿಕೆಯ ಮೌಲ್ಯ ₹ 35 ಸಾವಿರಕ್ಕೆ ಇಳಿಯುತ್ತದೆ. ಷೇರು ಮತ್ತೆ ₹ 500ರ ಗಡಿ ದಾಟಬೇಕಾದರೆ ಕೆಲ ಸಮಯ ಬೇಕಾಗಬಹುದು. ಹೀಗಿರುವಾಗ ಸಾಲ ಮಾಡಿ ಹೂಡಿಕೆ ಮಾಡಿದವನ ಸ್ಥಿತಿ ಅತ್ತ ದರಿ ಇತ್ತ ಪುಲಿ ಎನ್ನುವಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.