ADVERTISEMENT

ವಿಶ್ಲೇಷಣೆ: ರಾಜ್ಯ ಶಿಕ್ಷಣ ನೀತಿ ಏಕೆ ಬೇಕು?

ಡಾ.ನಿರಂಜನಾರಾಧ್ಯ ವಿ.ಪಿ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
   

‘ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (2020) ರದ್ದು ಮಾಡಿ, ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ’ ಮಾಡುವುದಾಗಿ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ, 2023ರ ಅ. 11ರಂದು ‘ರಾಜ್ಯ ಶಿಕ್ಷಣ ನೀತಿ ಆಯೋಗ’ ರಚಿಸಿ, ರಾಜ್ಯ ಶಿಕ್ಷಣ ನೀತಿ ರೂಪಿಸಲು ಆದೇಶ ಹೊರಡಿಸಿತ್ತು. ಕಳೆದ ಆಗಸ್ಟ್‌ 8ರಂದು ‘ರಾಜ್ಯ ಶಿಕ್ಷಣ ನೀತಿ’ (ಎಸ್‌ಇಪಿ) ವರದಿಯನ್ನು ಆಯೋಗ ಸರ್ಕಾರಕ್ಕೆ ಸಲ್ಲಿಸಿದೆ. ವರದಿ ಸಲ್ಲಿಕೆಯಾದ ನಂತರ ‘ಎಸ್‌ಇಪಿ’ಯ ಸಾಧಕ–ಬಾಧಕಗಳ ಚರ್ಚೆ ಪ್ರಾರಂಭವಾಗಿದೆ. ಈಗಾಗಲೇ, ರಾಷ್ಟ್ರೀಯ ಶಿಕ್ಷಣ ನೀತಿ ಇರುವಾಗ, ರಾಜ್ಯ ಶಿಕ್ಷಣ ನೀತಿ ಅಗತ್ಯವಿದೆಯೇ ಎಂಬ ಪ್ರಶ್ನೆ ಹಲವು ವಲಯಗಳಿಂದ ವ್ಯಕ್ತವಾಗಿದೆ. ಆಶ್ಚರ್ಯವೆಂದರೆ, ‘ಎಸ್‌ಇಪಿ’ ಜಾರಿಗೊಳಿಸಬೇಕಾದ ಕೆಲವು ಹಿರಿಯ ಅಧಿಕಾರಿಗಳು ಎಸ್‌ಇಪಿ ಬಗ್ಗೆ ತಾತ್ಸಾರ ತೋರುತ್ತಿರುವುದು ಸಂಬಂಧಿಸಿದ ಇಲಾಖೆಗಳ ವಿವಿಧ ಹಂತಗಳಲ್ಲಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯಕ್ಕೆ ತನ್ನದೇ ಆದ ಒಂದು ಶಿಕ್ಷಣ ನೀತಿಯ ಅವಶ್ಯಕತೆ ಇತ್ತೆ? ಇದ್ದರೆ, ಅದು ರಾಷ್ಟ್ರೀಯ ನೀತಿಗಿಂತ ಹೇಗೆ ಭಿನ್ನವಾಗಿರುತ್ತದೆ ಎಂದು ಚರ್ಚಿಸುವ ಅಗತ್ಯವಿದೆ.

ಸಂವಿಧಾನದ ವಿಧಿ 1, ‘ಇಂಡಿಯಾ ಅರ್ಥಾತ್‌ ಭಾರತ, ರಾಜ್ಯಗಳ ಒಂದು ಒಕ್ಕೂಟ ಆಗಿರತಕ್ಕದ್ದು’ ಎಂದು ಹೇಳುತ್ತದೆ. ಒಕ್ಕೂಟ ವ್ಯವಸ್ಥೆಯ ಪ್ರತಿಯೊಂದು ರಾಜ್ಯವು ತನ್ನದೇ ಆದ ಅಸ್ಮಿತೆ, ಭಾಷೆ, ಸಾಮಾಜಿಕ–ಆರ್ಥಿಕ–ಸಾಂಸ್ಕೃತಿಕ ಅನನ್ಯತೆಯನ್ನು ಹೊಂದಿದೆ. ಈ ಅನನ್ಯತೆಯನ್ನು ಉಳಿಸಿ ಬೆಳೆಸಲು ತನ್ನದೇ ಆದ ಉತ್ತಮ ಕಲಿಕಾ ವ್ಯವಸ್ಥೆಯನ್ನು ಕಟ್ಟಿಕೊಳ್ಳಬೇಕಿದೆ. ರಾಜ್ಯಗಳು ಬಲಿಷ್ಠವಾದರೆ, ಭಾರತ ಸಹಜವಾಗಿಯೇ ಬಲಗೊಳ್ಳುತ್ತದೆ.

ದೇಶದ ಶಿಕ್ಷಣ ನೀತಿ ನಿರೂಪಣೆಯ ಇತಿಹಾಸವನ್ನು ಅವಲೋಕಿಸಿದರೆ, ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರ ನಾವು ರಚನೆ ಮಾಡಿದ್ದ ಬಹುತೇಕ ಎಲ್ಲಾ ಶಿಕ್ಷಣ ಆಯೋಗಗಳು/ಸಮಿತಿಗಳು ಮತ್ತು ನಂತರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿಗಳು, ರಾಷ್ಟ್ರಮಟ್ಟದಲ್ಲಿ ಶಿಕ್ಷಣ ವ್ಯವಸ್ಥೆಯ ರಚನೆ ಹಾಗೂ ಸ್ವರೂಪ ಹೇಗಿರಬೇಕೆಂಬ ವಿಶಾಲ ಚೌಕಟ್ಟು ಮತ್ತು ಮಾರ್ಗಸೂಚಿಗಳನ್ನು ಒದಗಿಸಲು ಸಹಾಯಕವಾಗಿದ್ದವು. ಉದಾಹರಣೆಗೆ, ಸ್ವಾತಂತ್ರ್ಯಪೂರ್ವದಲ್ಲಿ ರಚನೆಯಾಗಿದ್ದ ಶಿಕ್ಷಣ ಆಯೋಗ (1882), ಹರ್ಟಾಗ್ ಸಮಿತಿ (1929), ಸಾರ್ಜೆಂಟ್ ಯೋಜನೆ (1944) ಮತ್ತು ಸ್ವಾತಂತ್ರ್ಯಾನಂತರ ರಚನೆಯಾದ ವಿಶ್ವವಿದ್ಯಾಲಯ ಶಿಕ್ಷಣ ಆಯೋಗ (1948–49), ಪ್ರೌಢ ಶಿಕ್ಷಣ ಆಯೋಗ (1952–53), ಭಾರತದ ಅತ್ಯಂತ ಪ್ರಸಿದ್ಧ ಶಿಕ್ಷಣ ಆಯೋಗ (1964–66), ಆಚಾರ್ಯ ರಾಮಮೂರ್ತಿ ಸಮಿತಿ (1989), ರಾಷ್ಟ್ರೀಯ ಜ್ಞಾನ ಆಯೋಗ (2005), ಟಿಎಸ್‌ಆರ್ ಸುಬ್ರಮಣಿಯನ್ ಸಮಿತಿ (2016) ಹಾಗೂ ಕಸ್ತೂರಿ ರಂಗನ್ ಸಮಿತಿ (2017–2019). ಈ ಆಯೋಗಗಳ ಶಿಫಾರಸುಗಳನ್ನು ತಳಹದಿಯನ್ನಾಗಿಸಿಕೊಂಡು 1968, 1986, 1992 (ಪರಿಷ್ಕೃತ) ಹಾಗೂ 2020ರ ರಾಷ್ಟ್ರೀಯ ಶಿಕ್ಷಣ ನೀತಿಗಳನ್ನು ರೂಪಿಸಲಾಗಿತ್ತು .

ADVERTISEMENT

ರಾಷ್ಟ್ರೀಯ ನೀತಿ ನಿರೂಪಣೆಯ ಪ್ರಕ್ರಿಯೆ, ರಾಜ್ಯಗಳು ತಮ್ಮದೇ ಆದ ನೀತಿ, ಕಾರ್ಯಕ್ರಮ ಹಾಗೂ ಕಾನೂನುಗಳನ್ನು ರೂಪಿಸಿಕೊಳ್ಳಲು ಪೂರಕವಾಗಬಹುದಾದ ವಿಸ್ತೃತ ಚೌಕಟ್ಟು ಅಥವಾ ಮಾರ್ಗಸೂಚಿಯನ್ನು ಒದಗಿಸುವುದು ಅಗತ್ಯ. ಆದರೆ, ನಮ್ಮಲ್ಲಿ ಪ್ರಾರಂಭದಿಂದಲೂ ಶಿಕ್ಷಣವನ್ನು ರಾಷ್ಟ್ರಮಟ್ಟದಲ್ಲಿ ಕೇಂದ್ರೀಕರಿಸುವ ಅಥವಾ ರಾಜ್ಯಗಳ ಮೇಲೆ ಹೇರುವ ಕೆಲಸವೇ ನಡೆಯುತ್ತಿದೆ. ಕೇಂದ್ರದಲ್ಲಿ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಾಗ, ಸಂವಿಧಾನ ವಿರೋಧಿ ಮತ್ತು ರಾಜಕೀಯಪ್ರೇರಿತ ಶಿಕ್ಷಣ ನೀತಿಗಳನ್ನು ರೂಪಿಸುವ ಮೂಲಕ ನಿರ್ದಿಷ್ಟ ರಾಜಕೀಯ ಸಿದ್ಧಾಂತದ ವಿಚಾರಗಳನ್ನು ಶಿಕ್ಷಣದಲ್ಲಿ ಅಳವಡಿಸುವ ಪ್ರಯತ್ನಗಳೂ ನಡೆದಿವೆ. ರಾಜ್ಯಗಳು, ಸಂವಿಧಾನ ಕೊಡಮಾಡಿರುವ ಒಕ್ಕೂಟ ತತ್ವಕ್ಕನುಗುಣವಾಗಿ ತಮ್ಮ ಅಸ್ಮಿತೆ ಕಾಪಾಡಿಕೊಳ್ಳಲು ಪೂರಕವಾದ ನೀತಿಗಳನ್ನು ರೂಪಿಸಿಕೊಳ್ಳುವ ಬದಲು ಕೇಂದ್ರದ ನೀತಿಗಳನ್ನೇ ಅಂಧಾನುಕರಣೆ ಮಾಡಿದವು ಎಂಬುದು ಇತಿಹಾಸ.

ಕರ್ನಾಟಕ ರಾಜ್ಯವು ಮೊದಲ ಬಾರಿಗೆ ತನ್ನ ವಿಶಿಷ್ಟ ಸವಾಲುಗಳನ್ನು ಎದುರಿಸಲು ರಾಜ್ಯ ಶಿಕ್ಷಣ ನೀತಿಯ ಅಗತ್ಯವನ್ನು ಮನಗಂಡು ನೀತಿ ರೂಪಿಸಿರುವುದು ಆಶಾದಾಯಕ ಬೆಳವಣಿಗೆ. ರಾಜ್ಯ ಶಿಕ್ಷಣ ನೀತಿಯು ಕೆಳಗಿನ ಕಾರಣಗಳಿಂದ ಅತ್ಯಗತ್ಯವಾಗಿದೆ.

ಮೊದಲನೆಯದಾಗಿ, ಕರ್ನಾಟಕ ತನ್ನದೇ ಆದ ಭಾಷೆ, ಸಂಸ್ಕೃತಿ, ಇತಿಹಾಸ, ಸಾಮಾಜಿಕ ಸಂರಚನೆ ಮತ್ತು ಆರ್ಥಿಕ ಅಭಿವೃದ್ಧಿಯ ಸವಾಲುಗಳನ್ನು ಹೊಂದಿದೆ. ರಾಜ್ಯ ಶಿಕ್ಷಣ ನೀತಿ ರಾಜ್ಯದ ಮಕ್ಕಳಿಗೆ ಸ್ಥಳೀಯ ಜೀವನಾನುಭವಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಕಲಿಕಾ ವ್ಯವಸ್ಥೆಯನ್ನು ಕಟ್ಟಿಕೊಳ್ಳುವ ಮೂಲಕ ಎಲ್ಲರನ್ನೂ ಒಳಗೊಳ್ಳುವ ಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಪೂರಕವಾಗುತ್ತದೆ.   

ಎರಡನೆಯದಾಗಿ, ಕರ್ನಾಟಕ ಶೈಕ್ಷಣಿಕವಾಗಿ ದೊಡ್ಡಮಟ್ಟದ ಪ್ರಾದೇಶಿಕ ಅಸಮಾನತೆಗಳನ್ನು ಎದುರಿಸುತ್ತಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಸಮಾನತೆಯಿದೆ. ವಿಶೇಷವಾಗಿ, ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣದ ಲಭ್ಯತೆ, ಪ್ರವೇಶ ಮತ್ತು ಗುಣಮಟ್ಟದಲ್ಲಿ ಗಮನಾರ್ಹ ಅಸಮಾನತೆಯನ್ನು ಎದುರಿಸುತ್ತಿದೆ. ರಾಜ್ಯ–ನಿರ್ದಿಷ್ಟ ನೀತಿಯು ಸಂಪನ್ಮೂಲ ಹಂಚಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮೂಲಕ ಕಾಲಮಿತಿಯೊಳಗೆ ಶೈಕ್ಷಣಿಕ ಅಸಮಾನತೆಯನ್ನು ನಿವಾರಿಸಲು ಸಹಾಯಕ
ವಾಗುತ್ತದೆ. ಈ ಮೂಲಕ, ಸಮುದಾಯಗಳ ಸಾಮಾಜಿಕ–ಆರ್ಥಿಕ ಸ್ಥಿತಿಗತಿಗನುಗುಣವಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಮತ್ತು ಆದಾಯ ವೃದ್ಧಿಸುವ ಸೂಕ್ತವಾದ ಶೈಕ್ಷಣಿಕ ಕಾರ್ಯಕ್ರಮ ಹಾಗೂ ಪಠ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುತ್ತದೆ.

ಮೂರನೆಯದಾಗಿ, ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ, ಒಕ್ಕೂಟ ಮತ್ತು ರಾಜ್ಯ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವಲ್ಲಿ ಸಮಾನ ಹೊಣೆಗಾರರಾಗಿರುತ್ತಾರೆ. ಒಕ್ಕೂಟ ಸರ್ಕಾರ ಹೆಚ್ಚಿನ ಸಂಪನ್ಮೂಲ ಹಾಗೂ ನಮ್ಯತೆಯಿಂದ ಕೂಡಿದ ವಿಸ್ತೃತ ನೀತಿಯ ಚೌಕಟ್ಟನ್ನು ಒದಗಿಸಿದರೆ, ರಾಜ್ಯ ಅಗತ್ಯವಾದ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ, ಪಠ್ಯಪುಸ್ತಕ ಮುದ್ರಣ, ಮೌಲ್ಯಮಾಪನ, ಉತ್ತಮ ಆಡಳಿತ ಇತ್ಯಾದಿ ಒದಗಿಸುವ ಮೂಲಕ ವಿಕೇಂದ್ರೀಕೃತ ನೆಲೆಯಲ್ಲಿ ಸ್ಥಳೀಯ ಸರ್ಕಾರ ಹಾಗೂ ಸಮುದಾಯಗಳ ಸಹಭಾಗಿತ್ವದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುವ ಹೊಣೆಗಾರಿಕೆ ಹೊಂದಿರುತ್ತದೆ. ಹೀಗಾಗಿ, ರಾಜ್ಯ ತನ್ನ ಸ್ಥಿತಿಗೆ ಅನುಗುಣವಾಗಿ ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ನಿರ್ದಿಷ್ಟ ಗುರಿಗಳನ್ನು ಹೊಂದಲು ಮತ್ತು ಗುಣಾತ್ಮಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೂಲಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯ ನೀತಿ ಅವಶ್ಯಕವಾಗಿದೆ.

ನಾಲ್ಕನೆಯದಾಗಿ, ರಾಜ್ಯವು ತನ್ನ ಅಧಿಕೃತ ರಾಜ್ಯಭಾಷೆಯನ್ನು ಶಿಕ್ಷಣದ ವಿವಿಧ ಹಂತದಲ್ಲಿ ಮಾಧ್ಯಮವಾಗಿ ಹಾಗೂ ಭಾಷೆಯಾಗಿ ಜಾರಿಗೊಳಿಸಲು ರಾಜ್ಯ ನೀತಿ ಬಲ ನೀಡುತ್ತದೆ. ರಾಜ್ಯದಲ್ಲಿರುವ ವಿವಿಧ ಸಮುದಾಯಗಳ ತಾಯ್ನುಡಿಯನ್ನು ಮತ್ತು ಭಾಷಾ ಅಲ್ಪಸಂಖ್ಯಾತರ ಭಾಷೆಗಳನ್ನು ಗೌರವಿಸುವ ಮೂಲಕ ಬಹುತ್ವ ಹಾಗೂ ಬಹು ಭಾಷಾ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ರಾಜ್ಯ ಶಿಕ್ಷಣ ನೀತಿಯು ಶಿಕ್ಷಣದಲ್ಲಿ ಕನ್ನಡ ಮತ್ತು ಇತರ ಸ್ಥಳೀಯ ಭಾಷೆಗಳ ಅಳವಡಿಕೆಯನ್ನು ಖಚಿತಪಡಿಸುತ್ತದೆ. ಪಠ್ಯಕ್ರಮ ವಿನ್ಯಾಸ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಿ ಉತ್ತೇಜಿಸಲು ಸಹಾಯಕವಾಗುತ್ತದೆ.

ಶಿಕ್ಷಕರ ಸಾಮರ್ಥ್ಯವನ್ನು ಬಲವರ್ಧಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಕಲಿಕೆ ತಾಯ್ನುಡಿ ಹಾಗೂ ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ ರೂಪಿಸಲು ಅನುವಾಗುವ ಭಾಷಾನೀತಿಯನ್ನು ರೂಪಿಸಲು ರಾಜ್ಯ ನೀತಿ ಸಹಾಯಕವಾಗುತ್ತದೆ. ಈ ಬಗೆಯ ಕ್ರಮಗಳು, ಕೆಳಸ್ಥರದ ಮತ್ತು ಅವಕಾಶವಂಚಿತ ವರ್ಗಗಳಿಗೆ ಹೆಚ್ಚಿನ ಜೀವನಾಧಾರ ಅವಕಾಶಗಳನ್ನು ಕಲ್ಪಿಸಿ, ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯವಾಗುತ್ತದೆ.

ಒಟ್ಟಾರೆ, ರಾಷ್ಟ್ರೀಯ ನೀತಿಗಳು ವಿಶಾಲ ಹಾಗೂ ವಿಸ್ತೃತವಾದ ಚೌಕಟ್ಟನ್ನು ಒದಗಿಸಲು ಸಹಾಯಕವಾದರೆ, ರಾಜ್ಯ ನೀತಿಯು ರಾಜ್ಯದ ವಿಶಿಷ್ಟ ಶೈಕ್ಷಣಿಕ ಭೂದೃಶ್ಯ, ಸವಾಲು ಮತ್ತು ಅವಕಾಶಗಳನ್ನು ಸಮರ್ಥವಾಗಿ ಎದುರಿಸಲು ಅತ್ಯಗತ್ಯವಾಗಿದೆ. ಇದು ನಮ್ಮ ಸಂದರ್ಭಕ್ಕೆ ಅನುಗುಣವಾಗಿ ಪರಿಹಾರಗಳನ್ನು ರೂಪಿಸುವಾಗ ಒಕ್ಕೂಟ ವ್ಯವಸ್ಥೆಯಿಂದ ನಿರ್ದಿಷ್ಟವಾಗಿ ಏನನ್ನು ನಿರೀಕ್ಷಿಸಬಹುದೆಂಬ ಬಗ್ಗೆ ಸ್ಪಷ್ಟತೆ ನೀಡುವ ಮೂಲಕ ಸೌಹಾರ್ದಕ್ಕೆ, ಸಮನ್ವಯತೆಗೆ ಅನುವು ಮಾಡಿಕೊಡುತ್ತದೆ.

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಗಳನ್ನು ತರಲು ಮತ್ತು ಶಿಕ್ಷಣ ವ್ಯವಸ್ಥೆಗೆ ಮುಂಗಾಣ್ಕೆ ಹಾಗೂ ಸ್ಪಷ್ಟ ದೃಷ್ಟಿಕೋನವನ್ನು ಒದಗಿಸುವ ಮೂಲಕ ಶೈಕ್ಷಣಿಕ ಉಪಕ್ರಮಗಳನ್ನು ರೂಪಿಸಿ ಜಾರಿಗೊಳಿಸಲು ನೀತಿ ದಾರಿದೀಪವಾಗುತ್ತದೆ. ಒಟ್ಟಾರೆ, ಕರ್ನಾಟಕದ ಮಕ್ಕಳನ್ನು ರಾಜ್ಯ, ರಾಷ್ಟ್ರ ಮತ್ತು ಜಾಗತಿಕ ಮಟ್ಟದಲ್ಲಿ 21ನೇ ಶತಮಾನದ ಸವಾಲುಗಳನ್ನು ಧೈರ್ಯವಾಗಿ ಎದುರಿಸಿ ಉತ್ತಮ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ರಾಜ್ಯ–ರಾಷ್ಟ್ರದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಲು ಶೈಕ್ಷಣಿಕವಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ರಾಜ್ಯ ನೀತಿಯು ನೀಲಿ ನಕಾಶೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.