
‘ಲೇ ಗುಡ್ಡೆ, ಎರಡು ಪ್ರಶ್ನೆ... ಒಂದು, ನಾನೂ ಮಂತ್ರಿಗಿರಿ ಕೇಳಬೋದಾ? ಎರಡು, ಎಐನಿಂದ ನಮ್ ಮಂಜಮ್ಮನ ಚಾದಂಗಡಿಗೆ ಹೊಡ್ತ ಬೀಳುತ್ತಾ?’ ಹರಟೆಕಟ್ಟೆಯಲ್ಲಿ ಕೊಟ್ರೇಶಿ ಕೇಳಿದ.
‘ಮಂತ್ರಿಗಿರಿ ನೀನೂ ಕೇಳಬೋದು, ಕೊಡೋರು ಬೇಕಲ್ಲ... ಆದ್ರೆ ಒಂದ್ ಐಡಿಯಾ, ಏನಾದ್ರೂ ಮಾಡಿ ಒಂದು ನಿಗಮನೋ, ಬೋರ್ಡೋ ಹೊಡ್ಕೋ... ಅದಕ್ಕೆ ಸಚಿವರ ಸ್ಥಾನಮಾನ ಸಿಕ್ರೆ ನೀನೂ ಮಂತ್ರಿ ಆದಂಗೇ ಅಲ್ವಾ? ಟ್ರೈ ಮಾಡು...’
‘ಕರೆಕ್ಟ್... ಆಮೇಲೆ ನಮ್ ಮಂಜಮ್ಮನ ಚಾದಂಗಡಿ ಕತಿ?’
‘ಲೇಯ್, ನನ್ ಚಿಂತಿ ಬಿಡ್ರಿ, ನಾನು ಒಂದು ರೊಬೋಟ್ ತರ್ತಿದೀನಿ. ಅದಕ್ಕೆ ದುಡ್ಡು ಹಾಕಿದ್ರೆ ಅದೇ ಚಾ ಕೊಡುತ್ತೆ...’ ಮಂಜಮ್ಮ ನಕ್ಕಳು.
‘ಹೌದಾ? ಉದ್ರಿ ಕೇಳಿದ್ರೆ?’
‘ಕಪಾಳಕ್ಕೆ ಹೊಡೆಯುತ್ತೆ...’
‘ಥೋ ಬ್ಯಾಡಪ್ಪ, ಮಂಜಮ್ಮ ಇದ್ರೇನೇ ಚಾದಂಗಡಿ, ನಿನ್ ಕೈರುಚಿ ರೊಬೋಟ್‌ಗೆ ಬರಾಕೆ ಸಾಧ್ಯನಾ? ರೊಬೋಟ್ ಜತಿ ಈ ತರ ಹರಟೆ ಹೊಡೆಯೋಕೆ ಸಾಧ್ಯನಾ?’ ತೆಪರೇಸಿ ತೆಲಿ ಒಗೆದ.
‘ಅಲ್ಲ, ಎಐನಿಂದ ವೈಟ್ ಕಾಲರ್ ಕೆಲ್ಸ ಎಲ್ಲ ಹೋಗ್ತಾವಂತೆ? ಇನ್ಮುಂದೆ ಎಲ್ಲ ಕೆಲ್ಸನ ರೊಬೋಟೇ ಮಾಡ್ತಾವಂತೆ?’ ದುಬ್ಬೀರನಿಗೆ ಆತಂಕ.
‘ವೈಟ್ ಕಾಲರ್ ಹೋದ್ರೆ ಬೇರೆ ಕೆಲ್ಸ ಮಾಡಿದ್ರಾತು, ರಾಜಸ್ಥಾನದಲ್ಲಿ ದನ ಕಾಯೋರಿಗೆ ಹತ್ತು ಸಾವಿರ ಸಂಬಳ ಕೊಡ್ತಾರಂತೆ. ಈ ಕೆಲ್ಸನ ರೊಬೋಟ್ ಮಾಡಾಕಾಗುತ್ತಾ?’ ತೆಪರೇಸಿ ಧೈರ್ಯ ಹೇಳಿದ.
‘ಈಗ ಎಐ ವಿಷ್ಯ ಬಿಡ್ರಪ್ಪ, ಕೇರಳನ ‘ಕೇರಳಂ’ ಅಂತ ಮಾಡಿದಾರಂತೆ, ನಾವ್ಯಾಕೆ ಬೆಂಗಳೂರನ್ನ ‘ಬೆಂಗಳೂರಂ’ ಅಂತ ಮಾಡ್ಕಾಬಾರ್ದು?’ ಕೊಟ್ರೇಶಿ ತನ್ನದೂ ಒಂದಿರಲಿ ಎಂದು ಸಲಹೆ ಒಗೆದ.
‘ವಾವ್! ಬೆಂಗಳೂರಂ! ಈ ‘ರಂ’ ಅಂತ ಕೇಳೋಕೇ ಒಂಥರಾ ಮಜ...’ ಎಂದ ಗುಡ್ಡೆ.
‘ಥು ನಿನ್ ಮಕ್ಕೆ’ ಎಂದಳು ಮಂಜಮ್ಮ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.