ADVERTISEMENT

ಚುರುಮುರಿ: ಬೆಟ್ಟ ಜಗ್ಗಾಟ

ಮಣ್ಣೆ ರಾಜು
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
   

ಗೆಳೆಯ ಗೋಪಾಲಿ ಫೋನ್ ಮಾಡಿ, ‘ಈ ಬಾರಿ ದಸರಾಗೆ ಮೈಸೂರಿಗೆ ಬಂದಾಗ ಲಾಡ್ಜ್‌ನಲ್ಲಿ ಉಳಿಯಬೇಡಿ, ನಮ್ಮ ಮನೆಗೇ ಬರಬೇಕು’ ಎಂದು ತಾಕೀತು ಮಾಡಿದ.

‘ಬರ್ತೀವಿ, ಹೋದ ವರ್ಷ ಜನಜಂಗುಳಿಗೆ ಹೆದರಿ ಲಾಡ್ಜ್‌ನಲ್ಲೇ ಕುಳಿತು ಟಿ.ವಿ.ಯಲ್ಲಿ ಜಂಬೂಸವಾರಿ ನೋಡಿದ್ವಿ, ಮೈಸೂರಿಗೆ ಹೋದ್ರೂ ನೇರವಾಗಿ ಉತ್ಸವ ನೋಡಲಾಗಲಿಲ್ಲ’ ಅಂದ ಶಂಕ್ರಿ.

‘ನಮ್ಮ ಮನೆ ಮುಂದೆಯೇ ಜಂಬೂಸವಾರಿ ಸಾಗುತ್ತದೆ, ಟೆರೇಸ್ ಮೇಲೆ ನಿಂತು ಕಣ್ತುಂಬಿಕೊಳ್ಳಬಹುದು’.

ADVERTISEMENT

‘ಖಂಡಿತಾ ನಿಮ್ಮ ಮನೆಗೆ ಬರುತ್ತೇವೆ’ ಸುಮಿ ಸಂಭ್ರಮದಿಂದ ಹೇಳಿದಳು.

‘ಚಾಮುಂಡಿ ಬೆಟ್ಟ ಯಾರಿಗೆ ಸೇರಬೇಕು ಎಂಬ ವಿವಾದ ಇತ್ಯರ್ಥವಾಯ್ತೆ?’

‘ಆಗೋದಿಲ್ಲ, ದಸರಾ ಮುಗಿದರೂ ಬೆಟ್ಟದ ಜಗ್ಗಾಟ ಮುಗಿಯುವಂತೆ ಕಾಣ್ತಿಲ್ಲ. ಧರ್ಮಸ್ಥಳದ ಕಾವು ಕಮ್ಮಿಯಾದ್ಮೇಲೆ ರಾಜಕಾರಣಿಗಳು ಚಾಮುಂಡಿ ಬೆಟ್ಟ ಯಾತ್ರೆ ಆರಂಭಿಸಬಹುದು’ ಅಂದ ಗೋಪಾಲಿ.

‘ಹೌದೌದು. ಸರ್ಕಾರ ಚಾಮುಂಡಿ ಬೆಟ್ಟಕ್ಕೆ ರಕ್ಷಣೆ ಒದಗಿಸಬೇಕಾಗುತ್ತೆ’.

‘ಬೇಕಾಗಿಲ್ಲ, ಆಂಜನೇಯ ಸಂಜೀವಿನಿ ಪರ್ವತ ಹೊತ್ತುಕೊಂಡು ಹೋದಂತೆ ಚಾಮುಂಡಿ ಬೆಟ್ಟವನ್ನು ಹೊತ್ತುಕೊಂಡು ಹೋಗುವವರು ಯಾರೂ ಇಲ್ಲ!’

‘ಚಾಮುಂಡಿ ಬೆಟ್ಟ ತಮಗೆ ಸೇರಿದ್ದು ಎಂದು ರಾಜಕಾರಣಿಗಳು ‘ಬೆಟ್ಟ ಅಪ್ಪಿಕೊ’ ಚಳವಳಿ ಮಾಡ್ತಾರೇನೋ?’

‘ಏನೇನು ಮಾಡ್ತಾರೋ ನೋಡೋಣ. ಚಾಮುಂಡಿ ಬೆಟ್ಟ ಯಾರಿಗೆ ಸೇರಿದ್ದು ಎಂಬುದು ಇತ್ಯರ್ಥವಾದರೆ ಸಾಕು’.

‘ಇತ್ಯರ್ಥ ಮಾಡಲೇಬೇಕು’.

‘ಹೇಗೆ ಸಾಧ್ಯ?’

‘ಏನಿಲ್ಲ, ದಸರಾ ಸ್ಪೆಷಲ್ ಅಂತ ಬೆಟ್ಟ ಜಗ್ಗಾಟ ಸ್ಪರ್ಧೆ ಏರ್ಪಡಿಸೋದು! ಬೆಟ್ಟಕ್ಕೆ ಹಗ್ಗ ಕಟ್ಟಿ ಒಂದು ಕಡೆ ಆ ಪಕ್ಷದವರು, ಇನ್ನೊಂದು ಕಡೆ ಈ ಪಕ್ಷದವರು ಎಳೆದಾಡಲಿ. ಬೆಟ್ಟ ಯಾರ ಕಡೆಗೆ ಜರುಗುತ್ತದೋ ಅವರಿಗೆ ಚಾಮುಂಡಿ ಬೆಟ್ಟ ಸೇರುತ್ತದೆ ಎಂದು ಘೋಷಿಸಿದರಾಯ್ತು...’ ಎಂದು ನಕ್ಕು ಶಂಕ್ರಿ ಫೋನ್ ಕಟ್ ಮಾಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.