ADVERTISEMENT

ಅಜ್ಜಾರ‍್ಗ ವಯಸ್ಸಾತಲೇ...

ಸುಮಂಗಲಾ
Published 24 ಮಾರ್ಚ್ 2019, 20:34 IST
Last Updated 24 ಮಾರ್ಚ್ 2019, 20:34 IST
ಚುರುಮುರಿ
ಚುರುಮುರಿ   

ಪೇಪರು ಓದುತ್ತಿದ್ದ ಬೆಕ್ಕಣ್ಣ ಲೊಚಗುಟ್ಟಿತು. ‘ಏನಾತಲೇ,ಹಲ್ಲಿ ಹಂಗ ಲೊಚಗುಟ್ತೀಯಲ್ಲ’ ಕೇಳಿದೆ.

‘ಅಡ್ವಾಣಿ ಅಜ್ಜಾಗ ಹೀಂಗ ಆಗಬಾರದಿತ್ತು. ಆರು ಸಲ ಗೆದ್ದಿದ್ದರು. ಮಕಾಡೆ ಮಲಗಿದ್ದ ಪಕ್ಷಕ್ಕೆ ಕಮಂಡಲದ ನೀರು ಚುಮುಕಿಸಿ ಎಬ್ಬಿಸಿದ್ರು. ಇಡೀ ದೇಶಾನೆ ಇಟಗಿ ಹಿಡ್ಕಂಡು ಅಯೋಧ್ಯಾ ಕಡೆ ಓಡೂ ಹಂಗ ಮಾಡಿದ್ರು. ನೀರಿಲ್ಲದ ಕಡೇನೂ ಕಮಲದ ಹೂ ಅರಳಿಸಿದ್ರು.ಹಸು ಮುದಿಯಾತು ಅಂತ ಬೀದಿಗಿ ತಳ್ಳೂದು ಗೋರಕ್ಷಣಾ ಪಂಗಡದವ್ರಿಗಿ ಶೋಭಾ ಅನ್ನಿಸ್ತದೇನು’ ಬೆಕ್ಕಣ್ಣ ವಾದ ಮಂಡಿಸಿತು.

‘ವಯಸ್ಸಾತಲೇ ಅವ್ರಿಗಿ... ತೊಂಬತ್ ಅಂದ್ರ ಕಡಿಮಿ ಏನು? ಮನ್ಯಾಗನ ನಿಲ್ಲಾಕೆ ಆಗವಲ್ದು,ಪಾಪ... ’

ADVERTISEMENT

ನನ್ನ ಮಾತು ಮುಗಿಯುವ ಮೊದಲೇ ಬೆಕ್ಕಣ್ಣ ಗುರುಗುಟ್ಟಿತು. ‘ಗೌಡ್ರಿಗಿ ಏನು ಕಡಿಮೆ ಆಗ್ಯಾವೇನು... ಇವ್ರಿಗಿಂತ ಐದು ವರ್ಷ ಕಡಿಮಿ ಅಷ್ಟ. ಆದ್ರೂ ತೆನಿ ಹೊತ್ತ ಹೆಂಗಸಿನ ಗೂಡ ಡೆಲ್ಲಿ ತನಾ ಓಡತೀನು ಅಂತ ಈಗೂ ನಿಂತಾರಲ್ಲ...’

‘ಅದು ಗೌಡ್ರ ಖಾನದಾನಿ ಪಕ್ಷ ಐತಲೇ. ಅವ್ರು,ಅವ್ರ ಮಕ್ಕಳು,ಈಗ ಮೊಮ್ಮಕ್ಕಳು, ಮುಂದಮರಿಮಕ್ಕಳು. ಯಾಕಂತಕೇಳಬ್ಯಾಡ. ‘ಹೊಳೆ’ನರಸೀಪುರದಾಗ ಪ್ರವಾಹ ಆಗೂ ಹಂಗ ಕಣ್ಣೀರ ಕೋಡಿ ಹರಿಸ್ತಾರ...’ ಎಂದೆ.

‘ಮತ್ ಇನ್ನಾ ಇಪ್ಪತ್ ವರ್ಷ ಚೌಕೀದಾರನೇ ಪ್ರಧಾನ ಸೇವಕ್ ಆಗ್ತಾನ ಅಂತ ಭಕ್ತರು ಹೇಳ್ತಾರಲ್ಲ... ಆವಾಗ ಅವ್ರಿಗೂ ಎಂಬತ್ತೊಂಬತ್ತು ವರ್ಷ ಆಗಿರತೈತಿ. ಅಡ್ವಾಣಿ ಅಜ್ಜಾನಂಗ ಅವರನ್ನೂ ಮೂಲ್ಯಾಗ ಕುಂಡ್ರಸತಾರ’ ಬೆಕ್ಕಣ್ಣ ರಾಗವೆಳೆಯಿತು.

‘ಚೌಕೀದಾರ ಅಲ್ಲದಿದ್ದರೆ ‘ಶಾ’ಣ್ಯಾ ಪ್ರಧಾನ ಸೇವಕ್ ಆಗ್ತಾನ ಬಿಡು. ಅವಂಗ ಇನ್ನೂ ವಯಸ್ಸು ಇರತೈತಿ’ ಎಂದೆ.

‘ಖಾನದಾನಿಗಳು ತಪ್ಪಿದ್ರ ಚೌಕೀದಾರ್‌ ಚೋರರು ಕೆಂಪುಕೋಟೆ ಮ್ಯಾಗ ಧ್ವಜ ಹಾರಿಸೂದೇ ಆತಲ್ಲ... ದೇಶದಾಗ ನೀವು ಮುಕ್ಕಾಲು ಪಾಲು ಸಾಕ್ಷರ ಮಂದಿ ಇದ್ರೂ ಏನು ಪ್ರಯೋಜನ ಆತು ಬಿಡು’ ಬೆಕ್ಕಣ್ಣ ನನ್ನ ಮುಖಕ್ಕೆ ತಿವಿದು ಹೊರಗೋಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.