‘ಹೋದ ವರ್ಷದ ನಿಮ್ಮ ಸಂಕಲ್ಪ ಏನಾಯ್ತು ರೀ’ ನಗುತ್ತಾ ಕೇಳಿದಳು ಹೆಂಡತಿ.
‘ಅಂದ್ರೆ, ನ್ಯೂ ಇಯರ್ ರೆಸಲ್ಯೂಷನ್ ಬಗ್ಗೆ ಕೇಳ್ತಿದ್ದೀಯಾ’ ಪತ್ನಿಯ ವ್ಯಂಗ್ಯ ಅರ್ಥವಾಗದವನಂತೆ ಕೇಳಿದೆ.
‘ಹ್ಞೂಂ... ಅದೇ, ಮೊಬೈಲ್ ಫೋನ್‌ನಲ್ಲಿ ಸೋಷಿಯಲ್ ಮೀಡಿಯಾ ನೋಡಲ್ಲ ಅಂತ ಶಪಥ ಮಾಡಿದ್ರಲ್ಲ’ ನೆನಪಿಸಿದಳು.
‘ಮನದ ಸಂಕಲ್ಪಗಳನ್ನು ಈಡೇರಿಸಿಕೊಳ್ಳೋದು ಹೇಗೆ ಅನ್ನೋದನ್ನ ತಿಳ್ಕೊಳ್ಳೋದಕ್ಕೆ ಫೇಸ್‌ಬುಕ್, ಇನ್‌ಸ್ಟಾ, ಯೂಟ್ಯೂಬ್ ನೋಡಿದೆ, ಅಲ್ಲಿಗೆ ನನ್ನ ರೆಸಲ್ಯೂಷನ್ ಫೇಲ್ ಆಯ್ತು’.
‘ನಿಮ್ಮ ಹಣೆಬರಹ ಅಷ್ಟೇ ಅಲ್ವಾ?’ ತಿವಿದಳು ಪತ್ನಿ.
‘ಈ ಬಾರಿ ಹೊಸ ರೆಸಲ್ಯೂಷನ್ ತಗೊಳ್ತೀನಿ, ಅದನ್ನ ತಪ್ಪದೇ ಪಾಲಿಸ್ತೀನಿ’ ದೃಢ ಧ್ವನಿಯಲ್ಲಿ ಹೇಳಿದೆ.
‘ಏನು ಹೊಸ ಸಂಕಲ್ಪ?’ ಮತ್ತೆ ಕೇಳಿದಳು.
‘ಮನೆಯ ಒಳಗಾಗಲಿ, ಹೊರಗಾಗಲಿ, ಹೆಂಗಸರಿಗಾಗಲಿ, ಗಂಡಸರಿಗಾಗಲಿ ಕೆಟ್ಟ ಮಾತುಗಳನ್ನು ಆಡುವುದಿಲ್ಲ’.
‘ಶಹಭಾಷ್, ಮತ್ತೆ?’
‘ಹೋಳಿ ಹಬ್ಬದಲ್ಲಿ ಬಿಟ್ಟು, ಬೇರೆ ಯಾವುದೇ ಸಂದರ್ಭದಲ್ಲಿ ತಲೆ ಮೇಲೆ ಮೊಟ್ಟೆ ಹೊಡೆಸಿ
ಕೊಳ್ಳುವಂತಹ ಕೆಲಸ ಮಾಡಲ್ಲ’.
‘ವೆರಿಗುಡ್, ಮುಂದೆ?’
‘ಇನ್ಮುಂದೆ ಸುಮ್ ಸುಮ್ಮನೆ ಚಾಟಿಯಲ್ಲಿ ಹೊಡ್ಕೊಳಲ್ಲ’ ಎನ್ನುತ್ತಾ ಮುಂದುವರಿದು ಕೇಳಿದೆ, ‘ನಿನ್ನ ಸಂಕಲ್ಪ ಏನು?’
ಈ ಪ್ರಶ್ನೆಗಾಗಿಯೇ ಕಾಯುತ್ತಿದ್ದವಳಂತೆ ಉತ್ತರಿಸಿದಳು, ‘ನಿರ್ಮಲಕ್ಕನ ರೀತಿ ನಿಮ್ಮ ಜೇಬಿಗೆ ಸುಮ್ ಸುಮ್ಮನೆ ಟ್ಯಾಕ್ಸ್ ಹಾಕಲ್ಲ’.
‘ಓಹ್, ಖುಷಿ ಪಡೋ ವಿಷಯ ಇದು. ಮತ್ತೆ?’
‘ನಿಮಗೆ ಸಂಬಳವಾದ ತಕ್ಷಣ, ಅಷ್ಟೂ ಹಣವನ್ನ ನನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸುವವರೆಗೆ ಮನೆಯಲ್ಲಿ ಅಡುಗೆ ಮಾಡಲ್ಲ’.
‘ಓಹ್, ನೀನು ನಿರ್ಮಲಕ್ಕನಿಗೇ ಅಕ್ಕ ಆಗಿಬಿಟ್ಟೆ. ನನ್ನ ಸಂಕಲ್ಪ ನಾನು ಪಾಲಿಸ್ತೀನಿ, ನಿನ್ನ ಸಂಕಲ್ಪ ನೀನು ಪಾಲಿಸಲೇಬೇಡ, ಈ ಆಟ ಇಲ್ಲಿಗೇ ಸಾಕು’ ಎನ್ನುತ್ತಾ ಮನೆಯಿಂದ ಹೊರಗಡಿಯಿಟ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.