ADVERTISEMENT

ಚುರುಮುರಿ: ಅದಲಿ- ಬದಲಿ

ಲಿಂಗರಾಜು ಡಿ.ಎಸ್
Published 29 ಆಗಸ್ಟ್ 2022, 19:31 IST
Last Updated 29 ಆಗಸ್ಟ್ 2022, 19:31 IST
Churumuri 30-08-2022.jpg
Churumuri 30-08-2022.jpg   

‘ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ’ ತಾತಾ, ಇಲಿ ಕಂಡೇಟಿಗೆ ಬೆಕ್ಕು ಹಿಡಿಯಕ್ಕೋಗದು ಬೆಕ್ಕಿನ ಚಾಲು ಅಲ್ಲವಾ?’ ಅಂದ ತುರೇಮಣೆ ಮೊಮ್ಮಗ ತಾತನ ಮುಖ ಕಂಡೇಟಿಗೆ.

‘ಹ್ಞೂಂ ಕನಪ್ಪ, ಇವಾಗಿನ ಬೆಕ್ಕುಗಳು ಕಾಸು, ಸೈಟು ಕಂಡೇಟಿಗೆ ಎಪ್ಪೆಸ್ ಮಾಡಿಬುಡ್ತವೆ. ಅದುಕ್ಕೆ ರೋಡಾದ ರೋಡೆಲ್ಲಾ ಸ್ವಿಮ್ಮಿಂಗ್ ಪೂಲ್ ಆಗ್ಯದೆ! ಈ ಕಳ್ಳ ಬೆಕ್ಕುಗಳು ಪರ್ಸೆಂಟೇಜು ಅಂದ್ರೆ ಪ್ರಾಣ ಬುಡ್ತವೆ. ಈಗ ವಿಧಾನಸೌಧ, ಸರ್ಕಾರಿ ಕಚೇರಿಗಳಲ್ಲಿ ಬಂದು ತುಂಬೋಗ್ಯವೆ ಮಗ’ ಅಂದ್ರು ತುರೇಮಣೆ.

‘ಇದೇನ್ಸಾ ಈ ಥರ ಪಾಠ ಹೇಳಿಕೊಡ್ತಿದ್ದರಿ ಮಗೀಗೆ. ಬೆಕ್ಕಣ್ಣ ಬಂದು ಬೋದಾನು ಹುಸಾರು’ ಅಂತಂದೆ.

ADVERTISEMENT

‘ಬಿಡಿಎ ಬದಲಿ ಸೈಟು ಮಂಜೂರಿ, ಕಂಟ್ರಾಕ್ಟರ್ ತಾವು ಕೋಟಿ-ಕೋಟಿ ಪರ್ಸೆಂಟೇಜ್ ದುಡ್ಡು, ದಾಖಲೆಗಳನ್ನೇ ತಿದ್ದೋ ಅಕ್ರಮದ ಬೆಕ್ಕುಗಳ ಕಥೆ ಕನೋ ಇದು!’ ತುರೇಮಣೆ ವಿವರಿಸಿದರು.

‘ಕೋರ್ಟು ಬ್ಯಾಡಾ ಕಣ್ರೋ ಅಂತ ಗಿಣಿಗೇಳಿದಂಗೆ ಹೇಳಿದ್ರೂವೆ ಮುಖಂಡರಿಗೆ ಬಿಡಿಎ ಅಡವಾದ ಜಾಗದಲ್ಲಿ ಬದಲಿ ಸೈಟುಗಳು ಕೊಟ್ಟದೆ. ಕೋರ್ಟು ಬೇಜಾರಾಗಗಂಟಾ ಬೈದು ಸುಮ್ಮಗಾಯ್ತದೆ ಅಂತ ಇವರು ಆಡಿದ್ದೇ ಆಟಾಗ್ಯದೆ. ಒಂದಿಬ್ಬರನ್ನ ಜೈಲಿಗಾಕಿದರೆ ಸರೋದದೇನೋ’ ಅಂತು ಯಂಟಪ್ಪಣ್ಣ.

‘ಅಣೈ, ಮುಖಂಡರು, ಅಧಿಕಾರಿಗಳ ಬುದ್ಧಿಗೆ ಲ್ಯಾಂಡುರೋಗದ ವೈರಸ್ ಅಮರಿಕ್ಯಂಡಿರತದೆ. ಮೊದಲು ಸುಮಾರಾದ ಸೈಟು ಕೊಡದು ಆಮೇಲೆ ಕೋಟಿ-ಕೋಟಿ ಸೈಟಿಗೆ ಬದಲಾವಣೆ. ಪಾಪದ ಸಾಲುಮರದ ತಿಮ್ಮಕ್ಕನಿಗೆ ಸೈಟು ಕೊಡಕ್ಕೆ ವರ್ಸ ಹತ್ತಾಯ್ತು. ಮುಖಂಡರು ದುಡಿದು ದಣಿದಿರತರೆ ಅಂತ ಕೂಡಲೇ ಸೈಟು ಕೊಡ್ತರೆ’ ಅಂತ ತುರೇಮಣೆ ತಾರಮ್ಮಯ್ಯ ಆಡಿದರು.

‘ಬುಡಿ ಸಾ, ಬದಲಿ ಜಾಗ, ಅಕ್ರಮ ಮಂಜೂರಿಗಳೆಲ್ಲಾ ಪೂಜೆಯಾದ ಮ್ಯಾಲೆ ಕೊಡೋ ಚರುಪಿದ್ದಂಗೆ. ಅವಾಗ ಕರೆದು ಕರೆದು ಹಂಚಿದ್ರಂತೆ. ಚರುಪು ದೇವರ ಪ್ರಸಾದ ಸಾ!’ ಅಂದುದ್ಕೆ ಎಲ್ಲಾ ನನಗೆ ತಾರಮಾರ ಬೋದು ಹೊಂಟೋದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.