
ಶಂಕ್ರಿ ಕುಟುಂಬದವರು ಪಟಾಕಿ ಹಚ್ಚುವುದನ್ನು ಆಕ್ಷೇಪಿಸಿ ನೆರೆಹೊರೆಯವರು ಬೀದಿಜಗಳಕ್ಕೆ ಬಂದರು.
‘ಪರಿಸರಸ್ನೇಹಿ ಹಸಿರು ಪಟಾಕಿ ಮಾತ್ರ ಹಚ್ಚಬೇಕು, ಅಪಾಯಕಾರಿ ಪಟಾಕಿಗೆ ಬೆಂಕಿ ಇಡಕೂಡದು’ ಒಬ್ಬ ಕಿತಾಪತಿ ತೆಗೆದ.
‘ಎಲ್ಲವೂ ಹಸಿರು ಪಟಾಕಿಗಳೇ, ಕಲರ್ ನೋಡಿ’ ಅಂದಳು ಸುಮಿ.
‘ಹಸಿರು ಪಟಾಕಿ ಎಂಬ ಸರ್ಟಿಫೈಡ್ ಕಾಪಿ ಇದೆಯೇನ್ರೀ?’
‘ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಹಚ್ಚಲು ಸರ್ಕಾರದ ಪರ್ಮಿಷನ್ ತಗೊಂಡಿದ್ದಿರೇನ್ರೀ?’ ಇನ್ನೊಬ್ಬ ಕೇಳಿದ.
‘ರಸ್ತೆಯಲ್ಲಿ ಮೆರವಣಿಗೆ, ಪಾದಯಾತ್ರೆ, ಪಥ ಸಂಚಲನ, ಪ್ರಾರ್ಥನೆಗೆ ಅನುಮತಿ ಬೇಕು, ಪಟಾಕಿ ಹಚ್ಚಲು ಬೇಕಾಗಿಲ್ಲ’ ಶಂಕ್ರಿ ತಿರುಗೇಟು ಕೊಟ್ಟ.
‘ನಮ್ಮ ಮನೆಗಳಲ್ಲಿ ವಯೋವೃದ್ಧರು, ಹಾರ್ಟ್ ಪೇಷೆಂಟ್‌ಗಳು, ಎಳೆಯ ಮಕ್ಕಳಿವೆ. ನಿಮ್ಮ ಪಟಾಕಿ ಸೌಂಡಿನಿಂದ ಅನಾಹುತವಾದರೆ ಯಾರ‍್ರೀ ಹೊಣೆ?’
ಜಗಳ ದೊಡ್ಡದಾಯ್ತು, ಪೊಲೀಸರು ಬಂದರು.
‘ಹೋದ ವರ್ಷ ಇವರು ಹಚ್ಚಿದ ಪಟಾಕಿ ಕಿಡಿ ತಗುಲಿ ನಮ್ಮ ಬೈಕ್ ಸುಟ್ಟುಹೋಯ್ತು. ಈ ಬಾರಿ ಕಾರಿಗೆ ಬೆಂಕಿ ಬಿದ್ದರೆ ಗತಿ ಏನು ಸಾರ್?’ ಪೊಲೀಸರಿಗೆ ಕೇಳಿದ.
‘ರಸ್ತೆಯಲ್ಲಿ ಕಾರು ನಿಲ್ಲಿಸಲು ಪರ್ಮಿಷನ್ ತಗೊಂಡಿದ್ದಿರೇನ್ರೀ? ಮನೆ ಮುಂದೆ ನಿಲ್ಲಿಸುವ ವಾಹನಗಳಿಗೂ ಸರ್ಕಾರದ ಅನುಮತಿ, ಪಾರ್ಕಿಂಗ್ ಚಾರ್ಜ್ ಕಡ್ಡಾಯ ಮಾಡಬೇಕು’ ಸುಮಿ ಸಿಟ್ಟಾದಳು.
‘ನೆರೆಹೊರೆಯವರ ವಿರೋಧದ ನಡುವೆ ಪಟಾಕಿ ಹಚ್ಚುವ ಹಟ ಯಾಕ್ರೀ?’ ಪೊಲೀಸರ ಪ್ರಶ್ನೆ.
‘ಪಟಾಕಿ ಚೀಟಿಗೆ ರೇಷ್ಮೆಸೀರೆ ಗಿಫ್ಟ್ ಆಫರ್ ಇತ್ತು. ಸೀರೆ ಆಸೆಗೆ ನನ್ನ ಹೆಂಡ್ತಿ ಚೀಟಿ ಹಾಕಿದ್ದಳು. ಚೀಟಿಯಲ್ಲಿ ಬಂದ ಪಟಾಕಿಯನ್ನು ಸುಡದೆ ಏನು ಮಾಡೋಣ?’ ಅಂದ ಶಂಕ್ರಿ.
‘ಪೊಲೀಸರಿಗೆ ಒಪ್ಪಿಸಿ...’ ನೆರೆಹೊರೆಯವರು ಒತ್ತಾಯಿಸಿದರು.
‘ಸೂಕ್ತ ಕ್ರಮ ಜರುಗಿಸುತ್ತೇವೆ...’ ಎಂದು ಹೇಳಿ ಪೊಲೀಸರು ಶಂಕ್ರಿ ಪಟಾಕಿಯನ್ನು ತೆಗೆದುಕೊಂಡು ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.