
ಪೇಪರು ಓದುತ್ತಿದ್ದ ಬೆಕ್ಕಣ್ಣ ‘ಒಂದು ಕಂಪನಿಗೆ ಎಷ್ಟು ಮಂದಿ ಸಿಇಒ ಇರತಾರೆ?’ ಎಂದು ಕೇಳಿತು.
‘ಒಬ್ಬರು’ ಎಂದೆ.
‘ಒಂದು ಕಂಪನಿಗೆ ನಿರ್ದೇಶಕರ ಮಂಡಳಿ ಎಷ್ಟು ಇರತೈತಿ?’ ಎಂದು ಕೇಳಿತು.
‘ಒಂದೇ ಇರತೈತಲೇ’ ಎಂದೆ.
‘ಒಂದು ಪಕ್ಷಕ್ಕೆ ಎಷ್ಟು ಹೈಕಮಾಂಡ್ ಇರತೈತಿ?’ ಎಂದು ಮತ್ತೆ ಪ್ರಶ್ನೆ ಹಾಕಿತು.
‘ಅದೂ ಒಂದೇ ಇರತೈತಿ, ಹೌದಿಲ್ಲೋ?’ ನನಗೂ ಅನುಮಾನವಾಯಿತು.
ಕ್ವಿಜ್ ಪ್ರಶ್ನೆ ನಿಲ್ಲಿಸಿದ ಬೆಕ್ಕಣ್ಣ, ‘ಅಲ್ಲೇ ಇರೂದು ಮಜಾ. ಈಗ ಕೆಲವು ಪಕ್ಷಗಳಿಗೆ ಎರಡು ಹೈಕಮಾಂಡ್ ಇರತಾವು. ತಿಳಕೋ!’ ಎಂದು ಮುಗುಮ್ಮಾಗಿ ಹೇಳಿತು.
‘ಯಾವುದೇ ಪಕ್ಷದಾಗೆ ಮುಖ್ಯ ನಾಯಕರ ಗಂಡು ಮಕ್ಕಳು ಅಗದಿ ಸ್ಟ್ರಾಂಗ್ ಆಗಿ ಬೆಳೆದರೆ, ಅವರೇ ಒಂದು ಲೋಕಲ್ ಹೈಕಮಾಂಡ್! ಕೈಪಕ್ಷದಾಗೆ ಯತೀಂದ್ರಣ್ಣನೇ ಲೋಕಲ್ ಹೈಕಮಾಂಡ್. ಡಿಕೇಶಂಕಲ್ಲೂ ಅದನ್ನು ಒಪ್ಪಿಕೊಂಡಾರೆ’ ಎಂದು ನಕ್ಕಿತು.
‘ಡಿಕೇಶಂಕಲ್ಲು ಹೇಳಿದ್ದು ವ್ಯಂಗ್ಯವಾಗಿ ಕಣಲೇ. ಇಷ್ಟ್ ವರ್ಷದಿಂದ ಕೈಪಕ್ಷಕ್ಕೆ ಬಂಡೆ ಅಡಿಗಲ್ಲಾಗಿ ಇದ್ದವರು ಈಗೀಗ ರಾಜಕೀಯಕ್ಕೆ ಇಳಿದ ಬಚ್ಚಾಗಳ ಮಾತನ್ನು ಹೆಂಗೆ ಒಪ್ಪತಾರೆ?’
‘ಜನರು, ಶಾಸಕರು, ಮಾಧ್ಯಮದವರು ಎಲ್ಲರೂ ಡಿಕೇಶಂಕಲ್ಲು ಸಿಎಂ ಆಗಲಿ ಅಂತ ಕನಸು ಕಾಣುತ್ತಿದ್ದಾ ರಂತೆ. ಖರೇ ಅಂದ್ರ ನನ್ನ ಕನಸಿನಾಗೂ ಡಿಕೇಶಂಕಲ್ಲು ಸಿಎಂ ಕುರ್ಚಿ ಮೇಲೆ ಕುಂತಿದ್ದರು!’ ಎಂದಿತು ಬೆಕ್ಕಣ್ಣ.
‘ಆಹಾ! ಇನ್ನು ಹೈಕಮಾಂಡು ಕನಸು ಕಾಣೋದೊಂದೇ ಬಾಕಿ!’ ಎಂದೆ ವ್ಯಂಗ್ಯವಾಗಿ.
‘ದಿಲ್ಲೀ ಹೈಕಮಾಂಡು ಕನಸು ಕಂಡರೂ, ಲೋಕಲ್ ಹೈಕಮಾಂಡು ಆ ಕನಸು ಕಾಣಂಗಿಲ್ಲ!’ ಎಂದು ಬೆಕ್ಕಣ್ಣ ನಕ್ಕಿತು.
‘ಇವರು ಹಿಂಗೇ ಸಿಎಂ ಕುರ್ಚಿಗೆ ಕಿತ್ತಾಡತಿದ್ದರೆ, ಮುಂದಿನ ಚುನಾವಣೆಯಲ್ಲಿ ಗೆಲ್ಲೋ ಕನಸು ದೂರ ಉಳೀತು’ ಎಂದೆ ಸಿಟ್ಟಿನಿಂದ.
‘ಮುಂದಿನ ಚುನಾವಣೆ, ಶ್ರೀಸಾಮಾನ್ಯರ ಹಿತದ ಕನಸು ಯಾರಿಗೆ ಬೇಕಾಗೈತಿ? ಹತ್ತು ತಲೆಮಾರಿಗೆ ಆಗುವಷ್ಟು ಆಸ್ತಿ, ಅಧಿಕಾರ ಅಷ್ಟೇ ಇವರ ಕನಸು’ ಎಂದು ಬೆಕ್ಕಣ್ಣನೂ ಗುರುಗುಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.