ADVERTISEMENT

ಚುರುಮುರಿ | ಶಕ್ತಿ ಸಂಭ್ರಮ

ಮಣ್ಣೆ ರಾಜು
Published 16 ಜುಲೈ 2025, 0:30 IST
Last Updated 16 ಜುಲೈ 2025, 0:30 IST
   

‘ರೀ, ಈ ಸೀರೆ ಹೇಗಿದೆ?’ ಗಂಡನಿಗೆ ಸೀರೆ ತೋರಿಸಿದಳು ಸುಮಿ.

‘ಹೊಸ ಸೀರೆ ಕೊಂಡುಕೊಂಡ್ಯಾ?’ ಶಂಕ್ರಿ ಕೇಳಿದ.

‘ಇಲ್ಲಾರೀ, ಸರ್ಕಾರಿ ಸೀರೆ, ಸಿ.ಎಂ ಕೊಟ್ಟಿದ್ದು. ಶಕ್ತಿ ಯೋಜನೆಯ 500 ಕೋಟಿಯ ಉಚಿತ ಪ್ರಯಾಣದ ಸಂಭ್ರಮಾಚರಣೆಯಲ್ಲಿ ಮಹಿಳೆಯರಿಗೆ ಸಿ.ಎಂ ಉಚಿತವಾಗಿ ಬಸ್ ಟಿಕೆಟ್ಟೂ ಕೊಟ್ಟು– ಇಳಕಲ್ ಸೀರೆ, ಗುಲಾಬಿಯನ್ನೂ ಕೊಟ್ಟರು. ಸೀರೆಯ ಕಲರ್, ಡಿಸೈನ್, ಬಾರ್ಡರ್
ಚೆನ್ನಾಗಿದೆಯಲ್ವಾ?’

ADVERTISEMENT

‘ದುಡ್ಡು ಕೊಟ್ಟು ಬಸ್ ಟಿಕೆಟ್ ಕೊಳ್ಳುವ ಪುರುಷರಿಗೆ ಸರ್ಕಾರ ಒಂದು ಶೇವಿಂಗ್ ಬ್ಲೇಡೂ ಕೊಟ್ಟಿಲ್ಲ’.

‘ಮುಂದಿನ ದಿನಗಳಲ್ಲಿ ನಿಮಗೂ ಪಂಚೆಗಿಂಚೆ ಕೊಡುತ್ತೆ ಬಿಡಿ. ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ಗೃಹಲಕ್ಷ್ಮಿ ಬಾಕಿ ಹಣವನ್ನು ಕೊಡ್ತಾರಂತೆ. ಮಹಾಲಕ್ಷ್ಮಿಗೆ ಈ ಸರ್ಕಾರಿ ಸೀರೆ ಉಡಿಸಿ, ಗೃಹಲಕ್ಷ್ಮಿ ದುಡ್ಡಿನಲ್ಲಿ ಹಬ್ಬ ಆಚರಿಸೋಣ’ ಎಂದು ಸಂಭ್ರಮಿಸಿದಳು.

‘ಗೌರಿ ಹಬ್ಬಕ್ಕೆ ಮೈಸೂರು ಸಿಲ್ಕ್ ಕೊಡ್ತಾರಂತಾ?’

‘ಹಬ್ಬ ಹಬ್ಬಕ್ಕೂ ಸೀರೆ ಬೇಕು ಅಂತ ಸರ್ಕಾರವನ್ನು ಕೇಳಲಾಗುತ್ತೇನ್ರೀ?’

‘ಸ್ಟೇಟ್ ಬಿಟ್ಟು ಸೆಂಟ್ರಲ್‌ಗೆ ಹೋಗ್ತೀರಾ ಅಂತ ಸಿ.ಎಂ ಸಿದ್ದರಾಮಯ್ಯರನ್ನು ಕೇಳಬೇಕಿತ್ತು’.

‘ಕೇಳಲಿಲ್ಲಾರೀ, ಸೆಂಟ್ರಲ್ ಸಿಲೆಬಸ್ ತುಂಬಾ ಕಷ್ಟವಂತೆ’.

‘ಸಿದ್ದರಾಮಯ್ಯ ಅವರನ್ನು ಫೇಲ್ ಮಾಡಬೇಕೂಂತಲೇ ಸೆಂಟ್ರಲ್ ಸಿಲೆಬಸ್‌ಗೆ ಅಡ್ಮಿಷನ್ ಮಾಡಿಕೊಳ್ಳೋ ಪ್ರಯತ್ನ ನಡೆದಿದೆ ಎಂದು ವಿಪಕ್ಷದವರು ಅಪಪ್ರಚಾರ ಮಾಡ್ತಿದ್ದಾರಂತೆ’.

‘ಕನ್ನಡ ಮೀಡಿಯಂನ ಸ್ಟೇಟ್ ಸಿಲೆಬಸ್‌ಗಿಂಥಾ ಹಿಂದಿ, ಇಂಗ್ಲಿಷ್ ಮೀಡಿಯಂನ ಸೆಂಟ್ರಲ್ ಸಿಲೆಬಸ್ ಕಷ್ಟವೇ’.

‘ಲಾಂಗ್ವೇಜ್, ಲಾಂಗ್ ಜರ್ನಿ ಪ್ರಾಬ್ಲಂಗೆ ಹಿಂಜರಿಯಬಾರದು. ಸೆಂಟ್ರಲ್ ಸಿಲೆಬಸ್‌ನಲ್ಲಿ ಹಾರ್ಡ್ ಸ್ಟಡಿ ಮಾಡಿದ್ರೆ ಸಿ.ಎಂ ಸಿದ್ದರಾಮಯ್ಯ ಪಿ.ಎಂ ಪದವೀಧರರಾಗುವ ಅವಕಾಶ ಸಿಗಬಹುದು’.

‘ಸ್ಟೇಟ್‌ನಲ್ಲೇ ಐದು ವರ್ಷದ ಕೋರ್ಸ್ ಕಂಪ್ಲೀಟ್ ಮಾಡ್ತಾರಂತೆ. ಮುಂದಿನ ಅಕಡೆಮಿಕ್ ಇಯರ್‌ನಲ್ಲಿ ಸೆಂಟ್ರಲ್ ಸಿಲೆಬಸ್ ಬಗ್ಗೆ ಚಿಂತನೆ ಮಾಡ್ತಾರೇನೋ ಕಣ್ರೀ...’ ಎಂದು ಸುಮಿ ಸೀರೆ ತಗೊಂಡು ರೂಮಿಗೆ ಹೋದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.