
ವತ್ತಾರೇಗೆ ಹಾಲಕ್ಕಿಯೊಂದು ಮಸಣದ ಮರದ ಮ್ಯಾಲೆ ಕೂಕಂದು ಯೋಚನೆ ಮಾಡ್ತಿತ್ತು. ಬುಡುಬುಡಿಕಣ್ಣ ಬ್ಯಾರೆ ‘ಇನ್ನು ಮ್ಯಾಲೆ ನಾನು ಶಕುನ ನುಡಿಯಕ್ಕೆ ಹೋಗ್ಕುಲ್ಲ ಕಣವ್ವ. ಬೀದಿನಾಯಿಗಳು ಅಟ್ಟಿಸಿಕ್ಯಬತ್ತವೆ’ ಅಂತ ನೊಂದಕತಿದ್ದ. ಅಲ್ಲದುರೆ ತಾನೆ ಈ ಕಂಟಕದ ಕಾಲದೇಲಿ ಶಕುನ ನುಡಿಯಕೇನದೆ ಅಂದ್ಕತಿತ್ತು ಹಾಲಕ್ಕಿ.
ಆಟೊತ್ತಿಗೆ ಇನ್ನೊಂದು ಹಾಲಕ್ಕಿ ಪುರ‍್ರನೆ ಹಾರಿ ಬಂದು ನಮ್ಮ ಹಾಲಕ್ಕಿ ಪಕ್ಕ ಕೂತುಗಂದು ಮಾತಿಗೆ ಶುರು ಹಚ್ಚಿಗ್ಯತ್ತು.
‘ಇದ್ಯಾಕೆ ನನತಾಯಿ, ಮುಂಗೋಳಿ ಕೂಗೋ ಹೊತ್ತಲ್ಲಿ ಹಿಂಗೆ ಅಡ್ಡಗ್ಯಾನಾಗಿ ಕೂತಿದ್ದಯ್?’ ಅಂತು.
‘ಕಾಲ ಕೆಟ್ಟೋತು ಕನಕ್ಕ. ಶಾಸಕರೇ ಜುಲುಮೆ ಮಾಡಿ ಲಂಚ ಈಸುಗಂದು ಸಿಗೇಬಿದ್ದವರಂತೆ. ಕಮೀಶನ್ ಆತು, ಈಗ ಎಲ್ಲಾದರಲ್ಲೂ ಸಟ್ಟುಗ ಅಲ್ಲಾಡ್ಸಕ್ಕೋತಾವೆ’.
‘ದಿಟ ಕನೆ. ಖಾದಿ ಇಕ್ಕ್ಯಂದವರು ಗಾಂಧಿ ಹೆಸರನೇ ಗೈರುವಿಲೆ ಮಾಡಿಬುಟ್ಟವ್ರೆ. ಖಾಕಿ ಇಕ್ಕ್ಯಂದೋರು ಚಾಕರಿ ಬುಟ್ಟು ಪೋಕರಿಗಳಾಗ್ಯವರೆ. ಊರೊಟ್ಟಿನ ಜನಕೆಲ್ಲಾ ಧರ್ಮ–ಕರ್ಮ ಹೇಳಬೇಕಾದ ಕಾವಿ ಇಕ್ಕಿದವು ಅಲಾಯಿದವಾದ ಕ್ಯಾಮೇಲೆ ಕಳೆದೋಗ್ಯವೆ’.
‘ಜನ ಬೂವಕ್ಕೆ ಬಾಗಾಡಿಕ್ಯಂದು ವತ್ತರಿಕೆಂಗೆ ರಾತ್ರಿಗೆಂಗೆ ಅಂತ ಬದುಕು ನೀಸ್ತಾವ್ರೆ. ಖಾಕಿ, ಖಾವಿ, ಖಾದಿಯೋರು ಲಂಗುಲಗಾಮು, ಅಂಕೆಶಂಕೆ ಇಲ್ಲದೇ ತೆವಲಿಗೋಸ್ಕರಾನೆ ಬದುಕ್ತಾವೆ ಅನ್ನಿಸ್ತದೆ ಕನೆ’.
‘ತೆವಲು ಅಂದಾಗ ನೆಪ್ಪಾತು ನೋಡು. ಶಿರಸೀಲಿ ಒಬ್ಬ ಪಂಚಾಯಿತಿ ಸದಸ್ಯ ಆಯಪ್ಪನಿಗೆ ಬಂದ ಗೌರವಧನದಲ್ಲಿ ಬಸ್ ನಿಲ್ದಾಣ ಮಾಡಿಸ್ಯವನಂತೆ. ರಾಜಕೀಯದವು ಎಲ್ಲೋಗಿ ಕುಂತವೋ?’
‘ಅವುಗಳ ಹಣೆಬರಾವು ಅವು ಅನುಭೋಗಿಸ್ತವೆ ಬುಡೆ. ಯಂಗನ್ನ ಆಗಲಿ ಒಂದು ಬುದ್ಧಿ ಮಾತು ಹೇಳಿಬುಡವ್ವ’.
‘ನನ ತಾಯಿ. ನಮ್ಮ ಹಾಲಕ್ಕಿ ಶಕುನಕ್ಕೂ ಟ್ಯಾಕ್ಸು ಜಡಿದುಬುಡ್ತರೆ ಕನೆ. ಆದ್ರೂ ಖಾಕಿ, ಖಾದಿಗಳಿಗೆ ಒಂದು ಮಾತೇಳತಿನಿ. ಸಿಕ್ಕಿದ್ದಕ್ಕೆ ಖುಷಿ ಪಡಬ್ಯಾಡಿ, ಸಿಗಲಿಲ್ಲಾಂತ ಬೈಬ್ಯಾಡಿ. ಆತ್ಮಾವಲೋಕನ ಮಾಡಿಕ್ಯಳಿ, ಆತ್ಮವಂಚನೆ ಮಾಡಿಕ್ಯಬ್ಯಾಡಿ ಅಂತ ಹಾಲಕ್ಕಿ ನುಡಿತೈತೆ’ ಎಂದು ಹಾಲಕ್ಕಿ ಗುಕ್, ಗುಕ್ ಅಂದ್ಕಂದು ಹಾರೋಯ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.