ADVERTISEMENT

ಚುರುಮುರಿ: ಹೈಕಮಾಂಡ್ ಭಜನೆ!

ಬಿ.ಎನ್.ಮಲ್ಲೇಶ್
Published 11 ಡಿಸೆಂಬರ್ 2025, 21:59 IST
Last Updated 11 ಡಿಸೆಂಬರ್ 2025, 21:59 IST
   

‌‘ಲೇ ತೆಪರ, ಏನಪ್ಪ ಇವತ್ತಿನ ಸುದ್ದಿ? ಏನಂತತಿ ನಿಮ್ ಟೀವಿ?’ ಹರಟೆಕಟ್ಟೆಯಲ್ಲಿ ದುಬ್ಬೀರ ಕೇಳಿದ.

‘ಸುದ್ದಿನಾ? ಎಲ್ಲ ಹೈಕಮಾಂಡ್‌ಗೆ ಬಿಟ್ಟದ್ದು’ ಎಂದ ತೆಪರೇಸಿ.

‘ಲೇಯ್, ಅಧಿವೇಶನದಲ್ಲಿ ಸಿಎಂ ಏನಂದ್ರು, ಮಂತ್ರಿಗಳು, ಎಮ್ಮೆಲ್ಲೆಗಳು ಏನಂದ್ರು ಅದನ್ನ ಹೇಳೋ...’ 

ADVERTISEMENT

‘ಅದೇ... ಎಲ್ಲ ಹೈಕಮಾಂಡ್‌ಗೆ ಬಿಟ್ಟದ್ದು...’

‘ಮತ್ತೆ ಇಡ್ಲಿ ವಡೆ, ನಾಟಿ ಕೋಳಿ?’ ಕೊಟ್ರೇಶಿ ಕೊಕ್ಕೆ.

‘ಅದು ಹೈಕಮಾಂಡ್ ಹೇಳಿದ್ದು...’

‘ಮತ್ತೆ ಸಂಪುಟ ವಿಸ್ತರಣೆ?’

‘ಅದು ಹೈಕಮಾಂಡ್ ಹೇಳಿದಾಗ ಮಾಡೋದು...’

‘ಅಲ್ಲ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ? ಗೃಹಲಕ್ಷ್ಮೀದು ನಾಲ್ಕು ತಿಂಗಳ ಹಣ?’

‘ಅದು ಹೈಕಮಾಂಡ್ ಕುರ್ಚಿ ಸಮಸ್ಯೆ ಇತ್ಯರ್ಥ ಮಾಡಿದ ಮೇಲೆ ಕೊಡೋದು...’

‘ಲೇಯ್, ಎಲ್ಲದ್ಕೂ ಹೈಕಮಾಂಡ್ ಭಜನೆ ಮಾಡಿದ್ರೆ ನೀವೇನ್ ಸರ್ಕಾರ ನಡೆಸ್ತೀರೋ, ಸರ್ಕಸ್ ಮಾಡ್ತೀರೋ?’

‘ನಾವು ಹೈಕಮಾಂಡ್ ಹೇಳಿದಂಗೇ ಎಲ್ಲ ಮಾಡೋದು...’

‘ಥೋ... ಇವನ ಕತೆ ಇಷ್ಟೆ. ಮಂಜಮ್ಮ ನೀ ಹೇಳು, ನಿಮ್ ಹೈಕಮಾಂಡ್ ಏನಂತತಿ?’ ದುಬ್ಬೀರ ಕೇಳಿದ.

‘ನಮ್ದು ವೆರಿ ಸಿಂಪಲ್... ಒಂದು ದೇಶ, ಒಬ್ಬನೇ ನಾಯಕ...’

‘ಮತ್ತೆ ಕರ್ನಾಟಕದಲ್ಲಿ ನಿಮ್ ಕಮಲ ಪಕ್ಷದಲ್ಲಿ ಮನೆಯೊಂದು ಆರು ಬಾಗಿಲಾಗಿದಾವೆ? ಅಧ್ಯಕ್ಷರನ್ನ ಇಳಿಸಿ, ವಿಪಕ್ಷ ನಾಯಕರನ್ನ ಇಳಿಸಿ ಅಂತ ‘ಇಳಿಸೋ’ ಆಂದೋಲನ ಶುರು ಆಗೇತಿ?’

‘ಅದೆಲ್ಲ ಹೈಕಮಾಂಡ್‌ಗೆ ಬಿಟ್ಟದ್ದು...’

‘ಓ... ನಿಮ್ದೂ ಅದೇ ಭಜನೇನಾ? ಲೇ ಗುಡ್ಡೆ ನಿಂದೇನೋ ಕತೆ?’

‘ಅವುಂದೂ ಹೈಕಮಾಂಡ್‌ಗೆ ಬಿಟ್ಟದ್ದು...’ ಎಂದ ಕೊಟ್ರೇಶಿ.

‘ಏನು? ಗುಡ್ಡೆಗೂ ಒಂದು ಹೈಕಮಾಂಡಾ? ಯಾರು?’

‘ಇನ್ಯಾರು, ಅವನೆಂಡ್ತಿ. ಇನ್ನು ಐದು ನಿಮಿಷದಲ್ಲಿ ಮನೆಗೆ ಬರದಿದ್ರೆ ಗೇಟ್ ಬಂದಾಗುತ್ತೆ, ಚಾಪೆ, ದಿಂಬು ಆಚೆಗೆ ಬೀಳುತ್ತೆ ಅಂತ ಫೋನ್ ಬರುತ್ತೆ ನೋಡ್ತಿರು...’

ಕೊಟ್ರೇಶಿ ಮಾತಿನ್ನೂ ಮುಗಿದಿರಲಿಲ್ಲ. ಗುಡ್ಡೆ ಫೋನ್ ರಿಂಗಾಯಿತು. ಹರಟೆಕಟ್ಟೆಯಲ್ಲಿ ನಗುವಿನ ಅಲೆ ತೇಲಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.