ADVERTISEMENT

ಚುರುಮುರಿ: ಯಜಮಾನಿಕಿ ಪ್ರಶ್ನೆ

ಬಿ.ಎನ್.ಮಲ್ಲೇಶ್
Published 22 ಜನವರಿ 2026, 23:30 IST
Last Updated 22 ಜನವರಿ 2026, 23:30 IST
   

‘ಲೇಯ್, ಏನೇ ಇದು ಉಪ್ಪಿಟ್ಟು ಇಷ್ಟು ಉಪ್ಪುಪ್ಪಾಗಿದೆ? ನೆಟ್ಟಗೆ ಮಾಡಾಕೆ ಬರಲ್ವಾ?’ ಹೆಂಡತಿ ಪಮ್ಮಿ ಮೇಲೆ ತೆಪರೇಸಿ ರೇಗಿದ.

‘ಅದು ಹಂಗೇ... ನೀವು ಮನೆ ಯಜಮಾನಿಕಿ ಬಿಟ್ಟು ಕೊಡ್ತೀನಿ ಅಂತ ಹೇಳಿ ಎಷ್ಟು ದಿನಾತು, ಬಿಟ್ ಕೊಟ್ಟಿದ್ದೀರಾ? ದೀಪಾವಳಿ ಆತು, ಹೊಸ ವರ್ಷಾತು, ಸಂಕ್ರಾಂತಿನೂ ಆತು... ನನ್ ತಾಳ್ಮೆಗೂ ಒಂದು ಮಿತಿ ಇದೆ...’ ಪಮ್ಮಿ ಗುರ್ ಎಂದಳು.

‘ನಿಂಗೆ ಯಜಮಾನಿಕಿ ಬಿಟ್ ಕೊಡಾಣ ಅಂದ್ರೆ ಬರೀ ಗುಡಿ ಗುಂಡಾರ ಸುತ್ತುತೀಯ. ಪ್ರಾರ್ಥನೆ, ಫಲ ಅಂತ ಪ್ರವಚನ ಹೇಳ್ತೀಯ. ಅದೆಲ್ಲೋ ರೇಷ್ಮೆ ಸೀರೆ ಕಮ್ಮಿ ರೇಟಿಗೆ ಕೊಡ್ತಾರೆ ಅಂತ ದಿನಗಟ್ಲೆ ಕ್ಯೂ ನಿಲ್ತೀಯ... ಯಜಮಾನಿಕಿ ಹೆಂಗ್ ನಡೆಸ್ತೀಯ?’

ADVERTISEMENT

‘ನೀವು ರಾಜಕೀಯದಲ್ಲಿ ಇರ್ಬೇಕಿತ್ತು ಕಣ್ರಿ, ಯಜಮಾನಿಕಿ ವಿಷ್ಯ ಎತ್ತಿದಾಗೆಲ್ಲ ದೊಡ್ಡ ಖರ್ಗೆ ಸಾಹೇಬ್ರ ತರ ಮಾತೇ ಆಡಲ್ಲ, ಮನೆ ಖರ್ಚಿಗೆ ದುಡ್ಡು ಕೊಡಿ ಅಂದ್ರೆ ಜಮೀರಣ್ಣನ ತರ ಮಾತೇ ನಿಲ್ಸಲ್ಲ... ಈಗ ಈ ಕತೆ ಹೇಳ್ತೀರಾ?’

‘ನೀನೂ ಟ್ರಂಪ್ ತರ ದಾದಾಗಿರಿ ಮಾಡೋದು ಬಿಡು. ನಾನೇನು ಮನೆ ಯಜಮಾನಿಕಿನ ಬೀದೀಲಿ ಹೋಗೋ ದಾಸಮ್ಮನಿಗೆ ಕೊಡಲ್ಲ. ಒಂಬತ್ತು ಸಲ ಎಮ್ಮೆಲ್ಲೆ ಆದ ಖರ್ಗೆ ಸಾಹೇಬ್ರೇ ಸಿಎಂ ಆಗದೆ ಸುಮ್ನದಾರೆ, ನೀನು ಹಾರಾಡ್ತೀಯ... ಒಂದು ವೇಳೆ ನೀನು ಮನಿ ಯಜಮಾನಿ ಆದ್ರೂ...’

‘ಹುಂ, ಆದ್ರೂ...’

‘ನಾನು ನಿನ್ನ ಯಜಮಾನ ಅನ್ನೋದನ್ನ ತಪ್ಸೋಕಾಗುತ್ತಾ? ಸುಮ್ನೆ ನಾನು ಹೇಳಿದಂಗೆ ಕೇಳು...’ ತೆಪರೇಸಿ ನಕ್ಕ.

‘ನೀವಿನ್ನೂ ಯಾವ ಕಾಲದಾಗದೀರಿ? ಅಂಥಾ ಗೌರ್ನರ್ ಸಾಹೇಬ್ರೇ ಈಗ ಸರ್ಕಾರದ ಮಾತು ಕೇಳಲ್ಲ, ಇನ್ನು ನಾನು ಕೇಳ್ತೀನಾ? ನೋ ಚಾನ್ಸ್...’

ಪಮ್ಮಿ ತಿರುಗೇಟಿಗೆ ತೆಪರೇಸಿ ತೆಪ್ಪಗಾದ. ಗೆಳೆಯ ಡುಂಡಿರಾಜ್ ಚುಟುಕು ನೆನಪಾಯಿತು:

‘ನೀರಿನ ಸಾಗರ ದಾಟಲು ತೆಪ್ಪ ಬೇಕು... ಸಂಸಾರದ ಸಾಗರ ದಾಟಲು ತೆಪ್ಪಗಿರಬೇಕು!’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.