ADVERTISEMENT

ಚುರುಮುರಿ: ಮೊಸಳೆ ಕಣ್ಣೀರು!

ಗುರು ಪಿ.ಎಸ್‌
Published 25 ಫೆಬ್ರುವರಿ 2026, 23:30 IST
Last Updated 25 ಫೆಬ್ರುವರಿ 2026, 23:30 IST
   

‘ಸರ್ಕಾರಿ ಜಾಬ್‌ಗಾಗಿ ನಮ್ಮ ಯೂಥ್ಸ್ ಹೀಗೆ ಬೀದೀಲಿ ಪ್ರತಿಭಟಿಸೋದು ನೋಡಿದರೆ ಕರುಳು ಚುರ್ ಅನ್ನುತ್ತೆ...’ ಎಂದು ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದ ಕಮಲ ಪಕ್ಷದ ಮುಖಂಡ ಮುದ್ದಣ್ಣ. 

‘ಕ್ಯಾಮೆರಾ ಆಫ್ ಮಾಡಿದ ಮೇಲೂ ಆ್ಯಕ್ಟ್ ಮಾಡೋದು ನಿಲ್ಲಿಸ್ತಿಲ್ವಲ್ಲಯ್ಯ ನೀನು’ ನಗುತ್ತಾ ಹೇಳಿದ ಕೈ ಪಕ್ಷದ ನಾಯಕ ವಿಜಿ. 

‘ಇಂತಹ ವಿಷಯ ಚರ್ಚೆಗೆ ಬಂದಾಗ ನಾನು ಫುಲ್ ಇನ್‌ವಾಲ್ವ್ ಆಗಿಬಿಡ್ತೀನಿ’ ಎಂದು ನಗುತ್ತಾ ಎಣ್ಣೆ ಗ್ಲಾಸ್ ಕೈಗೆತ್ತಿಕೊಂಡ ಮುದ್ದಣ್ಣ. 

ADVERTISEMENT

‘ಆದರೂ, ಮೊನ್ನೆ ಯುವಕರು ಪ್ರತಿಭಟನೆ ಮಾಡೋವಾಗ ನೀನು ಇನ್ನಷ್ಟು ಎಮೋಷನಲ್ ಆಗಬೇಕಿತ್ತು. ನಮ್ ಪಕ್ಷಕ್ಕೆ ಸ್ವಲ್ಪ ಜಾಸ್ತೀನೆ ಬೈಬೇಕಿತ್ತು’.

‘ನೀನೂ ಅಷ್ಟೇ, ನೀವು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀವಿ ಅಂದ್ರಲ್ಲ, ಯಾಕ್ ಮಾಡಿಲ್ಲ ಅಂತ ಹೇಳೋವಾಗ ಕಣ್ಣುಗಳನ್ನು ಇನ್ನಷ್ಟು ಕೆಂಪಗೆ ಮಾಡ್ಕೊಬೇಕಿತ್ತು. ಜೋರಾಗಿ ಹಲ್ಲು ಕಚ್ಚಿ ಹೇಳಿದ್ರೆ ತುಂಬಾ ಎಫೆಕ್ಟಿವ್ ಆಗಿರೋದು’ ಎಂದು ಸಿನಿಮಾ ಡೈರೆಕ್ಟರ್ ರೀತಿ ಹೇಳಿದ ಮುದ್ದಣ್ಣ.

‘ಹೌದು, ನನಗೂ ಹಾಗೇ ಅನಿಸ್ತು.‌ ಆಮೇಲೆ, ನೀನು ಒಳಮೀಸಲಾತಿ ಕಾರಣ ಲೇಟಾಯ್ತು ಅಂತ ನೆಪ ಹೇಳ್ತಿದ್ಯಲ್ಲ, ಅದನ್ನ ನಡುಗುವ ದನಿಯಲ್ಲಿ, ಕಣ್ಣಂಚಲ್ಲಿ ಸ್ವಲ್ಪ ನೀರು ತಂದುಕೊಂಡು ಹೇಳಿದ್ರೆ ಪ್ರತಿಭಟನಾಕಾರರೆಲ್ಲ ಫ್ಲ್ಯಾಟ್ ಆಗಿಬಿಟ್ಟಿರೋರು’.

‘ನಮ್ಮ‌‌ ನಮ್ಮ ಮಕ್ಕಳನ್ನ ಕಣ್ಮುಂದೆ ತಂದ್ಕೊಂಡ್ರೆ ಹಾಗೆಲ್ಲ ನ್ಯಾಚುರಲ್ ಆಗಿ ಕಣ್ಣಲ್ಲಿ ನೀರು ಬರುತ್ತೆ. ಬೇರೆಯವರ ಮಕ್ಕಳ ಪರವಾಗಿ ಮಾತನಾಡೋವಾಗ ಆ ಎಮೋಷನ್ಸ್ ಎಲ್ಲ ಹೇಗ್ ತಾನೆ ಬರುತ್ತೆ ಹೇಳು’ ಎಂದ ಮುದ್ದಣ್ಣ, ಹೊರಟು ನಿಂತ ವಿಜಿಗೆ ಕೇಳಿದ, ‘ಅದು ಸರಿ, ಈಗ ನೀನೆಲ್ಲಿಗೆ ಡ್ರಾಮಾ ಮಾಡೋಕೆ ಹೊರಟೆ’.

‘ನಮ್ ಎಮ್ಮೆಲ್ಲೆನ ಮಿನಿಸ್ಟರ್ ಮಾಡಿ, ನಮ್ ಡಿಸಿಎಂನ ಸಿಎಂ ಮಾಡಿ ಅಂತ ಪ್ರತಿಭಟಿಸೋಕೆ ಹೋಗಬೇಕಪ್ಪ’ ಎಂದು ಕಾಲ್ಕಿತ್ತ ವಿಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.