ADVERTISEMENT

ಚುರುಮುರಿ: ಹುಲಿಯಾ? ಇಲಿಯಾ?

ತುರುವೇಕೆರೆ ಪ್ರಸಾದ್
Published 7 ಫೆಬ್ರುವರಿ 2026, 0:12 IST
Last Updated 7 ಫೆಬ್ರುವರಿ 2026, 0:12 IST
   

‘ನಾಯಕ್ರುದು ಗುರ್ ಇಲ್ಲ, ಪಂಜ ಎತ್ತಲ್ಲ, ಅವರ ಹಿಂಡಿನೋರೆ ಬೆಕ್ಕಿನ್ ತರ ಬಾಲ ಹಿಡ್ಕಂಡ್ ಆಟ ಆಡುಸ್ತಾವ್ರೆ, ನೀವೀಗ ಹುಲಿಯಾ ಅಲ್ಲ ಅಂತಾವ್ರಲ್ಲ ಕಮಲ್ದೋರು’ ಕ್ಯಾತೆ ತೆಗೆದ ಗುದ್ಲಿಂಗ.

‘ಈಗ ಅಂಗೆ ಹುಲಿಯಾ ಅನ್ನಿಸ್ಕೊಳೋರು ಯಾರವ್ರಂತೆ? ಎಲ್ಲಾ ಒಬ್ರಿಗೊಬ್ರು ಮುಶಿಯಾ (ಕೋತಿ) ಅಂತ ಬೈದಾಡ್ಕೊತಾ ಇಲ್ವಾ?’ ಎಂದ ಮಾಲಿಂಗ.

‘ವಯಸ್ಸಾದಂಗೆ ಪಂಜದ ಉಗುರು ಮೊಂಡಾಯ್ತವೆ. ಕಾಲು ಕೀಲು ಹಿಡ್ಕೊಳುತ್ತೆ. ಗಂಟಲು ಗಸ ಗಸ ಅನ್ನತ್ತೆ... ಗುರ್ ಅಂದ್ರೆ ಪುರ್ ಅನ್ನೋ ಸೌಂಡ್ ಕೇಳ್ಸುತ್ತೆ’.

ADVERTISEMENT

‘ಮೇಲೆ ಫರ್ ಹಾಕ್ಕಂಡಾದ್ರೂ ಗುರ್ ಅನ್ಬೇಕಲ್ವಾ? ನೋಡ್ದೋರಿಗೆ ಹುಲಿವೇಷದ ತರನಾದ್ರೂ ಕಾಣ್ಬೇಕಲ್ವಾ?’ ಕೇಳಿದ ಕಲ್ಲೇಶಿ.

‘ಅದ್ನೇ ನಾಯಕ್ರು ಮಾಡುದ್ರಲ್ಲ. ಕಮಲದ ಮಂದೆ ಮೇಲೆ ಗುರ್ ಅಂದ್ರು. ತಮ್ಮ ಹಿಂಡಿನ ಮೇಲೆ ತಿರುಗಿ ಬಿದ್ದದ್ದಲ್ದೆ ಸ್ವೀಕರ್ ಮೇಲೂ ಕರ ಕರ ಅಂದ್ರಲ್ಲ...’

‘ಅಂಗಲ್ಲಲೇ, ಇನ್ನೊಂದು ಹುಲಿ ಜೊತೆ ಕಾದಾಡಿ ಕಾದಾಡಿ ದಣಿದಾಗ್ಲೂ ಇಂಗಾಯ್ತದೆ. ಎಷ್ಟು ಅಂತ ಗುರ್ ಅನ್ನಕ್ಕಾಯ್ತದೆ...’

‘ಅದೂ ನಿಜವೇ ಅನ್ನು... ಕೊಟ್ಟ ಮಾತು ಉಳಿಸ್ಕ ಬೇಕಾದ್ದು ಆರ್ಡಿನರಿ ಗೋವು... ಹುಲಿಯಾ ಅಲ್ಲ... ಅದು ಬಲಿ ಹಾಕಕ್ಕೇ ಸೈ. ಹೈಕಮಾಂಡ್ ಹುಲಿಗಳ ಮುಂದೆ ಎಲ್ರೂ ಮೂಗಿಲಿನೇ! ಇಲ್ಲ ಅನ್ನೋ ಧೈರ್ಯ ಯಾರಿಗೈತೆ’.

‘ಅಲ್ಲ, ಕೈ ನಾಯಕ್ರನ್ನ ಹುಲಿಯಾ ಅಲ್ಲ ಅಂತಾವ್ರಲ್ಲ, ಕಮಲ ನಾಯಕರೇನು ಹುಲಿಯಾಗಳಾ? ಅಂತಾ ರಾಜಾಹುಲೀನೆ ‘ಮೇಲ್ ಹತ್ತು, ಕೆಳಗಿಳಿ’ ಅಂತ ಒಂಟಿ ಕಾಲಲ್ಲಿ ಆಟ ಆಡುಸ್ಲಿಲ್ವಾ? ಈಗ್ಲೂ ಡೆಲ್ಲಿ ಹುಲಿಗಳ ಮುಂದೆ ಬಾಲ ಅಲ್ಲಾಡಿಸ್ಕೊಂಡು ಹುಲ್ ಮೂಸ್ಕಂಡಿಲ್ವಾ?’

‘ನಿಜ ಕಣ್ರಲಾ, ನಮ್ ಬೆಂಗಾಲ್ ಮಮತಾ ಪ್ಯಾಂಥರ್‌ ಮಾತ್ರಾನೇ ಎಲ್ರನ್ನೂ ತರ ತರ ಅನ್ಸೋದು. ಹೌದು, ಇದಕ್ಕೆ ನಮ್ ಉಪನಾಯಕರು ಏನಂತಾರೋ?’

‘ಅಯ್ಯೋ! ಯಾರು ಹುಲಿಯಾನೋ? ಸುಂಡಿಲಿಯಾನೋ? ಉಂಡೋರ‍್ನ ಮೇಲೆಬ್ಸಿ ಹಾಕ್ರಪ್ಪ ನಂಗೊಂದು ‘ಎಲೆಯ’ ಅಂತಿದಾರಂತೆ’ ಎಂದ ಪರ‍್ಮೇಶಿ. ಎಲ್ಲಾ ಗಹಗಹಿಸಿ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.