ADVERTISEMENT

ಚುರುಮುರಿ: ನೋಪತಿ ವ್ರತಸ್ಥೆ

ಆನಂದ ಉಳಯ
Published 10 ಜೂನ್ 2022, 19:31 IST
Last Updated 10 ಜೂನ್ 2022, 19:31 IST
   

‘ದಶರಥ ತ್ರಿಪತ್ನಿ ವ್ರತಸ್ಥ. ಅವನ ಮಗ ರಾಮ ಏಕಪತ್ನಿ ವ್ರತಸ್ಥ...’ ಹೆಂಡತಿ ಶುರು ಮಾಡಿದಳು.

‘ಈಗ ಈ ವಿಷಯ ಯಾಕೆ?’ ಎಂದೆ.

‘ಅಲ್ರೀ, ಈ ಗುಜರಾತಿನ ಹೆಣ್ಣು ಮಗಳು ‘ನೋಪತಿ ವ್ರತಸ್ಥೆ’ ಆಗುತ್ತಿದ್ದಾಳೆ’.

ADVERTISEMENT

‘ಅಲ್ಲಮ್ಮಾ, ನಾನು ಸೀತಾಪತಿ, ಅಲೋಪಥಿ, ನ್ಯಾಚುರೋಪಥಿ, ಸಿಂಪಥಿ ಇವನ್ನೆಲ್ಲಾ ಕೇಳಿದ್ದೇನೆ. ಇದ್ಯಾವುದು ನೋಪತಿ?’

‘ಓದಲಿಲ್ಲೇನು ಪೇಪರಿನಲ್ಲಿ? ಆಕೆಗೆ ಮದುವೆ, ಆದರೆ ಗಂಡ ಇರೋಲ್ಲ’.

‘ವ್ಹಾಟ್! ಗಂಡನಿಲ್ಲದ ಮದುವೆ? ಚಟ್ನಿ ಇಲ್ಲದ ಇಡ್ಲಿ ತರಹ?’

‘ಹಾಗೇ ಅನ್ನಿ. ನಿಮಗೆ ಯಾವಾಗಲೂ ತಿಂಡೀನೆ ನೆನಪಿಗೆ ಬರುತ್ತೆ. ಆಕೆಗೆ ಮದುವೆ ಆಗಬೇಕಂತೆ. ಆದರೆ ಗಂಡ ಬೇಡವಂತೆ. ಅದಕ್ಕೇ ನಾನು ಹೇಳಿದ್ದು ನೋಪತಿ ವ್ರತಸ್ಥೆ ಅಂತ’.

‘ಇದಕ್ಕೆ ಇಂಗ್ಲಿಷಿನಲ್ಲಿ ಸೋಲೋಗಮಿ ಅಂತಾರೆ. ಮನಾಗಮಿಗೆ ರಾಮ ಉದಾಹರಣೆ. ಪಾಲಿಗಮಿಗೆ ದಶರಥ ಉದಾಹರಣೆ. ಆದರೆ ಈ ಹೆಣ್ಣು ಮಗಳೇಕೆ ಈ ನಿರ್ಧಾರಕ್ಕೆ ಬಂದಳು?’

‘ಮದುವೇನೂ ಆಗಬೇಕು ಆದರೆ ಗಂಡ ಬೇಡ. ತನಗೆ ತಾನೇ ಯಜಮಾನರು ಅಥವಾ ಯಜಮಾನಿ’.

‘ಅದಕ್ಕೇಕೆ ಮದುವೆ? ಸಿಂಗಲ್ಲಾಗಿ ಇದ್ದರೆ ಸಾಲದೆ?’

‘ಆಗ ಎಲ್ಲರೂ ಅಂತಹವರನ್ನು ಅನ್‍ಮ್ಯಾರೀಡ್ ಅಂತಾರೆ. ಹಾಗೆ ಕರೆಸಿಕೊಳ್ಳೋದು ಆಕೆಗೆ ಇಷ್ಟ ಇಲ್ಲ ಅಂತ ಕಾಣುತ್ತೆ’.

‘ಹಾಗಿದ್ದರೆ ಈಗ ಮ್ಯಾರೀಡ್ ಬಟ್ ಸಿಂಗಲ್. ನಾಳೆ ಯಾವುದಾದರೂ ಅರ್ಜಿ ತುಂಬ ಬೇಕಾದರೆ ಅಲ್ಲಿ ‘ಮ್ಯಾರೀಡ್?’ ಅನ್ನೋ ಕಡೆ ‘ಯೆಸ್’ ಅಂತ ಬರೆದು ‘ಗಂಡನ ಹೆಸರು’ ಎಂದಿರುವ ಕಡೆ ಈಕೆ ಅದನ್ನು ಖಾಲಿ ಬಿಡ್ತಾಳೋ ಅಥವಾ ತನ್ನ ಹೆಸರೇ ಬರ್ಕೊತಾಳೋ...’

‘ಅವಳ ಹೆಸರೇ ಬರೀಬೇಕೇನೊ. ಏಕೆಂದರೆ ಆಕೆ ತನ್ನನ್ನು ತಾನೇ ವರಿಸಿದ್ದಾಳಲ್ಲ? ಇದರಿಂದ ಸ್ಫೂರ್ತಿ ಪಡೆದುಕೊಂಡು ಯಾರಾದರೂ ಗಂಡಸರು ಹೀಗೆ ತಮ್ಮನ್ನು ತಾವೇ ಮದುವೆ ಆಗಬಹುದೆ?’

‘ಖಂಡಿತ. ಆದರೆ ಅವನಿಗೆ ಅಡುಗೆ ಮಾಡೋದಿಕ್ಕೆ ಬರುತ್ತಿರಬೇಕಷ್ಟೆ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.