ADVERTISEMENT

ಚುರುಮುರಿ| ಯುಟ್ಯೂಬ್ ಹಳ್ಳಿ

ನಾರಾಯಣ ರಾಯಚೂರ್
Published 9 ಸೆಪ್ಟೆಂಬರ್ 2022, 19:31 IST
Last Updated 9 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ರೀ... ಯುಟ್ಯೂಬ್‌ನಲ್ಲಿ ಏನು ಹರಿದಾಡ್ತಿವೆ ನೋಡಿದ್ರಾ?’

‘ಬೆಂಗಳೂರಲ್ಲಿ ಹರಿದಾಡಿದ್ದನ್ನ ನೋಡಿಯೇ ಸಾಕಾಗಿದೆ, 40 ಪರ್ಸೆಂಟ್ ಬೆಂಗಳೂರು ನೀರ್‌–ನಾಮ್ ಆಗಿತ್ತು. ನೀರಲ್ಲೇ ಮೀನು ಹಿಡಿಯೊ ತರಹ ಆಗಿ, ಬೋಟ್-ಕ್ಲಬ್ಬು, ಡ್ರೌನಿಂಗ್ ಸ್ಟ್ರೀಟು ಪ್ರತ್ಯಕ್ಷವಾಗಿದ್ದವು’.

‘ಅದನ್ನ ಯುಟ್ಯೂಬ್‌ನಲ್ಲಿ ನೋಡಾಯ್ತು ನಾನು. ಈಗ ನಾನು ಹೇಳೋಕೆ ಹೊರ್ಟಿರೋದು ಹಳ್ಳಿ ವಿಚಾರ- ‘ಯುಟ್ಯೂಬ್ ಹಳ್ಳಿ’ದು!’

ADVERTISEMENT

‘ಯುಟ್ಯೂಬ್ನಲ್ಲೂ ಹಳ್ಳಿ, ರಾಜ್ಯ, ದೇಶ ಅಂತೆಲ್ಲ ಇದೆಯಾ?’

‘ಇಡೀ ಪ್ರಪಂಚಾನೇ ಇದೆ ರೀ ಈ ಯುಟ್ಯೂಬ್‌ನಲ್ಲಿ! ಛತ್ತೀಸಗಡದಲ್ಲಿರೋ ತುಳಸಿ ಅನ್ನೋ ಒಂದು ಪುಟ್ಟ ಹಳ್ಳೀಲಿ 3,000 ಜನಸಂಖ್ಯೆಯಲ್ಲಿ 1,000 ಜನ ಯುಟ್ಯೂಬ್ ಚಾನೆಲ್ ನಡೆಸ್ತಿದ್ದಾರಂತೆ. ಸರ್ಕಾರಿ ಉದ್ಯೋಗ ಬಿಟ್ಟು ಈ ವಿಡಿಯೊ ಉದ್ಯೋಗದಲ್ಲಿ ಚೆನ್ನಾಗಿ ದುಡ್ಡು ಮಾಡ್ತಿದ್ದಾರಂತೆರೀ, ನೀವೂ ಇದ್ದೀರ!’ ಮಡದಿಯ ಮೂದಲಿಕೆ.

ಓ... ಹಳ್ಳಿಯ ಮೂರನೇ ಒಂದುಭಾಗ ಯುಟ್ಯೂಬ್ ಮಾಡೋರೆ ಅಂತಾದರೆ ಇನ್ನುಮುಂದೆ ಅಲ್ಲಿ ಹುಟ್ಟೋ ಮಕ್ಕಳೂ ‘ಟೆಸ್ಟ್ ಟ್ಯೂಬ್’ ಬೇಬಿಗಳ ಥರ ‘ಯುಟ್ಯೂಬ್‌ ಬೇಬಿ’ಗಳೇ ಆಗಿರ್ತಾವೇನೊ!’

‘ಅಲ್ಲಿ ಮುದುಕರೂ ರಾಮ್-ಲೀಲಾ ನಾಟಕದ ದೃಶ್ಯಗಳನ್ನ ಮಾಡ್ತಿದ್ದಾರಂತೆ. ಹೆಂಗಸ್ರು ಕ್ಯಾಮೆರಾದ ಮುಂದೆ ಬಂದು ವಿಡಿಯೊ ಮಾಡಿದ್ರೆ, ಯುವಕರು ‘ಛತ್ತೀಸಘರಿಯಾ’ ಅನ್ನೋ ಹಾಸ್ಯ ವಿಡಿಯೊ ಮಾಡಿ ಲಕ್ಷ ಲೈಕ್ ಪಡೆದು ದುಡ್ಡು ಸಂಪಾದಿಸ್ತಾ ಇದ್ದಾರಂತೆ’.

‘ಹಾಸ್ಯ ಯಾರಿಗೆ ಬೇಕೋ, ಇಲ್ಲಿ ಕಣ್ಣೀರ ಕೋಡಿನೇ ಹರೀತು. ಕೆರೆ ತೂಬುಗಳೆಲ್ಲ ಒಡೆದು ಬೆಂಗಳೂರು ಬಳಲಿತು. ರಾಜಕಾಲುವೆಗಳು ಪ್ರಜೆಗಳಿಗೆ ಕಂಟಕವಾಗಿ ನಗರವು ಜಲಾನಯನ ಪ್ರದೇಶವಾಗಿ, ಜನಗಳ ನಯನದಲ್ಲಿ ಜಲ ಸುರಿಯೋದನ್ನೇ ವಿಡಿಯೊ ಮಾಡಬೇಕಷ್ಟೇ’.

‘ಅದನ್ನೇ ಮಾಡಿ. ಒಟ್ಟಾರೆ ಲೈಕ್ ಜಾಸ್ತಿ ಬರಬೇಕು, ಸಂಪಾದನೆ ಹೈಕ್ ಆಗ್ಬೇಕು, ನೀವು ಯುಟ್ಯೂಬ್‌ನಲ್ಲಿ ಬರಬೇಕು’.

‘ಟ್ಯೂಬ್ ಇರಲಿ, ಈಗ ಸ್ವಲ್ಪ ಟಾಯರ್ಡ್ ಆಗಿದೀನಿ, ಆಮೇಲೆ ನೋಡೋಣ್ವಾ?!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.