ADVERTISEMENT

ಚುರುಮುರಿ | ಬಂಪರ್ ಬಜೆಟ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 2:01 IST
Last Updated 20 ಫೆಬ್ರುವರಿ 2023, 2:01 IST
   

ಬೆಕ್ಕಣ್ಣ ಬಜೆಟ್ ಸುದ್ದಿಗಳನ್ನು ಬಿಟ್ಟೂಬಿಡದೆ ನೋಡುತ್ತಿತ್ತು.

‘ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರ ಕಿವಿಯಲ್ಲಿ ಚೆಂಡು ಹೂವು= ಕೇಸರಿ ಬಣ್ಣ = ಕೇಸರಿ ಬಣ್ಣದ ಕಮಲದ ಹೂವು... ಏನೋ ಈ ಸಮೀಕರಣನೇ ಬಗೆಹರಿವಲ್ದು’ ಎಂದು ತಲೆ ಕೆರೆದುಕೊಂಡಿತು.

‘ಕೇಸರಿ ಬಣ್ಣ ನಿಮ್ಮ ಕಮಲಕ್ಕನ ಮನಿಯವ್ರಿದ್ದು ಮಾತ್ರ ಅಲ್ಲಲೇ. ಕೇಸರಿ ಎಂಥಾ ಚಂದದ ಬಣ್ಣ... ನಿಂದೂ ಹುಲಿಯಂಥ ಕೇಸರಿ ಬಣ್ಣ ಅಲ್ಲೇನು? ಹೂವುಗೀವು ಬಿಟ್ಟಾಕಿ ಬಜೆಟ್ಟಿನಾಗೆ ಏನೈತೆ ನೋಡು’ ಎಂದು ಬೆಕ್ಕಣ್ಣನ ಮೂತಿಗೆ ತಿವಿದೆ.

ADVERTISEMENT

‘ಅಲ್ಲಾ... ಬೊಮ್ಮಾಯಿ ಅಂಕಲ್ಲು ಬಜೆಟ್ಟಿನಾಗೆ ಎಲ್ಲರಿಗೂ ಏನೇನೋ ಸವಲತ್ತು ಕೊಟ್ಟಾರೆ. ಬೀದಿನಾಯಿ ದತ್ತು ತಗೊಳ್ಳಾಕೆ ಅದೇನೋ ಪೋರ್ಟಲ್ಲು ಮಾಡ್ತಾರಂತೆ, ಮುಧೋಳ ನಾಯಿ ತಳಿ ಸಂರಕ್ಷಣೆಗೆ 5 ಕೋಟಿ ಕೊಟ್ಟಾರೆ... ಬೆಕ್ಕುಗಳ ರಕ್ಷಣೆ ಬಗ್ಗೆ ಮಾತ್ರ ಒಂದ್ ಮಾತೂ ಇಲ್ಲ’ ಬೆಕ್ಕಣ್ಣ ಸುದ್ದಿ ಓದುತ್ತ ಜೋರಾಗಿ ಗುರ್‍ರೆಂದಿತು.

‘ರೈತರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಭಾರೀ ಬಂಪರ್ ಕೊಡುಗೆ ಕೊಟ್ಟಾರಂತೆ. ಏನೇ ಅಂದ್ರೂ ನಮ್ಮ ಬೊಮ್ಮಾಯಿ ಅಂಕಲ್ಲು ಮಹಿಳೆಯರು, ವಿದ್ಯಾರ್ಥಿಗಳು, ರೈತರ ಕೈಬಿಡಂಗಿಲ್ಲ’ ಗುರ್‍ರೆನ್ನುವುದನ್ನು ಮರೆತ ಬೆಕ್ಕಣ್ಣ ಅಭಿಮಾನದಿಂದ ಉಲಿಯಿತು.

‍‘ಚುನಾವಣೆ ಮುಂದಿಟ್ಟುಕೊಂಡು ಅದೆಂಗೆ ಕೈಬಿಡ್ತಾರಲೇ... ಈಗ ಬಜೆಟ್ಟಿನಾಗೆ ಕೈತುಂಬ ಕೊಟ್ಟಂಗೆ ಮಾಡಿದರೆ ಮುಂದೆ ಚುನಾವಣೆವಳಗ ಬೆಳೆ ಹುಲುಸಾಗಿ ಬರತೈತಿ. ರಾಜ್ಯ ಬೊಕ್ಕಸದ ಒಟ್ಟು ಸಾಲ ಎಷ್ಟೈತೆ ನೋಡು. 77 ಸಾವಿರ ಕೋಟಿ ರೂಪಾಯಿ ಸಾಲ, ಮತ್ತ ಅದಕ್ಕ ಬಡ್ಡಿ 34 ಸಾವಿರ ಕೋಟಿ. ಬಂಪರ್ ಕೊಡುಗೆನೂ ಅವರ ಜೇಬಿಂದ ಕೊಡಂಗಿಲ್ಲ, ಸಾಲನೂ ಅವರ ಜೇಬಿಂದ ತುಂಬಂಗಿಲ್ಲ, ತಿಳೀತಿಲ್ಲೋ’ ನಾನು ಕುಟುಕಿದೆ.

‘ಅಂದರೆ ಚೆಂಡು ಹೂವೋ ಅಥವಾ ಕಮಲದ ಹೂವೋ... ಒಟ್ಟು ಎಲ್ಲಾರೂ ಸೇರಿ ನಿಮಗ ಅಂದ್ರ ಶ್ರೀಸಾಮಾನ್ಯನ ಕಿವಿಗೆ ಹೂವು ಇಡ್ತಾರಷ್ಟೇ’ ಬೆಕ್ಕಣ್ಣ ಕೊನೆಗೊಂದು ಜಾಣತನದ ಷರಾ ಬರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.