ADVERTISEMENT

ಚುರುಮುರಿ | ಗಂಡನ ವೈರಾಗ್ಯ

ಮಣ್ಣೆ ರಾಜು
Published 8 ಮೇ 2020, 20:09 IST
Last Updated 8 ಮೇ 2020, 20:09 IST
.
.   

‘ಗುರೂಜಿ, ಲಾಕ್‍ಡೌನ್ ಶುರುವಾದಾಗಿನಿಂದ ನನ್ನ ಗಂಡ ಒಂಥರಾ ಆಡ್ತಿದ್ದಾರೆ. ಹೆಂಡ್ತಿ, ಮಕ್ಕಳು, ಬದುಕು ಎಲ್ಲಾ ಶೂನ್ಯ ಅಂತ ವೈರಾಗ್ಯ ವದರುತ್ತಿದ್ದಾರೆ...’ ಟೀವಿಯ ಲೈವ್ ಪ್ರೋಗ್ರಾಂನ ಗುರೂಜಿಗೆ ಫೋನ್ ಮಾಡಿ ಸುಮಿ ಕಷ್ಟ ಹೇಳಿಕೊಂಡಳು.

‘ಕೆಲ್ಸ-ಕಾರ್ಯ, ಆದಾಯ ಇಲ್ಲದೆ ತಿಂಗಳುಗಟ್ಟಲೇ ಮನೇಲಿದ್ರೆ ತಿಕ್ಕಲು ಹಿಡಿಯದೇ ಇರುತ್ತಾ? ಲಾಕ್ ಓಪನ್ ಆದ್ಮೇಲೆ ಗಂಡ ರಿಪೇರಿ ಆಗ್ತಾರೆ ಬಿಡಮ್ಮಾ...’ ಅಂದ್ರು ಗುರೂಜಿ.

‘ಹಿಂದೆ ಜನ ಮನೆಯಲ್ಲಿ ಹುಟ್ಟಿ, ಮನೆಯಲ್ಲೇ ಸಾಯುತ್ತಿದ್ದರು. ಈಗ ಜನನ, ಮರಣ ಆಸ್ಪತ್ರೆಯಲ್ಲೇ. ಡಾಕ್ಟರಿಂದ ಡೆಲಿವರಿ, ಡಾಕ್ಟರಿಂದಲೇ ಮಾರ್ಚರಿ... ನಮ್ಮದಲ್ಲದ ಈ ಬದುಕು ನಶ್ವರ. ಅಲ್ಲಿಹುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಅಂತಾರೆ. ಗಂಡ ವೈರಾಗ್ಯ ತಾಳಿಬಿಟ್ಟರೆ ಸಂಸಾರದ ಗತಿ ಏನು ಗುರೂಜಿ?’ ಸುಮಿಗೆ ಆತಂಕ.

ADVERTISEMENT

‘ಎಲ್ಲರಿಗೂ ಕೊರೊನಾ ಕಂಟಕ ವಕ್ಕರಿಸಿಕೊಂಡಿದೆ. ಗೂಟ ಹೊಡಕೊಂಡು ಇಲ್ಲೇ ಇರ್ತೀವಿ ಅಂತ ಆಸ್ತಿ-ಪಾಸ್ತಿ ಗುಡ್ಡೆ ಮಾಡಿಕೊಂಡಿದ್ದವರಿಗೂ ಕೊರೊನಾದಿಂದ ಜೀವಭಯ ಉಂಟಾಗಿದೆ. ಪೈಲ್ವಾನರು, ಪರಾಕ್ರಮಿಗಳು ಕೊರೊನಾಗೆ ಹೆದರಿ ಮನೆ ಸೇರಿದ್ದಾರೆ. ಏರೋಪ್ಲೇನ್, ಹೆಲಿಕಾಪ್ಟರ್‌ನಲ್ಲಿ ಹಾರಾಡುತ್ತಿದ್ದವರೆಲ್ಲಾ ಬಾಲ ಮುದುರಿಕೊಂಡಿದ್ದಾರೆ. ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ನಡುವಿನ ಈ ಬದುಕು ಬರೀ ತಿಕ್ಕಲೇ... ಎಂದು ಗಂಡ ಕನವರಿಸುತ್ತಿರುತ್ತಾರೆ ಗುರೂಜಿ’ ಸುಮಿ ಕಣ್ಣೀರು ಒರೆಸಿಕೊಂಡಳು.

‘ಹೌದು ತಾಯಿ, ಸತ್ತಾಗ ನಾವು ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ. ಕೊರೊನಾದಿಂದ ಸತ್ತರೆ ಹೆಣ ಹೊರಲೂ ಜನ ಬರೋಲ್ಲ. ಅಂತ್ಯಸಂಸ್ಕಾರದಲ್ಲಿ ಹೆಂಡ್ತಿ, ಮಕ್ಕಳು, ಬಂಧುಬಳಗವೂ ಭಾಗವಹಿಸುವಂತಿಲ್ಲ. ಹೂಳುವುದಕ್ಕೂ ಜನ ಜಾಗ ಕೊಡುತ್ತಿಲ್ಲ. ಡಾಕ್ಟರ್‌ಗಳು ಸ್ಮಶಾನದಿಂದ ಸ್ಮಶಾನಕ್ಕೆ ಹೆಣ ಹೊರುವಂತಾಗಿದೆ. ಮನುಷ್ಯನ ಬಾಳು ಇಷ್ಟೇ, ಬದುಕಿದ್ದಾಗ ಜಂಜಾಟ, ಸತ್ತ ಮೇಲೂ ಹೆಣಗಾಟ...’

‘ಪರಿಹಾರ ಹೇಳಿ ಅಂದರೆ, ಇನ್ನಷ್ಟು ಹೆದರಿಸುತ್ತೀರಲ್ಲಾ ಗುರೂಜಿ...’ ಎಂದು ಫೋನ್ ಕಟ್ ಮಾಡಿದ ಸುಮಿ, ಚಾನೆಲ್ ಚೇಂಜ್ ಮಾಡಿ ನಿಟ್ಟುಸಿರುಬಿಟ್ಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.