
ಚುರುಮುರಿ
‘ಹಲೋ, ಸರ್ ನಾನು... ನೀವು ಪೊಲೀಸ್‌ನವರಾ?’ ನ್ಯೂ ಇಯರ್ ಪಾರ್ಟಿ ಮುಗಿಸಿ ಸುಸ್ತಾಗಿದ್ದ ವಿಜಿ 100 ಸಂಖ್ಯೆಗೆ ಫೋನ್ ಮಾಡಿದ.
‘ಹೌದು, ಹೇಳಿ...’ ಪೊಲೀಸಪ್ಪನ ಗಡಸು ದನಿ.
‘ಸಾರ್, ಎಣ್ಣೆ ಜಾಸ್ತಿಯಾಗಿ ಕಣ್ಣು ಮಿಣಮಿಣ ಅಂತಿದೆ. ನೀವು ಠಣ್ ಅಂತ ಇಲ್ಲಿಗೆ ಬಂದ್ರೆ ಟಂಟಡಣ್ ಅಂತ ನಾನು ಮನೆ ಸೇರ್ಕೋತಿನಿ...’
‘ಸರಿ, ಎಲ್ಲಿದಿರಾ ಹೇಳಿ, ಬರ್ತೀವಿ’.
‘ಇಲ್ಲೇ ಇದೀನಿ ಸಾರ್, ಇಲ್ಲೇ...’
‘ಇಲ್ಲೇ ಅಂದ್ರೆ ಎಲ್ಲಿ ರೀ, ಲ್ಯಾಂಡ್ ಮಾರ್ಕ್ ಹೇಳಿ’.
‘ಇಲ್ಲೊಂದು ಬಾರ್ ಇದೆ ಸರ್, ಅದರ ಮುಂದಿನ ರಸ್ತೆಬದಿ ಮಲಗಿದೀನಿ’.
ಮೊಬೈಲ್ ನೆಟ್‌ವರ್ಕ್ ಆಧಾರದ ಮೇಲೆ ಲೊಕೇಷನ್‌ಗೆ ಬಂದರು ಪೊಲೀಸರು.
‘ಅಬ್ಬಬ್ಬಾ, ಏನ್ ಆಕ್ಯುರೇಟು. ಸರ್ಕಾರದ ಸೇವೆ ಇಷ್ಟು ನೇರವಾಗಿ ಇದೇ ಮೊದಲ ಬಾರಿ ನಾನು ಪಡ್ಕೊಳ್ತಿರೋದು’ ಅಂತ ಹೆಮ್ಮೆಯಿಂದ ಹೇಳಿದ ವಿಜಿ.
‘ಆಯ್ತು, ಮನೆ ರೂಟ್ ಆದ್ರು ಕರೆಕ್ಟ್ ಆಗಿ ಹೇಳಿ’ ಎಂದ ಪೊಲೀಸ್, ಜೀಪ್ ಸ್ಟಾರ್ಟ್ ಮಾಡಿದರು.
‘ಸ್ಟ್ರೈಟ್ ಹೋಗಿ, ಲೆಫ್ಟ್ ತಗೊಳಿ, ಮತ್ತೆ ಲೆಫ್ಟ್ ಟರ್ನ್ ಮಾಡಿ, ಮತ್ತೆ ಎಡಕ್ಕೆ ತಿರುಗಿಸಿ, ಅಲ್ಲೊಂದು
ಪರಮೇಶ್ವರ ದೇವಸ್ಥಾನ ಇದೆ, ಅದರ ಹತ್ತಿರ ನಿಲ್ಲಿಸಿ’.
‘ರೀ, ಇದು ಪರಶಿವನ ದೇವಸ್ಥಾನ ಅಲ್ಲ. ನಮ್ ಹೋಂ ಮಿನಿಸ್ಟರ್ ಪರಮೇಶ್ವರರ ಮನೆ’.
‘ಅಯ್ಯೋ ಹೌದಾ, ನಮಗಾಗಿ ಇಷ್ಟೆಲ್ಲ ವ್ಯವಸ್ಥೆ ಮಾಡಿರೋ ಅವರು ನಮಗೆ ದೇವರ ಸಮಾನವೇ’ ಕೈ ಮುಗಿದ.
‘ಆಯ್ತು ಇಳೀರಿ’ ಎಂದರು ಪೊಲೀಸರು.
‘ಓಯ್, ಮನೆವರೆಗೂ ಡ್ರಾಪ್ ಕೊಡಿ. ಇಲ್ಲಾಂದ್ರೆ ಇಲ್ಲೇ ನಿಮ್ ಮಿನಿಸ್ಟರ್‌ಗೆ ಕಂಪ್ಲೇಂಟ್ ಮಾಡ್ತೀನಿ ನೋಡಿ’.
ತಲೆ ಚಚ್ಚಿಕೊಂಡ ಪೊಲೀಸರು ವಿಜಿಯನ್ನು ಮತ್ತೆ ಜೀಪ್ ಏರಿಸಿದರು.
‘ರೈಟ್ ತಿರುಗಿಸಿ, ಮತ್ತೆ ಬಲಕ್ಕೆ ಹೊರಳಿಸಿ, ಮತ್ತೆ ರೈಟ್...’ ಜೀಪು ವಿಧಾನಸೌಧದ ಮುಂದೆ ಬಂದು
ನಿಂತಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.