ADVERTISEMENT

ಚುರುಮುರಿ | ಆನ್‌ಲೈನ್‌ ಮೀಟಿಂಗ್

ಗುರು ಪಿ.ಎಸ್‌
Published 5 ಜೂನ್ 2020, 20:00 IST
Last Updated 5 ಜೂನ್ 2020, 20:00 IST
   

‘ವಿಧಾನ ಪರಿಷತ್ ಅಥವಾ ರಾಜ್ಯಸಭೆ ಚುನಾವಣೆ ಟಿಕೆಟ್‌ಗಾಗಿ ಯಾರೂ ಕಚೇರಿಯತ್ತ ಬರಬಾರದು. ಕೋವಿಡ್‌–19 ಇರುವುದರಿಂದ ನಿಮ್ಮ ಮನೆಯಲ್ಲಿಯೇ ಕುಳಿತು ಅಹವಾಲು ಸಲ್ಲಿಸಬೇಕು’ ಎಂದು ಫರ್ಮಾನು ಹೊರಡಿಸಿದರು ಪಕ್ಷದ ಅಧ್ಯಕ್ಷರು. ನೇರವಾಗಿ ಭೇಟಿಯಾಗಿ ಲಾಬಿ–ಗೀಬಿ ಮಾಡಿದರೆ ಟಿಕೆಟ್‌ ಗಿಟ್ಟಬಹುದು ಎಂಬ ಯೋಚನೆಯಲ್ಲಿದ್ದ ಮುದ್ದಣ್ಣ ಚಿಂತೆಗೀಡಾದ.

‘ಇದೇನ್ರಿ, ಈ ಅಧ್ಯಕ್ಷರು ಹೀಗಂತವ್ರೆ... ಮತ್ತೆ ಅವ್ರ ಜೊತೆ ಮುಖಾಮುಖಿ ಮಾತಾಡೋದ್‌ ಹೆಂಗೆ?’

‘ಆನ್‌ಲೈನ್‌ ಟೀಚಿಂಗ್ ಥರ ಆನ್‌ಲೈನ್‌ ಮೀಟಿಂಗ್‌ ಮಾಡ್ತಾರಂತೆ ಸರ್... ಈ ಲೈವ್‌ ಮೀಟಿಂಗ್‌ನಲ್ಲೂ ನೀವು ಮಾಸ್ಕ್‌ ಹಾಕ್ಕೊಂಡೇ ಇರಬೇಕು’ ಹೇಳ್ದ ಅಡ್ವೈಸರ್‌ ವಿಜಿ.

ADVERTISEMENT

‘ಏನ್‌ ಆನ್‌ಲೈನೋ, ಏನ್‌ ಮೀಟಿಂಗೋ... ಟಿಕೆಟ್‌ ಸಿಕ್ಕರೆ ಸಾಕು’ ಎಂದು ಕಂಪ್ಯೂಟರ್‌ ಪರದೆ ಮುಂದೆ ಕುಳಿತ ಮುದ್ದಣ್ಣ.

‘ಕೊರೊನಾ ಸಂದರ್ಭದಲ್ಲಿ ನೀವೇನು ಮಾಡಿದ್ದೀರಾ...?’ ಕೇಳಿದ್ರು ಅಧ್ಯಕ್ಷರು.

‘ಜನ್ರಿಂದ ಕಟ್ಟುನಿಟ್ಟಾಗಿ ಡಿಸ್ಟೆನ್ಸ್‌ ಮೇಂಟೇನ್‌ ಮಾಡಿದೀನಿ.. ನನ್ನಿಂದ ಅವರಿಗೆ ಸೋಂಕು ಹರಡಬಾರದು ಅಂತ ಎಚ್ಚರ ವಹಿಸಿದೀನಿ ಸಾರ್...’

‘ನಿಮಗೆ ದೇಶ ಮೊದಲೋ ರಾಜ್ಯ ಮೊದಲೋ?’

ಪಕ್ಷದ ತತ್ವಗಳ ಅರಿವಿದ್ದ ಮುದ್ದಣ್ಣ ಥಟ್ ಅಂತ ಹೇಳ್ದ, ‘ದೇಶ ಮೊದಲು ಸಾರ್...’

‘ವೆರಿಗುಡ್, ನಿಮ್ಮಂಥ ದೇಶನಿಷ್ಠರ ಅಗತ್ಯ ನಮ್ಮ ಪಕ್ಷಕ್ಕಿದೆ’ ಎಂದು ಅಧ್ಯಕ್ಷರು ಹೊಗಳುತ್ತಿದ್ದಂತೆ, ಆಡಿಯೊ ಲೈನ್ ಕಡಿತವಾಯ್ತು. ಮುಖ ಕಾಣಿಸುತ್ತಿತ್ತೇ ಹೊರತು, ಧ್ವನಿ ಕೇಳಿಸುತ್ತಿರಲಿಲ್ಲ.

‘ಪಕ್ಷದ ರಾಷ್ಟ್ರಮಟ್ಟದ ನಾಯಕರೊಬ್ಬರಿಗೆ ರಾಜ್ಯಸಭಾ ಟಿಕೆಟ್‌ ಕೊಟ್ಟಿದ್ದೇನೆ. ದೇಶವೇ ಮೊದಲು ಎನ್ನುವ ನೀವು ಇದಕ್ಕೆ ಒಪ್ಪುತ್ತೀರಿ ಎನ್ನುವ ಸಂಪೂರ್ಣ ನಂಬಿಕೆ ನನಗಿದೆ, ಹೋಗಿ ಬನ್ನಿ’ ಕೈಮುಗಿದು ಎದ್ದರು ಪಾರ್ಟಿ ಪ್ರೆಸಿಡೆಂಟ್.

ಏನೊಂದೂ ಕೇಳಿಸಲಿಲ್ಲ. ಮಾಸ್ಕ್‌ ಹಾಕಿದ್ದ ರಿಂದ ತುಟಿ ಚಲನೆಯೂ ಗೊತ್ತಾಗಲಿಲ್ಲ. ಆದರೂ, ಅಧ್ಯಕ್ಷರು ಕೈಮುಗಿದಿದ್ದು ನೋಡಿ, ಟಿಕೆಟ್‌ ಸಿಕ್ಕಿತೆಂಬ ಖುಷಿಯಲ್ಲಿ ಕುಣಿದ ಮುದ್ದಣ್ಣ ಮನೆಯಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ಸೇಬಿನ ಹಾರ ಸಿದ್ಧಗೊಳಿಸಿ
ದ್ದರು. ಮೆರವಣಿಗೆ ಸಾಗಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.