ADVERTISEMENT

ಚುರುಮುರಿ: ಲಾವ್ ಲಾವ್ ಲೆಟರ್!

ತುರುವೇಕೆರೆ ಪ್ರಸಾದ್
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
   

‘ಏನ್ರಪಾ? ಈ ಎಐ ಕಾಲದಲ್ಲಿ ಇ-ಮೇಲ್ ಬಿಟ್ಟು ಎಲ್ಲಾ ಮತ್ತೆ ಪತ್ರ ಬರೆಯಕ್ಕೆ ಶುರು ಹಚ್ಕಂಡ್‌ ಬುಟ್ಟವ್ರೆ’ ಮಾತಿಗೆಳೆದ ಗುದ್ಲಿಂಗ.

‘ಇ–ಮೇಲ್ ಅಂದ್ರೆ ಆಮೇಲ್ ಅಂತಾರೆ ಅಂತ ನೇರವಾಗಿ ಪತ್ರ ಬರೀತಾವ್ರೆ. ಲವ್ ಲೆಟ್ರು ಬರುದ್ರೇ ಮಜಾ ಇರೋದು!’ ಎಂದ ಮಾಲಿಂಗ.

‘ಅಂಗಾರೆ ಹೈಕಮಾಂಡ್ ಮೇಲೆ ಶಾಸಕರಿಗೆ ಶಾನೆ ಲವ್ವು ಅಂತೀಯಾ?’

ADVERTISEMENT

‘ಅಧಿಕಾರದ ಮೇಲೆ ಲವ್ವು, ಅಧಿಕಾರ ಹೈಕಮಾಂಡ್ ಕೈಲಿರೋ ಡವ್ವು... ಅದ್ಕೇ ಹೈಕಮಾಂಡ್ ಮೇಲೆ ಲವ್ವು!’

‘ಏಯ್ ಇದು ಲವ್ ಲೆಟರ್ ಅಲ್ಲಲೇ, ಲಾವ್ ಲಾವ್ ಲೆಟರ್! ಅಂದ್ರೆ ನಮ್ಗೂ ಅಧಿಕಾರ ಕೊಡಿ ಅಂತ ಡಿಮ್ಯಾಂಡ್ ಮಾಡೋದು. ಹೊಸಬ್ರು ನಮ್ಗೂ ಮಂತ್ರಿಗಿರಿ ಕೊಡಿ ಅಂತ ಕೇಳಾದ್ರಾಗೆ ತಪ್ಪೇನೈತೆ’.

‘ಅದೇನೋ ಸರಿ, ಇಲ್ಲಿರೋದು ಸುಮ್ಮನೆ, ಬಿಮ್ಮನೆ, ಕೈ ಅನ್ನದು ಜುಮ್ಮನೆ ಅಂತ ಗ್ಯಾನೋದಯ ಆಗಿ ಮೇಲ್ಮನೆಯೋರು ನಮ್ಮನ್ನೂ ಮಂತ್ರಿ ಮಾಡಿ ಅಂತ ಬರ‍್ದವ್ರಲ್ಲ’.

‘ಅದೆಂಗ್ಲಾ ಮಾಡಕ್ಕಾಯ್ತದೆ? ಅವರೇನು ಸಮಾವೇಶ ಮಾಡಿ ಚಿತ್ರಾನ್ನ ಕೊಟ್ಟವ್ರ, ಮನೆ ಮನೆಗೆ ಓಗಿ ಎಣ್ಣೆ ಬುಟ್ಟವ್ರ?’ ಎಂದು ಪಾಯಿಂಟ್ ಹಾಕಿದ ಮಾಲಿಂಗ.

‘ಕೆಳಮನೆಯೋರು ಅದೂ ಇದೂ ಕಿತಾಪತಿ ಮಾಡ್ಕಂಡು ಡೆಲ್ಲಿ, ಫಾರಿನ್ನು ಅಂತ ಸುತ್ತುತಿರ‍್ತಾರೆ, ಜನಗಳ ಕೈಗೆ ಸಸ್ತಾ ನಾವೇ ಸಿಗಾದು. ಅದ್ಕೇ ನಮ್ಮನ್ನೂ ಮಂತ್ರಿ ಮಾಡಿ ಅಂತ ಪಾಯಿಂಟ್ ಹಾಕವ್ರೆ’.

‘ಅಲ್ಲ ಕಣ್ರಲಾ, ಇಂಗ್ ಎಲ್ಲಾ ಲೆಟರ್‌ ಬರುದ್ರೆ ಎಂಗೆ? ರಾಜಕೀಯ ಏನ್ ಧರ್ಮಛತ್ರವಾ? ಪತ್ರ ಬರ‍್ದೋರಿಗೆಲ್ಲಾ ಮಂತ್ರಿಗಿರಿ ಕೊಟ್ರೆ ನಮ್ ನಮ್ ಪುತ್ರರು ಏನ್ ಮಾಡ್ಬೇಕು ಅಂತ ನಾಯಕರು ಸಿಡಿಮಿಡಿ ಮಾಡ್ತಾವ್ರಂತೆ’.

‘ದಿಟನೆಯ! ಇಂಗೇ ಲಾವ್ ಲಾವ್ ಅಂತಿದ್ರೆ ಡೆಲ್ಲಿಗೆ ಬುಲಾವ್ ಮಾಡಿ ಪಲಾವ್ ಮಾಡಾಕ್ತಾರೆ’ ಎಂದ ಪರ‍್ಮೇಶಿ. ಎಲ್ಲಾ ಗೊಳ್ಳನೆ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.