
ಹಬ್ಬದ ವಿರಾಮದ ನಂತರ ಬೈಟು ಬಳಗದಲ್ಲಿ ಹೊಸ ಉತ್ಸಾಹ ಮೂಡಿತ್ತು.
‘ನೀವೇನೇ ಹೇಳಿ ಪ್ರಯತ್ನಕ್ಕಿಂತ ಪ್ರಾರ್ಥನೆಯೇ ಫಲ ನೀಡೋದು…’
‘ಇರಬಹುದು, ಆದರೆ ಪ್ರಾರ್ಥನೆಗೆ ದೇವರನ್ನು ಆಯ್ಕೆ ಮಾಡೋದು ಹೇಗೆ?’
‘ಹೆಣ್ಣು ದೇವರಿಗೇ ಶಕ್ತಿ ಹೆಚ್ಚು. ಮೈಸೂರವ್ವ, ಹಾಸನವ್ವಗೆ ಇರುವಷ್ಟು ಭಕ್ತರು ಮೋದಿ ಮಾಮಾಗೂ ಇಲ್ಲ’.
‘ಮತ್ತೆ… ಕೋಟಿ ಕೋಟಿ ಆದಾಯ ಸುಮ್ಮನೇ ಬರುತ್ತಾ?’
‘ಅದಕ್ಕೇ ಪಕ್ಷ ಭೇದವಿಲ್ಲದೇ ನಾಯಕರೆಲ್ಲಾ ಪ್ರಾರ್ಥನೆಗೆ ಮುಗಿ ಬೀಳುತ್ತಿರುವುದು’.
‘ಆದರೆ, ಒಂದೇ ಕ್ಷೇತ್ರದ ಮತದಾರರನ್ನು ನಂಬದವರಂತೆ ಒಂದೇ ದೇವರನ್ನು ನಂಬದವರೂ ಇದ್ದಾರೆ. ಟೆಂಪಲ್ ರನ್ನಿಂಗ್ ರೇಸ್‌ನಲ್ಲಿ ಗೆಲ್ಲುವವರಾರೋ…’
‘ಇನ್ನೇನು ನವೆಂಬರ್ ಬಂದೇಬಿಟ್ಟಿತು, ಪಕ್ಷಗಳಲ್ಲಿ ನಾಯಕತ್ವ ಕ್ರಾಂತಿ, ಆಕಾಂಕ್ಷಿಗಳಲ್ಲಿ ರಾಜ್ಯೋತ್ಸವ ಪ್ರಶಸ್ತಿಯ ಭ್ರಾಂತಿ ಕರಗುವ ಸಮಯ. ಯಾರ ಪ್ರಾರ್ಥನೆಗೆ ಯಾವ ಫಲ ತಿಳಿದೇಬಿಡುತ್ತದೆ’.
‘ಈ ನಾಯಕರ ನಾಡಿ ಭವಿಷ್ಯ ಹೇಳುವವರು ಯಾರೂ ಇಲ್ಲ. ಆದರೆ, ‘ಬಾಡಿ ಭವಿಷ್ಯ’ದಲ್ಲಿ ಸುಳಿವು ಸಿಗುತ್ತದೆ’.
‘ಅದೇನಪ್ಪಾ ಹೊಸ ಆವಿಷ್ಕಾರ… ಬಾಡಿ ಭವಿಷ್ಯ?’
‘ನಾಡಿಯಂತೆ ಬಾಡಿಗೂ ಮಿಡಿತ ಇರುತ್ತದೆ, ಬಾಡಿ ಭಾಷೆಯಲ್ಲಿ ಭವಿಷ್ಯ ಕಾಣಿಸುತ್ತದೆ’.
‘ನಾಡಿ ಮತ್ತು ಬಾಡಿಯಂತೆ ನುಡಿಯಲ್ಲಿಯೂ ಭವಿಷ್ಯ ಇರುತ್ತದೆ. ತಂದೆ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ ಅಂತ ನುಡಿದರೆ ಮಗನ ಭವಿಷ್ಯ ತೆರೆದಂತಲ್ಲವೇ…?’
‘ತಂದೆ ತಾವು ಅಧಿಕಾರದಲ್ಲಿರುವ ತನಕ ಮಗನಿಗೆ ಮಂತ್ರಿ ಪದವಿ ಇಲ್ಲ ಎಂದೂ ನುಡಿಯಲಾಗಿದೆ…’
‘ಹಾಗಾದರೆ ‘ಪ್ರಾರ್ಥನೆ’ ಪಂಥದವರು ‘ಪ್ರಯತ್ನ’ ಸಿದ್ಧಾಂತಕ್ಕೆ ಬದಲಾಗುವುದು ಒಳ್ಳೆಯದು. ಸಿದ್ಧಾಂತದ ಫಲ ನೀಡಿದರೆ ವರುಣೇಂದ್ರಗೆ ಮಂತ್ರಿ ಪದವಿ, ಕನಕರಾಜಗೆ ಸಾಮ್ರಾಟ ಪಟ್ಟ’, ತಿಂಗಳೇಶ ಭವಿಷ್ಯ ನುಡಿದ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.