ADVERTISEMENT

ಚುರುಮುರಿ: ಬಂಗಾರ ಭಾರ

ಮಣ್ಣೆ ರಾಜು
Published 2 ಮಾರ್ಚ್ 2022, 23:30 IST
Last Updated 2 ಮಾರ್ಚ್ 2022, 23:30 IST
Churumuri==03-03-2022
Churumuri==03-03-2022   

ಗಂಡನ ಜೊತೆ ಮದುವೆ ಸಮಾರಂಭ ಮುಗಿಸಿ ಬಂದ ಸುಮಿ ಅಪ್‍ಸೆಟ್ಟಾಗಿದ್ದಳು. ಬೇಸಿಗೆ ತಾಪದಿಂದ ಬಳಲಿರಬೇಕು ಎಂದುಕೊಂಡ ಶಂಕ್ರಿ. ಮದುವೆಗಳಿಗೆ ಹೋಗಿಬರುವ ಹೆಚ್ಚಿನ ಮಹಿಳೆಯರಿಗೆ ಹೀಗೆ ಮೂಡ್ ಆಫ್ ಆಗುತ್ತೆ ಎನ್ನುವ ಸಾಮಾನ್ಯ ಜ್ಞಾನ ಅವನಿಗೆ ಇರಲಿಲ್ಲ.

‘ಇನ್ಮೇಲೆ ನಾನು ಮದುವೆಗಳಿಗೆ ಹೋಗಲ್ಲ...’ ಸುಮಿ ಸಿಡುಕಿದಳು. ‘ಯಾಕೆ? ಊಟ ಚೆನ್ನಾಗಿರಲಿಲ್ವಾ?’ ಶಂಕ್ರಿ ಕೇಳಿದ.

‘ಅಲ್ಲಾ, ಹೆಂಗಸರ ನೋಟ ಚೆನ್ನಾಗಿರಲಿಲ್ಲ...’

ADVERTISEMENT

‘ಚೆನ್ನಾಗೇ ಇತ್ತಲ್ಲಾ, ಎಲ್ಲರೂ ನನ್ನನ್ನು ನೋಡಿ ನಗ್ತಿದ್ರು’.

‘ನಗದೆ ಇನ್ನೇನು ಮಾಡ್ತಾರೆ, ಮೀಸೆಗೆ ಹೇರ್‌ಡೈ ಹಚ್ಚಿಕೊಳ್ಳುವಾಗ ಕೆನ್ನೆಗೂ ಬಳಿದುಕೊಂಡಿರುವುದು ಎದ್ದು ಕಾಣುತ್ತಿತ್ತು... ನಾನು ಅಂದವಾಗಿ ಮೇಕಪ್ ಮಾಡಿಕೊಂಡಿದ್ದರೂ ಮುಖವನ್ನು ಯಾರೂ ನೋಡುತ್ತಿರಲಿಲ್ಲ, ನನ್ನ ಕತ್ತು ನೋಡಿಕೊಂಡೇ ಮಾತನಾಡಿಸುತ್ತಿದ್ದರು. ನನಗಂತೂ ಕತ್ತು ಹಿಸುಕಿಕೊಳ್ಳುವಂತಾಗಿತ್ತು’.

‘ಹೌದಾ? ಯಾಕೆ?’

‘ಎಲ್ಲರೂ ಕೇಜಿಗಟ್ಟಲೆ ಬಂಗಾರದ ಸರಗಳನ್ನು ಹಾಕ್ಕೊಂಡಿದ್ರು, ನನ್ನ ಕುತ್ತಿಗೆಯಲ್ಲಿ ಸಾಧಾರಣ ಸಿಂಗಲ್ ಸರ ಅದ್ಕೆ...’

‘ನಿಜ, ಹೆಂಗಸರು ತೊಟ್ಟಿದ್ದ ಮಣ ಭಾರದ ಒಡವೆಗಳನ್ನು ನೋಡಿ, ಮದುವೆ ಮನೆಯೋ ಆಭರಣ ಮಳಿಗೆಯೋ ಎಂದು ಅನಿಸಿತ್ತು. ಒಡವೆ ಪ್ರದರ್ಶನಕ್ಕೆ ಗೋಲ್ಡ್ ಮೆಡಲ್ ಕೊಡುವುದಿದ್ದರೆ ಮದುವೆಗಳಿಗೆ ಕೊಡಬೇಕು’.

‘ಹೆಂಗಸರಿಗೆ ಚಿನ್ನದ ವ್ಯಾಮೋಹ ಇದ್ದೇ ಇರುತ್ತದೆ ಕಣ್ರೀ’.

‘ಬಂಗಾರದ ಅಮಲು ಅಪಾಯಕಾರಿ. ಅದು ಬಂಗಾರದಂತಹ ಸಂಸಾರ ಕೆಡಿಸಿಬಿಡುತ್ತದೆ. ಬಂಗಾರವನ್ನು ಮಾದಕ ಪದಾರ್ಥ ಎಂದು ಪರಿಗಣಿಸಿ ಬ್ಯಾನ್ ಮಾಡಬೇಕು’.

‘ಮಾನ ಕಾಪಾಡುವಷ್ಟು ಒಡವೆ ಕೊಡಿಸದಿದ್ದರೆ ನಾನು ಮದುವೆಗಳಿಗೆ ಹೋಗೋದನ್ನೇ ಬ್ಯಾನ್ ಮಾಡ್ತೀನಿ’.

‘ಯುದ್ಧ ಶುರುವಾಗಿ ಬಂಗಾರದ ಬೆಲೆ ಮೂಗಿಗಿಂತ ಮೂಗುತಿ ಭಾರ ಎನ್ನುವಷ್ಟಾಗಿದೆ. ಬೆಲೆ ಹೀಗೇ ಏರುತ್ತಿದ್ದರೆ ಕೊಳ್ಳುವುದಿರಲಿ, ಇರುವ ಒಡವೆಯನ್ನೂ ಮಾರುವ ಸ್ಥಿತಿ ಬರುತ್ತದೆ’.

‘ಹೀಗೇ ನೆಪ ಹೇಳುತ್ತಿದ್ದರೆ ನಾನು ನಿಮ್ಮ ಮೇಲೆ ಯುದ್ಧ ಸಾರಬೇಕಾಗುತ್ತದೆ...’ ಎಚ್ಚರಿಸಿದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.