ಸಾಂದರ್ಭಿಕ ಚಿತ್ರ
‘ಸಾ... ಕ್ರೆಡಿಟ್ ಸ್ಕೋರ್ ಅಂದ್ರೇನು?’ ಅಂತ ತುರೇಮಣೆಗೆ ಕೇಳಿದೆ.
‘ಯಾರು ಕ್ರೆಡಿಟ್ ಅಂದ್ರೆ ಸಾಲ ಜಾಸ್ತಿ ತಕ್ಕಂದು ತೀರಿಸಿರತನೋ ಅವನ ಆರ್ಥಿಕ ಯೇಗ್ತೇನ ಅಳೆಯೋ ತಕ್ಕಡಿಗೆ ಕ್ರೆಡಿಟ್ ಸ್ಕೋರ್ ಅಂತರೆ ಕಲಾ. ಇದು ದುಡ್ಡು–ಕಾಸಿನ ತಾಕತ್ತು ಅಳೆಯೋ ಥರ್ಮಾಮೀಟರ್ ಕಯ್ಯ’ ಎನ್ನುತ್ತಾ ಸಾಲ ಜಗತ್ತಿನ ರಹಸ್ಯದ ವಿವರ ಕೊಟ್ಟರು.
‘ಹಂಗಾದ್ರೆ ಬರೀ ಕ್ಯಾಷಲ್ಲೆ ಯವಾರ ಮಾಡಿಕ್ಯಂದು ಕ್ರೆಡಿಟ್ಟು–ಡೆಬಿಟ್ಟು ಕಾರ್ಡು ಇಲ್ಲದೆ ಕ್ರೆಡಿಟ್ ಸ್ಕೋರ್ ಏನೂ ಅಂತ್ಲೂ ಅರೀದ ನನ್ನಂತಾ ಮುಕ್ಕ ಏನು ಮಾಡಬಕು? ಮಹಾರಾಷ್ಟ್ರದೇಲಿ ವರನ ಕ್ರೆಡಿಟ್ ಸ್ಕೋರ್ ಕಮ್ಮಿ ಅದೆ ಅಂತ ಮದುವೆ ನಿಂತೋತಂತೆ’.
‘ದಿಟ ಕಲಾ. ಹೆಂಡತಿಗೆ ಕಣ್ಣಿಗೆ ಬೇಕಾದ್ದು ಕೊಡಿಸಕ್ಕೆ ಕಾಸು ಬೇಕಲ್ಲ. ಆ ಯೇಗ್ತೆ ಗಂಡಿಗದ ಅಂತ ತಿಳಕಣಕೆ ಕ್ರೆಡಿಟ್ ಸ್ಕೋರ್ ಕೇಳಿರದು’ ಅಂತಂದ್ರು.
‘ಸಾ, ಕ್ರೆಡಿಟ್ ಸ್ಕೋರು ಇನ್ನೆಲ್ಲೆಲ್ಲಿ ಕೌಂಟ್ ಆಯ್ತದೆ?’
‘ಕ್ರೆಡಿಟ್ ಸ್ಕೋರು ರಾಜಕೀಯದೇಲಿ ಬೇಕೇಬೇಕು. ಕಾಸು ಖರ್ಚು ಮಾಡಿ ಪಕ್ಸ ಕಟ್ಟಿ ಶಾಸಕರನ್ನ ಗೆಲ್ಲಿಸಿಕ್ಯಬಂದ್ರೆ ಅವನ ಕ್ರೆಡಿಟ್ ಸ್ಕೋರು ಜಾಸ್ತಿ ಆಗಿರತದೆ’.
‘ರಾಜಕೀಯದೇಲಿ ವೋಟು ಬೇಟೆ ನಡೀವಾಗ ರಾಜಪಾಲು, ಬಲೆಪಾಲು, ನಾಯಿಪಾಲು ಇರತವೆ ಕನೋ. ಈ ಪಾಲು-ಪಾರೀಕತ್ತು ಇಚಾರವ ಮುಂದಾಗೇ ಸೆಟಲ್ ಮಾಡಿಕ್ಯಂದು ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕ್ಯಬಕು. ಇಲ್ಲದೇ ಹೋದ್ರೆ ಅಧಿಕಾರ ಪಾಲಾಕುವಾಗ ಎಲ್ಲಾರು ಕಾವಿನ ಕೋಳಿ ಥರ ಕೊರಗುಟ್ಟಿಕ್ಯಂದು ಬಂದು ಕೆಡಿಸಣ್ಣನ ಆಟ ಆಡತರೆ’ ಅಂತ ಯಂಟಪ್ಪಣ್ಣ ಟಾಂಗ್ ಕೊಟ್ಟಿತು.
‘ಸತುವಾದ ಮಾತು. ಪಕ್ಸದಿಂದ ಪಕ್ಸಕ್ಕೆ ಹಾರಿ ಕೊಚ್ಚೆ ನೀರಲ್ಲಿ ಮೀನು ಹಿಡಿಯೋರು ತಮ್ಮ ಕ್ರೆಡಿಟ್ ಸ್ಕೋರ್ ಜಾಸ್ತಿ ಅದೆ ಅಂತ ತಿಳಕಂದಿರತರೆ. ಜನಕ್ಕೆ ಇವರ ತೆವಲು ಗೊತ್ತಿರತದಲ್ಲವಾ ಎಲೆಕ್ಷನ್ನಲ್ಲಿ ಎಡಿಟ್ ಮಾಡಿ ಗಾವು ಸಿಗೀತರೆ’ ಅಂತ ತುರೇಮಣೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.