
‘ಕುಲ ಪುರೋಹಿತರಾದ ದಂಮ್ರೋಟು ಜೀಜೀ ಅವರು ಖಂಡನೋಪಾಖ್ಯಾನ ವ್ರತ ಕತೆ ಓದಲ್ಲ ಅಂತ ಕ್ಯಾತೆ ತೆಗೆದು ದೊಡ್ ರಂಪಾಟ ಮಾಡವ್ರಲ್ಲಪ್ಪ’ ಎಂದು ಸಿಬಿರೆಬ್ಬಿದ ಗುದ್ಲಿಂಗ.
‘ಅದ್ಕೇ ಅಭಯಹಸ್ತ ಭಕ್ತರು ಸಿಟ್ಟಾಗಿರೋದು. ನೀವು ಶಂಕ ಊದಿ ಕತೆ ಓದಿದ್ಮೇಲೇ ನಾವು ಕುದಿವೇಶನದ ಮಿಕ್ಕ ಪೂಜೆ, ಪುನಸ್ಕಾರ ಮಾಡಿ ಎಡೆ ಇಟ್ಕಳಕ್ ಆಗಾದು. ಸಂಪ್ರದಾಯ ಮುರ‍್ದವ್ರೆ ಅಂತ ಕಿಡಿ ಕಾರ‍್ತಾವ್ರೆ’ ಎಂದ ಮಾಲಿಂಗ.
‘ಆದ್ರೆ ಈ ಕಮಲಭೂಷಣರು, ತೆನೆಧಾರಿಗಳು ಪುರೋಹಿತ್ರ ವಕಾಲತ್ತು ವಹಿಸವ್ರೆ. ವ್ರತದ ಕತೆ ಓದಿ ಅಂತ ಕಮಲಾರೋಪ ಕ್ಯಾತೆ ಉಪಾಖ್ಯಾನ ಬರ‍್ಕೊಟ್ರೆ ಎಂಗಾಯ್ತದೆ?’ ಕಾಲೆಳೆದ ಕಲ್ಲೇಶಿ.
‘ಅಲ್ವಾ ಮತ್ತೆ? ಅವರು ಮೊದ್ಲೇ ತಾವರೆ ಚಂದ ಅನ್ನೋರು. ಕಮಲಾಂಶ ಸಂಭೂತರು. ಅವರು ಎಂಗ್ಲಾ ಈ ಕತೆ ಓದಾರು?’
‘ಮೊದ್ಲಿಂದನೂ ಇಂಗೇ ಆಸ್ಥಾನ ಪುರೋಹಿತ್ರು ಕಿರಿಕ್ ಮಾಡ್ತಾವ್ರೆ. ಈ ದಂಬ್ರೋಟ್‌ನ ಎಂಗಾದ್ರೂ ಗೆಟ್‌ಔಟ್ ಮಾಡುಸ್ಬೇಕು ಅಂತ ಹಸ್ತಭೂಷಣರು ಪಣ ತೊಟ್ಟವ್ರಂತೆ’.
‘ಅದೆಂಗ್ಲಾ ಆಯ್ತದೆ? ಮಂತ್ರಕ್ಕಿಂತ ಉಗುಳೇ ಜಾಸ್ತಿ ಅಂತ ಕತೆ ಕುಲಗೆಡಿಸಿ ಅವರ ಪಿತೃಕುಲನೇ ಬಯ್ಕಳೋ ಅಂಗ್ ಬರ‍್ದಿಟ್ರೆ ಎಂಗೆ? ಕಮಲದಡಿ ಕೆಸರೈತೆ ಅಂತ ಪುರೋಹಿತ್ರು ಅದ್ನ ತೆಗೆದು ಹೂವಿನ್ ಮೇಲೆ ಎಸೆಯಕ್ಕಾಯ್ತದಾ? ಅವರು ಪೂರಾ ಕತೆ ಓದ್ದಿದ್ರೂ ನಾಂದಿ ಶ್ಲೋಕ ಹೇಳಿ ಗಂಟೆ ಬಾರಿಸಿ ಓಗವ್ರಲ್ಲ’.
‘ಅದ್ಕೇ ಒಂದು ತಿದ್ದುಪಡಿ ಮಾಡ್ಕಳಾದು? ಈಗ ವ್ರತ, ಮದ್ವೆ ಮಾಡ್ಸುವಾಗ ಪುರೋಹಿತ್ರು ‘ಮಮ’ ಅಂತ ಯೋಳ್ಸಿ ಮುಂದಿಂದೆಲ್ಲಾ ಅವರೇ ಯೋಳ್ಕತಾರೆ... ರಾಜ್ರಿಗೆ, ಅಮಾತ್ಯರಿಗೆ ಪ್ರಮಾಣವಚನ ಯೋಳುವಾಗ್ಲೂ ‘ನಾನು’ ಅಂತ ಎಲ್ಡಕ್ಷರ ಯೋಳಿ ಸುಮ್ಕಾಗ್ತಾರೆ. ಅಂಗೇ ಕುದಿವೇಶದನದಲ್ಲೂ ಕುಲಪುರೋಹಿತ್ರು ‘ನಾನು’ ಅಂತ ಯೋಳಿ ಎದ್ ಓಗ್ಲಿ... ಮಿಕ್ಕಿದ್ದನ್ನ ಅಧಿ(ವೇಶನ)ಪತಿಗಳೇ ಓದ್ಕಳ್ಳಿ ಬುಡು’ ಎಂದ ಪರ‍್ಮೇಶಿ.
‘ಸೂಪರ್!’ ಎಂದು ಪರ‍್ಮೇಶಿ ಬೆನ್ನಿಗೆ ಎಲ್ಲರೂ ಮೆಚ್ಚುಗೆಯಿಂದ ಗುದ್ದಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.