ADVERTISEMENT

ಚುರುಮುರಿ: ಸಂಕ್ರಾಂತಿ ಸ್ಪರ್ಧೆ

ಮಣ್ಣೆ ರಾಜು
Published 14 ಜನವರಿ 2026, 0:11 IST
Last Updated 14 ಜನವರಿ 2026, 0:11 IST
<div class="paragraphs"><p>ಚುರುಮುರಿ: ಸಂಕ್ರಾಂತಿ ಸ್ಪರ್ಧೆ</p></div>

ಚುರುಮುರಿ: ಸಂಕ್ರಾಂತಿ ಸ್ಪರ್ಧೆ

   

ಚಟ್ನಿಹಳ್ಳಿಯಲ್ಲಿ ಮುದ್ದೆ ಉಣ್ಣುವ ಸ್ಪರ್ಧೆ ಏರ್ಪಡಿಸಿ ಶಂಕ್ರಿ ಫೇಮಸ್ ಆಗಿದ್ದ. ರೈತರ ಮಕ್ಕಳು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ, ಸರ್ಕಾರವೇ ಹೆಣ್ಣು ಹುಡುಕಿ ಮದುವೆ ಮಾಡಬೇಕು ಎಂದು ಹೋರಾಟ ಮಾಡಿ
ಹೆಸರಾಗಿದ್ದ.

ಈಗ ಸಂಕ್ರಾಂತಿ ಅಂಗವಾಗಿ ಕೊಬ್ಬರಿ ಸುಲಿಯುವ ಸ್ಪರ್ಧೆ ಆಯೋಜಿಸಿದ್ದ. ಸುತ್ತಮುತ್ತಲಿನ ಗ್ರಾಮಗಳ ನೂರಾರು ಸ್ಪರ್ಧಿಗಳು ಭಾಗವಹಿಸಿ ಕೊಬ್ಬರಿ ಸುಲಿದಿದ್ದರು. ಸುಲಿಯುವ ಕೂಲಿಯಾಳು ಸಿಗದೆ ಬಹುದಿನಗಳಿಂದ ಸ್ಟಾಕ್ ಉಳಿದಿದ್ದ ಕೊಬ್ಬರಿ ಗಿಟುಕು ರಾಶಿಯನ್ನು ಖಾಲಿ ಮಾಡಿಕೊಂಡ!

ADVERTISEMENT

ಬಹುಮಾನ ವಿತರಣೆ ಸಮಾರಂಭದಲ್ಲಿ ಶಾಸಕರು ವಿಜೇತರಿಗೆ ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ‘ಕೊಬ್ಬರಿ ವೀರ’ ಪ್ರಶಸ್ತಿ ನೀಡಿ ಗೌರವಿಸಿದರು.

‘ಸಂಗೀತ, ನೃತ್ಯ, ರಂಗೋಲಿ ಸ್ಪರ್ಧೆಯಂತೆ ಶ್ರೀಮಾನ್ ಶಂಕ್ರಿಯವರು ಸುಗ್ಗಿ ಹಬ್ಬದ ಸಂದರ್ಭದಲ್ಲಿ ಕೊಬ್ಬರಿ ಸುಲಿಯುವ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ಕೃಷಿ ಲಾಭದಾಯಕ ಆಗಿಲ್ಲವೆಂದು ಯುವಜನರು ವ್ಯವಸಾಯದಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಂಕ್ರಿ ಅವರು ಹೊಲ ಉಳುವ, ಪೈರು ನಾಟಿ ಮಾಡುವ, ಧಾನ್ಯ ಒಕ್ಕಣೆ ಮಾಡುವ ಸ್ಪರ್ಧೆಗಳನ್ನು ನಡೆಸಿ ನಮ್ಮ ಕೃಷಿ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ...’ ಎಂದು ಶಾಸಕರು ಹಾಡಿ ಹೊಗಳಿದರು.

‘ಕೃಷಿ ಕಸುಬು ಮರೆಯುತ್ತಿರುವ ರೈತಮಕ್ಕಳನ್ನು ವ್ಯವಸಾಯಕ್ಕೆ ಮರಳಿ ಕರೆತರಲು ಕೃಷಿ ಕೌಶಲ ತರಬೇತಿ ನೀಡುವ ಯೋಜನೆ ಆರಂಭಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದರು. ಜನ ಚಪ್ಪಾಳೆ ತಟ್ಟಿದರು.

‘ಅದ್ಸರಿ, ಇಂತಹ ಸ್ಪರ್ಧೆಗಳನ್ನು ಏರ್ಪಡಿಸುವ ಉದ್ದೇಶವೇನು?’ ಶಾಸಕರು ಶಂಕ್ರಿಯ ಕಿವಿಯಲ್ಲಿ ಪಿಸುಗುಟ್ಟಿದರು.

‘ದೊಡ್ಡ ಉದ್ದೇಶವೇನೂ ಇಲ್ಲಾ ಸಾರ್, ವ್ಯವಸಾಯಕ್ಕೆ ಕೂಲಿ ಆಳು ಸಿಗುತ್ತಿಲ್ಲ, ಸ್ಪರ್ಧೆ ಅಂತ ಮಾಡಿದರೆ ಬಹುಮಾನ, ಪ್ರಚಾರದ ಆಸೆಗೆ ಜನ ಬಂದು ಭಾಗವಹಿಸುತ್ತಾರೆ, ನಮ್ಮ ಬೇಸಾಯದ ಕೆಲಸವೂ ಆಗುತ್ತದೆ!’ ಅಂದ ಶಂಕ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.