ADVERTISEMENT

ಚಿನ್ನದಂಥ ಅವಕಾಶ...!

ಕೆ.ವಿ.ರಾಜಲಕ್ಷ್ಮಿ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಉಳ್ಳವರು ಸ್ವರ್ಣಗವಸು ಧರಿಸುವರಯ್ಯ... ನಾನೇನು ಧರಿಸಲಯ್ಯ? ಬಡವನು!’

‘ಚಿನ್ನದ ಮುಖಗವಸು ಧರಿಸಿದವನ ನೆನೆದು ನೊಂದುಕೊಳ್ತಿದ್ದೀರೇನೋ? ಪಾಪ!’ ಅತ್ತೆ ಶರವೇಗದಲ್ಲಿ ನನ್ನ ಹತಾಶೆಯನ್ನು ಗ್ರಹಿಸಿದ್ದರು.

‘ಹಾಗಂತ ಸುಮ್ಮನೆ ಕೂತರೆ ಚಿನ್ನ ಬಿಡಿ, ಮಣ್ಣಿಂದೂ ಸಿಗೋಲ್ಲ, ಎಲ್ಲಕ್ಕೂ ಕೇಳಿಕೊಂಡು ಬಂದಿರಬೇಕು. ಕನಿಷ್ಠ ಸರಿಯಾದ ಮ್ಯಾಚಿಂಗ್ ‌ಮಾಸ್ಕ್‌ಗಳಿಲ್ಲದೆ ಎಷ್ಟು ಮೀಟಿಂಗು, ಮಿನಿ ಫಂಕ್ಷನ್ಸ್ ಮಿಸ್ ಮಾಡಿದ್ದೀನಿ ಗೊತ್ತಾ?’ ನನ್ನವಳು ಲೊಚಗುಟ್ಟಿದಳು.

ADVERTISEMENT

ಕಾಫಿ ಬೇಡಿಕೆಯನ್ನು ನುಂಗಿದೆ. ಮೂಡ್ ಖರಾಬ್ ಆದಾಗ, ಮೌನ ಲೇಸೆಂದು ಅರಿತು.‌

ದೇವರಂತೆ ಕಂಠಿ ಬಂದ.

‘ನಿಮ್ಮ ಪಕ್ಕದ ರಸ್ತೆಯಲ್ಲಿ ತರಾವರಿ ರೇಷ್ಮೆ ಮುಖಗವಸು, ಮುಖ್ಯವಾಗಿ ಮಹಿಳೆಯರಿಗೆ, ಸಮಾರಂಭಕ್ಕೆ ಅನುಗುಣವಾಗಿ... ಕಸೂತಿ ಸಹಿತ, ಕಸೂತಿ ರಹಿತ, ₹ 100ರಿಂದ
₹ 1000ದವರೆಗೆ, ಅವರವರ ಅನುಕೂಲಕ್ಕೆ ತಕ್ಕಂತೆ ಸಿಗುತ್ತವೆ. ಲಿಮಿಟೆಡ್ ಸ್ಟಾಕು, ನಿನ್ನೆ ಬೆಳಿಗ್ಗೆ ನೋಂದಾಯಿಸಿದ್ದು, ಇವತ್ತಿನ ಖರೀದಿಗೆ. ನನ್ನ ಟರ್ನ್‌ಗೆ ಇನ್ನೂ ಅರ್ಧ ಗಂಟೆ ಕಾಯ್ಬೇಕು. ಅದಕ್ಕೇ ಇಲ್ಲಿಗೆ ಬಂದೆ’ ಎಂದು ಅಷ್ಟಕ್ಕೇ ನಿಲ್ಲಿಸದೆ, ‘ನಿಮ್ಮ ಟರ್ನ್ ಯಾವಾಗ’ ಎಂದ.

‘ಚಿನ್ನದಂಥ ಅವಕಾಶ, ಆದರೇನು? ದಡ್ಡ ಶಿಖಾಮಣಿ...’ ನನ್ನವಳತ್ತ ನೋಟ, ಪರೋಕ್ಷವಾಗಿ ನನ್ನನ್ನೇ ಗುರಿಯಾಗಿಸಿ, ಅತ್ತೆಯ ಗೊಣಗಾಟ.

ನನ್ನವಳ ಮುಖ ಕೆರಳಿ ಕೆಂಡವಾಯಿತು.

‘ನಾನೂ ಬರ್ಲಾ? ಸೆಲೆಕ್ಷನ್‌ಗೆ ಹೆಲ್ಪ್ ಮಾಡ್ತೀನಿ’ ಹಲ್ಕಿರಿದೆ.

‘ಅದಕ್ಕೇನಂತೆ? ಜೊತೆಗೆ ನಿನ್ನ ಖರೀದೀನೂ ಮಾಡ್ಕೊ, ನನ್ನ ಕೋಟಾದಲ್ಲಿ’ ಎಂದು ವಾತಾವರಣ ತಿಳಿಗೊಳಿಸಿದ.

ಹಬೆಯಾಡುವ ಫಿಲ್ಟರ್ ಕಾಫಿ ಪರಿಮಳ ಮೂಗನ್ನು ಅಡರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.