ADVERTISEMENT

ಚುರುಮುರಿ: ಈ ಸಲ ಕಪ್‌ ಯಾರದ್ದು?

ಸುಮಂಗಲಾ
Published 2 ಮಾರ್ಚ್ 2026, 0:27 IST
Last Updated 2 ಮಾರ್ಚ್ 2026, 0:27 IST
   

‘ನೋಡ್ತಿರು... ಈ ಸಲ ಕಪ್‌ ಟ್ರಂಪಣ್ಣಂದೇ!’ ಎಂದು ಬೆಕ್ಕಣ್ಣ ಉದ್ಗರಿಸಿತು.

‘ಅಲ್ಲಲೇ... ಇಸ್ರೇಲ್ ಜೊತಿ ಸೇರಿ ಅಂವಾ ಇರಾನ್‌ ಮ್ಯಾಲೆ ಆಕ್ರಮಣ ಮಾಡ್ಯಾನೆ. ಅಂವನಿಗೆಂಥ ಕಪ್‌ ಕೊಡ್ತಾರಲೇ?’ ಎಂದೆ.

‘ಈಗ ಅಂವಾ ಇರಾನಿನ ಮೇಲೆ ಯುದ್ಧ ಮಾಡಿ, ದುಷ್ಟ ಮಂದಿಯ ಕೊಂದು, ಅಲ್ಲಿ ನಾಗರಿಕರ ರಕ್ಷಣೆ ಮಾಡ್ಯಾನಲ್ಲ... ಹಿಂಗಾಗಿ ಈ ಸಲ ನೊಬೆಲ್‌ ಕಪ್‌ ಅಂವಂದೇ!’ ಎಂದು ಬೆಕ್ಕಣ್ಣ ವದರಿತು.

ADVERTISEMENT

‘ಯುದ್ಧದ ನಿರ್ಣಯವನ್ನ ಸರ್ವಾಧಿಕಾರಿ ಹಂಗೆ ಅಂವನೇ ಖುದ್ದು ತಗಂಡಾನೆ. ಅಲ್ಲೀ ಕಾಂಗ್ರೆಸ್‌ ಒಪ್ಪಿಗೆ ಸೈತ ತಗಂಡಿಲ್ಲ. ಎಷ್ಟ್‌ ಮಂದಿ ಅಮಾಯಕರು ಪ್ರಾಣ ಕಳಕೊಂಡಾರೆ... ಅಂವನೆಂಥ ಶಾಂತಿದೂತ ಅಂತ ಅಂವಂಗೆ ನೊಬೆಲ್‌ ಶಾಂತಿ ಕಪ್‌ ಕೊಡ್ತಾರಲೇ?’ ಎಂದೆ ಸಿಟ್ಟಿನಿಂದ.

‘ಅಂವ ಒಂಥರಾ ದೇವದೂತನ ಹಂಗೆ! ವಿಶ್ವದ ಎಲ್ಲಾ ದೇಶಗಳ ಮೇಲೆ ಯುದ್ಧ ಸಾರಿ, ಆ ಯುದ್ಧವನ್ನ ಕೊನಿಗಿ ತಾನೆ ನಿಲ್ಲಿಸಿದೆ ಅಂತ ಘೋಷಣೆ ಮಾಡೂ ಹಕ್ಕು ಅಂವನಿಗದ!’ ಎಂದು ಬೆಕ್ಕಣ್ಣ ವಾದಿಸಿತು.

‘ಅಲ್ಲಿ ಅಂವಾ ಶಾಂತಿ ಕಪ್‌ಗಾಗಿ ಥರೇವಾರಿ ಯುದ್ಧ ನಡೆಸ್ಯಾನೆ... ಇಲ್ಲಿ ಡಿಕೇಶಣ್ಣನೂ ಸಿಎಂ ಕುರ್ಚಿಗಾಗಿ ಹೋರಾಟ ನಡೆಸ್ಯಾನೆ’ ಎಂದು ನಾನು ತಲೆ ಚಚ್ಚಿಕೊಂಡೆ.

‘ಎಲ್ಲಾ ಥರದ ಪ್ರಯತ್ನ ಮುಗಿದು ಈಗ ಅದೇನೋ ಶಾಸಕರಿಂದ ಲವ್‌ಲೆಟ್ರೂ ಬರಸಾಕೆ ಹತ್ಯಾರೆ. ಸ್ವತಃ ಖರ್ಗೆ ಅಜ್ಜಾರಿಂದ ಹಿಡಿದು ಎಷ್ಟ್‌ ಮಂದಿ ಕ್ಯೂವಳಗೆ ನಿಂತಾರೆ!’ ಬೆಕ್ಕಣ್ಣ ಉದ್ಗರಿಸಿತು.

‘ಈ ಕ್ಯೂಗೆ ಹೊಸ ಸೇರ್ಪಡೆ ಕುಮಾರಣ್ಣ! ಕುಮಾರಣ್ಣನ್ನ (ಮುಂದೆಂದಾದರೂ!) ಸಿಎಂ ಮಾಡೂದು ಮೋದಿಮಾಮಾ–ಶಾ ಅಂಕಲ್ಲಿನ ಕೈವಳಗೆ ಐತೆ ಅಂತ ದೇಗೌ ಅಜ್ಜಾರು ಕಣ್ಣೀರು ಹಾಕ್ಯಾರಂತೆ!’ ಎಂದೆ ನಾನು.

‘ಹೈಕಮಾಂಡು ಬಿಡು, ಕರುನಾಡಿನ ಸಿಎಂ ಕುರ್ಚಿ ಯುದ್ಧವನ್ನು ಸ್ವತಃ ದೇವರಿಗೂ ಬಗೆಹರಿಸಕ್ಕೆ ಆಗಂಗಿಲ್ಲ!’ ಎಂದು ಬೆಕ್ಕಣ್ಣ ಮುಸಿಮುಸಿ ನಕ್ಕಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.