ADVERTISEMENT

ವಾರದ ವಿಶೇಷ, ‘ನುಡಿ ಜಗಳ’ | ಕನ್ನಡ–ತಮಿಳು: ಒಂದೇ ಬೇರು, ಭಿನ್ನ ಕವಲು

ಕನ್ನಡದ ಮೂಲ ತಮಿಳು ಎಂಬ ಕಮಲ್ ಹಾಸನ್ ಹೇಳಿಕೆ, ಬೆಂಗಳೂರಿನಲ್ಲಿ ನಡೆದ ‘ನುಡಿ ಜಗಳ’ದ ಹಿನ್ನೆಲೆಯಲ್ಲಿ ತಜ್ಞರ ಬರಹ

ಪ್ರೊ.ಹಂಪ ನಾಗರಾಜಯ್ಯ
Published 30 ಮೇ 2025, 23:30 IST
Last Updated 30 ಮೇ 2025, 23:30 IST
   
ಸಂಸ್ಕೃತ, ಪ್ರಾಕೃತದ ವ್ಯಾಕರಣಕ್ಕೂ ದ್ರಾವಿಡ ಭಾಷೆಗಳ ವ್ಯಾಕರಣಕ್ಕೂ ಹೋಲಿಸಿದರೆ ಬಹಳ ವ್ಯತ್ಯಾಸ ಕಾಣುತ್ತದೆ. ಆದರೆ, ತಮಿಳು ಮತ್ತು ಕನ್ನಡ, ತೆಲುಗು ಮತ್ತು ಕನ್ನಡ, ಮಲಯಾಳ ಮತ್ತು ಕನ್ನಡ ವ್ಯಾಕರಣಗಳಲ್ಲಿ ಹೊಂದಾಣಿಕೆ ಇದೆ. ಇವು ಒಂದು ಮೂಲಕ್ಕೆ ಸೇರಿದವು ಎನ್ನುವುದು ಈ ಹೊಂದಾಣಿಕೆಯಿಂದ ತಿಳಿಯುತ್ತದೆ. ಅದೇ ರೀತಿ ತಮಿಳರ ಪೂರ್ವದ ಸಾಹಿತ್ಯ ಓದಿದರೆ ಇದು ನಮ್ಮದೇ ಎಂದು ಕನ್ನಡಿಗರಿಗೆ ಅನ್ನಿಸುತ್ತದೆ. ಹಾಗೆ ಅನ್ನಿಸಿದ ಮಾತ್ರಕ್ಕೆ, ಸಾಮ್ಯ ಇದ್ದ ಮಾತ್ರಕ್ಕೆ ಇವು ಒಂದರಿಂದ ಒಂದು ಬಂದದ್ದಲ್ಲ; ಒಂದು ಮೂಲದಿಂದ ಬಂದು ಬೇರೆ ಬೇರೆ ಆದಂಥವು. ಇವುಗಳ ಲಿಪಿಗಳು ಭಿನ್ನ. ಇವು ಪ್ರತ್ಯೇಕ ಭಾಷೆಗಳು, ಸೋದರ ಭಾಷೆಗಳು, ಜ್ಞಾತಿ ಭಾಷೆಗಳು ಎನ್ನುವುದು ಭಾಷಾವಿಜ್ಞಾನದ ಆಧಾರದಿಂದಲೂ ಚಾರಿತ್ರಿಕ ಆಧಾರದಿಂದಲೂ ನಿರೂ‍ಪಿತವಾಗಿದೆ

ನಮ್ಮ ದೇಶದಲ್ಲಿ ಭಾಷೆಗಳು, ಉಪಭಾಷೆಗಳು ಸೇರಿ ಸುಮಾರು ಒಂದು ಸಾವಿರ ಭಾಷೆಗಳು ಜೀವಂತವಾಗಿವೆ. ಸಂಸ್ಕೃತ, ಪ್ರಾಕೃತ, ಮರಾಠಿ ಇವೆಲ್ಲ ಇಂಡೋ ಆರ್ಯನ್ ಭಾಷೆಗಳು. ಕನ್ನಡ, ತೆಲುಗು, ತಮಿಳು, ಮಲಯಾಳ ಇವು ದ್ರಾವಿಡ ಭಾಷೆಗಳು. ಇವುಗಳ ಜತೆಗೆ ಕೊಡವ ಮತ್ತು ತುಳು ಕೂಡ ಜೀವಂತವಿರುವ ಪ್ರಮುಖ ದ್ರಾವಿಡ ಭಾಷೆಗಳಾಗಿವೆ. ದ್ರಾವಿಡ ಭಾಷಾ ಪರಿವಾರದ ಪ್ರಾಚೀನತೆ ಕ್ರಿ.ಪೂ 7–8ನೇ ಶತಮಾನದಷ್ಟು ಹಳೆಯದು. ಈಗ ಉಳಿದಿರುವ ಭಾಷೆಗಳಲ್ಲಿ 65–70 ದ್ರಾವಿಡ ಭಾಷೆಗಳಿವೆ (ಉಪಭಾಷೆಗಳೂ ಸೇರಿ). ಸಾವಿರಾರು ವರ್ಷಗಳ ಹಿಂದೆ ಅನೇಕ ದ್ರಾವಿಡ ಭಾಷೆಗಳು ಉತ್ತರದಿಂದ ದಕ್ಷಿಣದವರೆಗೂ ಹರಡಿಕೊಂಡಿದ್ದವು. ಈ ಪೈಕಿ ದಕ್ಷಿಣದಲ್ಲಿ ಸಾಹಿತ್ಯ, ಲಿಪಿ, ಆಡಳಿತ ಭಾಷೆಯ ಅನುಕೂಲ ಇರುವ ಪ್ರಮುಖ ಭಾಷೆಗಳು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳ. ಜತೆಗೆ, ತುಳು, ಕುರುಹು, ವಲ್ಲಾರಿ, ಗದಬ, ಗೋಂಡಿ ಈ ಎಲ್ಲ ದ್ರಾವಿಡ ಭಾಷೆಗಳೂ ಕ್ರಿ.ಪೂ 8ನೇ ಶತಮಾನದ ವೇಳೆಗೆ ಒಂದು ರೂಪ ಪಡೆದುಕೊಂಡಿದ್ದವು. ಒಂದೇ ಕುಟುಂಬಕ್ಕೆ (ಮೂಲದ್ರಾವಿಡ ಭಾಷೆ– ಪ್ರೋಟೊ ದ್ರವಿಡಿಯನ್ ಲ್ಯಾಂಗ್ವೇಜ್) ಸೇರಿದ ಇವೆಲ್ಲ ಕ್ರಮೇಣ ಬೇರೆ ಬೇರೆ ಭಾಷೆಗಳಾದವು.  

ಭಾಷೆಗಳು ಒಂದೇ ಮೂಲದಿಂದ ಬಂದವು, ಏಕೆ ಬೇರೆ ಬೇರೆ ಆದವು ಎನ್ನುವುದಕ್ಕೆ ಮುಖ್ಯವಾಗಿ ಮೂರು ಕಾರಣಗಳು. ಒಂದು, ಬೆಟ್ಟಗುಡ್ಡಗಳು. ಎರಡು, ನದಿಗಳು; ಮೂರನೇ ಕಾರಣ ಅರಣ್ಯ. ನೈಸರ್ಗಿಕ ಕಾರಣಗಳಿಂದ ಜನರು ಮತ್ತೆ ಮತ್ತೆ ಸೇರುವ ಅವಕಾಶಗಳು ಇಲ್ಲದ ಕಾರಣಕ್ಕೆ, ಪ್ರತ್ಯೇಕವಾಗಿ ಇರುವ ಗುಂ‍ಪುಗಳ ಭಾಷೆಗಳಲ್ಲಿ ವ್ಯತ್ಯಾಸ ಉಂಟಾಗಿ ಕಾಲಾಂತರದಲ್ಲಿ ಅವು ಭಿನ್ನ, ಸ್ವತಂತ್ರ ಭಾಷೆಗಳೇ ಆಗುತ್ತವೆ. ಕನ್ನಡ, ತಮಿಳು ಸೇರಿದಂತೆ ಎಲ್ಲ ದ್ರಾವಿಡ ಭಾಷೆಗಳೂ ಒಂದು ಮೂಲದಿಂದ, ಒಂದು ಬೇರಿನಿಂದ ಬಂದವು. ಹೀಗೆ ಕನ್ನಡ, ತಮಿಳು ಎರಡಕ್ಕೂ ಮೂಲದ್ರಾವಿಡವೇ ಬೇರು. ಎರಡೂ ಪಡಿಮೂಡಿರುವುದು ಒಂದೇ ಬೇರಿನಿಂದ, ಒಂದೇ ಕಾಂಡದಿಂದ. ಒಂದೇ ಬೇರಿನಿಂದ ಬಂದಿರುವುದರಿಂದ ಆ ಕೊಂಬೆಗೂ ಈ ಕೊಂಬೆಗೂ ಸಾಮೀಪ್ಯ ಇರುತ್ತದೆ. ಆದರೆ, ಆ ಕೊಂಬೆಯಿಂದ ಈ ಕೊಂಬೆ ಹುಟ್ಟಿರುವುದಿಲ್ಲ. ತಮಿಳು ಮತ್ತು ಕನ್ನಡ ಭಾಷೆಗಳು ಒಂದು ಬೇರಿನಿಂದ ಬಂದು ಕ್ರಿ.ಪೂ 5ನೇ ಶತಮಾನದಲ್ಲೇ ಸ್ವತಂತ್ರ ಭಾಷೆಗಳಾದವು. ಅದೇ ಮೂಲದಿಂದ ಬಂದಿದ್ದ ಮಲಯಾಳ ಮತ್ತು ತಮಿಳು ಹೆಚ್ಚು ಕಾಲ ಒಂದಾಗಿಯೇ ಇದ್ದವು. ಅವು ಬೇರೆ ಆದದ್ದು
ಕ್ರಿ.ಶ 9ನೇ ಶತಮಾನದಲ್ಲಿ.

ದ್ರಾವಿಡ ಭಾಷೆಗಳು ಒಂದೇ ಮೂಲದಿಂದ ಬಂದಿರುವುದರಿಂದ ಇವುಗಳ ನಡುವೆ ಸಾಮ್ಯ ಇದೆ. ನಮ್ಮ ಹಳಗನ್ನಡ ಸಾಹಿತ್ಯ ಓದಿದರೆ, ತಮಿಳರಿಗೆ ಇದು ತಮ್ಮ ಭಾಷೆ ಎಂದು ಭಾಸವಾಗುತ್ತದೆ. ಮನುಷ್ಯ ದೇಹದ ಅಂಗಾಂಗಗಳು, ಸಂಖ್ಯಾವಾಚಕಗಳು ಎರಡರಲ್ಲೂ ಒಂದೇ ರೀತಿ ಧ್ವನಿಸುತ್ತವೆ. ಕನ್ನಡದ ಪ್ರಾಚೀನ ಶಾಸನಗಳಲ್ಲಿ ‘ದೇವಲೋಕಕ್ಕೆ ಸಂದಾನ್’ ಎನ್ನುವ ಪದಗಳಿವೆ. ‘ಸಂದಾನ್’ ಎನ್ನುವುದು ತಮಿಳಿನ ‘ವಂದಾನ್’ ಎನ್ನುವಂತೆ ಕೇಳಿಸುತ್ತದೆ. ಆದರೆ, ಇದು ಕನ್ನಡ ಪದವೇ.

ADVERTISEMENT

ಸಂಸ್ಕೃತ, ಪ್ರಾಕೃತದ ವ್ಯಾಕರಣಕ್ಕೂ ದ್ರಾವಿಡ ಭಾಷೆಗಳ ವ್ಯಾಕರಣಕ್ಕೂ ಹೋಲಿಸಿದರೆ ಬಹಳ ವ್ಯತ್ಯಾಸ ಕಾಣುತ್ತದೆ. ಆದರೆ, ತಮಿಳು ಮತ್ತು ಕನ್ನಡ, ತೆಲುಗು ಮತ್ತು ಕನ್ನಡ, ಮಲಯಾಳ ಮತ್ತು ಕನ್ನಡ ವ್ಯಾಕರಣಗಳಲ್ಲಿ ಹೊಂದಾಣಿಕೆ ಇದೆ. ಇವು ಒಂದು ಮೂಲಕ್ಕೆ ಸೇರಿದವು ಎನ್ನುವುದು ಈ ಹೊಂದಾಣಿಕೆಯಿಂದ ತಿಳಿಯುತ್ತದೆ. ಅದೇ ರೀತಿ ತಮಿಳರ ಪೂರ್ವದ ಸಾಹಿತ್ಯ ಓದಿದರೆ ಇದು ನಮ್ಮದೇ ಎಂದು ಕನ್ನಡಿಗರಿಗೆ ಅನ್ನಿಸುತ್ತದೆ. ಹಾಗೆ ಅನ್ನಿಸಿದ ಮಾತ್ರಕ್ಕೆ, ಸಾಮ್ಯ ಇದ್ದ ಮಾತ್ರಕ್ಕೆ ಇವು ಒಂದರಿಂದ ಒಂದು ಬಂದದ್ದಲ್ಲ; ಒಂದು ಮೂಲದಿಂದ ಬಂದು ಬೇರೆ ಬೇರೆ ಆದಂಥವು. ಇವುಗಳ ಲಿಪಿಗಳು ಭಿನ್ನವಾಗಿರುತ್ತವೆ. ಇವು ಪ್ರತ್ಯೇಕ ಭಾಷೆಗಳು, ಸೋದರ ಭಾಷೆಗಳು, ಜ್ಞಾತಿ ಭಾಷೆಗಳು ಎನ್ನುವುದು ಭಾಷಾವಿಜ್ಞಾನದ ಆಧಾರದಿಂದಲೂ ಚಾರಿತ್ರಿಕ ಆಧಾರದಿಂದಲೂ ನಿರೂ‍ಪಿತವಾಗಿದೆ.

ತಮಿಳಿನ ವಿದ್ವಾಂಸರಾದ ಐರಾವತನ್ ಮಹಾದೇವನ್ ಅವರು ‘ದಿ ಅರ್ಲಿ ತಮಿಳ್ ಎಪಿಗ್ರಫಿ’ ಎನ್ನುವ ಕೃತಿ ರಚನೆ ಮಾಡಿದ್ದಾರೆ. ಅತ್ಯಂತ ಪ್ರಾಚೀನವಾದ ಕ್ರಿ.ಪೂ 4ನೇ ಶತಮಾನದಿಂದ ಕ್ರಿ.ಶ 4ನೇ ಶತಮಾನದವರೆಗಿನ 89 ಶಾಸನಗಳನ್ನು ಇಟ್ಟುಕೊಂಡು ವಿಸ್ತಾರವಾದ ಪೀಠಿಕೆ ಬರೆದಿದ್ದಾರೆ. ಕ್ರಿ.ಪೂ 3 ಮತ್ತು ಕ್ರಿ.ಪೂ 2ನೇ ಶತಮಾನದ ತಮಿಳು ಶಾಸನಗಳಲ್ಲೇ ಕನ್ನಡದ ರೂಪಗಳಿವೆ, ಕನ್ನಡದ ಪ್ರಭಾವ ಇದೆ, ಕನ್ನಡದ ಹೆಸರುಗಳಿವೆ; ಕನ್ನಡದ ವಿಭಕ್ತಿ ಪ್ರತ್ಯಯಗಳೂ ಸೇರಿವೆ ಎಂದು ಅವರು ಉಲ್ಲೇಖಿಸಿದ್ದಾರೆ. ಕನ್ನಡವೂ ತಮಿಳಿನಷ್ಟೇ ಪ್ರಾಚೀನವಾದದ್ದು ಎನ್ನುವುದಕ್ಕೆ ಇದು ಮುಖ್ಯ ಆಧಾರವಾಗಿದೆ. 

ನಮ್ಮ ದೇಶದ ಅನೇಕ ಭಾಷೆಗಳು ಸಂಸ್ಕೃತದಿಂದ ಬಂದಿವೆ. ಆದರೆ, ಎಲ್ಲವೂ ಅಲ್ಲ. ಕೆಲವರು ಪಂಚದ್ರಾವಿಡ ಭಾಷೆಗಳನ್ನೂ ಅದರಲ್ಲಿಯೇ ಸೇರಿಸಿದ್ದರು. ಕನ್ನಡದ ಮೂಲವೂ ಸಂಸ್ಕೃತ ಎಂದು ಕೆಲವು ಭಾಷಾವಿಜ್ಞಾನಿಗಳು ವಾದಿಸುತ್ತಿದ್ದರು. 1816ರಲ್ಲಿ ಫ್ರಾನ್ಸಿಸ್ ವೈಟ್ ಎಲ್ಲಿಸ್ ಎನ್ನುವ ವಿದ್ವಾಂಸ ದ್ರಾವಿಡ ಭಾಷೆಗಳು ಸಂಸ್ಕೃತ ಭಾಷಾ ಪರಿವಾರಕ್ಕೆ ಸೇರಿದವು ಅಲ್ಲ, ಸ್ವತಂತ್ರ ಭಾಷೆಗಳು ಎಂಬ ಸೂಚನೆಯನ್ನು ನೀಡಿದ್ದ. ಮೊಟ್ಟಮೊದಲ ಬಾರಿಗೆ ಸಂಸ್ಕೃತ ಮೂಲ ಸಿದ್ಧಾಂತವನ್ನು ಬುಡಮೇಲು ಮಾಡಿ ಹೊಸ ಸಿದ್ಧಾಂತವನ್ನು ರೂಪಿಸಿದವರು ರಾಬರ್ಟ್ ಕಾಲ್ಡ್‌ವೆಲ್. ಸ್ಕಾಟ್ಲೆಂಡ್‌ನಿಂದ ಬಂದು ತಮಿಳುನಾಡಿನಲ್ಲಿ ನೆಲಸಿದ್ದ ಅವರು, ದ್ರಾವಿಡ ಭಾಷೆಗಳು ಆರ್ಯನ್ ಭಾಷೆಗಳಿಂದ, ಸಂಸ್ಕೃತ ಭಾಷೆಯಿಂದ ನಿಷ್ಪನ್ನವಾದ
ದ್ದಲ್ಲ ಎಂದು ನಿರೂಪಿಸಿದರು. ದ್ರಾವಿಡ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಇರುವುದು ವಾಸ್ತವ. ಸಾವಿರಾರು ವರ್ಷ ಒಟ್ಟಿಗೆ ಇದ್ದುದರಿಂದ ಪರಸ್ಪರ ಪ್ರಭಾವ ಇರುವುದು ಸ್ವಾಭಾವಿಕ. ಆದರೆ, ಇವು ಸ್ವತಂತ್ರವಾದ, ಭಿನ್ನ ಭಾಷಾ ಪರಿವಾರಕ್ಕೆ ಸೇರಿದ ಭಾಷೆಗಳು ಎಂದು ನಿರೂಪಿಸಿ, 12 ದ್ರಾವಿಡ ಭಾಷೆಗಳ ಕುರಿತು ವಿಸ್ತಾರವಾಗಿ ‘ಎ ಕಂಪೇರಿಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಆರ್ ಸೌಥ್ ಇಂಡಿಯನ್ ಫ್ಯಾಮಿಲಿ ಆಫ್ ಲ್ಯಾಂಗ್ವೇಜಸ್’ ಕೃತಿ ಬರೆದರು. ದ್ರಾವಿಡ ಭಾಷೆಗಳು ಭಿನ್ನ ಎಂದು ಅವುಗಳ ವ್ಯಾಕರಣದ ಕ್ರೊನಾಲಜಿ, ಧ್ವನಿರೂಪ, ವ್ಯಾಕರಣ ನಿಯಮ, ಶಬ್ದರೂಪಗಳನ್ನು, ಅದರ ಅರ್ಥ ವಿನ್ಯಾಸವನ್ನು ಆಧಾರವಾಗಿ ನೀಡಿ ಸ್ಥಾಪಿಸಿದವರು ಕಾಲ್ಡ್‌ವೆಲ್.

ನಂತರದಲ್ಲಿ ದ್ರಾವಿಡ ಭಾಷೆಗಳ ಅಧ್ಯಯನಕ್ಕೆ ಅಸ್ತಿಭಾರ ಹಾಕಿಕೊಟ್ಟ ಪ್ರಮುಖ ಕೃತಿ 1961ರಲ್ಲಿ ಪ್ರಕಟವಾದ, ಅಮೆರಿಕದ ಎಂ.ಬಿ.ಎಮಿನೊ ಮತ್ತು ಬ್ರಿಟನ್‌ನ ಥಾಮಸ್ ಬರೋ ರಚಿಸಿದ ‘ದ ದ್ರವಿಡಿಯನ್ ಎಟಿಮಾಲಾಜಿಕಲ್ ಡಿಕ್ಷನರಿ’. ಒಂದು ನಿರ್ದಿಷ್ಟ ಪದ ಯಾವ ಭಾಷೆಯದ್ದು, ಇತರ ಭಾಷೆಗಳಲ್ಲಿ ಅದಕ್ಕೆ ಸಂಬಂಧಪಟ್ಟ ಪದ ಯಾವುದು ಎನ್ನುವುದನ್ನು ಸಂಗ್ರಹಿಸುವ ಮೂಲಕ ದ್ರಾವಿಡ ಭಾಷೆಗಳ ಮೂಲರೂಪಗಳ ಬಗ್ಗೆ ಬರೆದರು. ಅದು ದ್ರಾವಿಡ ಪದಗಳ ನಿಷ್ಪತ್ತಿ ಕೇಂದ್ರಿತ ವಿವರಣೆ ಇರುವ ಡಿಕ್ಷನರಿ. ಬರೋ ಸಂಸ್ಕೃತದ ಪ್ರೊಫೆಸರ್ ಆದರೂ ದ್ರಾವಿಡ ಭಾಷೆಗಳು ಸಂಸ್ಕೃತದಿಂದ ಬಂದಿಲ್ಲ ಎಂದು ಮತ್ತೊಮ್ಮೆ ನಿರೂಪಿಸಿದರು. ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆಯಲ್ಲ ಎನ್ನುವುದಕ್ಕೂ ಈ ಕೃತಿಯಲ್ಲಿ ಆಧಾರಗಳಿವೆ.

ಕನ್ನಡಕ್ಕೆ ಜ್ಞಾತಿ ಭಾಷೆಗಳೂ ಸೇರಿದಂತೆ ಇತರ ಭಾಷೆಗಳೊಂದಿಗೆ ಕೊಡುಕೊಳ್ಳುವಿಕೆ ಇದೆ. ಕನ್ನಡವು
ತಮಿಳು, ಸಂಸ್ಕೃತ ಎಲ್ಲ ಭಾಷೆಗಳಿಂದಲೂ ಪದಗಳನ್ನು ಸ್ವೀಕರಿಸಿ, ಜೀರ್ಣಿಸಿಕೊಂಡಿದೆ. ಸಂಸ್ಕೃತ, ಪ್ರಾಕೃತದಿಂದ ಛಂದಸ್ಸು, ಶಬ್ದರೂಪಗಳನ್ನೂ ಪಡೆದಿದೆ. ತಮಿಳರು ಆದಷ್ಟೂ ಅವರ ಭಾಷೆಯ ಮೂಲರೂಪಗಳನ್ನೇ ಉಳಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಕನ್ನಡ, ತೆಲುಗಿಗಿಂತ ಹೆಚ್ಚು ಸಂಸ್ಕೃತ ರೂಪ ಬಳಸುವ ಭಾಷೆ ಮಲಯಾಳ. ಧಾರ್ಮಿಕ, ರಾಜಕೀಯ ಕಾರಣಕ್ಕೂ ಕೊಡುಕೊಳ್ಳುವಿಕೆ ನಡೆದಿದೆ. ಎರಡೂ ಭೂಪ್ರದೇಶಗಳನ್ನು ಒಬ್ಬನೇ ರಾಜ ಆಳಿ‌ದ್ದರಿಂದಲೂ ಕೊಡುಕೊಳ್ಳುವಿಕೆ ನಡೆದಿದೆ.

ಕನ್ನಡವೂ ತಮಿಳಿನಷ್ಟೇ ಪ್ರಾಚೀನ 

ತಮ್ಮದೇ ಜಗತ್ತಿನ ಪ್ರಾಚೀನ ಭಾಷೆ ಎಂದು ತಮಿಳರು ಹಿಂದಿನಿಂದಲೂ ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ. ‌ಜನ ಮಾತನಾಡುವ ಭಾಷೆಯಾಗಿ ಕನ್ನಡವೂ ಪ್ರಾಚೀನ ಕಾಲದಿಂದಲೇ ಚಾಲ್ತಿಯಲ್ಲಿತ್ತು. ಕನ್ನಡದಲ್ಲಿ ಲಿಖಿತ ರೂಪಗಳು ಸ್ವಲ್ಪ ತಡವಾಗಿ ದೊರಕಿದವು. ಕ್ರಿ.ಪೂ 4ನೇ ಶತಮಾನದಿಂದಲೇ ತಮಿಳು ಶಾಸನಗಳು ಉಪಲಬ್ದ ಇವೆ. ವಿದ್ವಾಂಸರು ಮಾನ್ಯ ಮಾಡಿರುವ ಪ್ರಕಾರ, ಕನ್ನಡದಲ್ಲಿ ಕ್ರಿ.ಶ 4ನೇ ಶತಮಾನದಿಂದ ಶಾಸನಗಳು ಲಭ್ಯ ಇವೆ. ಅದಕ್ಕಿಂತಲೂ ಹಿಂದೆಯೇ ತಮಿಳಿನಲ್ಲಿ ಶಾಸನ ಸಿಕ್ಕಿತ್ತು. ಸ್ವಾರಸ್ಯ ಎಂದರೆ, ಅವುಗಳಲ್ಲಿ ಕನ್ನಡದ ರೂಪಗಳು ಕಂಡುಬಂದಿರುವುದು ಕನ್ನಡವೂ ಅಷ್ಟೇ ಪ್ರಾಚೀನ ಭಾಷೆ ಎನ್ನುವುದನ್ನು ಶ್ರುತಪಡಿಸುತ್ತದೆ. ಆದರೆ, ತಮಿಳರು ರಾಜಕೀಯ ಪ್ರಭಾವ ಬಳಸಿ ಬಹುಬೇಗ ಶಾಸ್ತ್ರೀಯ ಭಾಷೆ ಸ್ಥಾನಮಾನ ಪಡೆದರು. ಆಮೇಲೆ ಅದನ್ನು ನಾವು ಹೋರಾಟ ಮಾಡಿ ಪಡೆದೆವು. ತರುವಾಯ, ತೆಲುಗು, ಮಲಯಾಳ ಕೂಡ ಶಾಸ್ತ್ರೀಯ ಭಾಷೆಗಳಾದವು.

ತಮಿಳರು ಬಲುಬೇಗ ಬ್ರಾಹ್ಮೀ ಲಿಪಿಯನ್ನು ಆಧರಿಸಿ ತಮ್ಮದೇ ಲಿಪಿ ರೂಪಿಸಿಕೊಂಡರು. ಬಹಳ ಬೇಗ ಲಿಪಿಯನ್ನು ಶಾಸನಕ್ಕೆ ಅಳವಡಿಸಿಕೊಂಡರು. ಆದರೆ, ಅಲ್ಲಿ ಕೃತಿಗಳು ಪ್ರಕಟವಾಗಿದ್ದು ತಡವಾಗಿ. ಕನ್ನಡದಲ್ಲಿ ಲಿಪಿ ಬಂದಿದ್ದು ತಡವಾಗಿ. ಆದರೆ, ಕೃತಿಗಳು ಬೇಗ ಬಂದವು. ಲಿಪಿಯ ದೃಷ್ಟಿಯಿಂದ ತಮಿಳಿನಂತೆಯೇ ಕನ್ನಡ, ತೆಲುಗು ಹಾಗೂ ಇತರ ಭಾಷೆಗಳಿಗೂ ಒಂದು ವಿಶಿಷ್ಟ ಸ್ಥಾನ ಇದೆ. ಸಾಹಿತ್ಯದ ದೃಷ್ಟಿಯಿಂದ ನೋಡಿದರೆ, ನಮ್ಮಲ್ಲಿ ಕವಿರಾಜಮಾರ್ಗ ಇದ್ದ ಹಾಗೆ ತಮಿಳಿನಲ್ಲಿ ತೊಲಗಾಪ್ಪಿಯಂ ಇದೆ. ಅದು ಕ್ರಿ.ಶ ಐದು, ಆರನೇ ಶತಮಾನಕ್ಕೆ ಸೇರಿದ್ದು. ಸಂಗಂ ಸಾಹಿತ್ಯವೂ ಪ್ರಾಚೀನವಾದದ್ದು. ನಮ್ಮಲ್ಲಿ ಕ್ರಿ.ಶ 850ರಲ್ಲಿ ರಚಿತವಾದ ಕವಿರಾಜಮಾರ್ಗಕ್ಕೂ ಮುನ್ನ ವಡ್ಡಾರಾಧನೆ ಉಪಲಬ್ದವಿದೆ. ಅದಕ್ಕಿಂತಲೂ ಹಿಂದೆ ರಚಿತವಾದ ಪ್ರಾಚೀನವಾದ ಕೃತಿಗಳ ಮಾಹಿತಿಯೂ ಲಭ್ಯವಿದೆ. ಕವಿರಾಜಮಾರ್ಗ ಶಾಸ್ತ್ರ ಗ್ರಂಥ. ವಡ್ಡಾರಾಧನೆ ಸೃಜನಶೀಲ ಕೃತಿ. ತಮಿಳಿನಲ್ಲಿ ಅತ್ಯಂತ ಪ್ರಾಚೀನ ಕೃತಿ ಶಿಲಪ್ಪದಿಗಾರಂ. ಅದನ್ನು ಬರೆದವನು ಇಳಂಗೋ ಅಡಿಗನ್. ಕನ್ನಡದಲ್ಲಿ ಪಂಪನಂತೆ ಅವನು ತಮಿಳಿನ ಆದಿಕವಿ.

ಪ್ರಾಚೀನ ಸಾಹಿತ್ಯ, ಶ್ರೀಮಂತ ಸಾಹಿತ್ಯ, ಪ್ರಾಚೀನ ಶಾಸನಗಳು ಇರುವ ದಕ್ಷಿಣದ ಎರಡು ಪ್ರಮುಖ ಭಾಷೆಗಳು ಅಂದರೆ, ಅವು ತಮಿಳು, ಕನ್ನಡ. ಇವು ಸೋದರ ಭಾಷೆಗಳು. ತಮಿಳಿನಿಂದ ಕನ್ನಡ ಬಂತು ಎಂದಾಗಲಿ, ಕನ್ನಡದಿಂದ ತಮಿಳು ಬಂತು ಎಂದಾಗಲಿ ಹೇಳುವುದು ಶುದ್ಧಾಂಗ ತಪ್ಪು.

ದೇಶದ ಮೊದಲ ಗವರ್ನರ್ ಜನರಲ್ ಆಗಿದ್ದ ಸಿ.ರಾಜಗೋಪಾಲಚಾರಿ ಅವರು 1968–69ರಲ್ಲಿ ಒಂದು ಲೇಖನ ಬರೆದಿದ್ದರು. ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆಯಾಗಿದ್ದು, ತೆಲುಗು ಲಿಪಿಯನ್ನು ಬಳಸುತ್ತದೆ ಎಂದು ಅದರಲ್ಲಿ ಪ್ರತಿಪಾದಿಸಿದ್ದರು. ಆಗ ಸಾಹಿತಿಗಳು, ಕನ್ನಡ ಹೋರಾಟಗಾರರು ನಾವೆಲ್ಲ ಸೇರಿ ದೊಡ್ಡ ಪ್ರತಿಭಟನೆಯನ್ನೇ ನಡೆಸಿದೆವು. ನಂತರ ಅವರು ಕ್ಷಮೆಯಾಚಿಸಿದ್ದರು

ಲೇಖಕ: ಹಿರಿಯ ಸಂಶೋಧಕ

ನಿರೂಪಣೆ: ಬಿ.ವಿ.ಶ್ರೀನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.