
ಪ್ರಿಯಾಂಕ್ ಖರ್ಗೆ
ಇಪ್ಪತ್ತು ವರ್ಷಗಳಿಂದ ಗ್ರಾಮೀಣ ಭಾರತದಲ್ಲಿ ಪ್ರಗತಿಯ ಮನ್ವಂತರಕ್ಕೆ ಕಾರಣವಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮತ್ತು ಸಾರ್ವಜನಿಕವಾಗಿ ಚರ್ಚೆಯನ್ನೇ ನಡೆಸದೆ, ಯಾವುದೇ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೇ ತೆಗೆದುಕೊಳ್ಳದೆ, ಸಾರ್ವಜನಿಕ ವಿಶ್ಲೇಷಣೆ ಇಲ್ಲದಂತೆ 12 ಕೋಟಿ ಕಾರ್ಮಿಕರ ಪ್ರತಿದಿನದ ಬದುಕಾಗಿದ್ದ ಕಾಯ್ದೆಯನ್ನು ಮೂರೇ ದಿನದಲ್ಲಿ ತೆಗೆದುಹಾಕಿ, ಅದರ ಮೂಲ ಉದ್ದೇಶವನ್ನೇ ಹೊಸಕಿ ಹಾಕುವ ಕೆಲಸವನ್ನು ಮಾಡಿಬಿಟ್ಟಿದೆ.
ಹಳ್ಳಿಗಳ ನಿರ್ಧಾರ ದಿಲ್ಲಿಯಲ್ಲಿ: ಮನರೇಗಾ ಯೋಜನೆಯು ಯಾವುದೇ ತಾರತಮ್ಯವಿಲ್ಲದೆ ಭಾರತದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುತ್ತಿತ್ತು. ಎಲ್ಲಾ ಗ್ರಾಮ ಪಂಚಾಯಿತಿಗಳು ತಮ್ಮೂರಿನಲ್ಲಿ ಆಗಬೇಕಾದ ಕೆಲಸಗಳ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿಗಳನ್ನು ಪಡೆಯಬಹುದಾಗಿತ್ತು. ಕಾಮಗಾರಿಗಳಿಗೆ ಮತ್ತು ಕೆಲಸಗಳ ಬೇಡಿಕೆಯಂತೆ ಅನುದಾನ ಮಂಜೂರಾಗುತ್ತಿತ್ತು.
ಆದರೆ, ಬದಲಾದ ಕಾಯ್ದೆಯಡಿ ಕೇಂದ್ರ ಸರ್ಕಾರ ಅಧಿಸೂಚಿಸುವ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಈ ಯೋಜನೆ ಜಾರಿಯಾಗಲಿದೆ. ಅದಲ್ಲದೇ ಆ ಪ್ರದೇಶಗಳ ಗ್ರಾಮ ಪಂಚಾಯತಿಗಳು ಕೇಂದ್ರ ಸರ್ಕಾರ ನಿರ್ಧರಿಸುವ ಅನುದಾನದ ಮಿತಿಯೊಳಗೇ ಉದ್ಯೋಗ ಹಾಗೂ ಕಾಮಗಾರಿಗಳಿಗೆ ಬೇಡಿಕೆ ಇರಿಸಬೇಕು. ಜೊತೆಗೆ ಕಾಮಗಾರಿಗಳ ಪಟ್ಟಿ ಕೇಂದ್ರ ಸರ್ಕಾರ ಪೂರ್ವನಿರ್ಧರಿಸುವ ಯೋಜನೆಗಳ ಅಡಿಯಲ್ಲೇ ಬರಬೇಕಿದೆ. ಅನುದಾನವು ಮೊದಲೇ ನಿಗದಿಯಾಗಿರುವುದರಿಂದ ಹೆಚ್ಚಿನ ಕೆಲಸಗಳ ಬೇಡಿಕೆ ಇಡಲು ಅವಕಾಶವಿರುವುದಿಲ್ಲ, ಬೇಡಿಕೆಯಂತೆ ಅನುದಾನ ಸಿಗುವುದಿಲ್ಲ, ಅಲ್ಲದೆ ಅಧಿಸೂಚನೆಯಿಂದ ಕೈಬಿಟ್ಟಿರುವ ಪ್ರದೇಶಗಳ ಕಾರ್ಮಿಕರಿಗೆ ಉದ್ಯೋಗ ನೀಡಲು ಸಾಧ್ಯವೂ ಆಗುವುದಿಲ್ಲ. ಗ್ರಾಮಗಳ ಆದ್ಯತೆ ಮತ್ತು ಅಗತ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ಕರ್ನಾಟಕದ ಯಾವುದೋ ಒಂದು ಹಳ್ಳಿಯ ಅಗತ್ಯವೇನಿದೆ ಎನ್ನುವುದು ದೆಹಲಿಯಲ್ಲಿ ಕುಳಿತು ನಿರ್ಧರಿಸುವುದು ಕುಚೋದ್ಯವೇ ಸರಿ.
ಉದ್ಯೋಗ ಕಡಿತ: ಉದ್ಯೋಗ ಮತ್ತು ನ್ಯಾಯಯುತ ವೇತನ ಪ್ರತಿ ಗ್ರಾಮೀಣ ಕಾರ್ಮಿಕನ ಹಕ್ಕು ಎಂದು ಪ್ರತಿಪಾದಿಸಿ, ಆ ಹಕ್ಕುಗಳನ್ನು ಒದಗಿಸಿಕೊಟ್ಟಿದ್ದು ಮನರೇಗಾ ಯೋಜನೆ. ಈಗ, ಕೆಲಸ ಮತ್ತು ಕೂಲಿಯು ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕಾಗಿ ಉಳಿದಿಲ್ಲ. ಬದಲಿಗೆ ಅವನ್ನು ಕೇಂದ್ರ ಸರ್ಕಾರದ ಭಿಕ್ಷೆಯನ್ನಾಗಿಸಿರುವುದು ಈ ನೂತನ ಕಾಯ್ದೆ.
ಮನರೇಗಾ ಯೋಜನೆಯಲ್ಲಿ ವರ್ಷದ 365 ದಿನವೂ ಕಾರ್ಮಿಕರು ಉದ್ಯೋಗ ಪಡೆಯುವ ಹಕ್ಕನ್ನು ಹೊಂದಿದ್ದರು. ಬದಲಾದ ಕಾಯ್ದೆಯು ಕಾರ್ಮಿಕರ ಉದ್ಯೋಗ ಭದ್ರತೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವರ್ಷದಲ್ಲಿ 60 ದಿನಗಳು ಈ ಯೋಜನೆಯಡಿಯಲ್ಲಿ ಕೆಲಸ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ. ಆ ದಿನಗಳಲ್ಲಿ ಕಾರ್ಮಿಕರು ಜೀವನೋಪಾಯಕ್ಕೆ ಅರ್ಹ ಮತ್ತು ನ್ಯಾಯಯುತ ಕೂಲಿಗೆ ಬೇಡಿಕೆ ಇಡಲಾಗದೆ, ಶೋಷಣೆಗೆ ಒಳಗಾಗುತ್ತಾರೆ. ಇಂತಹ ಒತ್ತಡದ ಪರಿಸ್ಥಿತಿಯು ಕಾರ್ಮಿಕರನ್ನು ನಗರಗಳಿಗೆ ವಲಸೆ ಹೋಗುವಂತಹ ಅನಿವಾರ್ಯ ಸ್ಥಿತಿಯನ್ನು ನಿರ್ಮಿಸುವುದರಲ್ಲಿ ಅನುಮಾನವಿಲ್ಲ. ಇಷ್ಟೇ ಅಲ್ಲದೆ ಕೇಂದ್ರ ಸರ್ಕಾರದ ಅಧಿಸೂಚನೆಯಿಂದ ಹೊರಗಿರುವ ಪ್ರದೇಶಗಳ ಕಾರ್ಮಿಕರ ಜೀವನೋಪಾಯ ಹೇಗೆ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಕಾರ್ಮಿಕರಲ್ಲ, ಗುಲಾಮರು: ಮನರೇಗಾ ಯೋಜನೆಯಲ್ಲಿ ಯಾವುದೇ ಬಗೆಯಲ್ಲಿ ಗುತ್ತಿಗೆದಾರರಿಗೆ ಅವಕಾಶವೇ ಇರಲಿಲ್ಲ, ಹೊಸ ಕಾಯ್ದೆಯಲ್ಲಿ ಗುತ್ತಿಗೆದಾರರಿಗೆ ಪರೋಕ್ಷವಾಗಿ ಅವಕಾಶವನ್ನು ಕಲ್ಪಿಸಲಾಗಿದೆ. ಈ ಯೋಜನೆಯು ಗುತ್ತಿಗೆದಾರರಿಗೆ ಕೂಲಿಯಾಳುಗಳನ್ನು ಒದಗಿಸಿಕೊಡುವ ಯೋಜನೆಯಾಗಿ ಬದಲಾಗಿದೆ.
ಮನರೇಗಾ ಯೋಜನೆಯಲ್ಲಿ ಕನಿಷ್ಠ ಕೂಲಿ ವೇತನ ಕಾಯ್ದೆ 1948ರ ಅನ್ವಯ ಕೂಲಿ ದರವನ್ನು ಪರಿಗಣಿಸಬೇಕು ಎಂಬ ನಿಯಮವಿತ್ತು. ಹಣದುಬ್ಬರ, ಬೆಲೆ ಏರಿಕೆಯಂತಹ ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಕಾಲಕಾಲಕ್ಕೆ ಕನಿಷ್ಠ ಕೂಲಿ ಪರಿಷ್ಕರಿಸಿ ಅಧಿಸೂಚಿಸಲಾಗುತ್ತಿತ್ತು. ಬದಲಾದ ಕಾಯ್ದೆಯಲ್ಲಿ ಕನಿಷ್ಠ ವೇತನ ಕಾಯ್ದೆಯ ಅನ್ವಯ ವೇತನ ದರ ನಿಗದಿಪಡಿಸುವುದರ ಬಗ್ಗೆ ಉಲ್ಲೇಖವೇ ಇಲ್ಲ. ಹಣದುಬ್ಬರಕ್ಕೆ ಅನುಗುಣವಾಗಿ ವೇತನ ಪರಿಷ್ಕರಿಸುವುದರ ಬಾಧ್ಯತೆ ಇರುವುದಿಲ್ಲ. ಕನಿಷ್ಠ ವೇತನ ಎನ್ನುವುದು ಪ್ರತಿ ಕಾರ್ಮಿಕನ ಮೂಲಭೂತ ಹಕ್ಕು. ಅದನ್ನೇ ಅಪ್ರಸ್ತುತಗೊಳಿಸಿರುವ ಎನ್‌ಡಿಎ ಸರ್ಕಾರವು ಕಾರ್ಮಿಕರ ಸುಭದ್ರ ಬದುಕನ್ನು ಕೊನೆಗಾಣಿಸಲು ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.
ತಂತ್ರಜ್ಞಾನದ ಬಳಕೆ ಉದ್ಯೋಗ ಖಾತ್ರಿ ಯೋಜನೆಯ ಲಾಭ ಹೆಚ್ಚಿಸುವ, ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿತ್ತು. ಆದರೆ ನೂತನ ಕಾಯ್ದೆಯಲ್ಲಿ ಜಟಿಲ ತಾಂತ್ರಿಕ ವ್ಯವಸ್ಥೆ ಗ್ರಾಮೀಣ ಜನರನ್ನು ಉದ್ಯೋಗದ ಅವಕಾಶದಿಂದ ವಂಚಿಸುವಂತಿದೆ.
ನಿಯಮಾತ್ಮಕ ಹಂಚಿಕೆ ಎಂಬ ಉರುಳು: ಮನರೇಗಾ ಯೋಜನೆಯಲ್ಲಿ ರಾಜ್ಯವಾರು ಅನುದಾನ ಹಂಚಿಕೆಯ ಬಗ್ಗೆ ಯಾವುದೇ ನಿಯಮಗಳಿರಲಿಲ್ಲ. ಕಾಮಗಾರಿಗಳು ಮತ್ತು ಕೆಲಸದ ಬೇಡಿಕೆಯಷ್ಟೇ ಇದರ ಮಾನದಂಡವಾಗಿತ್ತು. ಅಲ್ಲದೆ ಕೂಲಿ ವೆಚ್ಚವನ್ನು ಸಂಪೂರ್ಣ ಕೇಂದ್ರ ಸರ್ಕಾರ ಭರಿಸುತ್ತಿತ್ತು. ಆದರೆ ಈಗಿನ ಕಾಯ್ದೆಯಲ್ಲಿ ರಾಜ್ಯಗಳಿಗೆ ಹಂಚಿಕೆಯಾದ ಕೂಲಿ, ಸಾಮಗ್ರಿ ಮತ್ತು ಆಡಳಿತ ವೆಚ್ಚಗಳಲ್ಲಿ ಶೇಕಡಾ 60ರಷ್ಟನ್ನು ಮಾತ್ರ ಕೇಂದ್ರ ಸರ್ಕಾರ ಭರಿಸುತ್ತದೆ. ಶೇಕಡ 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು. ಇದಲ್ಲದೆ, ನಿಯಮಾತ್ಮಕ ಹಂಚಿಕೆಗಿಂತ ಹೆಚ್ಚಿನ ವೆಚ್ಚವಾದಲ್ಲಿ ರಾಜ್ಯ ಸರ್ಕಾರಗಳು ಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ಮೇಲೆ ಮೋದಿ ಸರ್ಕಾರದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್.
ರಾಜ್ಯಕ್ಕೆ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ಪರಿಹಾರ ಹಾಗೂ ಅನುದಾನವನ್ನು ಕೋರ್ಟ್ ಮೆಟ್ಟಿಲೇರಿ ನಾವು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ, ನೂತನ 16ನೇ ಹಣಕಾಸು ಆಯೋಗ ರಾಜ್ಯಗಳಿಗೆ ಹಂಚಿಕೆಯಾಗಬೇಕಿರುವ ತೆರಿಗೆ ಕುರಿತು ತನ್ನ ಅಂತಿಮ ವರದಿಯನ್ನು ಸಲ್ಲಿಸಿ 3 ತಿಂಗಳಾದ ನಂತರ, ₹5,000ದಿಂದ ₹6,000 ಕೋಟಿ ಹಣ ಹೊಂದಿಸುವ ಹೊರೆಯನ್ನು ರಾಜ್ಯಗಳ ಮೇಲೆ ಹೇರಿದ್ದು ಬಿಜೆಪಿ ಆಡಳಿತದ ರಾಜ್ಯಗಳಿಗೂ ಮರಣ ಶಾಸನವಿದ್ದಂತೆ. ಈ ನಿಯಮವು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಅಪಾಯಕ್ಕೆ ತಳ್ಳುತ್ತದೆ. ಅಲ್ಲದೆ, ಯಾವುದೇ ರಾಜ್ಯ ತನ್ನ ಹಣಕಾಸಿನ ಸ್ಥಿತಿಯ ನಿರ್ವಹಣೆಗಾಗಿ ಕಾರ್ಮಿಕರು ಕೆಲಸ ಮಾಡಲು ಸಿದ್ದರಿದ್ದರೂ ಕೆಲಸ ಒದಗಿಸಲಾಗದ ಪರಿಸ್ಥಿತಿ ಎದುರಾಗುತ್ತದೆ.
ಕೆಲಸಕ್ಕೆ 60 ದಿನಗಳ ನಿಷೇಧ, ಕಾರ್ಮಿಕರಿಗೆ ಅರ್ಥವಾಗದ ಕಠಿಣ ತಾಂತ್ರಿಕತೆ, ಗುತ್ತಿಗೆದಾರರಿಗೆ ಅವಕಾಶ, ಅನ್ವಯವಾಗದ ಕನಿಷ್ಠ ವೇತನದ ನಿಯಮ, ಇಲ್ಲದ ಉದ್ಯೋಗದ ಖಾತರಿ, ಇವೆಲ್ಲವೂ ಗ್ರಾಮೀಣ ಕಾರ್ಮಿಕರನ್ನು ಉಳ್ಳವರ ಶೋಷಣೆಯ ಬಾವಿಗೆ ತಳ್ಳುವ ಪ್ರಯತ್ನವಾಗಿದೆ. ಸ್ಥಳೀಯವಾಗಿ ಉದ್ಯೋಗ ಖಾತ್ರಿ ಸಹಾಯಕರು, ಮನರೇಗಾ ಸದಸ್ಯರು ಯೋಜನೆಯ ಅನುಷ್ಠಾನಕ್ಕೆ ಮತ್ತು ಕಾರ್ಮಿಕರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಆದರೆ ಹೊಸ ಕಾಯ್ದೆಯಲ್ಲಿ ಇದರ ಪ್ರಸ್ತಾಪವಿಲ್ಲ, ಮನರೇಗಾ ಸದಸ್ಯರು, ಸಹಾಯಕರಿಗೆ ಅವಕಾಶವಿಲ್ಲ. ಇದು ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡುವ ಹುನ್ನಾರಕ್ಕೆ ಪುಷ್ಟಿ ನೀಡುತ್ತದೆ.
ಭಾರತ ಒಕ್ಕೂಟ ವ್ಯವಸ್ಥೆ ಎನ್ನುವುದನ್ನು ಮರೆತಿರುವಂತಿರುವ ಮೋದಿ ಸರ್ಕಾರ, ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ಮತ್ತು ತೆರಿಗೆ ಹಂಚಿಕೆಯ ಕುರಿತಾಗಿ ಸ್ಪಷ್ಟವಾದ ಸಂವಿಧಾನದ 258 ಮತ್ತು 280 ವಿಧಿಗಳನ್ನು ಉಲ್ಲಂಘಿಸಿ ನೂತನ ಕಾಯ್ದೆಯನ್ನು ಜಾರಿಗೊಳಿಸಿದೆ. ಇದನ್ನು ಪ್ರತಿಪಾದಿಸಲು ಅವರು ಬಳಸುತ್ತಿರುವ ಅಂಶ 100ರಿಂದ 125ಕ್ಕೆ ಏರಿಕೆಯಾಗಿರುವ ಮಾನವ ದಿನಗಳ ಸಂಖ್ಯೆ ಹಾಗೂ ಕಳೆದ ಹತ್ತು ವರ್ಷಗಳಲ್ಲಿ ನೂರು ಕೋಟಿಗೂ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಿರುವ ಯೋಜನೆ ಕುರಿತು ದಾಖಲಾಗಿರುವ ಕೆಲವು ಲಕ್ಷ ಸಂಖ್ಯೆಯ ದೂರು. ಹತ್ತು ವರ್ಷಗಳಿಂದ ಈ ಸರ್ಕಾರ ಮನರೇಗಾ ಅಡಿಯಲ್ಲಿ ಪ್ರತಿ ಕಾರ್ಮಿಕನಿಗೆ ನೀಡಿರುವ ಸರಾಸರಿ ಮಾನವ ದಿನಗಳ ಸಂಖ್ಯೆ 51 ಅಷ್ಟೇ. ಅಲ್ಲದೆ, ತನ್ನ ಬಜೆಟ್‌ನಲ್ಲಿ ಮನರೇಗಾಕ್ಕೆ ಮೀಸಲಿದ್ದ ಅನುದಾನದಲ್ಲಿ ₹60,000 ಕೋಟಿಗಿಂತ ಹೆಚ್ಚು ಕಡಿತಗೊಳಿಸಿದ್ದೇ ಮೋದಿ ಸರ್ಕಾರ. ದೂರುಗಳ ಸಂಖ್ಯೆಯೇ ಮನರೇಗಾ ಮುಗಿಸುವ, ಜನರ ಜೀವನೋಪಾಯ ಕಸಿಯುವ ಮಾನದಂಡವಾದರೆ, ನಾಳೆಯಿಂದಲೇ ದೇಶದ ಎಲ್ಲಾ ಸರ್ಕಾರಗಳು ಬಾಗಿಲು ಮುಚ್ಚಬೇಕಾಗುತ್ತದೆ. ಈ ಎಲ್ಲಾ ಸತ್ಯಗಳು ಮೋದಿಯ ವಿಬಿ– ಜಿ ರಾಮ್ ಜಿ ಗುಣಗಾನದಲ್ಲಿ ಅಪಥ್ಯ.
1948ರ ಜನವರಿ 30ರ ಸಂಜೆ, ತನ್ನ ಪ್ರತಿದಿನದ ಪ್ರಾರ್ಥನೆ ಮುಗಿಸಿ ಬಿರ್ಲಾ ಹೌಸ್‌ನಿಂದ ಕೆಳಕ್ಕಿಳಿದು ಬರುತ್ತಿದ್ದ ಮಹಾತ್ಮ ಗಾಂಧಿ ಅವರನ್ನು ತೀವ್ರಗಾಮಿಯೊಬ್ಬ ಗುಂಡಿಕ್ಕಿ ಕೊಲ್ಲುತ್ತಾನೆ. ಇಳಿ ವಯಸ್ಸಿನ ಮಹಾತ್ಮನ ಕೊನೆ ಮಾತು ‘ಹೇ ರಾಮ್’. 75 ವರ್ಷಗಳ ನಂತರ, ನವೆಂಬರ್ 18, 2025ರಂದು ಲೋಕಸಭೆಯಲ್ಲಿ, 19ರಂದು ರಾಜ್ಯಸಭೆಯಲ್ಲಿ ಚರ್ಚೆಯೇ ಇಲ್ಲದಂತೆ ಅನುಮೋದಿಸಿ, 20ರಂದು ರಾಷ್ಟ್ರಪತಿಯ ಸಹಿಯನ್ನೂ ಹಾಕಿಸಿ ಮೋದಿ ಹೇಳಿದ್ದು ‘ಜಿ ರಾಮ್’. ಮಹಾತ್ಮ ತನ್ನ ಕೊನೆಯುಸಿರಲ್ಲಿ ‘ಸೀತಾರಾಮ’ನನ್ನು ನೆನೆದರೆ, ಪ್ರಧಾನಿ ಮೋದಿ ತನ್ನ ಅಧಿಕಾರದ ಅಮಲಿನಲ್ಲಿ ಕೈ ಹಿಡಿದಿರುವುದು ಮಹಾತ್ಮನಿಗೆ ಗುಂಡಿಟ್ಟ 'ನಾಥೂರಾಮ'ನನ್ನು.
ಹಳ್ಳಿಗಳ ನಿರ್ಧಾರ ದಿಲ್ಲಿಯಲ್ಲಿ
ಮನರೇಗಾ ಯೋಜನೆಯು ಯಾವುದೇ ತಾರತಮ್ಯವಿಲ್ಲದೆ ಭಾರತದ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಅನ್ವಯವಾಗುತ್ತಿತ್ತು. ಎಲ್ಲಾ ಗ್ರಾಮ ಪಂಚಾಯಿತಿಗಳು ತಮ್ಮೂರಿನಲ್ಲಿ ಆಗಬೇಕಾದ ಕೆಲಸಗಳ ಕ್ರಿಯಾ ಯೋಜನೆ ರೂಪಿಸಿ ಕಾಮಗಾರಿಗಳನ್ನು ಪಡೆಯಬಹುದಾಗಿತ್ತು. ಕಾಮಗಾರಿಗಳಿಗೆ ಮತ್ತು ಕೆಲಸಗಳ ಬೇಡಿಕೆಯಂತೆ ಅನುದಾನ ಮಂಜೂರಾಗುತ್ತಿತ್ತು. ಆದರೆ ಬದಲಾದ ಕಾಯ್ದೆಯಡಿ ಕೇಂದ್ರ ಸರ್ಕಾರ ಅಧಿಸೂಚಿಸುವ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಈ ಯೋಜನೆ ಜಾರಿಯಾಗಲಿದೆ. ಅದಲ್ಲದೇ ಆ ಪ್ರದೇಶಗಳ ಗ್ರಾಮ ಪಂಚಾಯತಿಗಳು ಕೇಂದ್ರ ಸರ್ಕಾರ ನಿರ್ಧರಿಸುವ ಅನುದಾನದ ಮಿತಿಯೊಳಗೇ ಉದ್ಯೋಗ ಹಾಗೂ ಕಾಮಗಾರಿಗಳಿಗೆ ಬೇಡಿಕೆ ಇರಿಸಬೇಕು. ಜೊತೆಗೆ ಕಾಮಗಾರಿಗಳ ಪಟ್ಟಿ ಕೇಂದ್ರ ಸರ್ಕಾರ ಪೂರ್ವನಿರ್ಧರಿಸುವ ಯೋಜನೆಗಳ ಅಡಿಯಲ್ಲೇ ಬರಬೇಕಿದೆ. ಅನುದಾನವು ಮೊದಲೇ ನಿಗದಿಯಾಗಿರುವುದರಿಂದ ಹೆಚ್ಚಿನ ಕೆಲಸಗಳ ಬೇಡಿಕೆ ಇಡಲು ಅವಕಾಶವಿರುವುದಿಲ್ಲ ಬೇಡಿಕೆಯಂತೆ ಅನುದಾನ ಸಿಗುವುದಿಲ್ಲ ಅಲ್ಲದೆ ಅಧಿಸೂಚನೆಯಿಂದ ಕೈಬಿಟ್ಟಿರುವ ಪ್ರದೇಶಗಳ ಕಾರ್ಮಿಕರಿಗೆ ಉದ್ಯೋಗ ನೀಡಲು ಸಾಧ್ಯವೂ ಆಗುವುದಿಲ್ಲ. ಗ್ರಾಮಗಳ ಆದ್ಯತೆ ಮತ್ತು ಅಗತ್ಯಗಳಿಗೆ ಇಲ್ಲಿ ಅವಕಾಶವಿಲ್ಲ. ಕರ್ನಾಟಕದ ಯಾವುದೋ ಒಂದು ಹಳ್ಳಿಯ ಅಗತ್ಯವೇನಿದೆ ಎನ್ನುವುದು ದೆಹಲಿಯಲ್ಲಿ ಕುಳಿತು ನಿರ್ಧರಿಸುವುದು ಕುಚೋದ್ಯವೇ ಸರಿ.
ಲೇಖಕ: ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.