ದೇಶದಲ್ಲಿ ಇಂದು ಬೀದಿ ನಾಯಿಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ, 140 ಕೋಟಿಯಷ್ಟಿರುವ ಜನಸಂಖ್ಯೆಯು ಎಲ್ಲ ರೀತಿಯ ಸಂಪನ್ಮೂಲಗಳಿಗೂ ಹೊರೆಯಾಗಿದ್ದು, ಪ್ರಾಣಿ ಮತ್ತು ಪಕ್ಷಿಗಳೊಂದಿಗೂ ಎಲ್ಲೆಡೆ ಸಂಘರ್ಷ ಎದುರಿಸುವಂತಾಗಿದೆ. ಸಾಮಾಜಿಕ ಜಾಲತಾಣಗಳ ಧ್ರುವೀಕರಣದ ಈ ಯುಗದಲ್ಲಿ, ನಾಯಿಗಳ ಬಗ್ಗೆ ಮನುಷ್ಯರಿಗಿರುವ ಮೂಲಭೂತ ಭಯವನ್ನು ಬಡಿದೆಬ್ಬಿಸುವ ಮೂಲಕ ಪ್ರಾಣಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ತಮ್ಮ ವೈಫಲ್ಯವನ್ನು ರಾಜಕಾರಣಿಗಳು ಮರೆಮಾಚುತ್ತಿದ್ದಾರೆ. ಆದರೆ, ಪರಿಸ್ಥಿತಿಯು ಮೇಲ್ನೋಟಕ್ಕೆ ಕಾಣುತ್ತಿರುವಷ್ಟು ಉಗ್ರವಾಗಿಯೇನೂ ಇಲ್ಲ
ಭಾರತದಲ್ಲಿ ರೈತರು ತಮ್ಮ ಸಂಪೂರ್ಣ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯುತ್ತಾ, ಕಾಡುಪ್ರಾಣಿಗಳು, ಹಾವುಗಳು, ವಿಷಯುಕ್ತ ರಾಸಾಯನಿಕಗಳು ಮತ್ತು ಬರದೊಂದಿಗೆ ಸೆಣಸುತ್ತಾ ನಮಗೆ
ಆಹಾರಪದಾರ್ಥಗಳನ್ನು ಪೂರೈಸುತ್ತಿದ್ದಾರೆ. ‘ದಿ ಗಾರ್ಡಿಯನ್’ ವರದಿ ಪ್ರಕಾರ, 1800ರಿಂದ ಇದುವರೆಗೆ ಪ್ರಕೃತಿಯೊಂದಿಗಿನ ಜನರ ನಂಟು ಶೇ 60ರಷ್ಟು ಕುಸಿದಿದೆ. ಪ್ರಕೃತಿಗೆ ಸಂಬಂಧಿಸಿದ ನದಿ, ಪಾಚಿ, ಹೂವು ಅರಳುವುದು ಮುಂತಾದ ಪದಗಳು ಇಂದು ಪುಸ್ತಕಗಳಿಂದ ಕಣ್ಮರೆಯಾಗಿವೆ ಎಂದು ಅಧ್ಯಯನವೊಂದು ಹೇಳುತ್ತದೆ.
ಇಂಥ ಪರಿಸ್ಥಿತಿಯಿಂದಾಗಿಯೇ ನಗರಗಳ ಜನರು ಪರಿಸರ ವ್ಯವಸ್ಥೆಯನ್ನು ಗೌರವಿಸುವುದಿಲ್ಲ ಮತ್ತು ಜೀವ ವ್ಯವಸ್ಥೆಯ ಸಮತೋಲನದ ಮೌಲ್ಯವೇ ಅವರಿಗೆ ಅರ್ಥವಾಗುತ್ತಿಲ್ಲ. ವಾತಾನುಕೂಲ (ಎ.ಸಿ.) ಇರುವ ಕೊಠಡಿಯಲ್ಲಿ ಮೊಬೈಲ್, ಕಂಪ್ಯೂಟರ್ ಮುಂತಾದ ಗ್ಯಾಜೆಟ್‌ಗಳನ್ನು ಹಿಡಿದು ತಾವು ಪರಿಸರ ರಕ್ಷಣೆ ಮತ್ತು ನಿರ್ವಹಣೆ ಸೇರಿದಂತೆ ಎಲ್ಲವನ್ನೂ ಮಾಡಬಲ್ಲೆವು ಎಂದು ಅವರು ಭಾವಿಸುತ್ತಾರೆ. ಹೀಗಾಗಿಯೇ ನಗರಗಳಲ್ಲಿ ನಾಯಿ, ಬೆಕ್ಕು, ಹಾವು, ಕೋತಿ ಮುಂತಾದ ಪ್ರಾಣಿ ಪಕ್ಷಿಗಳಿಗೆ ಜನರ ಮನೆಗಳಲ್ಲಿ ಮತ್ತು ಬೀದಿಗಳಲ್ಲಿ ಸ್ಥಾನವೇ ಇಲ್ಲದಂತಾಗುತ್ತಿದೆ.
ದೇಶದಲ್ಲಿ ಇಂದು ಬೀದಿ ನಾಯಿಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಆದರೆ, 140 ಕೋಟಿಯಷ್ಟಿರುವ ಜನಸಂಖ್ಯೆಯು ಎಲ್ಲ ರೀತಿಯ ಸಂಪನ್ಮೂಲಗಳಿಗೂ ಹೊರೆಯಾಗಿದ್ದು, ಪ್ರಾಣಿ ಮತ್ತು ಪಕ್ಷಿಗಳೊಂದಿಗೂ ಎಲ್ಲೆಡೆ ಸಂಘರ್ಷ ಎದುರಿಸುವಂತಾಗಿದೆ. ಸಾಮಾಜಿಕ ಜಾಲತಾಣಗಳ ಧ್ರುವೀಕರಣದ ಈ ಯುಗದಲ್ಲಿ, ನಾಯಿಗಳ ಬಗ್ಗೆ ಮನುಷ್ಯರಿಗಿರುವ ಮೂಲಭೂತ ಭಯವನ್ನು ಬಡಿದೆಬ್ಬಿಸುವ ಮೂಲಕ ಪ್ರಾಣಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ತಮ್ಮ ವೈಫಲ್ಯವನ್ನು ರಾಜಕಾರಣಿಗಳು ಮರೆಮಾಚುತ್ತಿದ್ದಾರೆ. ಆದರೆ, ಪರಿಸ್ಥಿತಿಯು ಮೇಲ್ನೋಟಕ್ಕೆ ಕಾಣುತ್ತಿರುವಷ್ಟು ಉಗ್ರವಾಗಿಯೇನೂ ಇಲ್ಲ.
ಭಾರತದ ಅನೇಕ ನಗರಗಳು ಮತ್ತು ಸಮುದಾಯಗಳಲ್ಲಿ ಜನ ನಾಯಿಗಳ ಜತೆಗೆ ಸಂತೋಷದಿಂದ ಬಾಳುತ್ತಿದ್ದಾರೆ. ಹಿಂದೆ, ಪ್ರತಿ ಎರಡು ಮನೆಗಳ ಪೈಕಿ ಒಂದರಲ್ಲಿ ನಾಯಿಯನ್ನು ಸಾಕಲಾಗುತ್ತಿತ್ತು. ಅವುಗಳ ಸಂತಾನ ನಿಯಂತ್ರಣ ಮಾಡದೇ ಇದ್ದುದರಿಂದ ಮತ್ತು ಅವುಗಳನ್ನು ಬೀದಿಪಾಲು ಮಾಡುವ ಮೂಲಕ ನಾವು ಇಂದು ದೊಡ್ಡ ಬಿಕ್ಕಟ್ಟಿನ ಸ್ಥಿತಿ ಎದುರಿಸುವಂತಾಗಿದೆ.
ವಾಸಸ್ಥಳವನ್ನು ಪದೇ ಪದೇ ಬದಲಾವಣೆ ಮಾಡುವುದು, ಆಹಾರದ ಕೊರತೆ, ನಿರಂತರವಾಗಿ ಕಿರುಕುಳ ನೀಡುವುದರಿಂದ ಕೆಲವು ಪ್ರದೇಶಗಳಲ್ಲಿ ನಾಯಿಗಳು ಅಸಮವಾಗಿ ಹರಡಿಕೊಂಡಿದ್ದು, ಅದು ಅವುಗಳ ಆಕ್ರಮಣಕಾರಿ ವರ್ತನೆಗೆ ಮತ್ತು ಗುಂಪುಗೂಡುವಿಕೆಗೆ ಕಾರಣವಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಸಂತಾನ ಶಕ್ತಿಹರಣ ಉಪಕ್ರಮಗಳ ಕೊರತೆಯಿಂದ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂತಾನಶಕ್ತಿಹರಣ ಯೋಜನೆಯ ಸಮತೋಲನದ ಜಾರಿಯಿಂದ ಸಮಸ್ಯೆಯ ತೀವ್ರತೆ ಅಲ್ಪಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು.
ಕರ್ನಾಟಕದಲ್ಲಿ ಬೀದಿ ನಾಯಿ ಸಮಸ್ಯೆಗೆ ಪರಿಹಾರ ಬೇಕು ಎಂದು ಹಲವು ಜನಪ್ರತಿನಿಧಿಗಳು ಆಗಿಂದಾಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಲೇ ಇದ್ದು, ಇದು ‘ಪ್ರಾಣಿ ಜನನ ನಿಯಂತ್ರಣ ನಿಯಮಗಳು–2023’ ವಿಫಲ ಆಗಿರುವುದಕ್ಕೆ ನಿದರ್ಶನವಾಗಿದೆ. ರಾಜ್ಯದಲ್ಲಿ, 2023ರವರೆಗೆ ಕೇವಲ 12 ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕೇಂದ್ರಗಳು ಇದ್ದರೆ, ಅವುಗಳಲ್ಲಿ ಎಂಟು ಬೆಂಗಳೂರಿನಲ್ಲಿಯೇ ಇದ್ದವು. ಇಂದಿಗೂ ಶೇ 95ರಷ್ಟು ಜಿಲ್ಲೆಗಳಲ್ಲಿ ಎಬಿಸಿ ಕೇಂದ್ರಗಳಾಗಲಿ, ನಾಯಿಗಳನ್ನು ಹಿಡಿದು ರೇಬಿಸ್ ರೋಗನಿರೋಧಕ ಲಸಿಕೆ ಹಾಕುವ ವ್ಯವಸ್ಥೆಯಾಗಲಿ ಇಲ್ಲ.
ಎಬಿಸಿ ನಿಯಮಗಳ ಅನುಷ್ಠಾನದ ಬಗ್ಗೆ ಜನರು ತಮ್ಮ ಶಾಸಕರನ್ನು ಪ್ರಶ್ನಿಸಬೇಕಿದೆ ಅಥವಾ ನೀವು ವಿಫಲರಾಗಿದ್ದೀರಿ ಎಂದು ಅವರಿಗೆ ಹೇಳಬೇಕಿದೆ. ಆದರೆ, ತಾವು ಈ ದಿಸೆಯಲ್ಲಿ ಸಾಧ್ಯವಿರುವ ಎಲ್ಲವನ್ನೂ ಮಾಡಿದ್ದೇವೆ, ಆದರೂ ಸಮಸ್ಯೆ ಜೀವಂತವಾಗಿದೆ ಎಂದು ಜನಪ್ರತಿನಿಧಿಗಳು ಜನರನ್ನು ನಂಬಿಸುವ ಮೂಲಕ ಮೂರ್ಖರನ್ನಾಗಿಸಿದ್ದಾರೆ. ವಾಸ್ತವ ಏನೆಂದರೆ, ಎಬಿಸಿ ನಿಯಮಗಳ ಅನುಷ್ಠಾನಕ್ಕೆ ಅಗತ್ಯವಾದ ಭೂಮಿ ನೀಡದೇ ಅವರೇ ಈ ಸಮಸ್ಯೆ ಪರಿಹಾರಕ್ಕೆ ಅಡ್ಡಿಯಾಗಿದ್ದಾರೆ.
ನಾಯಿಗಳನ್ನು ಮನೆಗಳಿಗೆ ಒಯ್ಯುವುದೂ ಇದಕ್ಕೆ ಪರಿಹಾರವಲ್ಲ. ನೆರೆಹೊರೆಯವರಿಂದ ಅವುಗಳ ಗದ್ದಲದ ಬಗ್ಗೆ ದೂರು ಕೇಳ ಬೇಕಾಗುತ್ತದೆ. ಸಾಕುಪ್ರಾಣಿಗಳಿದ್ದವರಿಗೆ ಬಾಡಿಗೆ ಮನೆಗಳು ಸಿಗುವುದೇ ಕಷ್ಟವಾಗಿದೆ. ನಾಯಿಗಳು ಮುಕ್ತವಾಗಿ ಓಡಾಡಿಕೊಂಡಿರುವ ಪ್ರಾಣಿಗಳಾ ಗಿದ್ದು, ಅವುಗಳ ಸ್ವಾತಂತ್ರ್ಯವನ್ನು ಕಸಿದರೆ, ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ.
ಸಮಸ್ಯೆ ಇಷ್ಟು ಜಟಿಲವಾಗಿ ದ್ದರೂ, ಪರಿಹಾರದ ಭರವಸೆ ಇದ್ದೇ ಇದೆ. ಮುಖ್ಯವಾಗಿ, ನಾಯಿ ಕಡಿತದ ಪ್ರಕರಣಗಳ ಅತ್ಯಂತ ವಿವರವಾದ ತನಿಖೆ ನಡೆಸಬೇಕು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅವುಗಳ ಜನನ ನಿಯಂತ್ರಣ ಮಾಡಬೇಕು ಮತ್ತು ರೇಬಿಸ್ ರೋಗನಿರೋಧಕ ಲಸಿಕೆ ನೀಡಬೇಕು. ಜತೆಗೆ, ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಅಗತ್ಯವಿರುವಷ್ಟು ರೇಬಿಸ್ ರೋಗನಿರೋಧಕ ಲಸಿಕೆಗಳ ದಾಸ್ತಾನು ಇಡಬೇಕಿದೆ. ಹೀಗೆ ಮಾಡಿದರೆ, ನಾಯಿ ಕಡಿತದಿಂದ ಸಂಭವಿಸುವ ಸಾವುಗಳನ್ನು ತಡೆಯಬಹುದಾಗಿದೆ.
ಪ್ರತಿಯೊಬ್ಬರೂ ತಮ್ಮ ಬೀದಿಯಲ್ಲಿ ಕನಿಷ್ಠ ಒಂದು ನಾಯಿಗೆ ಆಹಾರ ಒದಗಿಸಿದರೆ, ಅವು ಗುಂಪುಗೂಡುವುದು, ಆಕ್ರಮಣಶೀಲವಾಗಿ ಮೇಲೆ ಎರಗುವುದನ್ನು ತಡೆಯಬಹುದು. ಪ್ರತಿಯೊಂದು ಜೀವಿಯನ್ನೂ ನಾವು ನಾಮಾವಶೇಷ ಮಾಡಲಾಗುವುದಿಲ್ಲ. ನಾವು ಅಪಾಯಗಳ ನಡುವೆಯೇ ಬದುಕುತ್ತಿದ್ದೇವೆ ಎನ್ನುವುದನ್ನೂ, ಒಟ್ಟಿಗೇ ಬಾಳುವುದೊಂದೇ ಅಪಾಯವನ್ನು ಕಡಿಮೆ ಮಾಡುವ ಮಾರ್ಗ ಎನ್ನುವುದನ್ನೂ ಜನರು ಅರ್ಥಮಾಡಿಕೊಳ್ಳಬೇಕಿದೆ.
ಎಬಿಸಿಗೆ ಭೂಮಿ ಪಡೆಯಲು ರಾಜಧಾನಿ ಬೆಂಗಳೂರಿನಲ್ಲಿಯೇ ಪರದಾಡಬೇಕಾಯಿತು. ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮಕ್ಕೆ ಸೂಕ್ತ ಸ್ಥಳ ಲಭ್ಯವಿಲ್ಲದೇ, ನಿಯಂತ್ರಣ ಸಾಧ್ಯವಾಗಿ ಇದಿದ್ದರೆ, ನಾಯಿಗಳ ಸಂಖ್ಯೆ ಹೇಗೆ ಸಮಸ್ಯೆಯಾಗಿ ಬದಲಾಗುತ್ತದೆ ಎನ್ನುವುದಕ್ಕೆ ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳೇ ಸೂಕ್ತ ನಿದರ್ಶನ ಗಳಾಗಿವೆ. ಎರಡೂ ವಲಯಗಳಲ್ಲಿ ಈ ವರ್ಷ ಎಬಿಸಿಗೆ ಭೂಮಿಯನ್ನು ಒದಗಿಸಲಾಗಿದೆ.
ಈ ವಲಯಗಳಲ್ಲಿ ಎಬಿಸಿ ಕೇಂದ್ರಗಳನ್ನು ಅವುಗಳ ಸಂಪೂರ್ಣ ಸಾಮರ್ಥ್ಯದೊಂದಿಗೆ ನಡೆಸಲು ಇನ್ನೂ ಒಂದು ವರ್ಷ ಬೇಕಿದೆ ಮತ್ತು ನಾಯಿಗಳ ಸಂಖ್ಯೆಯಲ್ಲಿ ಕುಸಿತ ಕಾಣಲು ಇನ್ನೂ ಎರಡು ವರ್ಷವೇ ಬೇಕು. ಒಂದು ಜೀವಿಯನ್ನು ನಿಂದಿಸುವ ಮತ್ತು ನಿರ್ಮೂಲನೆ ಮಾಡುವುದಕ್ಕೆ ಯತ್ನಿಸುವ ಮುನ್ನ ಜನರು ಒಂದು ಕೆಲಸ ಮಾಡಬೇಕಿದೆ; ಪ್ರಜೆಗಳ ರಕ್ಷಣೆಗೆ ಸಂಬಂಧಿಸಿದ ಕಾನೂನು ಜಾರಿಯ ವಿಚಾರದಲ್ಲಿನ ವೈಫಲ್ಯದ ಬಗ್ಗೆ ತಮ್ಮ ನಾಯಕರಿಗೆ ಸರಿಯಾದ ಪ್ರಶ್ನೆಗಳನ್ನು ಕೇಳಲು ಇದು ಸೂಕ್ತ ಸಮಯವಾಗಿದೆ.
ಲೇಖಕಿ: ಸಹವರ್ಥಿನ್ ಅನಿಮಲ್ ವೆಲ್ಫೇರ್ ಟ್ರಸ್ಟ್ ಸಂಸ್ಥಾಪಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.