ADVERTISEMENT

ಪ್ರಜಾವಾಣಿ ಚರ್ಚೆ: ಬೀದಿನಾಯಿಗಳ ತೆರವು ಅವೈಜ್ಞಾನಿಕ, ಅಪಾಯಕಾರಿ

ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿ ಹಾವಳಿ ತಡೆಗೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ ಬಗ್ಗೆ ಎರಡು ಭಿನ್ನ ಅಭಿಪ್ರಾಯಗಳು

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 1:13 IST
Last Updated 17 ಜನವರಿ 2026, 1:13 IST
<div class="paragraphs"><p> ಬೀದಿನಾಯಿಗಳು</p></div>

ಬೀದಿನಾಯಿಗಳು

   

ಶಾಲೆ, ಆಸ್ಪತ್ರೆ ಹಾಗೂ ಬಸ್ ನಿಲ್ದಾ ಣಗಳಲ್ಲಿ ಆಶ್ರಯ ಪಡೆದಿರುವ ಬೀದಿ ನಾಯಿಗಳನ್ನು ತೆರವುಗೊಳಿಸಿ, ಅವುಗಳನ್ನು ಪುನವರ್ಸತಿ ಕೇಂದ್ರಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ನಿರ್ದೇಶನವು ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿಗಳ ಕ್ಷೇಮಾಭಿವೃದ್ಧಿಗೆ ಸಂಬಂಧಿಸಿದ ದೀರ್ಘ ಕಾಲದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಮಕ್ಕಳು, ರೋಗಿಗಳು ಮತ್ತು ಸಾರ್ವಜನಿಕರ ಸುರಕ್ಷತೆಯ ಕುರಿತು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಕಳವಳವು ನ್ಯಾಯಸಮ್ಮತ ಮತ್ತು ಗಮನ ಕೊಡಬೇಕಾದ ಸಂಗತಿ ಆಗಿದ್ದರೂ, ಸೂಚಿಸಿರುವ ಪರಿಹಾರವು ಒಳಿತಿಗಿಂತಲೂ ಹೆಚ್ಚು ಕೆಡುಕನ್ನೇ ಮಾಡುವ ಅಪಾಯ ತಂದೊಡ್ಡಿದೆ. ಪ್ರಸ್ತಾವಿತ ಪರಿಹಾರವು ವೈಜ್ಞಾನಿಕ ಸಾಕ್ಷ್ಯ, ಸಾರ್ವಜನಿಕ ಆರೋಗ್ಯ ನಿಯಮಗಳು, ಪ್ರಾಣಿಗಳ ಕ್ಷೇಮಕ್ಕೆ ಸಂಬಂಧಿಸಿದ ವಾಸ್ತವ ಸಂಗತಿಗಳು ಮತ್ತು ಭಾರತದಲ್ಲಿ ದೀರ್ಘ ಕಾಲದಿಂದಲೂ ಜಾರಿಯಲ್ಲಿರುವ ಪ್ರಾಣಿಗಳೊಂದಿಗೆ ಸಹಬಾಳ್ವೆ ನಡೆಸುವ ಸಂಸ್ಕೃತಿಗೆ ವಿರುದ್ಧವಾಗಿದೆ.   

ಬೀದಿನಾಯಿಗಳು ಎಂದರೆ ಮನುಷ್ಯರ ಜೀವನದಲ್ಲಿ ಪ್ರವೇಶಿಸುವ ಬಾಹ್ಯ ಬಿಕ್ಕಟ್ಟು ಎಂಬಂತೆ ಬಿಂಬಿಸಲಾಗುತ್ತದೆ. ವಾಸ್ತವದಲ್ಲಿ ಅವುಗಳು ಮಾನವ ಸಮಾಜ ವ್ಯವಸ್ಥೆ ಮತ್ತು ಅದರ ವೈಫಲ್ಯಗಳ ಪ್ರತಿಫಲ. ವೇಗವಾಗಿ ನಡೆಯುತ್ತಿರುವ ನಗರೀಕರಣ, ಅಸಮರ್ಪಕ ಘನ ತ್ಯಾಜ್ಯ ನಿರ್ವಹಣೆ, ಸಾಕುಪ್ರಾಣಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದು, ಅನಿಯಂತ್ರಿತ ಸಂತಾನೋತ್ಪತ್ತಿ ಮತ್ತು ಪ್ರಾಣಿಗಳ ಕ್ಷೇಮಾಭಿವೃದ್ಧಿ ಕಾನೂನುಗಳನ್ನು ಸರಿಯಾಗಿ ಅನುಷ್ಠಾನಗೊಳಿಸದಿರುವುದರಿಂದ ವಸತಿ ಪ್ರದೇಶಗಳಲ್ಲಿ ನಾಯಿಗಳೂ ಸ್ವಚ್ಛಂದವಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಾಯಿಗಳು ರಾತ್ರಿ ಹಗಲಾಗುವುದರಲ್ಲಿ ಆ ಸ್ಥಳಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಅಥವಾ ಹೊರಗಿನಿಂದಲೂ ಬಂದಿರುವುದಿಲ್ಲ. ಅವುಗಳು ದೇಶದ ನಗರ ಮತ್ತು ಅರೆ ನಗರ ಪ್ರದೇಶಗಳ ಅವಿಭಾಜ್ಯ ಅಂಗವಾಗಿವೆ.  

ADVERTISEMENT

‘ತೆರವು’ ಎಂಬ ಗೋಪ್ಯ ಕ್ರೌರ್ಯ: ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ, ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸುವುದು ಮಾನವೀಯ ನಡೆ ಎಂದು ಮೇಲ್ನೋಟಕ್ಕೆ ಕಾಣಬಹುದು. ಆದರೆ, ಈ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಗ್ರಹಿಕೆ ಸುಳ್ಳು ಎಂಬುದು ಮನದಟ್ಟಾಗುತ್ತದೆ. ನಾಯಿಗಳು ತಾವಿದ್ದ ಸ್ಥಳದ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ಬಾಂಧವ್ಯ ಹೊಂದಿರುವ ಪ್ರಾಣಿಗಳು. ಅವುಗಳಿಗೆ ತಿಳಿದಿರುವ ಸ್ಥಳಗಳಿಂದ ತೆರವುಗೊಳಿಸುವುದರಿಂದ ನಾಯಿಗಳು ಮಾನಸಿಕ ಒತ್ತಡ, ಭಯ ಮತ್ತು ಆಘಾತಕ್ಕೆ ಸಿಲುಕುತ್ತವೆ. ನಮ್ಮಲ್ಲಿ ನಾಯಿಗಳ ಸೆರೆ ಕಾರ್ಯಾಚರಣೆಯು ಶಾಂತ ರೀತಿಯಲ್ಲಿ ನಡೆಯುವುದು ಬಹಳ ಕಡಿಮೆ. ಬಹುತೇಕ ಸಂದರ್ಭಗಳಲ್ಲಿ ಅಟ್ಟಿಸುವುದು, ಅವುಗಳು ಪ್ರತೀಕಾರ ತೋರುವುದು ನಡೆಯುತ್ತವೆ. ಬಂಧನದಂತಹ ಪರಿಸ್ಥಿತಿಯಲ್ಲಿ ಸಾಗಿಸಲಾಗುತ್ತದೆ. ಈ ಅನುಭವಗಳು ಶ್ವಾನಗಳನ್ನು ದೈಹಿಕ ಮತ್ತು ಮಾನಸಿಕವಾಗಿ ಕುಸಿಯುವಂತೆ ಮಾಡುತ್ತವೆ.

ಪುನರ್ವಸತಿ ಕೇಂದ್ರಗಳು ಆರೋಗ್ಯವಂತ ಮತ್ತು ಸ್ವತಂತ್ರವಾಗಿ ಜೀವಿಸುವ ನಾಯಿಗಳಿಗೆ ಸುರಕ್ಷಿತ ಎಂಬ ನಂಬಿಕೆ ಜನರಲ್ಲಿದೆ. ಅದು ನಿಜವಲ್ಲ. ಭಾರತದಾದ್ಯಂತ ಬಹುತೇಕ ಕೇಂದ್ರಗಳು ತಮ್ಮ ಸಾಮರ್ಥ್ಯಕ್ಕೂ ಮೀರಿದ ಸಂಖ್ಯೆಯ ಶ್ವಾನಗಳಿಗೆ ಆಶ್ರಯ ನೀಡುತ್ತಿವೆ. ವಾಸ್ತವದಲ್ಲಿ ಈ ಕೇಂದ್ರಗಳು ಗಾಯಗೊಂಡಿರುವ, ಕಾಯಿಲೆಗೆ ತುತ್ತಾಗಿರುವ, ಬಿಟ್ಟಿರುವ ಅಥವಾ ಹಿಂಸೆಗೆ ಗುರಿಯಾಗಿರುವ ನಾಯಿಗಳಿಗೆ ತಾತ್ಕಾಲಿಕ ಅವಧಿಗೆ ಆರೈಕೆ ನೀಡಲು ಮೀಸಲಾಗಿರುವಂಥವೇ ವಿನಾ, ಆರೋಗ್ಯವಾಗಿರುವ ನಾಯಿಗಳನ್ನು ಅನಿರ್ದಿಷ್ಟಾವಧಿಗೆ ಕೂಡಿ ಹಾಕುವುದಕ್ಕೆ ಇರುವಂಥದ್ದಲ್ಲ. ಹೆಚ್ಚುವರಿಯಾಗಿ ಸಾವಿರಾರು ಪ್ರಾಣಿಗಳಿಗೆ ಈ ಕೇಂದ್ರಗಳು ಆಶ್ರಯ ನೀಡಬೇಕು ಎಂದು ನಿರೀಕ್ಷಿಸುವುದು ಅವಾಸ್ತವಿಕ ಮಾತ್ರವಲ್ಲ, ಅಪಾಯಕಾರಿಯೂ ಹೌದು. ವರ್ಷಗಳ ಕಾಲ ಪಂಜರ ಅಥವಾ ಮುಚ್ಚಿದ ಆವರಣದಲ್ಲಿ ಬಂಧನದಲ್ಲಿರುವ ಶ್ವಾನಗಳು ತೀವ್ರ ಒತ್ತಡ, ಖಿನ್ನತೆಗೆ ಒಳಗಾಗುವುದು ಮಾತ್ರವಲ್ಲದೆ, ತಮ್ಮ ಸಹಜ ವರ್ತನೆಗಳನ್ನೂ ಕಳೆದುಕೊಳ್ಳುತ್ತವೆ. 

ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ: ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸುವುದರಿಂದ ಸಾರ್ವಜನಿಕ ಆರೋಗ್ಯದ ಮೇಲೆ, ಅದರಲ್ಲೂ ಪ್ರಮುಖವಾಗಿ ರೇಬಿಸ್‌ ನಿಯಂತ್ರಣದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಾಯಿಗಳನ್ನು ಕೊಲ್ಲುವುದು ಮತ್ತು ಅವುಗಳನ್ನು ಬೇರೆ ಕಡೆಗಳಿಗೆ ಸ್ಥಳಾಂತರಿಸುವುದರಿಂದ ರೇಬಿಸ್‌ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಜಾಗತಿಕ ಮಟ್ಟದ ಎಲ್ಲ ಆರೋಗ್ಯ ಸಂಸ್ಥೆಗಳು ಒಪ್ಪುತ್ತವೆ. ರೇಬಿಸ್‌ ಹರಡುವಿಕೆ ತಡೆಯಲು ಇರುವ ಏಕೈಕ ದಾರಿ ಎಂದರೆ, ನಾಯಿಗಳ ಸಮೂಹವು ಸೋಂಕಿನಿಂದ ರಕ್ಷಣೆ ಪಡೆಯುವುದು. ಒಂದು ಪ್ರದೇಶದಲ್ಲಿರುವ ಎಲ್ಲ ನಾಯಿಗಳಿಗೆ ಲಸಿಕೆ ಹಾಕಿಸುವುದರಿಂದ ಮಾತ್ರ ಇದು ಸಾಧ್ಯ. 

ಲಸಿಕೆ ಹಾಕಿಸಿರುವ ಮತ್ತು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಬೀದಿನಾಯಿಗಳು ರೋಗ ಹರಡುವಿಕೆಗೆ ಜೈವಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ. ನಿರ್ದಿಷ್ಟ ಪ್ರದೇಶದಲ್ಲಿರುವ ಈ ನಾಯಿಗಳು, ಅಲ್ಲಿಗೆ ಲಸಿಕೆ ಹಾಕದ ನಾಯಿಗಳು ಬರದಂತೆ ತಡೆಯುತ್ತವೆ. ಒಂದು ವೇಳೆ ಈ ನಾಯಿಗಳನ್ನು ಅಲ್ಲಿಂದ ತೆರವುಗೊಳಿಸಿದ ತಕ್ಷಣ ಆ ಜಾಗ ನಾಯಿಗಳಿಂದ ಮುಕ್ತವಾಗುವುದಿಲ್ಲ. ಸುತ್ತಮುತ್ತಲಿನ ಪ್ರದೇಶಗಳು, ಗ್ರಾಮಗಳು ಅಥವಾ ಮೇಲ್ವಿಚಾರಣೆ ಇಲ್ಲದ ವಲಯಗಳಿಂದ ನಾಯಿಗಳು ಬಂದು ಈ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ಈ ನಾಯಿಗಳಿಗೆ ಲಸಿಕೆ ಹಾಕದಿರುವ, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡದಿರುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲದೇ ನಗರ ಪ್ರದೇಶಗಳ ವಾತಾವರಣದ ಪರಿಚಯವೂ ಇರುವುದಿಲ್ಲ. ಹೀಗಾದಾಗ ಸರಹದ್ದಿಗಾಗಿ ನಾಯಿಗಳ ನಡುವೆ ಕಾದಾಟ ಹೆಚ್ಚುತ್ತದೆ, ಸಂತಾನೋತ್ಪತ್ತಿ ಮತ್ತೆ ಆರಂಭವಾಗುತ್ತದೆ ಮತ್ತು ನಾಯಿಗಳ ಆಕ್ರಮಣಶೀಲತೆ ಜಾಸ್ತಿಯಾಗುತ್ತದೆ. ಇದು ಜನರ ಮೇಲೆ ನಾಯಿ ದಾಳಿ, ಕಡಿತವನ್ನು ಹೆಚ್ಚು ಮಾಡುವುದಲ್ಲದೆ, ರೇಬಿಸ್‌ ಅಪಾಯವನ್ನೂ ಹೆಚ್ಚಿಸುತ್ತದೆ.

ಜನನ ನಿಯತ್ರಣ, ಲಸಿಕೆ: ಏಕೈಕ ಪರಿಹಾರ

ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಇರುವ ಏಕೈಕ ಮಾನವೀಯ, ಪರಿಣಾಮಕಾರಿ ಮತ್ತು ಸುಸ್ಥಿರ ವಿಧಾನ ಎಂದರೆ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ಮತ್ತು ನಾಯಿಗಳಿಗೆ ಸಾಮೂಹಿಕವಾಗಿ ರೇಬಿಸ್‌ ತಡೆ ಲಸಿಕೆ ನೀಡುವುದು.  ದಶಕಗಳ ಸಂಶೋಧನೆ ಮತ್ತು ಅನುಭವದಿಂದ ಇದು ಸಾಬೀತಾಗಿದೆ. ಎಬಿಸಿ ಕಾರ್ಯಕ್ರಮದಲ್ಲಿ ಬೀದಿ ನಾಯಿಗಳನ್ನು ಸೆರೆಹಿಡಿದು ಅವುಗಳ ಸಂತಾನಶಕ್ತಿಹರಣ ಶಸ್ತ್ರಕ್ರಿಯೆಯ ಮೂಲಕ ಅನಿಯಂತ್ರಿತ ಸಂತಾನೋತ್ಪತ್ತಿಯನ್ನು ತಡೆಯಲಾಗುತ್ತದೆ ಮತ್ತು ರೇಬಿಸ್‌ ಬಾರದಂತೆ ಲಸಿಕೆಯನ್ನೂ ನೀಡಲಾಗುತ್ತದೆ. ಬಳಿಕ ಆ ನಾಯಿಗಳನ್ನು ಅವುಗಳು ಮೊದಲಿದ್ದ ಜಾಗದಲ್ಲಿ ಬಿಡಲಾಗುತ್ತದೆ. 

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಾಯಿಗಳ ಆಕ್ರಮಣಶೀಲತೆ ಕಡಿಮೆ ಇರುತ್ತದೆ. ಅವುಗಳು ಹೆಚ್ಚು ಓಡಾಡುವುದೂ ಇಲ್ಲ. ಸಂತಾನೋತ್ಪತ್ತಿಗೆ ಸಂಬಂಧಿಸಿ ಜಗಳದಲ್ಲಿ ತೊಡಗುವುದೂ ಇಲ್ಲ. ಲಸಿಕೆ ನೀಡುವುದರಿಂದ ದೀರ್ಘ ಕಾಲ ಅವುಗಳಿಗೆ ರೇಬಿಸ್‌ ಸೋಂಕು ತಗಲುವುದೂ ಇಲ್ಲ. ಸಮಯ ಕಳೆದಂತೆ ನಾಯಿಗಳ ಸಂಖ್ಯೆ ಸ್ಥಿರವಾಗುತ್ತದೆ ಮತ್ತು ಕಾಲಕ್ರಮೇಣ ಕಡಿಮೆಯಾಗುತ್ತದೆ. ದೇಶದ ಹಲವು ನಗರಗಳು ಮತ್ತು ನಗರ ಪಾಲಿಕೆಗಳು ಈ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸಿ ನಾಯಿ ಕಡಿತ ಮತ್ತು ರೇಬಿಸ್‌ ಪ್ರಕರಣಗಳು ಕಡಿಮೆಯಾಗುವಂತೆ ನೋಡಿಕೊಂಡಿವೆ. ಬಹಳ ಮುಖ್ಯವಾಗಿ ಈ ವಿಧಾನವು ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿ ಕ್ಷೇಮಾಭಿವೃದ್ಧಿಗೆ ಪೂರಕವಾಗಿದೆ. 

ಸಹಬಾಳ್ವೆಯ ಸಂಸ್ಕೃತಿ: ಭಾರತವು ಪ್ರಾಣಿಗಳೊಂದಿಗೆ ಆಳವಾದ ಸಾಂಸ್ಕೃತಿಕ, ನಾಗರಿಕತೆಯ ಸಂಬಂಧ ಹೊಂದಿದೆ. ನಮ್ಮ ಸಮಾಜದಲ್ಲಿ ನಾಯಿಗಳು ಕೂಡ ಐತಿಹಾಸಿಕವಾಗಿ ಸಂಕೀರ್ಣವೂ ಗೌರವಯುತವೂ ಆಗಿರುವ ಸ್ಥಾನವನ್ನು ಪಡೆದಿವೆ. ನಾಯಿಯನ್ನು ಕಾವಲುಗಾರ, ನಂಬಿಕಸ್ಥ, ರಕ್ಷಕ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಪಟ್ಟಣ, ಗ್ರಾಮಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ನಾಯಿಗಳನ್ನು ಸ್ಥಳೀಯ ನಿವಾಸಿಗಳು ಆರೈಕೆ ಮಾಡುತ್ತಾರೆ. ಅವುಗಳಿಗೆ ಆಹಾರ ನೀಡುವುದು, ಲಸಿಕೆ ಕೊಡಿಸುವುದು, ಅವುಗಳ ಮೇಲೆ ನಿಗಾ ಇಡುವುದು ಮುಂತಾದ ಕೆಲಸ ಮಾಡುತ್ತಾರೆ. ಈ ಸಹಬಾಳ್ವೆಯು ಆಕಸ್ಮಿಕವಲ್ಲ. ಅದು ಸಾಮರಸ್ಯ, ಮೂಕ ಪ್ರಾಣಿಗಳ ಮೇಲೆ ಅಧಿಕಾರವನ್ನು ಸಾಧಿಸದೇ ಇರುವುದನ್ನು ‍ಪ್ರತಿಬಿಂಬಿಸುತ್ತದೆ ಮತ್ತು ಮನುಷ್ಯ ಮತ್ತು ಪ್ರಾಣಿಗಳ ನಡುವೆ ದೀರ್ಘಾವಧಿಯ ಸಮತೋಲನವನ್ನು ಖಾತರಿಪಡಿಸುತ್ತದೆ. ಜನ ಸಾಂದ್ರತೆ ಹೆಚ್ಚಿರುವ ಜನವಸತಿಗಳು ಕೂಡ ಸ್ವತಂತ್ರವಾಗಿ ಜೀವಿಸುತ್ತಿರುವ ಪ್ರಾಣಿಗಳನ್ನು ಕೊಲ್ಲದೆ ಅಥವಾ ಬಂಧನಕ್ಕೆ ಒಳಪಡಿಸದೆ ಅವುಗಳೊಂದಿಗೆ ಹೇಗೆ ಸಹಬಾಳ್ವೆ ನಡೆಸಬಹುದು ಎಂಬುದಕ್ಕೆ ಭಾರತ ಮಾದರಿಯಾಗಿದೆ. ಜಾಗತಿಕವಾಗಿ ಇದನ್ನೇ ಉದಾಹರಣೆಯನ್ನಾಗಿ ಹಲವು ಬಾರಿ ಉಲ್ಲೇಖಿಸಲಾಗಿದೆ. ಹೀಗಿರುವಾಗ ಸಾರ್ವಜನಿಕ ಸ್ಥಳಗಳಿಂದ ಬೀದಿನಾಯಿಗಳನ್ನು ತೆರವುಗೊಳಿಸುವುದು ಎಂದರೆ ಬೆದರಿಕೆಗೆ ಸಮನಾದ ಸಂದೇಶವನ್ನು ರವಾನಿಸುತ್ತದೆ. ಬಂಧನ ಎಂದರೆ ಸುರಕ್ಷತೆ ಎಂದೂ ಪ್ರತಿಪಾದಿಸುತ್ತದೆ. ಇಂತಹ ಯೋಚನೆಯು ಶತಮಾನಗಳ ಸಹಬಾಳ್ವೆಯ ಆಶಯವನ್ನು ಮಣ್ಣುಪಾಲು ಮಾಡುತ್ತದೆ. 

ಸಮುದಾಯದ ಸುರಕ್ಷತೆಗೂ ಭಂಗ: ಬೀದಿ ನಾಯಿಗಳು ನಮ್ಮ ನೆರೆಹೊರೆ ಪರಿಸರದ ಅನೌಪಚಾರಿಕ ಭದ್ರತಾ ವ್ಯವಸ್ಥೆಯ ಭಾಗವೂ ಆಗಿವೆ. ಒಂದೇ ಸ್ಥಳದಲ್ಲಿ ಇರುವ ನಾಯಿಗಳು ಸ್ಥಳೀಯ ನಿವಾಸಿಗಳನ್ನು ಗುರುತಿಸುತ್ತವೆ. ಆ ಪ್ರದೇಶಕ್ಕೆ ಅಪರಿಚಿತರು ಬಂದರೆ ಅಥವಾ ಸಂದೇಹಾತ್ಮಕ ಚಟುವಟಿಕೆಗಳು ನಡೆಯುತ್ತಿದ್ದರೆ ಸ್ಥಳೀಯರನ್ನು ಎಚ್ಚರಿಸುತ್ತವೆ. ಅಂತಹ ನಾಯಿಗಳನ್ನು ತೆರವುಗೊಳಿಸಿದರೆ ಸಮಾಜದ ಸಮತೋಲನ ತಪ್ಪುತ್ತದೆ. ಅಲ್ಲದೇ ಇಂತಹ ಕ್ರಮವು ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳ ಮೇಲೂ ಪರಿಣಾಮ ಬೀರುತ್ತದೆ. ಹಲವು ಪ್ರದೇಶಗಳಲ್ಲಿ ಬೀದಿ ನಾಯಿಗಳು ವೃದ್ಧರ, ಮಕ್ಕಳ ಮತ್ತು ವಸತಿರಹಿತ ಜನರ ಒಡನಾಡಿಗಳಾಗಿರುತ್ತವೆ. ಸುರಕ್ಷತೆಯ ಕಾರಣವೊಡ್ಡಿ, ಈ ಸಂಬಂಧಗಳನ್ನು ಮುರಿಯುವುದರಿಂದ ಸಮಾಜದ ವಾಸ್ತವಗಳನ್ನು ನಿರ್ಲಕ್ಷಿಸಿದಂತಾಗುತ್ತದೆ. 

ಮೂಲ ಸಮಸ್ಯೆಗೆ ಸಿಗದ ಪರಿಹಾರ: ನಾಯಿಗಳನ್ನು ತೆರವುಗೊಳಿಸುವ ವಿಧಾನವು ಸಮಸ್ಯೆಗಳ ಮೂಲವನ್ನೇ ನಿರ್ಲಕ್ಷಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿರುವ ತೆರೆದ ಕಸದ ಬುಟ್ಟಿಗಳು ನಾಯಿಗಳಿಗೆ ಬೇಕಾದಷ್ಟು ಆಹಾರವನ್ನು ಒದಗಿಸುತ್ತವೆ. ಜವಾಬ್ದಾರಿರಹಿತವಾಗಿ ನಡೆಯುವ ಸಾಕುಪ್ರಾಣಿಗಳ ಸಂತಾನೋತ್ಪತ್ತಿ ಮತ್ತು ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದರ ಮೇಲೆ ನಿಗಾ ಇಡಲಾಗುತ್ತಿಲ್ಲ. ಪ್ರಾಣಿಗಳೊಂದಿಗೆ ಸಹ ಜೀವನ, ನಾಯಿಗಳ ವರ್ತನೆ ಮತ್ತು ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ದೊಡ್ಡ ಪ್ರಮಾಣದಲ್ಲಿ ಆಗುತ್ತಿಲ್ಲ. ವ್ಯವಸ್ಥೆಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಬಗೆಹರಿಸದೆ ಸಾರ್ವಜನಿಕ ಸ್ಥಳಗಳಿಂದ ನಾಯಿಗಳನ್ನು ತೆರವುಗೊಳಿಸುವುದು ಸಮಸ್ಯೆಯನ್ನು ಬೇರೆಲ್ಲಿಗೋ ವರ್ಗಾಯಿಸಿದಂತೆ ಆಗುತ್ತದೆ ಅಷ್ಟೆ. ‌

ಮಾನವೀಯತೆಯ ದಾರಿ: ನಮ್ಮ ಮುಂದಿರುವ ದಾರಿ ಎಂದರೆ, ಎಬಿಸಿ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸುವುದು, ಸಾರ್ವತ್ರಿಕವಾಗಿ ಲಸಿಕೆ ನೀಡುವುದನ್ನು ಖಾತ್ರಿ ಪಡಿಸುವುದು, ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುವುದು, ಅನಿಯಂತ್ರಿತ ಸಂತಾನೋತ್ಪತ್ತಿ ತಡೆಯುವುದು, ಸಾರ್ವಜನಿಕರಲ್ಲಿ ಜಾಗೃತಿ  ಮೂಡಿಸಲು ಹೆಚ್ಚು ಹಣ ವ್ಯಯಿಸುವುದು. ನಾಯಿಗಳನ್ನು ಬೇರೆಡೆಗೆ ಸ್ಥಳಾಂತರಗೊಳಿಸುವುದದರ ಬದಲಿಗೆ ಶಾಲೆಗಳು ಮತ್ತು ಆಸ್ಪತ್ರೆಗಳು ನಾಯಿಗಳಿಗೆ ಪೂರಕ ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸಬಹುದು ಮತ್ತು ಅವುಗಳ ವರ್ತನೆಯ ಬಗ್ಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬಹುದು.

ದೇಶದ ನ್ಯಾಯಾಲಯಗಳು ಮತ್ತು ನೀತಿನಿರೂಪಕರಿಗೆ ದೊಡ್ಡ ಜವಾಬ್ದಾರಿಗಳಿವೆ. ಧ್ವನಿ ಇಲ್ಲದ ಲಕ್ಷಾಂತರ ಜೀವಿಗಳ ಮೇಲೆ ಪರಿಣಾಮ ಬೀರುವಂತಹ ನಿರ್ಧಾರಗಳು ವಿಜ್ಞಾನ, ನೈತಿಕತೆ, ಮಾನವೀಯತೆ ಮತ್ತು ಬದುಕಿನ ವಾಸ್ತವ ಆಧಾರಿತವಾಗಿರಬೇಕು.

ಒಂದು ಸಮಾಜವು ತಾನು ಎದುರಿಸುತ್ತಿರುವ ಸಮಸ್ಯೆಯನ್ನು ಎಷ್ಟು ಪರಿಣಾಮಕಾರಿಯಾಗಿ ಪರಿಹರಿಸಿಕೊಂಡಿದೆ ಎಂಬುದರ ಮೇಲೆ ಆ ಸಮಾಜ ಹೇಗಿದೆ ಎಂದು ನಿರ್ಣಯಿಸಲಾಗುವುದಿಲ್ಲ; ಬದಲಿಗೆ ಎಷ್ಟು ವಿವೇಕದಿಂದ ಆ ಸಮಸ್ಯೆಯನ್ನು ಪರಿಹರಿಸುತ್ತದೆ ಎಂಬುದರ ಮೇಲೆ ನಿರ್ಣಯಿಸಲಾಗುತ್ತದೆ. ನಿಜವಾದ ಸುರಕ್ಷತೆಯು ವಿಜ್ಞಾನ ಆಧಾರಿತ ಸಹಬಾಳ್ವೆಯಲ್ಲಿ ಇದೆಯೇ ವಿನಾ ಆತಂಕದಿಂದ ಕೂಡಿದ ಪ್ರತ್ಯೇಕತೆಯಲ್ಲಿ ಅಲ್ಲ ಎಂಬುದನ್ನು ನಾವು ಅರಿಯಬೇಕು.

ಜನನ ನಿಯತ್ರಣ ಲಸಿಕೆ: ಏಕೈಕ ಪರಿಹಾರ

ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಇರುವ ಏಕೈಕ ಮಾನವೀಯ ಪರಿಣಾಮಕಾರಿ ಮತ್ತು ಸುಸ್ಥಿರ ವಿಧಾನ ಎಂದರೆ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ಕಾರ್ಯಕ್ರಮ ಮತ್ತು ನಾಯಿಗಳಿಗೆ ಸಾಮೂಹಿಕವಾಗಿ ರೇಬಿಸ್‌ ತಡೆ ಲಸಿಕೆ ನೀಡುವುದು.  ದಶಕಗಳ ಸಂಶೋಧನೆ ಮತ್ತು ಅನುಭವದಿಂದ ಇದು ಸಾಬೀತಾಗಿದೆ. ಎಬಿಸಿ ಕಾರ್ಯಕ್ರಮದಲ್ಲಿ ಬೀದಿ ನಾಯಿಗಳನ್ನು ಸೆರೆಹಿಡಿದು ಅವುಗಳ ಸಂತಾನಶಕ್ತಿಹರಣ ಶಸ್ತ್ರಕ್ರಿಯೆಯ ಮೂಲಕ ಅನಿಯಂತ್ರಿತ ಸಂತಾನೋತ್ಪತ್ತಿಯನ್ನು ತಡೆಯಲಾಗುತ್ತದೆ ಮತ್ತು ರೇಬಿಸ್‌ ಬಾರದಂತೆ ಲಸಿಕೆಯನ್ನೂ ನೀಡಲಾಗುತ್ತದೆ. ಬಳಿಕ ಆ ನಾಯಿಗಳನ್ನು ಅವುಗಳು ಮೊದಲಿದ್ದ ಜಾಗದಲ್ಲಿ ಬಿಡಲಾಗುತ್ತದೆ. 

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಾಯಿಗಳ ಆಕ್ರಮಣಶೀಲತೆ ಕಡಿಮೆ ಇರುತ್ತದೆ. ಅವುಗಳು ಹೆಚ್ಚು ಓಡಾಡುವುದೂ ಇಲ್ಲ. ಸಂತಾನೋತ್ಪತ್ತಿಗೆ ಸಂಬಂಧಿಸಿ ಜಗಳದಲ್ಲಿ ತೊಡಗುವುದೂ ಇಲ್ಲ. ಲಸಿಕೆ ನೀಡುವುದರಿಂದ ದೀರ್ಘ ಕಾಲ ಅವುಗಳಿಗೆ ರೇಬಿಸ್‌ ಸೋಂಕು ತಗಲುವುದೂ ಇಲ್ಲ. ಸಮಯ ಕಳೆದಂತೆ ನಾಯಿಗಳ ಸಂಖ್ಯೆ ಸ್ಥಿರವಾಗುತ್ತದೆ ಮತ್ತು ಕಾಲಕ್ರಮೇಣ ಕಡಿಮೆಯಾಗುತ್ತದೆ. ದೇಶದ ಹಲವು ನಗರಗಳು ಮತ್ತು ನಗರ ಪಾಲಿಕೆಗಳು ಈ ಕಾರ್ಯಕ್ರಮಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸಿ ನಾಯಿ ಕಡಿತ ಮತ್ತು ರೇಬಿಸ್‌ ಪ್ರಕರಣಗಳು ಕಡಿಮೆಯಾಗುವಂತೆ ನೋಡಿಕೊಂಡಿವೆ. ಬಹಳ ಮುಖ್ಯವಾಗಿ ಈ ವಿಧಾನವು ಸಾರ್ವಜನಿಕ ಸುರಕ್ಷತೆ ಮತ್ತು ಪ್ರಾಣಿ ಕ್ಷೇಮಾಭಿವೃದ್ಧಿಗೆ ಪೂರಕವಾಗಿದೆ. 

ಲೇಖಕಿ: ಚಾರ್ಲೀಸ್‌ ಅನಿಮಲ್‌ ರೆಸ್ಕ್ಯೂ ಸೆಂಟರ್‌ನ (ಕೇರ್‌) ಸಂಸ್ಥಾಪಕ ಟ್ರಸ್ಟಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.