ADVERTISEMENT

ಸಂಪಾದಕೀಯ | ಆರೋಗ್ಯ ಸೇತು: ಅಗತ್ಯ ಹೌದು, ಬೇಕು ಕಾನೂನಿನ ಚೌಕಟ್ಟು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 1:35 IST
Last Updated 28 ಏಪ್ರಿಲ್ 2020, 1:35 IST
   

ಕೊರೊನಾ ವೈರಾಣುವಿನಿಂದ ಬರುವ ಕೋವಿಡ್–19 ಕಾಯಿಲೆಯ ಹರಡುವಿಕೆ ತಡೆಯಲು ಭಾರತವು ಹತ್ತು ಹಲವು ಉಪಕ್ರಮಗಳನ್ನು ಕೈಗೊಂಡಿದೆ. 130 ಕೋಟಿ ಜನ ಇರುವ ದೇಶವನ್ನು ಲಾಕ್‌ಡೌನ್‌ ಸ್ಥಿತಿಯಲ್ಲಿ ಇರಿಸಿ, ಕೊರೊನಾ ವೈರಾಣು ಸಮುದಾಯದ ನಡುವೆ ಹರಡುವ ಸ್ಥಿತಿ ತಲುಪದಂತೆ ನೋಡಿಕೊಳ್ಳುವಲ್ಲಿ ದೇಶದ ವ್ಯವಸ್ಥೆ ಇದುವರೆಗೆ ಯಶಸ್ಸು ಕಂಡಿದೆ.

ವಿಶ್ವದಲ್ಲಿ ಎರಡನೆಯ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವೊಂದು ವೈರಾಣು ಹರಡುವಿಕೆಯನ್ನು ಇಷ್ಟರಮಟ್ಟಿಗೆ ತಡೆದಿರುವುದು ಸಣ್ಣ ಸಾಧನೆ ಅಲ್ಲ. ಕೋವಿಡ್–19 ವಿರುದ್ಧದ ಹೋರಾಟದಲ್ಲಿ ದೇಶವು ತಂತ್ರಜ್ಞಾನದ ನೆರವನ್ನೂ ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್‌ ಹೊಂದಿರುವ ವ್ಯಕ್ತಿಗಳು ಆರೋಗ್ಯ ಸೇತು ಎನ್ನುವ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಅದು ನೀಡುವ ಸಲಹೆ– ಸೂಚನೆಗಳ ಮೂಲಕ ತಮ್ಮನ್ನು ಸುರಕ್ಷಿತವಾಗಿಸಿಕೊಳ್ಳುವ ಯತ್ನದ ಮೊರೆ ಹೋಗಬಹುದು.

ಈ ಆ್ಯಪ್‌ ಬಳಸುವವರಿಗೆ ಒಂದಿಷ್ಟು ಅನುಕೂಲಗಳು ಇವೆ. ಇದರ ಬಳಕೆದಾರರು ಆ್ಯಪ್‌ ಮೂಲಕವೇ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿ, ತಮ್ಮ ದೇಹದಲ್ಲಿ ಕಾಣಿಸಿಕೊಂಡಿರುವ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ, ತಾವು ಕಳೆದ 14 ದಿನಗಳ ಅವಧಿಯಲ್ಲಿ ಎಲ್ಲೆಲ್ಲಿಗೆ ಭೇಟಿ ನೀಡಿದ್ದೆವು ಎಂಬುದನ್ನು ತಿಳಿಸಿ, ತಾವು ಕೊರೊನಾ ವೈರಾಣುವಿಗೆ ತುತ್ತಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಕಂಡುಕೊಳ್ಳಬಹುದು.

ADVERTISEMENT

ಈ ಆ್ಯಪ್‌ನಲ್ಲಿ ಇರುವ ಸೌಲಭ್ಯಗಳನ್ನೆಲ್ಲ ಪರಿಗಣಿಸಿದರೆ, ಕೊರೊನಾ ಹರಡುವಿಕೆ ತಡೆಯುವಲ್ಲಿ ಇದು ತನ್ನದೇ ಆದ ಕೊಡುಗೆ ನೀಡಬಲ್ಲದು ಎಂದು ಮೇಲ್ನೋಟಕ್ಕೆ ಅನಿಸುವುದರಲ್ಲಿ ಅನುಮಾನ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು, ಆ್ಯಪ್‌ನ ಬಳಕೆಯನ್ನುಜನ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಇದೇ ಬಗೆಯ ಮನವಿಯನ್ನು ಜನರ ಮುಂದೆ ಇರಿಸಿದ್ದಾರೆ.

ಈ ಆ್ಯಪ್‌ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದಾದರೆ, ವ್ಯಕ್ತಿ ಬಳಸುತ್ತಿರುವ ಮೊಬೈಲ್‌ನ ಜಿಪಿಎಸ್‌ ಮಾಹಿತಿ ಇದಕ್ಕೆ ಅಗತ್ಯ. ಈಗಿರುವ ಲಾಕ್‌ಡೌನ್‌ ಸ್ಥಿತಿ ಸುಧಾರಿಸಿದ ನಂತರವೂ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಳ್ಳುವ ಅನಿವಾರ್ಯ ಮುಂದುವರಿಯುವುದು ಬಹುತೇಕ ಖಚಿತ. ಇಂತಹ ಸ್ಥಿತಿಯಲ್ಲಿ ಈ ಆ್ಯಪ್‌ ಸಾರ್ವಜನಿಕರಿಗೆ ಹೆಚ್ಚಿನ ಉಪಯೋಗಕ್ಕೆ ಬರಬಹುದು. ಸರ್ಕಾರಗಳು ಕೂಡ ಇದರ ಬಳಕೆಯನ್ನು ಹೆಚ್ಚಿಸಲು ಮುಂದಾಗಬಹುದು. ಆರೋಗ್ಯ ಸೇತು ಆ್ಯಪ್‌ ಮೂಲಕ ಸಂಗ್ರಹಿಸಲಾಗುವ ಹತ್ತು ಹಲವು ಮಾಹಿತಿಗಳು ವ್ಯಕ್ತಿಯ ಖಾಸಗಿ ಬದುಕಿಗೆ ಸಂಬಂಧಿಸಿದವು.

ವ್ಯಕ್ತಿ ಯಾರನ್ನೆಲ್ಲ ಭೇಟಿ ಮಾಡಿದ, ಎಲ್ಲೆಲ್ಲಿ ಸುತ್ತಾಟ ನಡೆಸಿದ ಎಂಬ ವಿವರಗಳು ಸಾಂಕ್ರಾಮಿಕವನ್ನು ತಡೆಯುವಲ್ಲಿ ಅತ್ಯಗತ್ಯವಾದವು ಎಂಬುದು ನಿಜ. ಈ ವಿವರಗಳೆಲ್ಲ ಸಾಂಕ್ರಾಮಿಕವನ್ನು ತಡೆಯುವ ಉದ್ದೇಶ ಹೊರತುಪಡಿಸಿ, ಬೇರೆ ಯಾವ ಉದ್ದೇಶಕ್ಕೂ ಬಳಕೆಯಾಗದಂತೆ ನೋಡಿಕೊಳ್ಳಬೇಕಿರುವುದು ಸರ್ಕಾರಗಳ ಹೊಣೆ. ‘ನಿರ್ದಿಷ್ಟ ಉದ್ದೇಶಕ್ಕೆ ಸಂಗ್ರಹಿಸುವ ಮಾಹಿತಿಯನ್ನು ಆ ಉದ್ದೇಶಕ್ಕೆ ಮಾತ್ರ ಬಳಸಬೇಕೇ ವಿನಾ ಅಕ್ರಮವಾಗಿ ಬೇರೆ ಉದ್ದೇಶಗಳಿಗೆ ಬಳಕೆ ಮಾಡಬಾರದು’ ಎಂದು ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ.

ಭಾರತದಲ್ಲಿ ವೈಯಕ್ತಿಕ ವಿವರಗಳ ರಕ್ಷಣೆಗೆ ಸೂಕ್ತ ಕಾನೂನು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ, ಆರೋಗ್ಯ ಸೇತು ಆ್ಯಪ್ ಮೂಲಕ ವ್ಯಕ್ತಿಗಳು ನೀಡುವ ವಿವರಗಳು ಅನ್ಯರ ಕೈಗೆ ದೊರೆತು, ಅವು ದುರ್ಬಳಕೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ. ಸೂಕ್ತ ಕಾನೂನು ರೂಪಿಸಿ, ಈ ಆ್ಯಪ್‌ನ ಉದ್ದೇಶಕ್ಕೆ ಮಿತಿಗಳನ್ನು ನಿಗದಿ ಮಾಡಿ, ಇದರ ಮೂಲಕ ಸಂಗ್ರಹಿಸುವ ಮಾಹಿತಿ ಯಾವುದಕ್ಕೆ ಬಳಕೆಯಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬಹುದು.

ಈ ಆ್ಯಪ್ ಮೂಲಕ ಸಂಗ್ರಹಿಸಿದ ಅಷ್ಟೂ ಮಾಹಿತಿಯನ್ನು ಕೋವಿಡ್–19 ಸಾಂಕ್ರಾಮಿಕ ಕೊನೆಗೊಂಡ ನಂತರ ಸಂಪೂರ್ಣವಾಗಿ ಅಳಿಸಿಹಾಕುವುದಾಗಿ ಭರವಸೆ ನೀಡಿ, ಮಾಹಿತಿಯ ದುರ್ಬಳಕೆ ಆಗಬಹುದು ಎಂಬ ಕಳವಳವನ್ನು ನಿವಾರಿಸಬಹುದು. ಹಾಗೆಯೇ, ಈ ಆ್ಯಪ್‌ ಮೂಲಕ ಕಣ್ಗಾವಲು ವ್ಯವಸ್ಥೆ ಸೃಷ್ಟಿಯಾಗದು ಎನ್ನುವ ವಿಶ್ವಾಸ ಮೂಡಿಸುವ ಹೊಣೆ ಕೂಡ ಆಳುವವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.