ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಇತಿಹಾಸದಲ್ಲೇ ಅತ್ಯಂತ ಬೃಹತ್ ಗಾತ್ರದ್ದು (₹ 19,930 ಕೋಟಿ) ಎಂಬ ಹೆಗ್ಗಳಿಕೆಗೆ ಪಾತ್ರವಾದ 2025–26ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಬಜೆಟ್‌ನ ಗಾತ್ರದಲ್ಲಿ ಈ ಸಲ ಭಾರಿ ಹೆಚ್ಚಳ ಆಗಿದೆ. ಬಿಬಿಎಂಪಿಗೆ ಚುನಾಯಿತ ಸದಸ್ಯರಿಲ್ಲದೆ, ಅಧಿಕಾರಿಗಳೇ ಸತತ ಐದನೆಯ ವರ್ಷವೂ ಮಂಡಿಸಿದ ಬಜೆಟ್ ಇದಾಗಿದೆ. ಇದು, ಬೆಂಗಳೂರಿನ ನಾಗರಿಕರ ಸಾಂವಿಧಾನಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆ ಎಂಬ ವಿವಿಧ ಸಂಘಟನೆಗಳ ಕೂಗು ಬೃಹತ್ ಯೋಜನೆಗಳ ಅಬ್ಬರದಲ್ಲಿ ಕರಗಿಹೋಗಿದೆ. ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯ ಛಾಯೆ ಈ ಬಜೆಟ್‌ನಲ್ಲೂ ಮುಂದುವರಿದಿದ್ದು, ಅದರಡಿಯ ಎಂಟು ವಿಭಾಗಗಳ ಯೋಜನೆಗಳಿಗೆ ಹಣ ಎತ್ತಿಡಲು ಭಗೀರಥ ಯತ್ನ ನಡೆದಿದೆ. ಬಜೆಟ್ ಸಿದ್ಧಪಡಿಸಿದವರು, ಅದರ ‘ಭಾರಿ ಗಾತ್ರ’ದ ಕುರಿತು ಹೆಮ್ಮೆಯಿಂದ ಹೇಳಿಕೊಂಡರೂ ವರ್ಷಗಳಿಂದ ಯಾವ ಸಂಪನ್ಮೂಲಗಳಿಂದ ವರಮಾನ ಸಂಗ್ರಹ
ಸಾಧ್ಯವಾಗಿಲ್ಲವೋ ಅದೇ ಮೂಲಗಳಿಂದ ದುಪ್ಪಟ್ಟು ವರಮಾನ ಗಳಿಸುವ ಗುರಿ ಹಾಕಿಕೊಂಡಿದ್ದಾರೆ. ಇದು ಕಾರ್ಯಸಾಧ್ಯವೇ ಎನ್ನುವ ಪ್ರಶ್ನೆ ಬಲವಾಗಿ ಕಾಡುತ್ತಿದೆ. ಉದಾಹರಣೆಗೆ, ಜಾಹೀರಾತು ಕರ,
ಇ–ಖಾತೆ ವರ್ಗಾವಣೆ, ಸ್ವತ್ತುಗಳ ಬಾಡಿಗೆ, ಚಿತಾಗಾರದ ಶುಲ್ಕ, ಒಎಫ್‌ಸಿ ತೆರಿಗೆಗಳ ಸಂಗ್ರಹವನ್ನು ಕಳೆದ ವರ್ಷಕ್ಕೆ ಹೋಲಿಸಿದರೆ, ಬಹುತೇಕ ದ್ವಿಗುಣಗೊಳಿಸಿಕೊಳ್ಳಲು ಅಂದಾಜಿಸಲಾಗಿದೆ. ಇವುಗಳ ವರಮಾನ ಹಿಂದಿನ ವರ್ಷಗಳಲ್ಲಿ ಬಜೆಟ್ ನಿರೀಕ್ಷೆಯ ಅರ್ಧದಷ್ಟು ಮಾತ್ರ ಸಂಗ್ರಹವಾಗಿತ್ತು. ಸ್ವಂತ ಸಂಪನ್ಮೂಲಕ್ಕಿಂತಲೂ ಈ ಬಜೆಟ್ ಹೊರಗಿನ ಅನುದಾನವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಪರಾವಲಂಬಿ ಯೋಜನೆಗಳೇ ಬಹಳಷ್ಟಿವೆ. ಬಜೆಟ್‌ನ ಒಟ್ಟು ವರಮಾನದ ಶೇಕಡ 44ರಷ್ಟು ಮೊತ್ತವನ್ನು ಸರ್ಕಾರದ ಅನುದಾನ, ಖಾತರಿ ಹಾಗೂ ಸಾಲದ ರೂಪದಲ್ಲಿ ನಿರೀಕ್ಷಿಸಿರುವುದು ಅದರ ಪರಾವಲಂಬಿ ಸ್ಥಿತಿಗೆ ದ್ಯೋತಕ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬಿಬಿಎಂಪಿ ಮಣೆ ಹಾಕಿರುವುದು ಎದ್ದು ಕಾಣುವ ಅಂಶ. ರಾಜಧಾನಿ ಅಭಿವೃದ್ಧಿಯ ದಿಕ್ಕನ್ನೇ ಬದಲಿಸುವ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸುವ ಕನಸು ಬಿತ್ತಿರುವ ಬಜೆಟ್, ಅದಕ್ಕಾಗಿ ವಿಶೇಷ ಉದ್ದೇಶಿತ ಘಟಕ (ಎಸ್‌ಪಿವಿ) ಸೃಜಿಸಿ, ₹73,600 ಕೋಟಿ ವಿನಿಯೋಗ ಮಾಡುವುದಾಗಿ ಪ್ರಸ್ತಾಪಿಸಿದೆ. ಸುರಂಗ ರಸ್ತೆ ನಿರ್ಮಾಣ, ಡಬಲ್ ಡೆಕರ್ ಯೋಜನೆ ಅನುಷ್ಠಾನ, ಎಲಿವೇಟೆಡ್ ಕಾರಿಡಾರ್ ಮತ್ತು ಹೊಸ ರಸ್ತೆಗಳ ನಿರ್ಮಾಣ, ವೈಟ್ ಟಾಪಿಂಗ್ ಹಾಗೂ ಸ್ಕೈ ಡೆಕ್ ಯೋಜನೆಯ ಅನುಷ್ಠಾನ ಸೇರಿದಂತೆ ಸಾರ್ವಜನಿಕ ಕಾಮಗಾರಿಗಳಿಗೆ ಬಜೆಟ್‌ನ ಒಟ್ಟಾರೆ ಮೊತ್ತದಲ್ಲಿ
ಶೇ 65ರಷ್ಟು ಅನುದಾನವನ್ನು ಮೀಸಲಿಡಲಾಗಿದೆ. ಬಿಬಿಎಂಪಿಯ ಉದ್ದೇಶಿತ ಈ ಹೊಸ ಯೋಜನೆಗಳಿಗೆ ಮೆಟ್ರೊಪಾಲಿಟನ್ ಯೋಜನಾ ಸಮಿತಿಯ (ಎಂಪಿಸಿ) ಅನುಮೋದನೆ ಇಲ್ಲ. ಮಾಸ್ಟರ್ ಪ್ಲಾನ್ ಭಾಗವಾಗಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದುಕೊಳ್ಳಲು ನಗರಕ್ಕೆ ಸದ್ಯ ಒಂದು ಮಾಸ್ಟರ್ ಪ್ಲಾನ್ ಸಹ ಇಲ್ಲ. ಹೀಗಿರುವಾಗ ಇಂತಹ ದೊಡ್ಡ ಯೋಜನೆಗಳಿಗೆ ಭಾರಿ ಮೊತ್ತವನ್ನು ವಿನಿಯೋಗಿಸುವುದು ಎಷ್ಟು ಸರಿ ಎಂಬುದು ನಗರಯೋಜನೆ ತಜ್ಞರ ಪ್ರಶ್ನೆ. ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ
ಶೇ 4ರಷ್ಟು ಮಾತ್ರ ಅನುದಾನ ಒದಗಿಸಲಾಗಿದೆ. ಇದು ಒಳಗೊಳ್ಳುವ ಅಭಿವೃದ್ಧಿ ಅಲ್ಲ ಎನ್ನುವುದು ತಜ್ಞರ ಆಕ್ಷೇಪ. ಬೃಹತ್ ಕಾಮಗಾರಿಗಳಿಗೆ ಆದ್ಯತೆ ನೀಡಿ, ವಾರ್ಡ್ ರಸ್ತೆ, ಚರಂಡಿ ಕಾಮಗಾರಿಗಳನ್ನು
ಕಡೆಗಣಿಸಲಾಗಿದೆ. ಒಂದುವೇಳೆ ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿದ್ದಿದ್ದರೆ ಈ ರೀತಿ ತಾರತಮ್ಯಕ್ಕೆ ಅವಕಾಶ ಇರುತ್ತಿರಲಿಲ್ಲ ಎಂಬ ವಾದದಲ್ಲಿ ತಥ್ಯವಿದೆ. ಗುಂಡಿಮುಕ್ತ ರಸ್ತೆ, ಹೂಳುಮುಕ್ತ ಚರಂಡಿ, ತ್ಯಾಜ್ಯಮುಕ್ತ ಬಡಾವಣೆ, ದಟ್ಟಣೆಮುಕ್ತ ಸಂಚಾರ ವ್ಯವಸ್ಥೆಗೆ ಭರವಸೆದಾಯಕ ಯೋಜನೆಗಳು ಸಿಗಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ.
ಕಸಸಂಗ್ರಹ ಶುಲ್ಕವನ್ನು ಹೆಚ್ಚುವರಿಯಾಗಿ ನಾಗರಿಕರ ಮೇಲೆ ಹೊರಿಸಿದ ಬಜೆಟ್ ಕೂಡ ಇದಾಗಿದೆ. ಘನತ್ಯಾಜ್ಯ ನಿರ್ವಹಣೆಯು ನಗರವನ್ನು ಎರಡೂವರೆ ದಶಕಗಳಿಂದ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ಈ ಸಮಸ್ಯೆಯ ನಿವಾರಣೆಗೆ ಒಂದು ಸುಸ್ಥಿರ ಹಾಗೂ ವ್ಯವಸ್ಥಿತ ಯೋಜನೆಯನ್ನು ರೂಪಿಸಿ, ಅನುಷ್ಠಾನಕ್ಕೆ ತರುವ ಪ್ರಬಲ ಆಕಾಂಕ್ಷೆ ಬಜೆಟ್‌ನಲ್ಲಿ ಗೋಚರಿಸಿಲ್ಲ. ನಗರದ ನಾಲ್ಕೂ ದಿಕ್ಕುಗಳಲ್ಲಿ ತಲಾ ನೂರು ಎಕರೆ ಜಾಗದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಬಜೆಟ್‌ಗಳಲ್ಲಿ ಇದ್ದಂತಹ ಹೇಳಿಕೆಗಳು ಈ ಸಲದ ಬಜೆಟ್‌ನಲ್ಲೂ ಮುಂದುವರಿದಿವೆ. ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ‘ಬಿಬಿಎಂಪಿ ಒನ್ ಆ್ಯಪ್’ ಅಭಿವೃದ್ಧಿಪಡಿಸಲು ನಿರ್ಧರಿಸಿರುವುದು ಗಮನಸೆಳೆಯು
ವಂತಹ ಘೋಷಣೆ. ಈ ಆ್ಯಪ್ ಏನಾದರೂ ಸಮರ್ಪಕವಾಗಿ ಅಭಿವೃದ್ಧಿ ಹೊಂದಿ ನಾಗರಿಕರ ಕೈಗೆ ಸಿಕ್ಕರೆ ನಗರದ ಸಮಸ್ಯೆಗಳ ಪರಿಹಾರಕ್ಕೆ ಸುಲಭದ ದಾರಿ ಸಿಕ್ಕಂತಾಗುತ್ತದೆ. ಆದರೆ, ಘೋಷಣೆಗಳ ಅನುಷ್ಠಾನದಲ್ಲಿ ಬಿಬಿಎಂಪಿ ಎಷ್ಟೊಂದು ಹಿಂದಿದೆ ಎಂಬುದನ್ನು ನಗರದ ಜನ ಬಲ್ಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.