ಬಿಹಾರದಲ್ಲಿ ನಡೆದಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅಧಿಕೃತ ಗುರುತಿನ ಚೀಟಿಯನ್ನಾಗಿ ‘ಆಧಾರ್’ ಅನ್ನೂ ಪರಿಗಣಿಸಬೇಕೆಂದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಸ್ವಾಗತಾರ್ಹ. ಈ ನಿರ್ದೇಶನ, ‘ಎಸ್ಐಆರ್’ ಪ್ರಕ್ರಿಯೆಗೆ ಸಂಬಂಧಿಸಿದ ದೂರುಗಳ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಿಂದ ಅನಿವಾರ್ಯವಾಗಿದ್ದ ಮತ್ತೊಂದು ಹಸ್ತಕ್ಷೇಪ ಆಗಿದೆ. ಆಧಾರ್ ಸೇರ್ಪಡೆಯೊಂದಿಗೆ, ಪಡಿತರಚೀಟಿ ಹಾಗೂ ಪಾಸ್‌ಪೋರ್ಟ್ ಸೇರಿದಂತೆ ಗುರುತಿನ ಪುರಾವೆಯಾಗಿ ನೀಡಬಹುದಾದ ದಾಖಲೆಗಳ ಸಂಖ್ಯೆ ಹನ್ನೆರಡಕ್ಕೇರಿದೆ. ಇದರಿಂದಾಗಿ ‘ಎಸ್‌ಐಆರ್’ ಪ್ರಕ್ರಿಯೆ ಹೆಚ್ಚು ಒಳಗೊಳ್ಳುವಿಕೆಯ ಸಾಧ್ಯತೆಯನ್ನು ಹೊಂದಿದಂತಾಗಿದೆ. ಅಷ್ಟುಮಾತ್ರವಲ್ಲದೆ, ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವು ವಾರಗಳಷ್ಟೇ ಉಳಿದಿರುವಾಗ, ಆಯೋಗ ಕೈಗೊಂಡಿರುವ ‘ಎಸ್‌ಐಆರ್’ನಿಂದಾಗಿ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯನ್ನು ಬಯಲು ಮಾಡಿದಂತಾಗಿದೆ. ‘ಇಸಿಐ’ ಗೊತ್ತುಪಡಿಸಿದ ಹನ್ನೊಂದು ದಾಖಲೆಗಳ ಜೊತೆಗೆ ಆಧಾರ್ ಅನ್ನೂ ಪರಿಶೀಲನೆಗೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಆಗಸ್ಟ್‌ನಲ್ಲಿಯೇ ಸೂಚಿಸಿತ್ತು. ಆದರೆ, ಬೂತ್ ಹಂತದ ಅಧಿಕಾರಿಗಳು (ಬಿಎಲ್‌ಒ) ಆಧಾರ್ ಪುರಾವೆಯನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನುವ ವರದಿಗಳು ಪ್ರಕಟವಾಗಿದ್ದವು. ಪ್ರಸ್ತುತ, ಆಧಾರ್ ಪುರಾವೆಯನ್ನು ಒಪ್ಪಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡುವುದರೊಂದಿಗೆ ಬಿಎಲ್‌ಒಗಳಿಗೆ ಬೇರೆ ದಾರಿಯೇ ಉಳಿಯದಂತಾಗಿದೆ.
ಆಧಾರ್ ವಾಸಸ್ಥಳದ ಪುರಾವೆಯಷ್ಟೇ ಆಗಿದ್ದು, ಪೌರತ್ವದ ಪುರಾವೆ ಆಗದಿರುವ ಕಾರಣದಿಂದಾಗಿ ಅದನ್ನು ಪರಿಗಣಿಸುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ‘ಇಸಿಐ’ ತಿಳಿಸಿತ್ತು. ಈ ವಾದಕ್ಕೆ ಪ್ರತಿಕ್ರಿಯೆಯಾಗಿ, ‘ಇಸಿಐ’ ಗೊತ್ತುಪಡಿಸಿರುವ ಪಾಸ್
ಪೋರ್ಟ್ ಹಾಗೂ ಜನನ ಪ್ರಮಾಣಪತ್ರ ಹೊರತುಪಡಿಸಿದರೆ ಉಳಿದ ದಾಖಲೆಗಳನ್ನು ಕೂಡ ಪೌರತ್ವದ ಸಾಕ್ಷ್ಯಗಳೆಂದು ಪರಿಗಣಿಸಲು ಆಗದು ಹಾಗೂ ಆ ದಾಖಲೆಗಳನ್ನು ಕೂಡ ಅಕ್ರಮವಾಗಿ ಹೊಂದುವುದು ಸಾಧ್ಯವಿದೆ ಎಂದು ಕೋರ್ಟ್ ಹೇಳಿದೆ. ಉಳಿದ ಸೂಚಿತ ದಾಖಲೆಗಳಿಗಿಂತಲೂ ಆಧಾರ್ ಭಿನ್ನವಾಗಿದ್ದು, ಅದು ಶೇ 90ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗುರುತಿನ ಚೀಟಿಯಾಗಿದೆ. ಗುರುತಿನ ಪುರಾವೆಯನ್ನಾಗಿ ಆಧಾರ್ ಪರಿಗಣಿಸುವುದರಿಂದಾಗಿ, ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಹೊರಗುಳಿದಿರುವ 65 ಲಕ್ಷಕ್ಕೂ ಹೆಚ್ಚು ಮತದಾರರು ಮತ್ತೆ ತಮ್ಮ ಹೆಸರುಗಳನ್ನು ಸೇರ್ಪಡೆಗೊಳಿಸಲು ಅನುಕೂಲ ಆಗುತ್ತದೆ. ದಾಖಲೆಯ ಅಧಿಕೃತತೆಯ ಬಗ್ಗೆ ಅನುಮಾನಗಳಿದ್ದರೆ, ಅದನ್ನು ಪರಿಹರಿಸಿಕೊಳ್ಳಲು ‘ಇಸಿಐ’ ಬಳಿ ಸಂಪನ್ಮೂಲಗಳಿವೆ.
ಬಿಹಾರದಲ್ಲಿನ ಮತಗಟ್ಟೆಗಳನ್ನು ತರ್ಕಬದ್ಧವಾಗಿ ಪುನರ್ ವ್ಯವಸ್ಥೆಗೊಳಿಸುವ ‘ಇಸಿಐ’ ನಿರ್ಧಾರ ‘ಎಸ್‌ಐಆರ್’ ಪ್ರಕ್ರಿಯೆಗೆ ಮತ್ತೊಂದು ಗೊಂದಲವನ್ನು ಸೇರ್ಪಡೆಗೊಳಿಸಿದೆ. ಚುನಾವಣಾ ಆಯೋಗ ಹೊಸತಾಗಿ 12,817 ಮತಗಟ್ಟೆಗಳನ್ನು ಸೇರ್ಪಡೆ ಮಾಡುವುದರೊಂದಿಗೆ, ಬಿಹಾರದಲ್ಲಿನ ಮತಗಟ್ಟೆಗಳ ಸಂಖ್ಯೆ 90,712ಕ್ಕೆ ಮುಟ್ಟಿದೆ. ಇದರ ಜೊತೆಗೆ ಪ್ರತಿ ಮತಗಟ್ಟೆಯಲ್ಲಿನ ಮತದಾರರ ಸಂಖ್ಯೆಯನ್ನು 1,500ರಿಂದ 1,200ಕ್ಕೆ ಇಳಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಮತಗಟ್ಟೆಯ ಮೇಲೆ ಹೆಚ್ಚಿನ ಒತ್ತಡ ತಗ್ಗಿಸುವ ‘ಇಸಿಐ’ ಕ್ರಮ ಸ್ವಾಗತಾರ್ಹ. ಆದರೆ, ಮತಗಟ್ಟೆಗಳ ಮರು ಹೊಂದಾಣಿಕೆಯೊಂದಿಗೆ ಬಿಎಲ್‌ಒಗಳನ್ನೂ ಸ್ಥಳಾಂತರಿಸಲಾಗಿದೆ. ಇದರಿಂದಾಗಿ, ಈಗಾಗಲೇ ದೂರು ಸಲ್ಲಿಸಿರುವ ಮತದಾರರು ಈಗ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಹೊಸ ಬಿಎಲ್‌ಒಗಳನ್ನು ಸಂಪರ್ಕಿಸಬೇಕಾಗುತ್ತದೆ. ಎಲ್ಲ ದಾಖಲೆಗಳೂ ಸಂಪೂರ್ಣವಾಗಿ ಇನ್ನೂ ಡಿಜಿಟಲೀಕರಣಗೊಂಡಿಲ್ಲ ಹಾಗೂ ಕೆಲವು ಬಿಎಲ್‌ಒಗಳು ತಮ್ಮ ನಿಕಟಪೂರ್ವ ಅಧಿಕಾರಿಗಳಿಂದ ಪಡೆದ ದಾಖಲೆಗಳ ಪರಿಶೀಲನೆಯನ್ನು ಇನ್ನಷ್ಟೇ ನಡೆಸಬೇಕಾಗಿದೆ. ‘ಎಸ್‌ಐಆರ್’ ಪ್ರಕ್ರಿಯೆ ಪೂರ್ಣಗೊಳ್ಳಲು ಎರಡು ವಾರಗಳಷ್ಟೇ ಉಳಿದಿರುವಾಗ, ಹೆಚ್ಚುವರಿ ಆಡಳಿತಾತ್ಮಕ ಒತ್ತಡವು ವಿಳಂಬ ಮತ್ತು ಗೊಂದಲಕ್ಕೆ ಕಾರಣವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.