ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಪ್ರತಿಸುಂಕ ಹಾಗೂ ಅದಕ್ಕೆ ತಿರುಗೇಟು ನೀಡುವ ಉದ್ದೇಶದಿಂದ ಚೀನಾ ದೇಶವು ಅಮೆರಿಕದ ಮೇಲೆ ವಿಧಿಸಿರುವ ಸುಂಕವು ಜಾಗತಿಕ ಬಂಡವಾಳ ಮಾರುಕಟ್ಟೆಗಳಲ್ಲಿ ಕೋಲಾಹಲ ಸೃಷ್ಟಿಸಿವೆ. ಇಂತಹ ಕಠಿಣ ಕ್ರಮಗಳು ಮೊದಲ ಏಟು ನೀಡುವುದು ಷೇರುಪೇಟೆಗಳ ಮೇಲೆ. ಸೋಮವಾರದ ವಹಿವಾಟಿನಲ್ಲಿ ಜಗತ್ತಿನ ಬಹುತೇಕ ಷೇರುಪೇಟೆಗಳು ಕುಸಿತ ದಾಖಲಿಸಿವೆ. ಹೂಡಿಕೆದಾರರ ಕೋಟ್ಯಂತರ ರೂಪಾಯಿ ಹಣವು ಬಿರುಬಿಸಿಲಿಗೆ ಸಿಲುಕಿದ ಮಂಜಿನಂತೆ ಕರಗಿದೆ. ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇಕಡ 13ರಷ್ಟು, ನಿಕ್ಕೈ ಶೇ 8ರಷ್ಟು, ಕೊಸ್ಪಿ ಶೇ 5.6ರಷ್ಟು ಕುಸಿತ ಕಂಡಿವೆ. ಯುರೋಪಿನ ದೇಶಗಳ ಷೇರುಪೇಟೆಗಳೂ ಭಾರಿ ಇಳಿಕೆ ದಾಖಲಿಸಿದವು. ಅಮೆರಿಕದ ಷೇರುಪೇಟೆಗಳಲ್ಲಿ ತೀರಾ ಚಂಚಲ ವಹಿವಾಟು ನಡೆದಿದೆ. ಭಾರತದ ಷೇರುಪೇಟೆಯ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸರಿಸುಮಾರು ಶೇ 3ರಷ್ಟು ಇಳಿಕೆ ಕಂಡವು. ದೇಶದಲ್ಲಿ ಹೂಡಿಕೆದಾರರು ಕಳೆದುಕೊಂಡ ಸಂಪತ್ತಿನ ಮೌಲ್ಯ ₹14 ಲಕ್ಷ ಕೋಟಿ. ಮಂಗಳವಾರದ ವಹಿವಾಟಿನಲ್ಲಿ ಭಾರತದ ಷೇರುಪೇಟೆಗಳಲ್ಲಿ ಒಂದಿಷ್ಟು ಚೇತರಿಕೆ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ಷೇರುಪೇಟೆಗಳಲ್ಲಿ ಅನಿಶ್ಚಿತ ಸ್ಥಿತಿಯು ಮುಂದುವರಿಯುವ ಸೂಚನೆಗಳು ಹೆಚ್ಚಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕಡಿಮೆ ಆಗಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಏಪ್ರಿಲ್ ತಿಂಗಳಲ್ಲೇ ಶೇ 15ರಷ್ಟು ಕಡಿಮೆ ಆಗಿದೆ. ಚಿನ್ನದ ಬೆಲೆ ಕೂಡ ತಗ್ಗಿದೆ.
ಅಮೆರಿಕದಿಂದ ಆಮದಾಗುವ ಸರಕುಗಳ ಮೇಲೆ ಶೇ 34ರಷ್ಟು ಸುಂಕವನ್ನು ಚೀನಾ ವಿಧಿಸಿದೆ. ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಹೊಸದಾಗಿ ಶೇ 50ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಅವರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಚೀನಾ, ‘ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು’ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ. ಮಾರುಕಟ್ಟೆಗಳಲ್ಲಿ ಅತಿಯಾದ ರಕ್ಷಣಾತ್ಮಕ ಕ್ರಮಗಳನ್ನು ಎದುರಿಸಲು ಹಾಗೂ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯನ್ನು ರಕ್ಷಿಸಲು ಮೈತ್ರಿಕೂಟವೊಂದನ್ನು ರಚಿಸುವ ಆಲೋಚನೆ ಇರುವುದಾಗಿ ಚೀನಾ ಹೇಳಿದೆ. ಟ್ರಂಪ್ ಅವರು ಆರಂಭಿಸಿದ ಸುಂಕ ಸಮರಕ್ಕೆ ಜಗತ್ತಿನ ಬೇರೆ ಬೇರೆ ದೇಶಗಳು ಭಿನ್ನ ಬಗೆಯಲ್ಲಿ ಪ್ರತಿಕ್ರಿಯೆ ನೀಡಿವೆ. ಕೆಲವು ದೇಶಗಳು ಪ್ರತೀಕಾರ ಕ್ರಮವಾಗಿ ಸುಂಕ ವಿಧಿಸಿವೆ. ಇನ್ನು ಕೆಲವು ದೇಶಗಳು, ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧವಿರುವುದಾಗಿ ಹೇಳಿವೆ. ಮಾತುಕತೆಯ ಪ್ರಸ್ತಾವದೊಂದಿಗೆ 50ಕ್ಕೂ ಹೆಚ್ಚು ದೇಶಗಳು ತನ್ನನ್ನು ಸಂಪರ್ಕಿಸಿವೆ ಎಂದು ಅಮೆರಿಕ ಹೇಳಿದೆ. ಟ್ರಂಪ್ ಅವರ ಕ್ರಮ ವಿರೋಧಿಸಿ ಅಮೆರಿಕದಲ್ಲಿಯೇ ಪ್ರತಿಭಟನೆಗಳು ನಡೆದಿವೆ. ಸುಂಕ ವಿಧಿಸುವ ಕ್ರಮವು ಅನಗತ್ಯ ಎಂದೂ ಅವುಗಳಿಂದ ಅಮೆರಿಕಕ್ಕೇ ನಷ್ಟ ಎಂದೂ ಅಲ್ಲಿನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ಸುಂಕ ವಿಧಿಸುವ ಟ್ರಂಪ್ ಅವರ ಕ್ರಮದಿಂದಾಗಿ ಅಮೆರಿಕಕ್ಕೆ ಲಾಭ ಆಗುವುದಿಲ್ಲ, ಈ ಕ್ರಮದಿಂದಾಗಿ ಹಣದುಬ್ಬರ ಹೆಚ್ಚಾಗುತ್ತದೆ, ಆರ್ಥಿಕ ಹಿಂಜರಿತ ಎದುರಾಗುತ್ತದೆ ಎಂಬ ಬಲವಾದ ಅಭಿಪ್ರಾಯವು ಅಮೆರಿಕದಲ್ಲಿ ಇದೆ. ಅಮೆರಿಕದಲ್ಲಿ ಹಾಗೂ ಜಗತ್ತಿನ ಇತರೆಡೆಗಳಲ್ಲಿ ಆರ್ಥಿಕ ಬೆಳವಣಿಗೆ ದರವು ಕಡಿಮೆ ಆಗುವುದು ಖಚಿತ.
ಸುಂಕ ಸಮರವು ಮುಂದುವರಿದಲ್ಲಿ, ವಿಶ್ವದ ವ್ಯಾಪಾರ ಸಂಬಂಧದಲ್ಲಿ, ಚಾಲ್ತಿಯಲ್ಲಿರುವ ಪದ್ಧತಿಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಲಿವೆ. ಬಹುತೇಕ ದೇಶಗಳು ನೇರವಾಗಿ ತೊಂದರೆ ಅನುಭವಿಸಲಿವೆ, ಇನ್ನು ಕೆಲವು ದೇಶಗಳು ಪರೋಕ್ಷವಾಗಿ ತೊಂದರೆಗೆ ಸಿಲುಕಲಿವೆ. ಅಮೆರಿಕ ಹೇರಿರುವ ಸುಂಕದ ಪರಿಣಾಮವಾಗಿ ಅಲ್ಲಿನ ಮಾರುಕಟ್ಟೆಯು ದುಬಾರಿಯಾಗಿದೆ ಎಂದು ಅಗ್ಗದ ಸರಕುಗಳನ್ನು ಯುರೋಪಿನ ಮಾರುಕಟ್ಟೆಗೆ ತಂದು ಸುರಿಯುವಂತಿಲ್ಲ ಎನ್ನುವ ಎಚ್ಚರಿಕೆಯನ್ನು ಐರೋಪ್ಯ ಒಕ್ಕೂಟ ಈಗಾಗಲೇ ನೀಡಿದೆ. ಅಗ್ಗದ ಉತ್ಪನ್ನಗಳನ್ನು ತಂದು ಸುರಿಯುವ ಕಳವಳವು ಚೀನಾ ವಿಚಾರವಾಗಿ ಹೆಚ್ಚು ಮಹತ್ವದ್ದಾಗುತ್ತದೆ. ಟ್ರಂಪ್ ಅವರ ಕ್ರಮಗಳಿಂದಾಗಿ ವಿವಿಧ ದೇಶಗಳು ದ್ವಿಪಕ್ಷೀಯ ವಾಣಿಜ್ಯ ಒಪ್ಪಂದಗಳನ್ನು ಹೆಚ್ಚಾಗಿ ನೆಚ್ಚಿಕೊಳ್ಳುವ ಸಾಧ್ಯತೆ ಇದೆ. ಆದರೆ ಇಂತಹ ಒಪ್ಪಂದಗಳು ಕಾರ್ಯರೂಪಕ್ಕೆ ಬರಲು ಹೆಚ್ಚು ಸಮಯ ಬೇಕಾಗುತ್ತದೆ. ಟ್ರಂಪ್ ಅವರ ಕ್ರಮಗಳ ತಕ್ಷಣದ ಪರಿಣಾಮ ಎಂದರೆ ಜಾಗತಿಕ ವ್ಯಾಪಾರ ವ್ಯವಸ್ಥೆಯು ಬುಡಮೇಲಾಗುತ್ತದೆ, ಪ್ರತಿ ದೇಶವೂ ತನ್ನ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳಲು ತನ್ನದೇ ಆದ ಮಾರ್ಗವನ್ನು ಅನುಸರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.