ADVERTISEMENT

ಸಂಪಾದಕೀಯ: ನೀರಿನ ಹಾಹಾಕಾರ, ಬರದ ಕರಿಛಾಯೆ ನಿವಾರಣೆ ಸರ್ಕಾರದ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 14 ಮೇ 2019, 6:53 IST
Last Updated 14 ಮೇ 2019, 6:53 IST
ಕಕಕ
ಕಕಕ   

ರಾಜ್ಯದಾದ್ಯಂತ ಕುಡಿಯುವ ನೀರಿನ ಕೊರತೆ, ಅಪಾಯದ ಮುನ್ಸೂಚನೆ ನೀಡುತ್ತಿದೆ. ಮುಂಗಾರು ಮಳೆ ಸಕಾಲಕ್ಕೆ ಸರಿಯಾಗಿ ಸುರಿಯದಿದ್ದರೆ, ಮುಂದಿನ ವಾರಗಳಲ್ಲಿ ನೀರಿಗಾಗಿ ದೊಡ್ಡ ಮಟ್ಟದಲ್ಲಿ ಹಾಹಾಕಾರ ಶುರುವಾಗಲಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇಇದರ ಸೂಚನೆ ಸಿಕ್ಕಿದೆ. ರಾಜ್ಯದ 162 ತಾಲ್ಲೂಕುಗಳು ಬರದ ಬವಣೆಗೆ ಒಳಗಾಗಿವೆ. ಬೇಸಿಗೆಯ ಕೊನೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದಂತೆ, ಕೃಷಿಬೆಳೆಗಳು ಪೂರ್ತಿ ಒಣಗದಂತೆ ತಡೆಯಬೇಕಾದ ಜಲಾಶಯಗಳ ನೀರಿನ ಸಂಗ್ರಹದ ಸ್ಥಿತಿಯೂ ಚಿಂತಾಜನಕವಾಗಿದೆ. ರಾಜ್ಯದ 13 ಪ್ರಮುಖ ಜಲಾಶಯಗಳ ಪೈಕಿ ಲಿಂಗನಮಕ್ಕಿ ಮತ್ತು ಆಲಮಟ್ಟಿ ಸಹಿತ ಒಂಬತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ, ಒಟ್ಟು ಸಾಮರ್ಥ್ಯದ ಶೇಕಡ 20ಕ್ಕಿಂತಲೂ ಕಡಿಮೆಯಾಗಿದೆ.

ತುಂಗಭದ್ರಾ, ಮಲಪ್ರಭಾ ಮತ್ತು ಘಟಪ್ರಭಾ ಜಲಾಶಯಗಳ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದ್ದು ಅಲ್ಲಿ ಸಂಗ್ರಹ ಸಾಮರ್ಥ್ಯದ ಶೇಕಡ 10ರಷ್ಟು ನೀರು ಮಾತ್ರ ಉಳಿದಿದೆ. ಆದಕಾರಣ ಜಲಾಶಯಗಳಲ್ಲಿ ಇರುವ ನೀರನ್ನು ಕುಡಿಯುವುದಕ್ಕೆ ಮಾತ್ರ ಬಳಸಲು ಸರ್ಕಾರ ಆದೇಶಿಸಿದೆ. ಹೀಗಾಗಿ, ಜಲಾಶಯಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶಗಳಲ್ಲಿ ಕಟಾವಿಗೆ ಬಂದಿರುವ ಬೆಳೆಗಳು ಕಳೆಗುಂದಿವೆ. ಮಲೆನಾಡು ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದು ಕೆಆರ್‌ಎಸ್‌, ಕಬಿನಿ, ಹಾರಂಗಿ ಜಲಾಶಯಗಳು ಭರ್ತಿ ಆಗಿದ್ದವು. ಆದರೆ ಈಗ ಸುತ್ತಮುತ್ತ ನದಿಗಳ ಹರಿವು ಕಡಿಮೆಯಾಗಿರುವುದು ಚಿಂತೆಗೆ ಕಾರಣವಾಗಿದೆ. ಕಳೆದ ಸಲ ಗುಡ್ಡಪ್ರದೇಶಗಳಲ್ಲಿ ಉಂಟಾದ ಭೂಕುಸಿತಗಳು ನೀರಿನ ಹರಿವಿನ ದಿಕ್ಕನ್ನು ಬದಲಾಯಿಸಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹಲವು ಗ್ರಾಮಗಳಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ರಾಯಚೂರು, ಯಾದಗಿರಿ, ಕಲಬುರ್ಗಿ, ವಿಜಯಪುರ ಜಿಲ್ಲೆಗಳ 6 ಲಕ್ಷ ಹೆಕ್ಟೇರ್‌ ಭೂಮಿಗೆ ನೀರು ಉಣಿಸಬೇಕಾದ ನಾರಾಯಣಪುರ ಜಲಾಶಯದಲ್ಲಿ ನೀರಿನ ಮಟ್ಟ ಕಳೆದ ಎಂಟು ವರ್ಷಗಳಲ್ಲೇ ಕನಿಷ್ಠ ಎನ್ನುವಂತಿದೆ. ಪ್ರತಿವರ್ಷ ಹಣ ಪಡೆದು ರಾಜ್ಯಕ್ಕೆ ನೀರು ಹರಿಸಲು ಒಪ್ಪುತ್ತಿದ್ದ ಮಹಾರಾಷ್ಟ್ರ ಸರ್ಕಾರ, ಈ ಸಲ ಕೊಡುವ ನೀರಿಗೆ ಪ್ರತಿಯಾಗಿ ನೀರನ್ನೇ ಕೊಡಬೇಕು ಎಂಬ ಷರತ್ತು ವಿಧಿಸಿದೆ. ಒಟ್ಟಾರೆ ರಾಜ್ಯದ ಎಲ್ಲೆಡೆ ಜನ, ಜಾನುವಾರುಗಳ ಪರಿಸ್ಥಿತಿ ಚಿಂತಾಜನಕವಾಗಿದೆ.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ, ಆಳುವ ಪಕ್ಷಗಳ ಶಾಸಕರ ಕೋಳಿಜಗಳ ನಿರಂತರವಾಗಿ ಮುಂದುವರಿದಿದೆ. ಪ್ರತಿದಿನ ಮಾಧ್ಯಮಗಳಲ್ಲಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳ ನಡುವಣ ಒಳಜಗಳದ್ದೇ ಸುದ್ದಿ. ಬರದ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿ, ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾದ ಆಡಳಿತಾರೂಢರು ಕ್ಷುಲ್ಲಕ ಒಳಜಗಳದಲ್ಲಿ ಕಾಲ ಕಳೆಯುತ್ತಿರುವುದು ಶೋಚನೀಯ. ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಪರಸ್ಪರ ನಡೆಸುತ್ತಿರುವ ಬಹಿರಂಗ ಕೆಸರೆರಚಾಟ ಹೇಸಿಗೆ ಹುಟ್ಟಿಸುವಂತಿದೆ. ಕೇವಲ 37 ಶಾಸಕರಿರುವ ಜೆಡಿಎಸ್‌ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲು ಬೇಷರತ್‌ ಬೆಂಬಲ ನೀಡಿರುವ ಕಾಂಗ್ರೆಸ್‌, ಐದು ವರ್ಷದ ಅವಧಿಗೆ ಜೆಡಿಎಸ್‌ಗೇ ಮುಖ್ಯಮಂತ್ರಿಯ ಹುದ್ದೆ ಎಂದು ಘೋಷಿಸಿದೆ. ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಎನ್ನುವ ರೀತಿಯಲ್ಲಿ ಉಭಯಪಕ್ಷಗಳ ನಡುವೆ ಪ್ರತಿದಿನವೂ ಕಿತ್ತಾಟ ನಡೆದಿರುವುದು ಆಡಳಿತದ ಮೇಲೆ ಪರಿಣಾಮ ಬೀರಿದೆ. ಎರಡೂ ಪಕ್ಷಗಳ ಮಧ್ಯೆ ಹೊಂದಾಣಿಕೆ ಸಾಧ್ಯವಿಲ್ಲ ಎಂದಾದರೆ, ರಾಜೀನಾಮೆ ಕೊಟ್ಟು ಚುನಾವಣೆಗೆ ತೆರಳುವುದೇ ಒಳ್ಳೆಯದು.

ADVERTISEMENT

ಬರ ಎದುರಿಸುವ ನಿಟ್ಟಿನಲ್ಲಿ ಸರ್ಕಾರವನ್ನು ತಿವಿದು ಎಚ್ಚರಿಸಬೇಕಿರುವ ಅಧಿಕೃತ ವಿರೋಧ ಪಕ್ಷ ಬಿಜೆಪಿ, ‘ಆಪರೇಷನ್‌ ಕಮಲ’ದ ಕೆಸರಿನಲ್ಲಿ ಬಿದ್ದು ಹೊರಳಾಡುತ್ತಿದೆ. ಶಾಸಕರಿಗೆ ಆಮಿಷವೊಡ್ಡಿ ಪಕ್ಷಾಂತರಿಗಳ ಸರ್ಕಾರ ರಚಿಸಬೇಕೆಂದು ಹೊರಟಿರುವ ಬಿಜೆಪಿಗೆ ಕೂಡಾ ಜನರ ಸಂಕಷ್ಟಗಳ ಕುರಿತು ಎಳ್ಳಷ್ಟೂ ಕಾಳಜಿಯಿಲ್ಲ. ಕುಡಿಯಲು ನೀರಿಲ್ಲದೆ, ಜನ-ಜಾನುವಾರುಗಳು ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ, ಜನಪ್ರತಿನಿಧಿಗಳ ಈ ಅಧಿಕಾರಮೋಹವು ತಮ್ಮನ್ನು ಆರಿಸಿ ಕಳುಹಿಸಿದ ಜನರ ನಂಬಿಕೆಗೆ ಮಾಡಿದ ದ್ರೋಹ. ಎಲ್ಲ ಶಾಸಕರೂ ತಮ್ಮ ಕ್ಷೇತ್ರಗಳಿಗೆ ತೆರಳಿ, ಜನರ ನಡುವೆ ಇದ್ದು ಬರ ನಿಭಾಯಿಸಬೇಕಾಗಿರುವಾಗ, ಇಂತಹ ಕ್ಷುಲ್ಲಕ ರಾಜಕೀಯ ಎಳ್ಳಷ್ಟೂ ಸರಿಯಲ್ಲ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.