ADVERTISEMENT

ಪರಿಷತ್‌ನಲ್ಲಿ ಸಚಿವೆಯ ನಿಂದನೆ ಆರೋಪ: ನಿಷ್ಪಕ್ಷಪಾತ ತನಿಖೆ ತ್ವರಿತವಾಗಿ ಆಗಲಿ

ತಾವು ಬಳಸುವ ಪದಗಳು, ತಮ್ಮ ನಡೆಗಳ ಪರಿಣಾಮ ಏನಾಗಬಹುದು ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು

ಸಂಪಾದಕೀಯ
Published 23 ಡಿಸೆಂಬರ್ 2024, 22:14 IST
Last Updated 23 ಡಿಸೆಂಬರ್ 2024, 22:14 IST
   

ಕರ್ನಾಟಕದ ರಾಜಕಾರಣಿಗಳು ಸಾರ್ವಜನಿಕ ಜೀವನದಲ್ಲಿ ಸಭ್ಯತೆಯನ್ನು ಕಾಪಾಡಿಕೊಂಡ ಹೆಗ್ಗಳಿಕೆಯನ್ನು ಹೊಂದಿದ್ದರು. ಆದರೆ ಕೆಲವು ವರ್ಷಗಳಿಂದ ರಾಜ್ಯ ರಾಜಕಾರಣವು ಸಭ್ಯತೆಯ ವಿಚಾರದಲ್ಲಿ ಅವನತಿಯ ಹಾದಿ ಹಿಡಿದಿದೆ ಎಂಬುದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ.ಟಿ. ರವಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಉದ್ದೇಶಿಸಿ ಅವಾಚ್ಯ ಮಾತುಗಳನ್ನು ಆಡಿದ್ದಾರೆ ಎಂದು ಪೊಲೀಸರಲ್ಲಿ ದೂರು ದಾಖಲಾಗಿದೆ, ಸಚಿವೆ ಲಕ್ಷ್ಮೀ ಅವರೇ ಖುದ್ದಾಗಿ ದೂರು ನೀಡಿದ್ದಾರೆ. ರವಿ ಅವರು ಇಂತಹ ಮಾತುಗಳನ್ನು ಆಡಿದ್ದರೆ ಅದು ರಾಜ್ಯ ವಿಧಾನ ಪರಿಷತ್ತಿನ ಘನತೆಗೆ ಕುಂದು ತರುವಂಥದ್ದು. ವಿಧಾನ ಪರಿಷತ್ತಿನಲ್ಲಿ ರವಿ ಅವರು, ಕಲಾಪದ ಅವಧಿಯ ನಂತರ ತಮ್ಮನ್ನು ಉದ್ದೇಶಿಸಿ ಬಹಳ ಅವಹೇಳನಕಾರಿಯಾದಂತಹ ಮಾತನ್ನು ಮತ್ತೆ ಮತ್ತೆ ಆಡಿದ್ದಾರೆ ಎಂದು ಲಕ್ಷ್ಮೀ ದೂರಿದ್ದಾರೆ. ಆದರೆ ಈ ಆರೋಪವನ್ನು ರವಿ ನಿರಾಕರಿಸಿದ್ದಾರೆ. ಆಕ್ಷೇಪಾರ್ಹ ಪದಗಳು ಪರಿಷತ್ತಿನ ಕಲಾಪದ ಕಡತಗಳಲ್ಲಿ ದಾಖಲಾಗಿಲ್ಲ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಆದರೆ, ರವಿ ಅವರು ಕೆಟ್ಟ ಪದವನ್ನು ಬಳಸಿರುವುದಕ್ಕೆ ಆಡಿಯೊ ಮತ್ತು ವಿಡಿಯೊ ಸಾಕ್ಷ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ನಡುವೆ, ರವಿ ಅವರ ವಿಚಾರವಾಗಿ ಪೊಲೀಸರು ಒರಟಾಗಿ ನಡೆದುಕೊಂಡ ಬಗೆ ಹಾಗೂ ಅವರನ್ನು ಇಡೀ ರಾತ್ರಿ ವಾಹನದಲ್ಲಿ ಕುಳ್ಳಿರಿಸಿಕೊಂಡು ಅಲೆದಾಡಿಸಿದ ಬಗೆಯು ಪೊಲೀಸರ ಮೇಲೆ ರಾಜಕೀಯ ಒತ್ತಡ ಇತ್ತು ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತಿದೆ.
ಪ್ರಕರಣದಲ್ಲಿ ತ್ವರಿತವಾಗಿ ಮಧ್ಯಪ್ರವೇಶಿಸಿದ ಹೈಕೋರ್ಟ್, ರವಿ ಅವರಿಗೆ ಜಾಮೀನು ಮಂಜೂರು ಮಾಡಿತು. ಹಾಗೆಯೇ, ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದುದಕ್ಕಾಗಿ ಪೊಲೀಸರಿಗೆ ಛೀಮಾರಿ ಹಾಕಿತು. ಪೊಲೀಸರ ನಡೆ ಕುರಿತು ಹಾಗೂ ಪೊಲೀಸರ ವಶದಲ್ಲಿ ಇದ್ದಾಗ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ರವಿ ಅವರು ಮಾಡಿರುವ ಆರೋಪದ ಬಗ್ಗೆ ತನಿಖೆ ಆಗಬೇಕಿದೆ.

ವಿಧಾನ ಪರಿಷತ್ತಿನ ಒಳಗೆ ಇಂಥದ್ದೊಂದು ವಿವಾದ ಸೃಷ್ಟಿಯಾಗಿದ್ದು ಬಹಳ ವಿಷಾದಕರ. ವಿಧಾನ ಪರಿಷತ್ತು ಹಿರಿಯರ ಮನೆ. ಅದು ಅನುಭವ, ವಿವೇಕ ಮತ್ತು ಪ್ರಬುದ್ಧ ವ್ಯಕ್ತಿತ್ವದವರ ಮನೆಯಾಗಿರಬೇಕು. ವಿಧಾನ ಪರಿಷತ್ತು ವಿಧಾನಸಭೆಗೆ ಮಾದರಿಯಾಗಿ ನಿಲ್ಲಬೇಕು. ಆದರೆ, ಈಗ ನಡೆದಿರುವ ವಿದ್ಯಮಾನವು ಶಾಸನಸಭೆಗಳ ಸದಸ್ಯರಲ್ಲಿ ಕೆಲವರು ಸಭ್ಯತೆಯ ಶಿಷ್ಟಾಚಾರವನ್ನು ಪಾಲಿಸುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ. ಇದು ಬಹಳ ಕಳವಳಕಾರಿ. ರವಿ ಅವರು ಸಂಯಮವನ್ನು ಕಳೆದುಕೊಂಡು ಹಲವು ಬಾರಿ ಮಾತನಾಡಿದ್ದಿದೆ. ಹಿರಿಯ ರಾಜಕಾರಣಿಗಳು ಹೊಂದಿರಬೇಕಿರುವ ಸಮತೂಕದ, ಸಂಯಮದ ಸ್ವಭಾವ ತಮ್ಮದಲ್ಲ ಎಂಬುದನ್ನು ಅವರು ಮತ್ತೆ ಮತ್ತೆ ತೋರಿಸಿಕೊಟ್ಟಿದ್ದಾರೆ. ರವಿ ಅವರು ಹಿಂದೊಂದು ಸಂದರ್ಭದಲ್ಲಿ ಬಿಜೆಪಿಯ ಭರವಸೆಯ ನಾಯಕರಾಗಿ ಕಾಣಿಸಿಕೊಂಡಿದ್ದರು. ಆದರೆ ಈಗ ಅವರ ರಾಜಕೀಯ ಜೀವನವು ಇಳಿಜಾರಿನಲ್ಲಿ ಸಾಗುತ್ತಿರುವಂತೆ ಕಾಣುತ್ತಿದೆ. ಇಳಿಜಾರಿನ ಹಾದಿಯಲ್ಲಿ ಇರುವ ಅವರ ರಾಜಕೀಯ ಬಂಡಿಗೆ ಇನ್ನಷ್ಟು ವೇಗ ನೀಡುವ ಕೆಲಸವನ್ನು ಈಗಿನ ಪ್ರಸಂಗವು ಮಾಡುವಂತಿದೆ.

ರವಿ ಅವರು ಲಕ್ಷ್ಮೀ ಅವರನ್ನು ಉದ್ದೇಶಿಸಿ ಕೆಟ್ಟ ಪದವನ್ನು ಬಳಸಿದ್ದಾರೆ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಮೂಲಕ ಸಾಬೀತಾದರೆ, ರವಿ ಅವರು ಕಾನೂನಿನ ಅಡಿ ಕಠಿಣ ಕ್ರಮಕ್ಕೆ ಗುರಿಯಾಗಲೇಬೇಕಾಗುತ್ತದೆ. ಹೆಣ್ಣುಮಕ್ಕಳ ವಿಚಾರದಲ್ಲಿ ಯಾರೊಬ್ಬರೂ, ಯಾವುದೇ ಪಕ್ಷದವರೂ ಹಗುರವಾಗಿ ಹಾಗೂ ಅಸಭ್ಯವಾಗಿ ಮಾತನಾಡುವುದು ಸಹ್ಯವಲ್ಲ. ಅಂತಹ ಕೃತ್ಯಗಳಿಗೆ ಕ್ಷಮೆ
ಇರಬಾರದು. ರವಿ ಅವರು ಕೆಟ್ಟ ಪದವನ್ನು ಬಳಕೆ ಮಾಡಿರುವುದು ಪರಿಷತ್ತಿನಲ್ಲಿ ಕಲಾಪ ಮುಂದೂಡಿದ ನಂತರ ಎಂದು ಆರೋಪಿಸಲಾಗಿದೆ. ಹೀಗಿದ್ದರೂ ಸದನ ನಡೆಯುವ ಸ್ಥಳದಲ್ಲೇ ಈ ಮಾತು ಆಡಿದ್ದಾರೆ ಎಂದು ಆರೋಪಿಸಿರುವ ಕಾರಣ ಪರಿಷತ್ತಿನ ರಕ್ಷಕನಾಗಿ ಸಭಾಪತಿಯವರು ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗುವಂತೆ ನೋಡಿಕೊಳ್ಳಬೇಕು. ತನಿಖೆ ತ್ವರಿತವಾಗಿ ಪೂರ್ಣಗೊಂಡು ಜನರಿಗೆ ಸತ್ಯಾಂಶ ಗೊತ್ತಾಗಬೇಕು. ಇಲ್ಲಿ ಇರುವುದು ಪಕ್ಷ ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆ ಅಲ್ಲ. ಇದು ಮಹಿಳೆಯ ಘನತೆ ಮತ್ತು ಸದನದ ಪಾವಿತ್ರ್ಯಕ್ಕೆ ಸಂಬಂಧಿಸಿದ ಪ್ರಶ್ನೆ. ತಾವು ಬಳಸುವ ಪದಗಳು, ತಮ್ಮ ನಡೆಗಳ ಪರಿಣಾಮವು ಏನಿರುತ್ತದೆ ಎಂಬುದನ್ನು ರಾಜಕಾರಣಿಗಳು ಅರ್ಥ ಮಾಡಿಕೊಳ್ಳಬೇಕು. ಅವರು ಕ್ಷುಲ್ಲಕ ರಾಜಕೀಯವನ್ನು ಮೀರಿ ನಿಲ್ಲುವ ಕೆಲಸ ಮಾಡಬೇಕು. ರಾಜ್ಯದ ಜನ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ಕೆಲಸ ಮಾಡಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.