ಕೃಷಿಯಲ್ಲಿ ‘ಎಐ’ ತಂತ್ರಜ್ಞಾನದ ಬಳಕೆ ರೈತರಿಗೆ ಹೊಸ ಅವಕಾಶಗಳನ್ನು ಒದಗಿಸಲಿದೆ; ಇಳುವರಿ ಹೆಚ್ಚಳದೊಂದಿಗೆ, ಮಾರುಕಟ್ಟೆ ಸಾಧ್ಯತೆಗಳೂ ತೆರೆದುಕೊಳ್ಳಲಿವೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಕೃಷಿ ಕ್ಷೇತ್ರವನ್ನು ಲಾಭದಾಯಕಗೊಳಿಸುವ ರಾಜ್ಯ ಸರ್ಕಾರದ ಉದ್ದೇಶ, ಸಮಸ್ಯೆಗಳ ಸರಮಾಲೆಯಿಂದ ಕಂಗೆಟ್ಟಿರುವ ರೈತರಲ್ಲಿ ಒಂದಿಷ್ಟು ಭರವಸೆ ಮೂಡಿಸುವಂತಹದ್ದು. ಇಳುವರಿ ಹೆಚ್ಚಳದ ಜೊತೆಗೆ ಮಾರುಕಟ್ಟೆ ಸಾಧ್ಯತೆಗಳ ಕುರಿತು ರೈತರಿಗೆ ನೆರವು ನೀಡುವ ‘ಕೃಷಿ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವನ್ನು ಆಧರಿಸಿ ಕಾರ್ಯ ನಿರ್ವಹಿಸಲಿರುವ ಈ ಕೇಂದ್ರಗಳ ಮೂಲಕ, ಆಯಾ ಪ್ರದೇಶದ ಮಣ್ಣಿನ ಮಾದರಿ, ಹವಾಗುಣ, ತೇವಾಂಶ, ಮಳೆಯ ಪ್ರಮಾಣದೊಂದಿಗೆ ಪ್ರಸ್ತುತ ಇರುವ ಬೆಳೆ ಪದ್ಧತಿ ಮತ್ತು ಇಳುವರಿಯ ವಿಶ್ಲೇಷಣೆ ನಡೆಯಲಿದೆ.
ಈ ವಿಶ್ಲೇಷಣೆಯು ರಾಜ್ಯದ ರೈತರು ಹಾಗೂ ಕೃಷಿ ನೀತಿ ನಿರೂಪಕರಿಗೆ ನೆರವಾಗಲಿದೆ. ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಧಿಕ ಲಾಭ ತರುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವ ಕುರಿತು ನೆರವಾಗಲು ರಾಜ್ಯಮಟ್ಟದ ತಂತ್ರಜ್ಞರ ಸಮಿತಿಯನ್ನೂ ಸರ್ಕಾರ ರಚಿಸಿದೆ. 2025–26ನೇ ಸಾಲಿನಲ್ಲಿ, ಭತ್ತದ ಬೆಳೆಯಲ್ಲಿ ತಂತ್ರಜ್ಞಾನದ ಮಾದರಿಯನ್ನು (ಎಸ್–ಟೆಕ್) ಅಳವಡಿಸಲು ಬಳ್ಳಾರಿ, ದಾವಣಗೆರೆ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ‘ಇ–ಸ್ಯಾಪ್’ ತಂತ್ರಾಂಶ, ಕೀಟದಿಂದ ಉಂಟಾಗುವ ರೋಗಗಳನ್ನು ನಿವಾರಿಸುವುದರ ಜೊತೆಗೆ, ಪೋಷಕಾಂಶಗಳ ಕೊರತೆಯನ್ನು ನೀಗಿಸಲೂ ನೆರವಾಗುತ್ತದೆ.
ಈ ತಂತ್ರಾಂಶ ಬಳಸಿ, 52 ಕೃಷಿ ಬೆಳೆಗಳಲ್ಲಿ ಕಂಡುಬರುವ 1,000ಕ್ಕೂ ಹೆಚ್ಚು ಕೀಟ–ರೋಗಗಳನ್ನು ನಿವಾರಣೆ ಮಾಡಲು ಕೃಷಿ ಇಲಾಖೆ ಮುಂದಾಗಿದೆ. ಆಯಾ ವರ್ಷದ ಹವಾಮಾನ, ಅತಿವೃಷ್ಟಿ, ಅನಾವೃಷ್ಟಿಯ ಆಧಾರದಲ್ಲಿ ಯಾವ ಋತುವಿನಲ್ಲಿ ಯಾವ ಬೆಳೆಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎನ್ನುವುದನ್ನು ಕೃಷಿ ಸೇವಾ ಕೇಂದ್ರಗಳು ಅಂದಾಜು ಮಾಡಲಿವೆ. ಯಾವ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಬಹುದು ಎನ್ನುವ ಮಾಹಿತಿಯನ್ನೂ ಒದಗಿಸಲಿವೆ. ಇದರಿಂದಾಗಿ, ರೈತರು ತಾವು ಬೆಳೆಯಬಹುದಾದ ಬೆಳೆಗಳನ್ನು ನಿರ್ಧರಿಸುವುದು ಸುಲಭವಾಗುತ್ತದೆ.
ಮಳೆಯ ಕಣ್ಣಾಮುಚ್ಚಾಲೆಯಿಂದಾಗಿ ಬಿತ್ತಿದ್ದು ಕೈಗೆ ದೊರೆಯದೆ ಹೋಗುವುದು ಹಾಗೂ ಉತ್ತಮ ಫಸಲು ಬಂದಾಗ ಧಾರಣೆ ಇದ್ದಕ್ಕಿದ್ದಂತೆ ಕುಸಿಯುವುದು ರೈತರು ಎದುರಿಸುವ ಬಹುಮುಖ್ಯವಾದ ಎರಡು ಸಮಸ್ಯೆಗಳು. ಮಳೆಯ ವ್ಯತ್ಯಯ ಹಾಗೂ ರೋಗಬಾಧೆಯಿಂದ ಇಳುವರಿಯಲ್ಲಿ ವ್ಯತ್ಯಾಸವಾದಾಗ ಕಂಗೆಡುವುದಕ್ಕಿಂತಲೂ, ಮಾರುಕಟ್ಟೆಯಲ್ಲಿನ ದಿಢೀರ್ ಏರಿಳಿತಗಳು ಕೃಷಿಕರನ್ನು ತೀವ್ರವಾಗಿ ಗಾಸಿಗೊಳಿಸುತ್ತವೆ.
ಟೊಮೆಟೊ, ಈರುಳ್ಳಿ, ಕಲ್ಲಂಗಡಿ ಬೆಳೆಗಾರರು ಆಗಾಗ ದಿಢೀರ್ ಬೆಲೆ ಕುಸಿತದ ವಿದ್ಯಮಾನಗಳಿಂದ ಕಂಗಾಲಾಗಿ, ಬೆಳೆದ ಫಸಲನ್ನು ರಸ್ತೆಗೆ ಚೆಲ್ಲಿ ತಮ್ಮ ಸಂಕಟ– ಪ್ರತಿಭಟನೆ ವ್ಯಕ್ತಪಡಿಸುವುದಿದೆ. ಕೊಬ್ಬರಿ, ಅಡಿಕೆ, ಭತ್ತ, ಕಬ್ಬು ಸೇರಿದಂತೆ ಯಾವ ಬೆಳೆಯೂ ಬೆಲೆಯ ಏರಿಳಿತದಿಂದ ತಪ್ಪಿಸಿಕೊಳ್ಳುವಂತಿಲ್ಲ. ಪ್ರಸ್ತುತ, ಕಲಬುರಗಿ ಜಿಲ್ಲೆಯ ರೈತರು ತೊಗರಿ ಧಾರಣೆ ಕುಸಿತದಿಂದ ಕಂಗೆಟ್ಟಿದ್ದಾರೆ. 2024ರ ಮೇ ತಿಂಗಳಿನಲ್ಲಿ, ಮುಕ್ತ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ಗರಿಷ್ಠ ₹12,750 ಇದ್ದ ತೊಗರಿಯ ಧಾರಣೆ ಈಗ ₹6,250ರ ಆಸುಪಾಸಿನಲ್ಲಿದೆ. ಈ ಅನಿರೀಕ್ಷಿತ ಧಾರಣೆ ಕುಸಿತ ತೊಗರಿ ಬೆಳೆಗಾರರನ್ನು ಕಂಗಾಲಾಗಿಸಿದೆ. ಮೂರು ತಿಂಗಳ ಹಿಂದಷ್ಟೇ, ಒಣ ಮೆಣಸಿನಕಾಯಿಯ ಧಾರಣೆ ಕುಸಿತದ ಘಾಟಿನಿಂದ ರಾಜ್ಯದ ರೈತರು ತತ್ತರಿ ಸಿದ್ದರು.
ಬಳ್ಳಾರಿ, ವಿಜಯಪುರ ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಮೆಣಸಿನಕಾಯಿ ಇಳುವರಿ ಉತ್ತಮವಾಗಿದ್ದರೂ, ಧಾರಣೆ ಬೆಲೆ ಕುಸಿತದಿಂದ ಹತಾಶರಾದ ರೈತರು ಮೆಣಸಿನಕಾಯಿಯನ್ನು ಗಿಡಗಳಲ್ಲೇ ಬಿಡುವ ಮೂಲಕ ಪ್ರತಿಭಟಿಸಿದ್ದರು. ಮಾರುಕಟ್ಟೆಯಲ್ಲಿನ ಬೇಡಿಕೆಗಿಂತಲೂ ಹೆಚ್ಚಿನ ಉತ್ಪಾದನೆ ಇರುವುದು ಬೆಲೆ ಕುಸಿತಕ್ಕೆ ಕಾರಣಗಳಲ್ಲೊಂದು. ಬೇಡಿಕೆ ಮತ್ತು ಉತ್ಪಾದನೆಯ ಅಂದಾಜು ಮಾಡಲಾಗದೆ ಅನೇಕ ರೈತರು ಸಮಸ್ಯೆಗೆ ಸಿಲುಕುತ್ತಾರೆ.
ಇಂಥ ರೈತರಿಗೆ, ‘ಕೃಷಿ ಸೇವಾ ಕೇಂದ್ರ’ಗಳು ನೆರವಿಗೆ ಬರುವ ನಿರೀಕ್ಷೆಯಿದೆ. ಪ್ರಕೃತಿ ಹಾಗೂ ಮಾರುಕಟ್ಟೆಯ ವೈಪರೀತ್ಯಗಳನ್ನು ತಡೆಗಟ್ಟಲು ಅಗತ್ಯವಾದ ಮಾಹಿತಿಯನ್ನು ಒದಗಿಸುವ ತಂತ್ರಜ್ಞಾನ ಲಭ್ಯವಾದರೆ, ರೈತರ ಕೃಷಿ ಜೀವನದಲ್ಲಿ ತಕ್ಕಮಟ್ಟಿಗೆ ಸುಧಾರಣೆ ಆಗಲಿದೆ. ವಿಶ್ವದಲ್ಲಿ ಸಂಚಲನ ಹುಟ್ಟಿಸಿರುವ ‘ಕೃತಕ ಬುದ್ಧಿಮತ್ತೆ’ಯನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ರೈತರನ್ನು ಸಜ್ಜುಗೊಳಿಸುವ ಜಾಗೃತಿ ಅಭಿಯಾನವೂ ನಡೆಯಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.